ಅಂಬುತೀರ್ಥದಲ್ಲಿ ಸೆಲ್ಫಿ ಕ್ಲಿಕ್ಕಿಸೋ ವೇಳೆ ಬಿದ್ದಿದ್ದ ಟೆಕ್ಕಿಯ ಮೃತದೇಹ ನದಿಯಲ್ಲಿ ತೇಲಿ ಬಂತು!

ಚಿಕ್ಕಮಗಳೂರು: ಕಳಸ ಸಮೀಪದ ಅಂಬುತೀರ್ಥದಲ್ಲಿ ಸೆಲ್ಫಿ ತೆಗೆಯುವ ವೇಳೆ ಕಾಲುಜಾರಿ ಬಿದ್ದಿದ್ದ ಯುವಕನ ಮೃತದೇಹವು 15 ದಿನಗಳ ನಂತರ ಜಿಲ್ಲೆಯ ಮಾಗುಂಡಿ ಸಮೀಪದ ಭದ್ರಾ ನದಿಯಲ್ಲಿ ಪತ್ತೆಯಾಗಿದೆ.

ಜುಲೈ 26 ರಂದು ಮಂಗಳೂರಿನ ಟೆಕ್ಕಿ ಕಿರಣ್ ಕೋಟ್ಯಾನ್ ಕಳಸ ಸಮೀಪದ ಅಂಬುತೀರ್ಥದಲ್ಲಿ ಸೆಲ್ಫಿ ತೆಗೆಯುವ ವೇಳೆ ಕಾಲುಜಾರಿ ಬಿದ್ದು, ನದಿಯಲ್ಲಿ ಕೊಚ್ಚಿಹೋಗಿದ್ದರು. ಕೊಚ್ಚಿಹೋಗಿದ್ದ ಕಿರಣ್ ಮೃತದೇಹ 15 ದಿನಗಳ ಬಳಿಕ ಮಾಗುಂಡಿ ಸಮೀಪದ ಭದ್ರಾ ನದಿಯಲ್ಲಿ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿರುವುದರಿಂದ ಭದ್ರಾ ನದಿಯ ನೀರಿನ ಹರಿಯು ಹೆಚ್ಚಾಗಿದ್ದರಿಂದ ಮೃತದೇಹ ತೇಲಿ ಬಂದಿದೆ.

ಕಿರಣ್ ಕೋಟ್ಯಾನ್ ಮೂಲತಃ ಮಂಗಳೂರಿನ ತುಂಬೆ ಗ್ರಾಮದವರಾಗಿದ್ದು, ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಕಳೆದ ಜುಲೈ 26ರಂದು ತಮ್ಮ 13 ಮಂದಿ ಸ್ನೇಹಿತರ ತಂಡದೊಂದಿಗೆ ಜಿಲ್ಲೆಯ ಕುದುರೆಮುಖ ಸುತ್ತಮುತ್ತ ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಅಂಬುತೀರ್ಥದ ಬಳಿ ಬಂಡೆ ಮೇಲಿಂದ ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ ನದಿಗೆ ಬಿದ್ದಿದ್ದರು. ಕೂಡಲೇ ಸ್ನೇಹಿತರು ಹುಡುಕಾಡುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಇದನ್ನೂ ಓದಿ: ಕಾಲುಜಾರಿ ಭದ್ರಾ ನದಿಗೆ ಬಿದ್ದು ಕೊಚ್ಚಿ ಹೋದ ಮಂಗ್ಳೂರು ಎಂಜಿನಿಯರ್

ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಎನ್.ಡಿ.ಆರ್.ಎಫ್ ರಕ್ಷಣಾ ತಂಡ ಕಿರಣ್ ಗಾಗಿ ವ್ಯಾಪಕ ಶೋಧ ಕೈಗೊಂಡಿತ್ತು. ಆದರೆ ಭದ್ರಾ ನದಿಯಲ್ಲಿ ನೀರಿನ ರಭಸ ಜಾಸ್ತಿಯಾಗಿದ್ದರಿಂದ ಇತ್ತೀಚೆಗೆ ರಕ್ಷಣಾ ಕಾರ್ಯಚರಣೆಯನ್ನು ಕೈಬಿಟ್ಟಿತ್ತು. ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *