ವೈದ್ಯನಂತೆ ನಟಿಸಿದ ಎಸಿ ಮೆಕ್ಯಾನಿಕ್- ಆಂಬುಲೆನ್ಸ್ ನಲ್ಲೇ ಬಾಲಕನ ಸಾವು

ಕೋಲ್ಕತಾ: ಎಸಿ(ಏರ್ ಕಂಡೀಷನರ್) ಮೆಕ್ಯಾನಿಕ್‍ವೊಬ್ಬ ವೈದ್ಯನಂತೆ ನಟಿಸಿ 16 ವರ್ಷದ ಬಾಲಕನ ಸಾವಿಗೆ ಕಾರಣನಾದ ಘಟನೆ ಕೋಲ್ಕತ್ತಾದಲ್ಲಿ ಗುರುವಾರದಂದು ನಡೆದಿದೆ.

ಅರಿಜಿತ್(16) ಮೃತ ಬಾಲಕ. ವೈದ್ಯನಂತೆ ನಟಿಸಿ ವಂಚಿಸಿದ ಆರೋಪದಡಿ ಎಸಿ ಮೆಕ್ಯಾನಿಕ್ ಸರ್ಫರಾಜ್ ಮತ್ತು ಆಂಬುಲೆನ್ಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಆಂಬುಲೆನ್ಸ್ ನಲ್ಲಿ ಮೆಕ್ಯಾನಿಕ್‍ಗೆ ಲೈಫ್ ಸಪೋರ್ಟಿಂಗ್ ಸಿಸ್ಟಂ ಸರಿಯಾಗಿ ಉಪಯೋಗಿಸಲು ಬರದೇ ಬಾಲಕನ ಪರಿಸ್ಥಿತಿ ಹದಗೆಟ್ಟು ಸಾವನ್ನಪ್ಪಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಗೆ ಕೊಂಡೊಯ್ಯುವ ವೇಳೆಗಾಗಲೇ ಅರಿಜಿತ್ ಸಾವನ್ನಪ್ಪಿದ್ದ ಎಂದು ಕೊಲ್ಕತ್ತಾದ ವೈದ್ಯರು ದೃಢಪಡಿಸಿದ್ದಾರೆ.

ಏನಿದು ಘಟನೆ?: ಅರಿಜಿತ್ ತಂದೆ ರಂಜಿತ್ ದಾಸ್ ಅವರು ಸರ್ಫರಾಜ್ ಉದಿನ್‍ಗೆ 8,000 ರೂ. ಹಣ ನೀಡಿ ತನ್ನ ಮಗನನ್ನು ಖಾಸಗಿ ಆಸ್ಪತ್ರೆಯಿಂದ ಕೋಲ್ಕತ್ತಾ ಆಸ್ಪತ್ರೆಗೆ ಕರೆದೊಯ್ಯಲು ಹೇಳಿದ್ದರು. ಆಂಬುಲೆನ್ಸ್ ನಲ್ಲಿ ಲೈಫ್ ಸಪೋರ್ಟಿಂಗ್ ಸಿಸ್ಟಂ ಹೇಗೆ ಬಳಸಬೇಕೆಂದು ಮೆಕ್ಯಾನಿಕ್ ಗೆ ತಿಳಿದಿರಲಿಲ್ಲ. ಆರಿಜಿತ್ ತಂದೆ ರಂಜಿತ್ ದಾಸ್ ಈ ಕುರಿತು ಪ್ರತಿಕ್ರಿಯಿಸಿದ್ದು, ಅವರೊಬ್ಬ ದೊಡ್ಡ ವೈದ್ಯರು ಎಂದು ಹೇಳಿದ್ರು. ಆಂಬುಲೆನ್ಸ್ ನಲ್ಲಿ ಯಾವುದೇ ಅಡಚಣೆ ಇದ್ದರೆ ಅವರಿಗೆ ಚಿಕಿತ್ಸೆ ಕಷ್ಟವಾಗುತ್ತಾದೆಂದು ಕುಟುಂಬಸ್ಥರನ್ನ ಆಂಬುಲೆನ್ಸ್ ನಲ್ಲಿ ಹೋಗಲು ಅನುಮತಿಸದೆ ನಮ್ಮನ್ನು ಕಾರ್ ನಲ್ಲಿ ಹೋಗುವಂತೆ ಹೇಳಿದರು ಎಂದು ತಿಳಿಸಿದ್ದಾರೆ.

ರಂಜಿತ್ ದಾಸ್ ಅವರು ಪೂರ್ವ ಜಾದವ್‍ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ 26 ವರ್ಷದ ಮೆಕ್ಯಾನಿಕ್ ನನ್ನು ಬಂಧಿಸಲಾಗಿದೆ. ಬದ್ರ್ವಾನ್ ನ ಆಂಬ್ಯುಲೆನ್ಸ್ ಚಾಲಕ ಮತ್ತು ಅನ್ನಪೂರ್ಣ ನರ್ಸಿಂಗ್ ಹೋಮ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಆಸ್ಪತ್ರೆಯವರು ವೈದ್ಯ ಹಾಗೂ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದು ಇದಕ್ಕಾಗಿ 16 ಸಾವಿರ ರೂ. ಹಣ ಪಡೆದಿದ್ದರು ಎಂದು ವರದಿಯಾಗಿದೆ.

ನಿರ್ಲಕ್ಷ್ಯ ಮತ್ತು ವಂಚನೆ ಆರೋಪದಡಿ ಸರ್ಫರಾಜ್ ಮತ್ತು ಆಂಬುಲೆನ್ಸ್ ಚಾಲಕನನ್ನು ಬಂಧಿಸಿರೋ ಪೊಲೀಸರು ತನಿಖೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ. ಇಬ್ಬರು ಆರೋಪಿಗಳನ್ನ ಶುಕ್ರವಾರದಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *