ವಿಶ್ವಕಪ್‍ನಲ್ಲಿ ಇಂದು ಭಾರತಕ್ಕೆ ಮೊದಲ ಪಂದ್ಯ

ಲಂಡನ್: ಭಾರತದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ಇಂದಿನಿಂದ ಕ್ರಿಕೆಟ್ ಹಬ್ಬ ಶುರು. ಮಹಾಯುದ್ಧದಲ್ಲಿ ಶುಭಾರಂಭ ಮಾಡಲು ಕೊಹ್ಲಿ ಹುಡುಗರು ಸಜ್ಜಾಗಿದ್ರೆ, ಮತ್ತೊಂದೆಡೆ ಸೋತು ಸುಣ್ಣವಾಗಿರುವ ಹರಿಣಗಳು ಕಮ್ ಬ್ಯಾಕ್ ಮಾಡಲು ರಣತಂತ್ರ ಹೆಣೆದಿದ್ದಾರೆ.

ಇಂಗ್ಲೆಂಡ್‍ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಮಹಾಸಮರದಲ್ಲಿ ಇಂದು ಭಾರತ ತನ್ನ ಮೊದಲ ಲೀಗ್ ಪಂದ್ಯವಾಡಲಿದೆ. ಈಗಾಗಲೇ ಎರಡು ಲೀಗ್ ಮ್ಯಾಚ್ ಆಡಿ ಸೋತಿರುವ ದಕ್ಷಿಣ ಆಫ್ರಿಕಾದ ವಿರುದ್ಧ ಟೀಂ ಇಂಡಿಯಾ ಕಣಕ್ಕಿಳಿಯಲಿದೆ. ಸೌತಾಂಪ್ಟನ್‍ನ ದಿ ವೇಜಸ್ ಬೌಲ್ ಸ್ಟೇಡಿಯಂನಲ್ಲಿ ಬಲಿಷ್ಠ ತಂಡಗಳ ಕಾಳಗಕ್ಕೆ ಅಖಾಡ ಸಿದ್ಧವಾಗಿದೆ.

ವಿಶ್ವಕಪ್‍ನಲ್ಲಿ ಫೇವರೆಟ್ ಟೀಂ ಆಗಿರುವ ಕೊಹ್ಲಿ ಪಡೆ, ಗೆದ್ದು ಶುಭಾರಂಭ ಮಾಡಲು ತಂತ್ರ ರೂಪಿಸಿದೆ. ಕೇದರ್ ಜಾಧವ್ ಗಾಯದ ಸಮಸ್ಯೆಯಿಂದ ಬಳಲುತ್ತಿರೋದು ಟೀಂ ಇಂಡಿಯಾಗೆ ಮೈನಸ್ ಪಾಯಿಂಟ್. ಶಿಖರ್, ರೋಹಿತ್ ಓಪನರ್ಸ್ ಆಗಿ ಕಣಕ್ಕಿಳಿದ್ರೆ, ಮೀಡಲ್ ಆರ್ಡರ್ ನಲ್ಲಿ ಕೊಹ್ಲಿ, ಕೆಎಲ್ ರಾಹುಲ್, ಧೋನಿ ಪ್ರಾಬಲ್ಯ ಮೆರೆದ್ರೆ ಸ್ಲಾಗ್ ಓವರ್ಸ್‍ನಲ್ಲಿ ಪಾಂಡ್ಯ ಮತ್ತು ಜಡೇಜಾ ಮಿಂಚಲಿದ್ದಾರೆ. ಬೌಲಿಂಗ್‍ನಲ್ಲಿ ಬೂಮ್ರಾ ಮತ್ತು ಭುವನೇಶ್ವರ್ ಎದುರಾಳಿಗಳನ್ನು ಕಟ್ಟಿಹಾಕಲು ತಯಾರಾಗಿದ್ರೆ, ಸ್ಪೀನ್ ಮೋಡಿಗೆ ಕುಲ್‍ದೀಪ್ ಆ್ಯಂಡ್ ಚಹಾಲ್ ರೆಡಿ ಇದ್ದಾರೆ.

ಬ್ಯಾಕ್ ಟು ಬ್ಯಾಕ್ ಸೋಲುಂಡಿರುವ ಸೌತ್ ಆಫ್ರಿಕಾಗೆ ಗಾಯದ ಸಮಸ್ಯೆ ಬಿಟ್ಟುಬಿಡದಂತೆ ಕಾಡ್ತಿದೆ, ಡೇಲ್ ಸ್ಟೈನ್ ಬೆನ್ನಲ್ಲೇ ಲೂಂಗಿ ಎನ್‍ಗಿಡಿ ಗಾಯಗೊಂಡಿರುವುದು ಡುಪ್ಲಿಸಿಸ್ ಪಡೆಗೆ ನುಂಗಲಾರದ ತುತ್ತಾಗಿದೆ. ಇನ್ನುಳಿದಂತೆ ಜೆಪಿ ಡುಮಿನಿ, ಮಿಲ್ಲರ್, ಕ್ವಿಂಟನ್ ಡಿಕಾಕ್, ಆಮ್ಲಾ, ಮರ್ಕರಮ್, ಇಮ್ರಾನ್ ತಾಹೀರ್, ಕ್ರಿಸ್ ಮೊರಿಸ್, ರಬಾಡ ಅಖಾಡಕ್ಕಿಳಿಯಲಿದ್ದಾರೆ.

ಬ್ಯಾಟಿಂಗ್ ಸ್ವರ್ಗವಾಗಿರುವ ಪಿಚ್‍ನಲ್ಲಿ ರನ್ ಹೊಳೆ ಹರಿಯೋದರಲ್ಲಿ ಅನುಮಾನವೇ ಇಲ್ಲ. ಉಭಯ ತಂಡಗಳಲ್ಲೂ ಹೊಡಿಬಡಿ ಆಟಗಾರ ಇರುವುದರಿಂದ ಬಿಗ್ ಸ್ಕೋರ್ ಮ್ಯಾಚ್ ನಡೆಯಲಿದೆ.

Comments

Leave a Reply

Your email address will not be published. Required fields are marked *