ಜಮ್ಮು ಬಸ್ ನಿಲ್ದಾಣದಲ್ಲಿ ಸ್ಫೋಟ – ಗ್ರೆನೇಡ್ ಎಸೆದ ಕೆಲ ಗಂಟೆಗಳಲ್ಲೇ ಉಗ್ರ ಅರೆಸ್ಟ್

ಶ್ರೀನಗರ: ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೇಡ್ ಸ್ಫೋಟಿಸಿದ್ದ ಉಗ್ರನನ್ನು ಪೊಲೀಸರು ಕೆಲವೇ ಗಂಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಾಸಿನ್ ಭಟ್ ಬಂಧಿತ ಉಗ್ರ. ಈತ ನಿಷೇಧಿತ ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದನಾ ಸಂಘಟನೆಗೆ ಸೇರಿದವನಾಗಿದ್ದಾನೆ. ಘಟನೆ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಜಮ್ಮು ಕಾಶ್ಮೀರ ಪೊಲೀಸ್ ಐಜಿಪಿ ಮನೀಷ್ ಕೆ ಸಿನ್ಹಾ ಮಾಹಿತಿ ನೀಡಿದ್ದಾರೆ.

ಕುಲ್ವಾಮ್ ಜಿಲ್ಲೆಯ ಹಿಜ್ಬುಲ್‍ಮುಜಾಹಿದೀನ್ ಜಿಲ್ಲಾ ಕಮಾಂಡರ್ ಫರೂಕ್ ಅಹ್ಮದ್ ಭಟ್ ಅಲಿಯಾಸ್ ಓಮರ್, ಯಾಸಿರ್ ಭಟ್‍ಗೆ ಗ್ರೆನೇಡ್ ದಾಳಿ ನಡೆಸಿಲು ಸೂಚನೆ ನೀಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಘಟನೆಯಲ್ಲಿ ಒಬ್ಬ ಸಾವನ್ನಪ್ಪಿದ್ದು, 33 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ನಿಲ್ದಾಣದಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟವನನ್ನು 17 ವರ್ಷದ ಮೊಹಮ್ಮದ್ ಶರೀಕ್ ಎಂದು ಗುರುತಿಸಲಾಗಿದೆ.

ಯಾಸಿನ್ ಇಂದು ಬೆಳಗ್ಗೆ ಕುಲ್ಗಾಮ್ ನಿಂದ ಜಮ್ಮುವಿಗೆ ಆಗಮಿಸಿದ್ದ. ಸ್ಥಳದಲ್ಲಿ ಇದ್ದ ಪ್ರತ್ಯಕ್ಷದರ್ಶಿಗಳು ಓರ್ವ ವ್ಯಕ್ತಿ ಜೀನ್ಸ್ ಹಾಗೂ ಕೆಂಪು ಬಣ್ಣದ ಬ್ಯಾಗ್ ಹೊಂದಿದ್ದ ಎಂದು ಮಾಹಿತಿ ನೀಡಿದ್ದರು. ಇದರ ಜೊತೆ ಸ್ಥಳೀಯ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿತ್ತು. ಈ ಆಧಾರದ ಹಿನ್ನೆಲೆಯಲ್ಲಿ ಯಾಸಿರ್ ಭಟ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆದಾಗ ಕೃತ್ಯ ಬೆಳಕಿಗೆ ಬಂದಿದೆ.

11.30ಕ್ಕೆ ಜಮ್ಮುವಿನಿಂದ ಹೊರಡಲು ಸಿದ್ಧವಿದ್ದ ಬಸ್ ಕೆಳಗೆ ಗ್ರೆನೇಡ್ ಎಸೆದ ಪರಿಣಾಮ ಹಲವು ಮಂದಿ ಗಾಯಗೊಂಡಿದ್ದಾರೆ. ಕಳೆದ ಮೇ ತಿಂಗಳಿಂದ ಇದು ಮೂರನೇ ಬಾರಿಗೆ ಉಗ್ರರು ಬಸ್ ನಿಲ್ದಾಣವನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಿದ್ದಾರೆ. ಭಾರೀ ಪ್ರಮಾಣದ ಸಾವು ನೋವು ಸಂಭವಿಸಲೆಂದು ಉಗ್ರರು ಬಸ್ ನಿಲ್ದಾಣವನ್ನು ಟಾರ್ಗೆಟ್ ಮಾಡಿದ್ದರು.

ನಗರದ ಕಾನೂನು ಸುವ್ಯವಸ್ಥೆ ಮತ್ತು ಶಾಂತಿಗೆ ಭಂಗ ತರುವ ಉದ್ದೇಶದಿಂದ ಈ ಸ್ಫೋಟ ನಡೆಸಲಾಗಿದೆ. ಸ್ಫೋಟ ಸಂಭವಿಸಿದ ವೇಳೆ ಜೀವ ಉಳಿಸಿಕೊಳ್ಳಲು ಜನ ಓಡಿ ಹೋಗಿದ್ದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಐಜಿಪಿ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *