ಟೀಂ ಇಂಡಿಯಾ ಉಗ್ರರ ಟಾರ್ಗೆಟ್- ಡೆಲ್ಲಿ ಪಂದ್ಯಕ್ಕೆ ಭದ್ರತೆ ಹೆಚ್ಚಿಸಿದ ಪೊಲೀಸ್

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಟೂರ್ನಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಟೀಂ ಇಂಡಿಯಾ ಸದ್ಯ ಬಾಂಗ್ಲಾದೇಶ ವಿರುದ್ಧದ ಸರಣಿಗೆ ಸಿದ್ಧತೆ ನಡೆಸಿದೆ. ಇದರ ನಡುವೆಯೇ ದೆಹಲಿಯಲ್ಲಿ ನ.3 ರಂದು ನಡೆಯುವ ಮೊದಲ ಟಿ20 ಪಂದ್ಯಕ್ಕೆ ಭಯೋತ್ಪಾದಕ ದಾಳಿಯ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆಯನ್ನು ನೀಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ.

ರಾಷ್ಟ್ರೀಯ ತನಿಖಾ ದಳ (ಎನ್‍ಐಎ)ಗೆ ಅನಾಮಧೇಯ ಪತ್ರವೊಂದನ್ನು ಲಭಿಸಿದ್ದು, ಆ ಬಳಿಕ ದೆಹಲಿ ಪೊಲೀಸರಿಗೆ ಪಂದ್ಯಕ್ಕೆ ಹೆಚ್ಚಿನ ಭದ್ರತೆಯನ್ನು ನೀಡಲು ಸೂಚನೆ ನೀಡಲಾಗಿದೆ. ನ.3 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಪ್ರಮುಖವಾಗಿ ಟೀಂ ಇಂಡಿಯಾ ತಂಡದ ನಾಯಕ ವಿರಾಟ್ ಕೊಹ್ಲಿ ಬೆದರಿಕೆಯ ಪಟ್ಟಿಯಲ್ಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ದೆಹಲಿ ಪೊಲೀಸ್ ಮೂಲಗಳ ಮಾಹಿತಿಯ ಅನ್ವಯ ಪಟ್ಟಿಯಲ್ಲಿ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಸಚಿವ ಅಮಿತ್ ಶಾ, ಲಾಲ್ ಕೃಷ್ಣ ಅಡ್ವಾಣಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಆರ್ ಎಸ್‍ಎಸ್‍ನ ಮೋಹನ್ ಭಗವಾತ್ ಅವರ ಹೆಸರು ಪಟ್ಟಿಯಲ್ಲಿದೆ ಎನ್ನಲಾಗಿದೆ. ಎನ್‍ಐಎ ಈ ಕುರಿತ ಮಾಹಿತಿಯನ್ನು ನೀಡಿ ಬಿಸಿಸಿಐಗೆ ಪತ್ರದ ಮೂಲಕ ಮಾಹಿತಿ ರವಾನಿಸಿದೆ. ಕೇರಳ ಮೂಲದ ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆ ರಾಜಕಾರಣಿಗಳು ಹಾಗೂ ಗಣ್ಯರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಧ್ಯತೆ ಕುರಿತು ಎನ್‍ಐಎಗೆ ಮಾಹಿತಿ ಲಭಿಸಿದೆ.

ಸದ್ಯ ಪಂದ್ಯದ ಆಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬ ಮಾಹಿತಿ ಲಭಿಸಿದ್ದು, ಪತ್ರದ ಕುರಿತು ಹೆಚ್ಚಿನ ತನಿಖೆಯನ್ನು ಎನ್‍ಐಎ ನಡೆಸುತ್ತಿದೆ. ಅಲ್ಲದೇ ಈ ಪತ್ರ ಹುಸಿ ಬೆದರಿಕೆಯೂ ಆಗಿರಬಹುದು. ಆದರೆ ದೇಶದ ರಕ್ಷಣಾ ವಿಚಾರದಲ್ಲಿ ಯಾವುದೇ ಅವಕಾಶವನ್ನು ತೆಗೆದುಕೊಳ್ಳದಿರಲು ತೀರ್ಮಾನಿಸಲಾಗಿದೆ.

ಟೀ ಇಂಡಿಯಾ, ಬಾಂಗ್ಲಾದೇಶದ ವಿರುದ್ಧ 3 ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಆ ಬಳಿಕ 2 ಪಂದ್ಯಗಳ ಟೆಸ್ಟ್ ಟೂರ್ನಿ ಆರಂಭವಾಗಲಿದೆ. ದೆಹಲಿಯಲ್ಲಿ ನಡೆಯುವ ಮೊದಲ ಟಿ20 ಪಂದ್ಯವನ್ನು ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ಬೇರೆಡೆಗೆ ಸ್ಥಳಾಂತರಿಸಲಾಗುತ್ತದೆ ಎನ್ನಲಾಗಿತ್ತು. ಆದರೆ ಈ ವರದಿಗಳನ್ನು ನಿರಾಕರಿಸಿರುವ ಬಿಸಿಸಿಐ, ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲೇ ಪಂದ್ಯ ನಡೆಯಲಿದೆ ಎಂದು ಸ್ಪಷ್ಟನೆ ನೀಡಿತ್ತು.

Comments

Leave a Reply

Your email address will not be published. Required fields are marked *