ಗಾಳಿಯಲ್ಲಿರುವಾಗಲೇ ನೆಲಕ್ಕುರುಳಿದ ತೇಜಸ್‍ನ 1,200 ಲೀಟರ್ ಇಂಧನ ಟ್ಯಾಂಕರ್

ಚೆನ್ನೈ: ಭಾರತೀಯ ವಾಯುಸೇನೆಯ ತೇಜಸ್ ಯುದ್ಧ ವಿಮಾನದ ಹೆಚ್ಚುವರಿ ಇಂಧನ ಟ್ಯಾಂಕರ್ ವಿಮಾನ ಹಾರಾಟ ನಡೆಸುತ್ತಿದ್ದ ವೇಳೆಯೇ ನೆಲಕ್ಕುರುಳಿದ ಘಟನೆ ತಮಿಳುನಾಡಿನ ಕೊಯಮತ್ತೂರು ಬಳಿ ನಡೆದಿದೆ.

ದಿನಚರಿಯಂತೆ ಇಂದು ಬೆಳಗ್ಗೆ ವಿಮಾನ ಹಾರಾಟ ನಡೆಸಿತ್ತು. ಈ ಸಮಯದಲ್ಲಿ ಏಕಾಏಕಿ ವಿಮಾನ ಹೆಚ್ಚುವರಿ 1200 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕರ್ ನೆಲಕ್ಕಪ್ಪಳಿಸಿದೆ. ಘಟನೆ ಬಳಿಕ ಜೇಟ್ ಫೈಲಟ್ ವಿಮಾನವನ್ನು ಯಶಸ್ವಿಯಾಗಿ ಸುಲೂರ್ ವಾಯುನೆಲೆಯಲ್ಲಿ ಲ್ಯಾಂಡ್ ಮಾಡಿದ್ದಾರೆ.

ಘಟನೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ವಾಯುಸೇನೆಯ ಹಿರಿಯ ಅಧಿಕಾರಿಯೊಬ್ಬರು, ಘಟನೆ ಹೇಗಾಯಿತು ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ವಿಮಾನ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಘಟನೆ ಬಗ್ಗೆ ತನಿಖೆಗೆ ಆದೇಶ ನೀಡಿದ್ದೇವೆ ಎಂದು ತಿಳಿಸಿದ್ದಾರೆ. ಇಂಧನ ಟ್ಯಾಂಕರ್ ನೆಲಕ್ಕುರುಳಿದ ಪರಿಣಾಮ ಸ್ಥಳದಲ್ಲಿ ಸುಮಾರು 3 ಅಡಿಗಿಂತಲೂ ಹೆಚ್ಚು ಭೂಮಿ ಕುಸಿತವಾಗಿದ್ದು, ಕೂಡಲೇ ಬೆಂಕಿ ಹೊತ್ತಿಕೊಂಡಿದೆ. ಆದರೆ ಬಯಲು ಪ್ರದೇಶದಲ್ಲಿ ಬಿದ್ದ ಪರಿಣಾಮ ಸಂಭವಿಸಬಹುದಾಗಿದ್ದ ಬಹುದೊಡ್ಡ ಅವಘಡ ತಪ್ಪಿದೆ.

ಅಂದಹಾಗೇ ತೇಜಸ್ ಭಾರತದ ಮೊದಲ ಯುದ್ಧ ವಿಮಾನವಾಗಿದ್ದು, ಇಲ್ಲಿಯೇ ಅಭಿವೃದ್ಧಿ ಪಡಿಸಲಾಗಿತ್ತು. ಗಾಳಿಯಲ್ಲಿಯೇ ಇಂಧನವನ್ನು ತುಂಬಿಸಿಕೊಳ್ಳುವ ಸಾಮರ್ಥ್ಯವನ್ನು ತೇಜಸ್ ಹೊಂದಿದ್ದು, ಕಳೆದ ವರ್ಷವಷ್ಟೇ ಈ ಪರೀಕ್ಷೆಯಲ್ಲಿ ಯಶಸ್ವಿಯಾಗಿತ್ತು. ಘಟನೆ ನಡೆದ ಕೂಡಲೇ ಪೈಲಟ್ ಸಮಯ ಪ್ರಜ್ಞೆ ಮೆರೆದಿದ್ದು, ಸ್ಥಳೀಯ ವಾಯುನೆಲೆಯಲ್ಲಿ ಲ್ಯಾಂಡ್ ಮಾಡಲು ಯಶಸ್ವಿಯಾಗಿದ್ದಾರೆ. ಆದರೆ ಇಂಧನ ಟ್ಯಾಂಕರ್ ಬೀಳಲು ಕಾರಣವೆಂಬುವುದು ತಿಳಿದು ಬಂದಿಲ್ಲ. ತನಿಖೆಯ ಬಳಿಕ ಘಟನೆ ಕಾರಣ ತಿಳಿದು ಬರಲಿದೆ.

Comments

Leave a Reply

Your email address will not be published. Required fields are marked *