ಮೊಬೈಲ್ ಡೇಟಾ ಹನಿಮೂನ್ ಅವಧಿ ಮುಕ್ತಾಯ – ಒಬ್ಬ ಗ್ರಾಹಕನಿಂದ ಟೆಲಿಕಾಂ ಕಂಪನಿಗೆ ಎಷ್ಟು ಆದಾಯ ಬರುತ್ತೆ?

– ದರ ಏರಿಕೆಯಿಂದ ಜಿಯೋಗ ವರದಾನ, ಆದಾಯ ಏರಿಕೆ
– ಡಿಸೆಂಬರ್‌ನಿಂದ ಡೇಟಾ ದರ ಏರಿಕೆ

ಮುಂಬೈ: ಅಗ್ಗವಾಗಿ ಸಿಗುತ್ತಿದ್ದ ಮೊಬೈಲ್ ಡೇಟಾ/ ಕರೆ ದರಗಳು ಡಿಸೆಂಬರ್‌ನಿಂದ ಏರಿಕೆಯಾಗಲಿದೆ. ಈ ಮೂಲಕ ಕಡಿಮೆ ಬೆಲೆಯಲ್ಲಿ ಡೇಟಾ ಪಡೆಯುತ್ತಿದ್ದ ಮೂರು ವರ್ಷದ ಹನಿಮೂನ್ ಅವಧಿ ಅಂತ್ಯವಾಗಲಿದೆ.

ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್‌ ಕಂಪನಿಯಿಂದ ಡಿಸೆಂಬರ್‌ನಿಂದ ಡೇಟಾ ಮತ್ತು ಕರೆ ದರಗಳನ್ನು ಏರಿಕೆ ಮಾಡುತ್ತೇವೆ ಎಂಬ ಪ್ರಕಟಣೆ ಹೊರ ಬಿದ್ದ ಬೆನ್ನಲ್ಲೇ ಈಗ ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಸಹ ಕರೆ ದರಗಳನ್ನು ಏರಿಸುವುದಾಗಿ ಹೇಳಿದೆ.

ಎಷ್ಟು ಪ್ರಮಾಣದಲ್ಲಿ ದರವನ್ನು ಏರಿಕೆ ಮಾಡುತ್ತದೆ ಎನ್ನುವುದನ್ನು ಟೆಲಿಕಾಂ ಕಂಪನಿಗಳು ತಿಳಿಸಿಲ್ಲ. ಆದರೆ ಟೆಲಿಕಾಂ ವಲಯದಲ್ಲಿರುವ ತಜ್ಞರು ಶೇ.15-30 ರಷ್ಟು ಏರಿಕೆ ಆಗಬಹುದು ಎಂದು ಅಂದಾಜಿಸಿದ್ದಾರೆ.

2016ರಲ್ಲಿ ಜಿಯೋ ಆರಂಭಕ್ಕೂ ಮೊದಲು 30 ದಿನಗಳ ವ್ಯಾಲಿಡಿಟಿ ಹೊಂದಿರುವ ಒಂದು ಜಿಬಿ ಡೇಟಾಕ್ಕೆ 250 ರೂ. ಇತ್ತು. ಸಾಧಾರಣವಾಗಿ ಈ ದರದ ಅಸುಪಾಸಿನಲ್ಲೇ ಎಲ್ಲ ಟೆಲಿಕಾಂ ಕಂಪನಿಗಳು 1 ಜಿಬಿ ಡೇಟಾವನ್ನು ನೀಡುತಿತ್ತು. ಈಗ ಸರಿ ಸುಮಾರು 15 ರೂ.ಗೆ ಭಾರತದಲ್ಲಿ 1 ಜಿಬಿ ಡೇಟಾ ಲಭ್ಯವಾಗುತ್ತಿದೆ.

ಜಿಯೋ ಆರಂಭಗೊಂಡು ಮೊದಲ 3 ತಿಂಗಳು ಉಚಿತ ಡೇಟಾ ನೀಡಿ ಬಳಿಕ ಹ್ಯಾಪಿ ನ್ಯೂ ಇಯರ್ ಸೇರಿದಂತೆ ಇತರೇ ಡೇಟಾ ಪ್ಲ್ಯಾನ್ ಗಳ ಆಫರ್ ಬಿಡುಗಡೆ ಮಾಡಿದ ಪರಿಣಾಮ ಈಗ ದೇಶದ ಎರಡನೇ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಿ ಹೊರಹೊಮ್ಮಿದೆ. ‘ನಮ್ಮಲ್ಲಿ ಡೇಟಾಕ್ಕೆ ಮಾತ್ರ ದರ ಕರೆ ಉಚಿತ’ ಎಂದು ಜಿಯೋ ಪ್ಲ್ಯಾನ್‍ಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಉಳಿದ ಟೆಲಿಕಾಂ ಕಂಪನಿಗಳು ದರ ಇಳಿಸಿದ ಪರಿಣಾಮ ದೇಶದಲ್ಲಿ ಡೇಟಾ ವಾರ್ ಆರಂಭಗೊಂಡಿತ್ತು.

ಡೇಟಾ ಸಮರದಿಂದಾಗಿ ಡಿಮೆ ಗ್ರಾಹಕರನ್ನು ಹೊಂದಿದ್ದ ಕಂಪನಿಗಳು ನಷ್ಟವಾಗತೊಡಗಿತು. ಪರಿಣಾಮ ಟೆಲಿನಾರ್ ಕಂಪನಿಯನ್ನು ಏರ್‌ಟೆಲ್‌ ಖರೀದಿಸಿತ್ತು. ಬಳಿಕ ಟಾಟಾ ಡೊಕೊಮೊ ಏರ್‌ಟೆಲ್‌  ಜೊತೆ ವಿಲೀನಗೊಂಡರೆ ಐಡಿಯಾ ಕಂಪನಿ ವೊಡಾಫೋನ್ ವಿಲೀನಗೊಂಡಿತ್ತು. ಟೆಲಿಕಾಂ ಕಂಪನಿಗಳು ವಿಲೀನಗೊಂಡು ಸ್ಪರ್ಧೆ ನೀಡಿದರೂ ಮಾರುಕಟ್ಟೆಯಲ್ಲಿ ಉತ್ತಮ 4ಜಿ ಸೇವೆ ನೀಡುತ್ತಿದ್ದರಿಂದ ಜಿಯೋ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಮಂಗಳವಾರ ಬಿಡುಗಡೆ ಮಾಡಿದ ವರದಿ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ಏರ್‌ಟೆಲ್‌ ಹಾಗೂ ವೊಡಾಫೋನ್ 49 ಲಕ್ಷ ಚಂದಾದಾರರನ್ನು ಕಳೆದುಕೊಂಡಿವೆ. ಇದರಲ್ಲಿ ಏರ್‌ಟೆಲ್‌ 23.8 ಲಕ್ಷ, ವೊಡಾಫೋನ್  25.7 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಆದರೆ ಜಿಯೋ ಮತ್ತು ಬಿಎಸ್‍ಎನ್‍ಎಲ್ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಜಿಯೋಗೆ 69.83 ಲಕ್ಷ ಹೊಸ ಚಂದಾದಾರರು ಸೇರ್ಪಡೆಯಾದರೆ, ಬಿಎಸ್‍ಎನ್‍ಎಲ್‍ಗೆ 7.37 ಲಕ್ಷ ಹೊಸ ಗ್ರಾಹಕರು ಸೇರಿದ್ದಾರೆ. ವೊಡಾಫೋನ್  37.24 ಕೋಟಿ, ರಿಲಯನ್ಸ್ ಜಿಯೋ 35.52 ಕೋಟಿ, ಏರ್‌ಟೆಲ್‌ 32.55 ಕೋಟಿ, ಬಿಎಸ್‍ಎನ್‍ಎಲ್ 11.69 ಕೋಟಿ ಹಾಗೂ ಎಂಟಿಎನ್‍ಎಲ್ 33.93 ಲಕ್ಷ ಗ್ರಾಹಕರನ್ನು ಹೊಂದಿದೆ ಎಂದು ತಿಳಿಸಿದೆ.

ಎಆರ್‌ಪಿಯು ಎಷ್ಟು?
ವೊಡಾಫೋನ್ ಕಂಪನಿಗೆ ಪ್ರತಿ ಬಳಕೆದಾರರಿಂದ ಬರುವ ಸರಾಸರಿ ಆದಾಯ(ಎವರೆಜ್ ರೆವೆನ್ಯೂ ಪರ್ ಯೂಸರ್- ಎಆರ್‌ಪಿಯು) ತಿಂಗಳಿಗೆ 107 ರೂ. ಇದ್ದರೆ ಏರ್‌ಟೆಲ್‌ 128 ರೂ. ಪಡೆಯುತ್ತಿದೆ. ಜಿಯೋ 120 ರೂ. ಪಡೆಯುತ್ತಿದೆ. ಡೇಟಾ ದರ ಸಮರ ಆರಂಭಕ್ಕೂ ಮುನ್ನ 2016ರ ಜೂನ್ ತಿಂಗಳಿನಲ್ಲಿ ಏರ್‌ಟೆಲ್‌ ಎಆರ್‌ಪಿಯು  198 ರೂ. ಇತ್ತು.

ಇತರ ಕಂಪನಿಗಳಂತೆ ಸರ್ಕಾರದ ನಿಯಂತ್ರಣ ವ್ಯವಸ್ಥೆಗೆ ಸ್ಪಂದಿಸಿ ದೇಶದ ಟೆಲಿಕಾಂ ವಲಯದ ಬಲವರ್ಧನೆಗೆ ಕೆಲಸ ಮಾಡುವ ನಿಟ್ಟಿನಲ್ಲಿ ಮುಂದಿನ ವಾರದಲ್ಲಿ ಡೇಟಾ ಬಳಕೆಯ ಮೇಲೆ ಅಡ್ಡ ಪರಿಣಾಮ ಉಂಟಾಗದಂತೆ ಸೂಕ್ತ ರೀತಿಯಲ್ಲಿ ಬೆಲೆ ಏರಿಕೆ ಮಾಡುತ್ತೇವೆ ಎಂದು ಜಿಯೋ ತಿಳಿಸಿದ ಬೆನ್ನಲ್ಲೇ ಈಗ ಟೆಲಿಕಾಂ ಕಂಪನಿಗಳು ಎಷ್ಟು ಪ್ರಮಾಣದಲ್ಲಿ ಡೇಟಾ, ಕರೆ ದರಗಳನ್ನು ಏರಿಸುತ್ತದೆ ಎನ್ನುವ ಕುತೂಹಲ ಮೂಡಿದೆ.

ನಷ್ಟದಲ್ಲಿ ಟೆಲಿಕಾಂ ಕಂಪನಿಗಳು:
ಸೆಪ್ಟೆಂಬರ್‍ಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ವೊಡಾಫೋನ್ ಇಂಡಿಯಾ 50,922 ಕೋಟಿ ರೂ. ನಿವ್ವಳ ನಷ್ಟ ಅನುಭವಿಸಿದರೆ ಏರ್‌ಟೆಲ್‌ 23,045 ಕೋಟಿ ರೂ. ನಷ್ಟವನ್ನು ಹೊಂದಿತ್ತು. ಜಿಯೋ 990 ಕೋಟಿ ರೂ. ನಿವ್ವಳ ಆದಾಯ ಹೊಂದಿತ್ತು.

ಜಿಯೋಗೆ ಲಾಭ:
ಜಿಯೋ ಸೇವೆ ಆರಂಭಗೊಂಡ ಬಳಿಕ ಹೊರ ಹೋಗುವ ಎಲ್ಲ ಕರೆಗಳು ಉಚಿತವಾಗಿತ್ತು. ಆದರೆ ಅಕ್ಟೋಬರಿನಲ್ಲಿ ಜಿಯೋ ಸಂಖ್ಯೆ ಬಿಟ್ಟು ಹೊರಹೋಗುವ ಇತರ ನಂಬರ್‌ಗಳ ಕರೆಗೆ ಪ್ರತಿ ನಿಮಿಷಕ್ಕೆ 6 ಪೈಸೆ ವಿಧಿಸಲಾಗುವುದು ಎಂದು ಹೇಳಿತ್ತು. ಈಗ ಇತರ ಟೆಲಿಕಾಂ ಕಂಪನಿಗಳು ದರ ಏರಿಸುತ್ತಿರುವುದು ಜಿಯೋಗೆ ವರದಾನವಾಗಿದ್ದು ಆದಾಯ ಮತ್ತಷ್ಟು ಹೆಚ್ಚಳವಾಗಲಿದೆ. ಇದನ್ನೂ ಓದಿ: 15 ತಿಂಗಳ ನಂತ್ರ ಲಾಭಕ್ಕೆ ಮರಳಿದ ಜಿಯೋ- ಏರ್ ಟೆಲ್ ಆದಾಯ ಕುಸಿತ

ಜಿಯೋ ಸೇವೆ ಆರಂಭಗೊಂಡ ಬಳಿಕ ಈ ಐಯುಸಿಯನ್ನು ತಗೆದು ಹಾಕಬೇಕೆಂದು ಟ್ರಾಯ್ ಮುಂದೆ ವಾದ ಮಂಡಿಸುತಿತ್ತು. ಆದರೆ ಬೇರೆ ಟೆಲಿಕಾಂ ಕಂಪನಿಗಳು ಐಯುಸಿಯನ್ನು ತೆಗೆದು ಹಾಕಬಾರದು ದರವನ್ನು ಹೆಚ್ಚಿಸಬೇಕು ಎಂದು ವಾದಿಸುತ್ತಿದ್ದವು. ಆದರೆ ಟ್ರಾಯ್ ಹಂತ ಹಂತವಾಗಿ ಐಯುಸಿ ದರವನ್ನು ಕಡಿತಗೊಳಿಸುತ್ತಿದ್ದು ಮುಂದಿನ ವರ್ಷದಲ್ಲಿ ಸಂಪೂರ್ಣವಾಗಿ ತೆಗೆದು ಹಾಕುವ ಸಾಧ್ಯತೆಯಿದೆ.

ಏನಿದು ಐಯುಸಿ?
ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜ್(ಐಯುಸಿ) ಟ್ರಾಯ್ ನಿಗದಿ ಪಡಿಸುತ್ತದೆ. ಉದಾಹರಣೆಗೆ ಜಿಯೋ ಗ್ರಾಹಕರೊಬ್ಬರು ವೊಡಾಫೋನ್ ಗ್ರಾಹಕರಿಗೆ ಕರೆ ಮಾಡಿದರೆ ಜಿಯೋ ಟ್ರಾಯ್ ನಿಗದಿ ಪಡಿಸಿದ ಐಯುಸಿಯನ್ನು ವೊಡಾಫೋನ್  ಕಂಪನಿಗೆ ಪಾವತಿಸಬೇಕಾಗುತ್ತದೆ.

2003ರಲ್ಲಿ ಒಳಬರುವ ಕರೆಯನ್ನು ಉಚಿತವಾಗಿ ನೀಡುವ ಸಲುವಾಗಿ ಟ್ರಾಯ್ ಐಯುಸಿಯನ್ನು ತಂದಿತ್ತು. 2004ರ ಫೆಬ್ರವರಿಯಲ್ಲಿ ಟ್ರಾಯ್ ಪ್ರತಿ ನಿಮಿಷಕ್ಕೆ 30 ಪೈಸೆ, 2009ರ ಏಪ್ರಿಲ್ ನಲ್ಲಿ 20 ಪೈಸೆ, 2015ರ ಮಾರ್ಚ್ ನಲ್ಲಿ 14 ಪೈಸೆ, ಪ್ರಸ್ತುತ ಈಗ 6 ಪೈಸೆ ಐಯುಸಿ ಬೆಲೆಯನ್ನು ಟ್ರಾಯ್ ನಿಗದಿಪಡಿಸಿದೆ.

ಐಯುಸಿಯಿಂದಾಗಿ ಏರ್‌ಟೆಲ್‌, ವೊಡಾಫೋನ್ ಕಂಪನಿಗಳು ಸಾವಿರಾರು ಕೋಟಿ ರೂ. ಆದಾಯಗಳಿಸುತ್ತಿದೆ ಎನ್ನುವುದು ಜಿಯೋ ಆರೋಪ. ಕಳೆದ 3 ವರ್ಷಗಳಲ್ಲಿ ಜಿಯೋ ಐಯುಸಿಗೆಂದು ಒಟ್ಟು 12 ಸಾವಿರ ಕೋಟಿ ರೂ. ಹಣವನ್ನು ವಿವಿಧ ಟೆಲಿಕಾಂ ಕಂಪನಿಗಳಿಗೆ ಪಾವತಿಸಿದೆ. ಹೊರ ಹೋಗುವ ಕರೆಗಳು ಉಚಿತವಾಗಿ ಇರುವ ಕಾರಣ ಬೇರೆ ಕಂಪನಿಯ ಗ್ರಾಹಕರು ನಮ್ಮ ಕಂಪನಿಯ ಗ್ರಾಹಕರಿಗೆ ಮಿಸ್ ಕಾಲ್ ನೀಡುತ್ತಿದ್ದರು. ಇದರಿಂದಾಗಿ ನಮಗೆ ಭಾರೀ ನಷ್ಟವಾಗಿದೆ ಎಂದು ಜಿಯೋ ಹೇಳಿತ್ತು.

ಈ ಹಿಂದೆ ಭಾರತಿ ಎಂಟಪ್ರ್ರೈಸಸ್ ಮುಖ್ಯಸ್ಥ ಸುನೀಲ್ ಮಿತ್ತಲ್ ಟ್ರಾಯ್ ಮುಖ್ಯಸ್ಥರಿಗೆ ಪತ್ರ ಬರೆದು ಪ್ರಸ್ತುತ ಐಯುಸಿ ಕಡಿಮೆ ಇದೆ. ಪಾರದರ್ಶಕವಾಗಿ ಹೊಸ ಬೆಲೆಯನ್ನು ನಿಗದಿಪಡಿಸಬೇಕೆಂದು ಮನವಿ ಮಾಡಿದ್ದರು.

Comments

Leave a Reply

Your email address will not be published. Required fields are marked *