ಗೋವಾದಲ್ಲಿ ಫಿಲ್ಮಿ ಸ್ಟೈಲ್ ಪ್ರಪೋಸ್ – ಏಪ್ರಿಲ್ 16ಕ್ಕೆ ಪ್ರೇಯಸಿಯೊಂದಿಗೆ ನಿಖಿಲ್ ಮದ್ವೆ

ಹೈದರಾಬಾದ್: ಇತ್ತೀಚೆಗಷ್ಟೇ ಸ್ಯಾಂಡಲ್‍ವುಡ್ ನಟ ನಿಖಿಲ್ ಕುಮಾರಸ್ವಾಮಿ ಅವರ ಮದುವೆ ನಿಶ್ಚಯವಾಗಿರುವ ಸುದ್ದಿ ಸಖತ್ ಸದ್ದು ಮಾಡಿತ್ತು. ಆದ್ರೆ ಈಗ ನಾವು ತಿಳಿಸುತ್ತಿರೋದು ಸ್ಯಾಂಡಲ್‍ವುಡ್ ನಟ ನಿಖಿಲ್ ಮದ್ವೆ ಬಗ್ಗೆ ಅಲ್ಲ, ಟಾಲಿವುಡ್ ನಟ ನಿಖಿಲ್ ಸಿದ್ಧಾರ್ಥ್ ಮದುವೆ ಬಗ್ಗೆ.

ಹೌದು. ‘ಹ್ಯಾಪಿಡೇಸ್’ ಸಿನಿಮಾ ಖ್ಯಾತಿಯ ನಿಖಿಲ್ ಸಿದ್ದಾರ್ಥ್ ಸದ್ಯ ತಮ್ಮ ಪ್ರೇಯಸಿ ಜೊತೆ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಇತ್ತೀಚೆಗೆ ಗೋವಾದಲ್ಲಿ ಫಿಲ್ಮಿ ಸ್ಟೈಲ್‍ನಲ್ಲಿ ನಿಖಿಲ್ ಪ್ರೇಯಸಿ ಡಾ. ಪಲ್ಲವಿ ವರ್ಮಾ ಅವರಿಗೆ ಪ್ರಪೋಸ್ ಮಾಡಿದ್ದರು. ಪಲ್ಲವಿ ವೃತ್ತಿಯಲ್ಲಿ ವೈದ್ಯೆ ಆಗಿದ್ದು, ಇಬ್ಬರೂ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಹೀಗಾಗಿ ಮನೆಯಲ್ಲಿ ತಮ್ಮ ಪ್ರೀತಿಯ ಬಗ್ಗೆ ತಿಳಿಸಿ, ಎಲ್ಲರ ಒಪ್ಪಿಗೆ ಪಡೆದು ಈ ಜೋಡಿ ಸದ್ದಿಲ್ಲದೆ ಹೈದರಾಬಾದ್‍ನಲ್ಲಿ ಫೆ. 1ರಂದು ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾರೆ.

ಹೈದರಾಬಾದ್‍ನಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಿಖಿಲ್-ಪಲ್ಲವಿ ನಿಶ್ಚಿತಾರ್ಥವನ್ನು ಶಾಸ್ತ್ರೋಕ್ತವಾಗಿ ಮಾಡಿಕೊಂಡಿದ್ದಾರೆ. ಅಲ್ಲದೇ ಏಪ್ರಿಲ್ 16ರಂದು ಮದುವೆ ದಿನಾಂಕ ಫಿಕ್ಸ್ ಆಗಿದ್ದು, ಅದ್ದೂರಿಯಾಗಿ ಈ ಜೋಡಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ತೆಲುಗಿನಲ್ಲಿ ತೆರೆಕಂಡ ‘ಹ್ಯಾಪಿಡೇಸ್’, ‘ಸ್ವಾಮಿ ರಾ ರಾ’, ‘ಕಾರ್ತಿಕೇಯ’, ‘ಸೂರ್ಯ ವರ್ಸಸ್ ಸೂರ್ಯ’, ‘ಶಂಕರಾಭರಣಂ’ ಸೇರಿದಂತೆ ಅವರು ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಿಖಿಲ್ ಅಭಿನಯಿಸಿ ಭೇಷ್ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ತೆರೆಕಂಡ ‘ಅರ್ಜುನ್ ಸುರವರಂ’ ಸಿನಿಮಾ ಕೂಡ ನಿಖಲ್‍ಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು.

ಕನ್ನಡದಲ್ಲಿ ತೆರಕಂಡು ಸೂಪರ್ ಹಿಟ್ ಸಿನಿಮಾ ‘ಕಿರಿಕ್ ಪಾರ್ಟಿ’ ಚಿತ್ರವನ್ನು ತೆಲುಗಿನಲ್ಲಿ ‘ಕಿರಾಕ್ ಪಾರ್ಟಿ’ ಎಂದು ರಿಮೇಕ್ ಮಾಡಲಾಗಿತ್ತು. ಕನ್ನಡದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ನಿಭಾಯಿಸಿದ್ದ ಪಾತ್ರವನ್ನು ತೆಲುಗಿನಲ್ಲಿ ನಿಖಿಲ್ ನಿಭಾಯಿಸಿದ್ದರು. ಈ ಚಿತ್ರ ಕೂಡ ಹಿಟ್ ಆಗಿತ್ತು.

Comments

Leave a Reply

Your email address will not be published. Required fields are marked *