ತೆಲಂಗಾಣ ವಿಧಾನಸಭೆ ವಿಸರ್ಜನೆ- ಗುರುವಾರದಂದೇ ವಿಸರ್ಜಿಸಿದ್ದು ಯಾಕೆ?

ಹೈದರಾಬಾದ್: ತೆಲಂಗಾಣ ರಾಜ್ಯದ ಸಿಎಂ ಕೆ ಚಂದ್ರಶೇಖರ್ ರಾವ್ ಗುರುವಾರ ಸಚಿವ ಸಂಪುಟ ಸಭೆ ನಡೆಸಿ ವಿಧಾನಸಭೆ ವಿಸರ್ಜನೆ ಮಾಡುವ ನಿರ್ಧಾರ ಪ್ರಕಟಿಸಿದ್ದಾರೆ.

ವಿಧಾನಸಭೆ ವಿಸರ್ಜನೆ ಹಿನ್ನೆಲೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಮುಖ್ಯಸ್ಥ, ಸಿಎಂ ಕೆ ಚಂದ್ರಶೇಖರ್ ರಾವ್ ನೇತೃತ್ವದಲ್ಲಿ ಕಳೆದ 5 ದಿನಗಳಲ್ಲಿ 2 ಬಾರಿ ಸಂಪುಟ ಸಭೆ ನಡೆಸಲಾಗಿದ್ದು, ಬಳಿಕ ವಿಧಾನಸಭೆ ವಿಸರ್ಜನೆ ಮಾಡುವ ನಿರ್ಧಾರ ಪ್ರಕಟಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯೇ ಪೂರ್ವಭಾವಿ ಚುನಾವಣೆ ನಡೆಸುವ ಕುರಿತು ಹಲವು ವರದಿಗಳು ಕೇಳಿಬಂದಿತ್ತು. ಸದ್ಯ ತೆಲಂಗಾಣ ರಾಜಭವನ ಈ ಕುರಿತು ಅಧಿಕೃತ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.

ಆಂಧ್ರಪ್ರದೇಶ ವಿಭಜನೆ ಬಳಿಕ ದೇಶದ 29 ರಾಜ್ಯವಾಗಿ ಉದಯವಾದ ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷ ಅಧಿಕಾರ ಪಡೆದಿತ್ತು. ಆದರೆ ಸರ್ಕಾರಕ್ಕೆ ಇನ್ನು 8 ತಿಂಗಳ 26 ದಿನಗಳ ಅಧಿಕಾರದ ಅವಧಿ ಬಾಕಿ ಇದ್ದು, ಅವಧಿ ಮುನ್ನವೇ ವಿಧಾನಸಭೆ ವಿಸರ್ಜನೆ ಮಾಡಲಾಗಿದೆ. ರಾಜ್ಯದಲ್ಲಿ ಆಡಳಿತ ಪಕ್ಷ ತೆಲಂಗಾಣ ರಾಷ್ಟ್ರ ಪಕ್ಷದ ಪರ ಜನಾಭಿಪ್ರಾಯವಿದ್ದು, ಇದರ ಲಾಭ ಪಡೆಯಲು ಸಿಎಂ ಕೆಸಿಆರ್ ಈ ತೀರ್ಮಾನ ಕೈಗೊಂಡಿದ್ದಾರೆ.

ಇಂದೇ ಏಕೆ?
ಸಿಎಂ ಕೆಸಿಆರ್ ಹೆಚ್ಚು ಸಂಖ್ಯಾ ಶಾಸ್ತ್ರ ನಂಬುತ್ತಾರೆ ಎನ್ನಲಾಗಿದ್ದು, `6′ ಕೆಸಿಆರ್ ಅದೃಷ್ಟ ಸಂಖ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಇಂದೇ ವಿಧಾನಸಭೆ ವಿಸರ್ಜನೆ ಮಾಡಿದ್ದಾರೆ ಎನ್ನಲಾಗಿದೆ. ವಿಧಾನಸಭೆ ವಿಸರ್ಜನೆ ಬಳಿಕ ಕೆಸಿಆರ್ ಅವರೇ ಹೊಸ ಸರ್ಕಾರ ರಚನೆಯಾಗುವ ವರೆಗೆ ಹಂಗಾಮಿ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ತಿಳಿದು ಬಂದಿದೆ.

ತೆಲಂಗಾಣ ವಿಧಾನಸಭೆಯಲ್ಲಿ 119 ಸ್ಥಾನಗಳಿದ್ದು, ಈ ಹಿಂದಿನ ಚುನಾವಣೆಯಲ್ಲಿ ಟಿಆರ್‍ಎಸ್ ಪಕ್ಷ 63 ಸ್ಥಾನಗಳಿಸಿತ್ತು. ಕಾಂಗ್ರೆಸ್ 21, ಟಿಡಿಪಿ 15, ವೈಎಸ್‍ಆರ್ ಕಾಂಗ್ರೆಸ್ 3, ಬಿಜೆಪಿ 7, ಓವೈಸಿ ಅವರ ಎಐಎಂಐಎಂ ಪಕ್ಷ 5 ಸ್ಥಾನ ಪಡೆದಿತ್ತು.

ವಿಧಾನಸಭೆ ವಿಸರ್ಜನೆ ಬಳಿಕ ಕೇಂದ್ರ ಚುನಾವಣಾ ಆಯೋಗ ತೆಲಂಗಾಣದಲ್ಲಿ ಯಾವಾಗ ಚುನಾವಣೆ ನಡೆಸಬೇಕು ಎನ್ನುವುದನ್ನು ನಿರ್ಧಾರ ಮಾಡಲಿದೆ. ಮುಂದಿನ ಡಿಸೆಂಬರ್ ನಲ್ಲಿ ದೇಶದ 3 ರಾಜ್ಯಗಳಿಗೆ (ರಾಜಸ್ಥಾನ, ಚತ್ತೀಸ್‍ಘಡ, ಮಧ್ಯಪ್ರದೇಶ) ವಿಧಾನಸಭೆ ಚುನಾವಣೆ ಇದ್ದು, ಈ ವೇಳೆಯೇ ಚುನಾವಣೆ ನಡೆಸುವ ಸಾಧ್ಯತೆ ಇದೆ.

ಕಾಂಗ್ರೆಸ್ ಪ್ರತಿಸ್ಪರ್ಧಿ:
ಕೆಸಿಆರ್ ಅವರ ಈ ನಿರ್ಧಾರ ಅಚ್ಚರಿ ಉಂಟುಮಾಡಿದ್ದು, ಈ ತೀರ್ಮಾನದ ಹಿಂದೆ ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ. ತೆಲಂಗಾಣದಲ್ಲಿ ಟಿಆರ್‍ಎಸ್ ಪಕ್ಷಕ್ಕೆ ಕಾಂಗ್ರೆಸ್ ಪಕ್ಷ ಪ್ರಬಲ ವಿರೋಧಿ ಪಕ್ಷವಾಗಿದ್ದು, ಅದ್ದರಿಂದಲೇ ರಾಷ್ಟ್ರಮಟ್ಟದ ತೃತೀಯ ರಂಗದಲ್ಲಿ ಕೆಸಿಆರ್ ಗುರುತಿಸಿಕೊಂಡಿರಲಿಲ್ಲ. ಇನ್ನು ಕಳೆದ ಕೆಲ ದಿನಗಳ ಹಿಂದೆ ಕೆಸಿಆರ್ ಅವರು ಪ್ರಧಾನಿ ಮೋದಿರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ವಿಧಾನಸಭೆ ವಿಸರ್ಜನೆ ಹಿಂದಿನ ಉದ್ದೇಶದ ಕುರಿತು ಕೆಸಿಆರ್ ಇನ್ನಷ್ಟೇ ಮಾಹಿತಿ ನೀಡಬೇಕಿದೆ.

Comments

Leave a Reply

Your email address will not be published. Required fields are marked *