ಬೀದರ್‌ಗೆ ಬಂದು ಹೋಗ್ತಿದ್ದ ಮಹಿಳೆಯನ್ನು ಬಸ್ಸಿನಿಂದ ಕೆಳಗಿಳಿಸಿ ಗ್ಯಾಂಗ್‍ರೇಪ್

– ಪೊಲೀಸ್ ಎಂದು ಹೇಳಿ ಮೂವರಿಂದ ಕೃತ್ಯ
– ಆರೋಪಿಗಳನ್ನು ಚೇಸ್ ಮಾಡಿ ಹಿಡಿದ ಪೊಲೀಸ್ರು

ತೆಲಂಗಾಣ: ಪೊಲೀಸ್ ಸೋಗಿನಲ್ಲಿ ಬಂದು 32 ವರ್ಷದ ಮಹಿಳೆಯನ್ನು ಬಸ್ಸಿನಿಂದ ಕೆಳಗೆ ಇಳಿಸಿ ನಂತರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಅತ್ಯಾಚಾರ ಮಾಡಿದ ಮೂವರನ್ನು ಪವನ್ ಕುಮಾರ್, ಸೋಮ ಚಾರೈ ಮತ್ತು ಬ್ರಹ್ಮ ಚಾರೈ ಎಂದು ಗುರುತಿಸಲಾಗಿದೆ. ಈ ಮೂವರನ್ನು ಪೊಲೀಸರು ಚೇಸ್ ಮಾಡಿ ಬಂಧಿಸಿದ್ದು, ಈ ವೇಳೆ ತಪ್ಪಿಸಿಕೊಳ್ಳಲು ಹೋದ ಸೋಮ ಚಾರೈ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಇನ್ನುಳಿದ ಇಬ್ಬರನ್ನು ಕೋರ್ಟಿಗೆ ಹಾಜರು ಪಡಿಸಲಾಗಿದೆ.

ಮೂವರಲ್ಲಿ ಇಬ್ಬರು ಪೊಲೀಸ್ ವೇಷ ಧರಿಸಿ, ಸೂರ್ಯಪೇಟ್‍ನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ಹತ್ತಿದ್ದಾರೆ. ಈ ವೇಳೆ ಬಸ್ಸಿನಲ್ಲಿದ್ದ ಮಹಿಳೆಯೊಬ್ಬರ ಬಳಿ, ನೀನು ನಿಷೇಧಿತ ಗುಟ್ಕಾ ಪ್ಯಾಕೆಟ್ ಅನ್ನು ಅಕ್ರಮವಾಗಿ ಸಾಗಿಸುತ್ತಿದ್ದೀಯಾ ಎಂದು ಹೇಳಿ ಆಕೆಯನ್ನು ಬಸ್ಸಿನಿಂದ ಕೆಳಗೆ ಇಳಿಸಿದ್ದಾರೆ. ಈ ವೇಳೆ ಮತ್ತೊಬ್ಬ ಆರೋಪಿ ಕಾರಿನಲ್ಲಿ ಬಸ್ಸನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ. ನಂತರ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ.

ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ತೆಲಂಗಾಣದ ಸೂರ್ಯಪೇಟ್‍ನಲ್ಲಿ ಕಿರಾಣಿ ಇಟ್ಟುಕೊಂಡಿದ್ದು, ಅಂಗಡಿಗೆ ಬೇಕಾದ ಸಾಮಾನು ಖರೀದಿಸಲು ಕರ್ನಾಟಕದ ಬೀದರ್ ಜಿಲ್ಲೆಗೆ ಬಂದಿದ್ದರು. ಇಲ್ಲಿಂದ ವಾಪಸ್ ಹೋಗುವಾಗ ಈ ಘಟನೆ ನಡೆದಿದೆ. ಈ ಘಟನೆಯ ನಂತರ ಮಹಿಳೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡ ಸೂರ್ಯಪೇಟ್ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಅವರು ಸಿಸಿಟಿವಿ ದೃಶ್ಯ ಮತ್ತು ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಪವನ್ ಕುಮಾರ್ ಓರ್ವ ರೌಡಿಶೀಟರ್ ಆಗಿದ್ದು, ಆತನ ಮೇಲೆ ಕೊಲೆ ಪ್ರಕರಣಗಳು ದಾಖಲಾಗಿವೆ. ಮತ್ತೊಬ್ಬ ಆರೋಪಿ ಬ್ರಹ್ಮ ಚಾರೈ ಮೇಲೂ ಕ್ರಿಮಿನಲ್ ಕೇಸುಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *