ರಾತ್ರೋರಾತ್ರಿ ಬೆಂಗ್ಳೂರಲ್ಲಿ ಜೆಸಿಬಿ ಘರ್ಜನೆ – ದೇವಸ್ಥಾನ, ಚರ್ಚ್ ನೆಲಸಮ

ಬೆಂಗಳೂರು: ಭೂಮಿಯನ್ನು ಅಕ್ರಮಿಸಿಕೊಂಡು ಕಟ್ಟಲಾಗಿದ್ದ ದೇವಸ್ಥಾನ ಮತ್ತು ಚರ್ಚ್‍ನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಒಡೆದು ಹಾಕಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಎಲ್ಲರೂ ನಿದ್ರೆಗೆ ಜಾರಿದ್ದ ವೇಳೆ ನಗರದ ಕ್ವೀನ್ ರಸ್ತೆಯಲ್ಲಿರುವ ಮೂವತ್ತು ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಓಂ ಶಕ್ತಿ ದೇವಸ್ಥಾನ ಮತ್ತು ಅದರ ಹಿಂದೆ ಇದ್ದ ಮೇರಿ ಮಾತೆ ಚರ್ಚ್‍ನ್ನು ಜೆಸಿಬಿಯಿಂದ ಕೆಡವಿದ್ದಾರೆ. ಪೊಲೀಸರ ಸರ್ಪಗಾವಲಲ್ಲಿ ಕಾರ್ಯಾಚರಣೆ ನಡೆದಿದೆ.

1976ರಲ್ಲಿ ಡಾ.ನಾಗರಾಜು ಅನ್ನೋರಿಗೆ 19 ಸಾವಿರ ಚದರ ವಿಸ್ತೀರ್ಣದ ಸುಮಾರು ಮೂವತ್ತು ಕೋಟಿ ಬೆಲೆ ಬಾಳುವ ಜಾಗವನ್ನು ಆಸ್ಪತ್ರೆ ನಿರ್ಮಾಣಕ್ಕಾಗಿ ಗುತ್ತಿಗೆ ನೀಡಲಾಗಿತ್ತು. ಆದರೆ ದೇವಸ್ಥಾನ, ಚರ್ಚ್ ನಿರ್ಮಿಸಿ ಆಸ್ಪತ್ರೆ ಕಟ್ಟೋದಕ್ಕೆ ಅಡ್ಡಿಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪಾಲಿಕೆ ಹೈಗ್ರೌಂಡ್ ಠಾಣೆಯಲ್ಲಿ ದೂರು ನೀಡಿತ್ತು. ತಕ್ಷಣ ಜಾಗ ಖಾಲಿ ಮಾಡುವಂತೆ ಪಾಲಿಕೆ ನೋಟಿಸ್ ನೀಡಿತ್ತು.

ತೆರವು ಕಾರ್ಯಾಚರಣೆ ಬಗ್ಗೆ ತಿಳಿಯುತ್ತಿದ್ದಂತೆ ಎದ್ದುಬಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಹೈಗ್ರೌಂಡ್ ಠಾಣೆಗೆ ತೆರಳಿ ಒಂದು ಗಂಟೆಗೂ ಹೆಚ್ಚು ಹೊತ್ತು ಪ್ರತಿಭಟನೆ ನಡೆಸಿದ್ರು.

Comments

Leave a Reply

Your email address will not be published. Required fields are marked *