ಕೇಂದ್ರದ ಭಾರತ್‌ ರೈಸ್‌ ಮಾರಾಟ ತಾತ್ಕಾಲಿಕ ಸ್ಥಗಿತ

ಬೆಂಗಳೂರು: ಕೇಂದ್ರ ಸರ್ಕಾರ ಆರಂಭಿಸಿದ್ದ ಮಹತ್ವಾಕಾಂಕ್ಷಿಯ ಭಾರತ್‌ ರೈಸ್‌ (Bharat Rice) ಮಾರಾಟವನ್ನು ಜುಲೈ ತಿಂಗಳಿನಿಂದ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.

ದೇಶದ ಎಲ್ಲಾ ಜನರಿಗೆ ಕಡಿಮೆ ಬೆಲೆಯಲ್ಲಿ ಅಕ್ಕಿ ವಿತರಿಸಲು ಕೇಂದ್ರ ಸರ್ಕಾರ ಫೆಬ್ರವರಿಯಲ್ಲಿ ಭಾರತ್‌ ರೈಸ್‌ ಅಕ್ಕಿಯನ್ನು ಬಿಡುಗಡೆ ಮಾಡಿತ್ತು. ಲೋಕಸಭಾ ಚುನಾವಣೆ (Lok Sabha Election) ಸಂದರ್ಭದಲ್ಲಿ ಈ ಅಕ್ಕಿ ಮತದಾರರನ್ನು ಸೆಳೆದಿತ್ತು.

ಈ ಯೋಜನೆಯ ಅಡಿ 29 ರೂ.ಗೆ 1 ಕೆಜಿ ಅಕ್ಕಿ, 27.50 ರೂ.ಗೆ 1 ಕೆಜಿ ಗೋಧಿ ಹಿಟ್ಟು, 60 ರೂ.ಗೆ 1 ಕೆಜಿ ಕಡಲೆ ಬೆಳೆ ಮಾರಾಟ ಮಾಡಲಾಗುತ್ತಿತ್ತು. ಜನ ಸಂದಣಿ ಹೆಚ್ಚಿನ ಜಾಗಗಳಲ್ಲಿ ಮೊಬೈಲ್‌ ವ್ಯಾನ್‌ ಮೂಲಕ ಅಕ್ಕಿ, ಬೆಳೆಗಳನ್ನು ಗ್ರಾಹಕರಿಗೆ ನೀಡಲಾಗುತ್ತಿತ್ತು. ಜೂನ್ 10 ರವರೆಗೆ ಕೇಂದ್ರ ಸರ್ಕಾರ ಆದೇಶದ ಅನ್ವಯ ದಾಸ್ತಾನುಗಳು ಮಾರಾಟವಾದ ನಂತರ ಪೂರೈಕೆಯನ್ನು ಸ್ಥಗಿತ ಮಾಡಲಾಗಿದೆ.

ಯಾವ ಕಾರಣಕ್ಕೆ ಮಾರಾಟವನ್ನು ಸ್ಥಗಿತ ಮಾಡಲಾಗಿದೆ ಎನ್ನುವುದು ತಿಳಿದುಬಂದಿಲ್ಲ. ಭಾರತ್ ರೈಸ್‌ಗೆ ಗ್ರಾಹಕರಿಂದ ಬೇಡಿಕೆ ಇತ್ತು. ಇದುವರೆಗೂ 5 ಸಾವಿರ ಟನ್ ಮಾರಾಟ ಮಾಡಲಾಗಿದೆ. ಇದನ್ನೂ ಓದಿ: ‘ಭಾರತ್ ರೈಸ್’ಗೆ ಮುಗಿಬಿದ್ದ ಜನ- ಅರ್ಧಗಂಟೆಯಲ್ಲಿ 1 ಟನ್ ಅಕ್ಕಿ ಸೋಲ್ಡ್ ಔಟ್

ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿದ್ದ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಲು ʻಭಾರತ್‌ʼ ಬ್ರ್ಯಾಂಡ್‌ ಅಕ್ಕಿ (Bharat Rice) ಮಾರಾಟ ಆರಂಭಿಸುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ (Union Government) ತಿಳಿಸಿತ್ತು. ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ (NAFED), ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (NCCF) ಹಾಗೂ ಕೇಂದ್ರೀಯ ಭಂಡಾರಗಳು ಮತ್ತು ಇ-ಕಾಮರ್ಸ್‌ ವೇದಿಕೆಗಳ ಮೂಲಕ ಅಕ್ಕಿ ಮಾರಾಟವಾಗುತ್ತಿತ್ತು.

ಕಳೆದ ವರ್ಷ ಮಳೆಯಾಗದ ಕಾರಣ ಭತ್ತದ ಉತ್ಪಾದನೆ ಕುಂಠಿತಗೊಂಡಿದೆ. ದೇಶಾದ್ಯಂತ ಈ ಯೋಜನೆ ಜಾರಿಯಲ್ಲಿರುವ ಕಾರಣ ಪೂರೈಕೆ ಮಾಡುವುದು ಕಷ್ಟವಾಗುತ್ತಿದೆ. ಭಾರತ್‌ ಅಕ್ಕಿ ವಿತರಣೆ ಸಂಬಂಧ ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೆ ತರಲು ಚಿಂತನೆ ಮಾಡಿದೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ತಾತ್ಕಾಲಿಕವಾಗಿ ಭಾರತ್‌ ರೈಸ್‌ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ.

ಮೆಚ್ಚುಗೆ ವ್ಯಕ್ತವಾಗಿತ್ತು:
ಬಿಪಿಎಲ್‌ ಕಾರ್ಡ್‌ ಇರುವವರಿಗೆ ಕೇಂದ್ರ ಸರ್ಕಾರ ಉಚಿತವಾಗಿ ಪ್ರತಿ ವ್ಯಕ್ತಿಗೆ ಐದು ಕೆ.ಜಿ. ಅಕ್ಕಿಯನ್ನು ಈಗಾಗಲೇ ನೀಡುತ್ತಿದೆ. ಎಪಿಎಲ್‌ ಪಡಿತರ ಚೀಟಿ ಹೊಂದಿದವರಿಗೆ ಕೆ.ಜಿ.ಗೆ 15 ರೂ.ನಂತೆ 10 ಕೆ.ಜಿ. ಅಕ್ಕಿ ವಿತರಿಸಲಾಗುತ್ತದೆ. ಈ ಎರಡೂ ಬಗೆಯ ಪಡಿತರ ಚೀಟಿ ಇಲ್ಲದ ಲಕ್ಷಾಂತರ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಕಡಿಮೆ ಬೆಲೆಗೆ ಈ ಭಾರತ್‌ ಬ್ರ್ಯಾಂಡ್‌ನ ಅಡಿಯಲ್ಲಿ ಅಕ್ಕಿ, ಬೆಳೆಗಳನ್ನು ಮಾರಾಟ ಮಾಡುತ್ತಿತ್ತು. ಕಡಿಮೆ ಬೆಲೆಗೆ ಗುಣಮಟ್ಟದ ಅಕ್ಕಿ, ಬೆಳೆ ಸಿಕ್ಕಿದ್ದಕ್ಕೆ ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.