ಇತಿಹಾಸ ಹೇಳಿದ್ರೆ ಕಾಂಗ್ರೆಸ್‌ನವ್ರಿಗೆ ಮೈಯೆಲ್ಲಾ ಉರಿಯುತ್ತೆ, ಜನಕ್ಕೆ ಮೊದಲು ಗ್ಯಾರಂಟಿ ಕೊಡಿ – ಸೂಲಿಬೆಲೆ ತಿರುಗೇಟು

ಬೆಂಗಳೂರು: ಕಾಂಗ್ರೆಸ್‌ನವ್ರಿಗೆ (Congress) ರಾಷ್ಟ್ರೀಯವಾದಿಗಳ ಇತಿಹಾಸ ಹೇಳಿದ್ರೆ ಮೈಯೆಲ್ಲಾ ಉರಿಯುತ್ತೆ. ಭಗತ್ ಸಿಂಗ್, ರಾಜ್‌ಗುರು, ಸಾವರ್ಕರ್ ಇತಿಹಾಸ ಕೇಳೋದಿಲ್ಲ. ರಾಷ್ಟ್ರೀಯತೆಯನ್ನ ಕಂಡರೆ ಅವರಿಗೆ ಕೋಪ, ಎಲ್ಲರೂ ಒಂದುಗೂಡುವುದು ಅವರಿಗೆ ಇಷ್ಟವಿಲ್ಲ ಎಂದು ಯುವಬ್ರಿಗೆಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakravarti Sulibele) ವಾಗ್ದಾಳಿ ನಡೆಸಿದ್ದಾರೆ.

ಚಕ್ರವರ್ತಿ ಸೂಲಿಬೆಲೆ ಬರೆದಿರೋ ಪಠ್ಯ ತೆಗೆಯುತ್ತೇವೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರ ಹೇಳಿಕೆಗೆ ಸೂಲಿಬೆಲೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಚಕ್ರವರ್ತಿ ಸೂಲಿಬೆಲೆ ಬರೆದಿರೋ ಪಠ್ಯ ತೆಗೆಯುತ್ತೇವೆ: ಪ್ರಿಯಾಂಕ್ ಖರ್ಗೆ

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರಕ್ಕೆ ಪಠ್ಯಪುಸ್ತಕದ ಕೆಲಸವೇ ಆದ್ಯತೆಯ ಕೆಲಸ ಅನ್ನೋದು ಅಚ್ಚರಿಯಾಗಿಬಿಟ್ಟಿದೆ. ಪ್ರಿಯಾಂಕ್ ಖರ್ಗೆ ಅವರು ನನ್ನ ವಿದ್ಯಾರ್ಹತೆಯನ್ನ ಪ್ರಶ್ನೆ ಮಾಡಿದ್ದಾರೆ. ಜನ ಏನಾದ್ರೂ ಅವರ ವಿದ್ಯಾರ್ಹತೆ ಪ್ರಶ್ನೆ ಮಾಡಿದ್ರೆ ಕಷ್ಟ ಆಗೋದು ಅವರಿಗೇನೆ. ನನ್ನ ಬಗ್ಗೆ ಮಾತನಾಡದೇ ಇದ್ದರೆ ಒಳ್ಳೆಯದು ಎಂದು ಕುಟುಕಿದ್ದಾರೆ.

ಪಠ್ಯಪುಸ್ತಕ ಬದಲಾವಣೆ ಮಾಡ್ತಾರೆ ಅನ್ನೋದು ಮುಂಚೆಯೇ ಗೊತ್ತಿತ್ತು. ದೇಶದ ಇತಿಹಾಸ ಮುಚ್ಚಿಡೋದು ಅವರಿಗೆ ಅಭ್ಯಾಸ ಆಗಿದೆ. ಸಿಖ್ಖರ ಹತ್ಯಾಕಾಂಡ, ತುರ್ತು ಪರಿಸ್ಥಿತಿ ಸಮಯದಲ್ಲಿ ಏನಾಯ್ತು? ಅದೆಲ್ಲವನ್ನ ಮುಚ್ಚಿಟ್ಟಿದ್ದಾರೆ. ಇತಿಹಾಸವನ್ನ ಮುಚ್ಚಿಟ್ಟು ಅದರ ಮೇಲೆ ಕೂತಿದ್ದಾರೆ. ರಾಷ್ಟ್ರೀಯವಾದಿಗಳ ಇತಿಹಾಸ ಹೇಳಿದ್ರೆ ಅವರಿಗೆ ಮೈಯೆಲ್ಲಾ ಉರಿಯುತ್ತೆ. ರಾಷ್ಟ್ರೀಯತೆ ಕಂಡರೆ ಅವರಿಗೆ ಕೋಪ, ಎಲ್ಲರೂ ಒಂದುಗೂಡುವುದು ಅವರಿಗೆ ಇಷ್ಟವಿಲ್ಲ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ವಿದ್ಯುತ್ ಸಂಪರ್ಕ ನೀಡಲು 2 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಎಇಇ

ಮುಂದುವರಿದು, ನೀವು ಪಠ್ಯವನ್ನಾದರೂ ಬದಲಾವಣೆ ಮಾಡಿ ಪಾಠವನ್ನಾದರೂ ಮಾಡಿ, ಆದ್ರೆ ಮೊದಲು ಹೇಳಿರುವ ಗ್ಯಾರಂಟಿಗಳನ್ನ ಕೊಡಿ. ಮಕ್ಕಳು ಓದಲು 200 ಯೂನಿಟ್ ಕರೆಂಟ್ ಫ್ರೀ ಕೊಡಿ, ಮಗುವಿನ ತಾಯಿಗೆ 2,000 ಸಾವಿರ ರೂ. ಕೊಡಿ, ಮಗುವಿನ ಟೀಚರ್‌ಗೆ ಬಸ್ ಫ್ರೀ ಮಾಡಿ, ನೀವು ಹೇಳಿದ್ದ ಗ್ಯಾರೆಂಟಿಗಳನ್ನ ಯಾವುದೇ ಕಂಡಿಷನ್ ಇಲ್ಲದೇ ಜಾರಿಗೆ ತನ್ನಿ ಎಂದು ಒತ್ತಾಯಿಸಿದ್ದಾರೆ.