ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ ಬಂಡೀಪುರದ ವ್ಯಕ್ತಿ ಕೋಲಾರದಲ್ಲಿ ಅರೆಸ್ಟ್!

ಕೋಲಾರ: ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಜಿಲ್ಲೆಯ ಸೈಬರ್ ಕ್ರೈಂ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಶೇಖರ್ ಬಂಧಿತ ಆರೋಪಿಯಾಗಿದ್ದಾನೆ. ಇವನು ಮೂಲತಃ ಚಾಮರಾಜನಗರ ಜಿಲ್ಲೆಯ ಬಂಡೀಪುರದ ನಿವಾಸಿ ಎಂದು ತಿಳಿದು ಬಂದಿದೆ. ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹುಣಸಹಳ್ಳಿ ಗ್ರಾಮದ ಅಂಬರೀಶ್ ಎಂಬುವರ ಬಾಡಿಗೆ ಮನೆಯಲ್ಲಿ ಕಳೆದ 4 ತಿಂಗಳಿಂದ ವಾಸವಾಗಿದ್ದಾನೆ.

ನೂರಕ್ಕು ಹೆಚ್ಚು ಸಿಮ್ ಕಾರ್ಡ್‍ಗಳನ್ನು ಖರೀದಿಸಿ, ಹಲವು ಜನರಿಗೆ ಭಯೋತ್ಪಾದನೆಗೆ ಕೈ ಜೋಡಿಸುವಂತೆ ಸಂದೇಶಗಳನ್ನು ರವಾನಿಸಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡು ಸೈಬರ್ ಕ್ರೈಂ ಹಾಗೂ ಆರ್ಥಿಕ ಮಾದಕ ದ್ರವ್ಯ ವಿಭಾಗದ ಪೊಲೀಸರು ಆರೋಪಿಯ ಮನೆಯ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ.

ದಾಳಿ ವೇಳೆ ಆರೋಪಿ ಮನೆಯಲ್ಲಿ ನೂರಕ್ಕೂ ಹೆಚ್ಚು ಸಿಮ್ ಕಾರ್ಡ್, ಮೊಬೈಲ್ ಫೋನ್ ಹಾಗೂ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಆರೋಪಿಯು ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದಾನೆ ಎಂದು ತಿಳಿದು ಬಂದಿದೆ.

ಹುಣಸೇಹಳ್ಳಿ ಗ್ರಾಮದಲ್ಲಿ ಶೇಖರ್ ಎಂದು ಹೆಸರು ಹೇಳಿ ಮನೆ ಪಡೆದಿದ್ದಾನೆ. ಹಲವು ವ್ಯಕ್ತಿಗಳಿಗೆ ಕಳುಹಿಸಿರುವ ಸಂದೇಶಗಳಲ್ಲಿ “ಒಸಾಮಾ ಬಿನ್ ಲಾಡೆನ್ ಮೈ ಗಾಡ್”, ಭಯೋತ್ಪಾದನೆಗೆ ಕೈ ಜೋಡಿಸುವಂತೆ ಪ್ರಚೋದನೆ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *