Bihar Election 2025 | ಪಂಚಾಯತ್ ಪ್ರತಿನಿಧಿಗಳಿಗೆ ಪಿಂಚಣಿ, 50 ಲಕ್ಷ ವಿಮೆ, 5 ಲಕ್ಷ ಆರ್ಥಿಕ ನೆರವು ನೀಡುವುದಾಗಿ ತೇಜಸ್ವಿ ಭರವಸೆ

– ಅನುಕಂಪ ಆಧಾರದಲ್ಲಿ ಸರ್ಕಾರಿ ಉದ್ಯೋಗ – ವಯಸ್ಸಿನ ಮಿತಿ ರದ್ದು; ಭರವಸೆ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ (Bihar Election 2025) ಇನ್ನೆರಡು ವಾರವಷ್ಟೇ ಬಾಕಿ ಉಳಿದಿದ್ದು, ಎಲ್ಲಾ ಪಕ್ಷಗಳು ಬಿರುಸಿನ ಪ್ರಚಾರ ಆರಂಭಿಸಿವೆ. ಈ ನಡುವೆ ಇಂದು ರಾಷ್ಟ್ರೀಯ ಜನತಾ ದಳ (RJD) ನಾಯಕಿ ತೇಜಸ್ವಿ ಯಾದವ್ (Tejashwi Yadav) ಮಹಾಘಟಬಂಧನ್ ಮೈತ್ರಿಕೂಟದ ಪರವಾಗಿ ಪ್ರಮುಖ ಚುನಾವಣಾ ಭರವಸೆಯನ್ನ ಪ್ರಕಟಿಸಿದ್ದಾರೆ.

ಈಗಾಗಲೇ ಪ್ರತಿ ಮನೆಗೆ ಸರ್ಕಾರಿ ಉದ್ಯೋಗ ಭರವಸೆ ನೀಡಿದ್ದಾರೆ. ಇಂದು ನಾಲ್ಕು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದು, ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮೈತ್ರಿಕೂಟದ ಭರವಸೆ ಪ್ರಕಟಿಸಿದ್ದಾರೆ.

ಮಹಾಘಟಬಂಧನ್‌ (Mahagathbandhan) ಮೈತ್ರಿಕೂಟ ಅಧಿಕಾರಕ್ಕೆ ಬಂದ್ರೆ ಪಂಚಾಯತ್‌ ರಾಜ್‌ ವ್ಯವಸ್ಥೆಯ ಪ್ರತಿನಿಧಿಗಳ ಭತ್ಯೆಯನ್ನು ಡಬಲ್‌ ಮಾಡುವುದಾಗಿ ಭರವಸೆ ನೀಡಿದ್ದಾರೆ. ಮುಂದುವರಿದು ನಾವು ಮೂರು ಹಂತದ ಪಂಚಾಯತ್ ಪ್ರತಿನಿಧಿಗಳಿಗೆ (ತಾಲೂಕು, ಜಿಲ್ಲೆ, ಗ್ರಾಮ ಪಂಚಾಯಿತಿ) ಪಿಂಚಣಿ ಯೋಜನೆ ಜಾರಿಗೆ ತರುತ್ತೇವೆ. 50 ಲಕ್ಷ ರೂ.ವರೆಗೆ ವಿಮೆ ಸಹ ಒದಗಿಸಲಾಗುವುದು. ಪಿಡಿಎಸ್ ವಿತರಕರಿಗೆ ಗೌರವಧನ ನೀಡಲಾಗುವುದು ಹಾಗೂ ಪ್ರತಿ ಕ್ವಿಂಟಾಲ್‌ಗೆ ಮಾರ್ಜಿನ್ ಹಣ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಅಲ್ಲದೇ ಕುಂಬಾರರು, ಕಮ್ಮಾರರು ಮತ್ತು ಬಡಗಿಗಳಂತಹ ಶ್ರಮಜೀವಿಗಳಿಗೆ 5 ಲಕ್ಷ ರೂಪಾಯಿಗಳ ವರೆಗೆ ಆರ್ಥಿಕ ನೆರವು ನೀಡುವುದಾಗಿ ಅವರು ಘೋಷಿಸಿದರು. 5 ವರ್ಷದಲ್ಲಿ 5 ಲಕ್ಷ ರೂ. ಏಕಕಾಲಿಕ ನೆರವು, ಸರ್ಕಾರಿ ಉದ್ಯೋಗಗಳಿಗೆ ಅನುಕಂಪದ ನೇಮಕಾತಿಗಳಿಗೆ 58 ವರ್ಷ ವಯಸ್ಸಿನ ಮಿತಿ ತೆಗೆದುಹಾಕುವುದಾಗಿಯೂ ಭರವಸೆ ನೀಡಿದ್ದಾರೆ.

ಮುಂದುವರಿದು ಮಾತನಾಡಿ, ಎನ್‌ಡಿಎ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪ್ರಚಾರ ಶುರುವಾದಾಗಿನಿಂದ ಬಿಹಾರ ಬದಲಾವಣೆಗಾಗಿ ಕಾತರದಿಂದ ಕಾಯುತ್ತಿದೆ. ಎನ್‌ಡಿಎ ದೃಷ್ಟಿಹೀನ ಸರ್ಕಾರ, ಭ್ರಷ್ಟ ಸರ್ಕಾರ. ಈ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ಬಜೆಟ್‌ನಲ್ಲಿ ಬಿಹಾರಕ್ಕೆ ಬರಬೇಕಾದ ಹಣ ಗುಜರಾತ್‌ಗೆ ಹೋಗ್ತಾ ಇದೆ ಎಂದು ಕಿಡಿ ಕಾರಿದರು.

ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್‌ 6ರಂದು ಮೊದಲ ಹಂತ ನವೆಂಬರ್‌ 11ರಂದು 2ನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ನ.14ರಂದು ಫಲಿತಾಂಶ ಪ್ರಕಟವಾಗಲಿದೆ.