ಪ್ರೀತ್ಸೋ ಎಂದು ಬೆನ್ನು ಬಿದ್ದ ಯುವತಿಯ ಕಾಟಕ್ಕೆ ಸುಸ್ತಾದ ಟೆಕ್ಕಿ!- ಪೊಲೀಸ್ ಠಾಣೆಯಲ್ಲಿ ದೂರು

ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯಲ್ಲಿ ಪ್ರೀತ್ಸೋ.. ಪ್ರೀತ್ಸೋ ಎಂದು ಬೆನ್ನು ಬಿದ್ದಿರುವ ಯುವತಿಯೊಬ್ಬಳ ಕಾಟಕ್ಕೆ ಬಿಐಎಸ್‍ಎಲ್ (ವಿಶ್ವವೇಶ್ವರಯ್ಯ ಐರನ್ ಆಂಡ್ ಸ್ಟೀಲ್ ಲಿಮಿಡೆಟ್)ನ ಮೆಕ್ಯಾನಿಕಲ್ ಎಂಜಿನಿಯರ್ ಯುವಕರೊಬ್ಬರು ದಿಗಿಲುಗೊಂಡಿದ್ದಾರೆ.

ಹೇಮಂತ್ ಎಂಬವರೇ ಯುವತಿಯಿಂದ ತೊಂದರೆ ಅನುಭವಿಸುತ್ತಿರುವ ಎಂಜಿನಿಯರ್. ಇಂದು ಬೆಳ್ಳಂಬೆಳಗ್ಗೆ ಜಿಮ್ ಗೆ ಹೋಗಿದ್ದ ಹೇಮಂತ್ ಮೇಲೆ ಯುವತಿ ಹಾಗೂ ಆಕೆಯ ತಾಯಿ ಪಟ್ಟಣದ ಹೊಸಮನೆ ಮುಖ್ಯ ರಸ್ತೆಯಲ್ಲಿ ದಾಳಿ ಮಾಡಿದ್ದಾರೆ. ಹೇಮಂತ್‍ರನ್ನು ಹಿಡಿದು ಪರಚಿದ್ದಾರೆ. ಇವರ ದಾಳಿಗೆ ಕಂಗಾಲಾದ ಹೇಮಂತ್ ಪರಾರಿಯಾಗಿ ಪೊಲೀಸ್ ಠಾಣೆಗೆ ಓಡಿ ಹೋಗಿದ್ದಾರೆ. ಇತ್ತ ತಾಯಿ ಮಗಳು ಹೇಮಂತ್ ಬೈಕ್ ಬೀಳಿಸಿ, ಅದರ ಮೇಲೆ ಕಲ್ಲು ಎತ್ತಿಹಾಕಿದ್ದಾರೆ.

ತನ್ನನ್ನು ಮದುವೆಯಾಗುವಂತೆ ಯುವತಿ ಪೀಡಿಸುತ್ತಿದ್ದು, ಮದುವೆಗೆ ಒಪ್ಪದ ಕಾರಣಕ್ಕೆ ಈ ತಾಯಿ-ಮಗಳು ನಿರಂತರವಾಗಿ ಟಾರ್ಚರ್ ಕೊಡುತ್ತಿದ್ದಾರೆ. ಈ ಮುಂಚೆ ನನ್ನ ಮೇಲೆ ಅತ್ಯಾಚಾರದ ದೂರು ದಾಖಲಿಸಿದ್ದರು. ಈಗ ಹಲ್ಲೆ ಮಾಡಿದ್ದಾರೆ. ಜೀವನವೇ ಸಾಕು ಎಂಬಂತಾಗಿದೆ ಎಂದು ಹೇಮಂತ್ ಹೇಳಿದ್ದಾರೆ.

ಹೇಮಂತ್ ಹೇಳಿದ್ದೇನು?: ನನಗೆ ಮೂರು ವರ್ಷದಿಂದ ಒಬ್ಬ ಯುವತಿ ಮದುವೆ ಆಗುವಂತೆ ಬೆನ್ನು ಬಿದ್ದಿದ್ದಾಳೆ. ಕಳೆದ ವರ್ಷ ಸೆಪ್ಟಂಬರ್‍ನಲ್ಲಿ ನನ್ನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದ್ರು. ಕೊನೆಗೆ ಡಿಎನ್‍ಎ ರಿಪೋರ್ಟ್ ನೆಗಟಿವ್ ಬಂದ್ಮಲೇ ನನ್ನನ್ನ ಪ್ರಕರಣದಿಂದ ಕೈ ಬಿಡಲಾಗಿದೆ. ನಾನು ಮಾಡದಿರುವ ತಪ್ಪಿಗೆ ನಾಲ್ಕು ತಿಂಗಳು ಜೈಲಿನಲ್ಲಿದೆ. ಇವತ್ತು ನಾನು ಎಂದಿನಂತೆ ಜಿಮ್ ಗೆ ಹೋದಾಗ ತಾಯಿ-ಮಗಳು ಬಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಇವರಿಂದ ನಾನು ತಪ್ಪಿಸಿಕೊಂಡು ಬಂದೆ. ಆದ್ರೆ ಅಲ್ಲೇ ಇದ್ದ ನನ್ನ ಬೈಕ್ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ. ಈಗ ತಾವೇ ಆಸ್ಪತ್ರೆಗೆ ಹೋಗಿ ದಾಖಲಾಗಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ನನ್ನ ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ. ಇವರಿಂದ ನನಗೆ ನ್ಯಾಯ ಕೊಡಿಸಿ. ಇಲ್ಲವಾದ್ರೆ ನಾನು ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಹೇಮಂತ್ ಹೇಳಿದ್ದಾರೆ.

ಈ ಸಂಬಂಧ ಹೊಸಮನೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *