ಟೆಕ್ಕಿಯ ಪತ್ನಿ, ಪುತ್ರಿ, ಸ್ನೇಹಿತನಿಗೂ ಕೊರೊನಾ ಸೋಂಕು: ಸುಧಾಕರ್

– ಅಮೆರಿಕದಿಂದ ಬೆಂಗ್ಳೂರು ಬರೋ ಮಾರ್ಗದಲ್ಲಿ 2,666 ಜೊತೆ ಸಂಪರ್ಕ
– ಬೆಂಗ್ಳೂರಿನಲ್ಲಿ 60 ಜನರೊಂದಿಗೆ ಸಂಪರ್ಕ
– ಟೆಕ್ಕಿ ಸಂಪರ್ಕದಲ್ಲಿದ್ದ 60 ಮಂದಿಗೆ ಗೃಹಬಂಧನ

ಬೆಂಗಳೂರು: ಮಾರ್ಚ್ 1ರಂದು ಬೆಳಗ್ಗೆ 8 ಗಂಟೆ 35 ನಿಮಿಷಕ್ಕೆ ಟೆಕ್ಕಿಯ ಪತ್ನಿ, ಪುತ್ರಿ ಮತ್ತು ಸ್ನೇಹಿತನ ಜೊತೆ ದುಬೈನಿಂದ ಬೆಂಗಳೂರಿಗೆ ಬಂದಿದ್ದಾರೆ. ಮೊದಲೆರಡು ದಿನ ಎಲ್ಲರೂ ಆರೋಗ್ಯವಾಗಿದ್ದರು. ಮಾರ್ಚ್ 2 ಮತ್ತು 3ರಂದು ಯಾವುದೇ ಲಕ್ಷಣಗಳನ್ನು ಕಂಡು ಬಂದಿಲ್ಲ. ನಾಲ್ಕನೇ ತಾರೀಖು ಅವರಿಗೆ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡು ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ತದನಂತರ ಅವರನ್ನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.

ಮಾರ್ಚ್ 5 ಮತ್ತು 6ರಂದು ಚಿಕಿತ್ಸೆಗೆ ಒಳಪಡಿಸಿದಾಗ ಎರಡು ವರದಿಗಳು ಪಾಸಿಟಿವ್ ಬಂದಿದೆ. ಇನ್ನು ಪತ್ನಿ ಮತ್ತು ಪುತ್ರಿಯನ್ನು ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯರು ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದಾರೆ ಎಂದು ತಿಳಿಸಿದರು.

2,666 ಜೊತೆ ಸಂಪರ್ಕ: ಅಮೆರಿಕದಿಂದ ಬಂದ ಟೆಕ್ಕಿ ಇಲ್ಲಿಯವರೆಗೆ 2,666 ಜನರೊಂದಿಗೆ ಸಂಪರ್ಕದಲ್ಲಿದ್ದರು. ವಿದೇಶದಿಂದ ಬಂದ ಮೇಲೆ ಬೆಂಗಳೂರಿನಲ್ಲಿಯೂ ಎರಡು ದಿನ ಇದ್ದರು. ಇಲ್ಲಿಯೂ ಸುಮಾರು 60 ಜನರೊಂದಿಗೆ ಟೆಕ್ಕಿ ಸಂಪರ್ಕದಲ್ಲಿದ್ದರು. ಬೆಂಗಳೂರಿನಲ್ಲಿಯ 60 ಜನರನ್ನು ಸಂಪರ್ಕಿಸಲಾಗಿದ್ದು, ಅವರ ಆರೋಗ್ಯದ ಮೇಲೆಯೂ ನಿಗಾ ಇರಿಸಲಾಗಿದೆ. ಶಂಕಿತ ಸೋಂಕು ಪೀಡಿತರ ಮೇಲೆ 28 ದಿನಗಳ ಕಾಲ ನಿಗಾ ಇಡಲಾಗುವುದು. ಟೆಕ್ಕಿ ಒಟ್ಟು ನಾಲ್ಕು ದೇಶಗಳ ಪ್ರವಾಸಕೈಗೊಂಡಿದ್ದು, ಅಮೆರಿಕದಲ್ಲಿಯೇ ಸೋಂಕು ತಗುಲಿರುವ ಬಗ್ಗೆ ಅನುಮಾನಗಳಿವೆ ಎಂದು ಹೇಳಿದರು.

ಟೆಕ್ಕಿ ಪ್ರಯಾಣಿಸಿದ ವಿಮಾನದ ಮಾಹಿತಿ ನೀಡಲಾಗಿದ್ದು, 2,666 ಸಂಪರ್ಕಕ್ಕೆ ಸ್ಥಳೀಯ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಟೆಕ್ಕಿ ಪ್ರಯಾಣಿಸದ ಬಗ್ಗೆ ಇಲಾಖೆಗಳಿಗೆ ಮಾಹಿತಿ ನೀಡಲಾಗಿದೆ. ಎಲ್ಲ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *