ಹಸೆಮಣೆ ಏರಲು ಸಿದ್ಧರಾದ ಟೀಂ ಇಂಡಿಯಾ ಆಟಗಾರ್ತಿ!

ಬೆಂಗಳೂರು: ಟೀಂ ಇಂಡಿಯಾ ಮಹಿಳಾ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರು ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. ಈ ವಿಚಾರವನ್ನು ಸ್ವತಃ ವೇದಾ ಅವರೇ ರಿವೀಲ್ ಮಾಡಿದ್ದಾರೆ.

ಕಳೆದ ತಿಂಗಳು ಫೇಸ್‍ಬುಕ್ ಪೋಸ್ಟ್ ಮಾಡಿರುವ ವೇದಾ, ತಾವು ವಿವಾಹವಾಗುತ್ತಿರುವ ಲಲಿತ್ ಚೌಧರಿ ಎಂಬ ಯುವಕನ ಫೋಟೋವನ್ನು ಪೋಸ್ಟ್ ಮಾಡಿದ್ದರು. ಆದರೆ ಯುವಕನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ವೇದಾ ಅವರು ಬಿಟ್ಟು ಕೊಟ್ಟಿರಲಿಲ್ಲ. ಅಲ್ಲದೆ ಮದುವೆ ದಿನಾಂಕದ ಕುರಿತು ಕೂಡ ಯಾವುದೇ ಮಾಹಿತಿ ನೀಡಿರಲಿಲ್ಲ. ಶೀಘ್ರವೇ ಈ ಕುರಿತ ಅಧಿಕೃತ ಮಾಹಿತಿ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದರು. ವೇದಾ ಅವರ ಪೋಸ್ಟ್ ಕಂಡ ಹಲವು ಅಭಿಮಾನಿಗಳು ಶುಭಕೋರಿ ಕಾಮೆಂಟ್ ಮಾಡಿದ್ದಾರೆ. ಇದುವರೆಗೂ ಈ ಪೋಸ್ಟ್ ಗೆ 4.7 ಸಾವಿರ ಮಂದಿ ಲೈಕ್ ಮಾಡಿದ್ದಾರೆ.

26 ವರ್ಷದ ವೇದಾ ಕೃಷ್ಣಮೂರ್ತಿ ಟೀಂ ಇಂಡಿಯಾ ಪರ 48 ಏಕದಿನ ಪಂದ್ಯಗಳನ್ನು ಆಡಿದ್ದು, 8 ಅರ್ಧ ಶತಕಗಳೊಂದಿಗೆ 829 ರನ್ ಗಳಿಸಿದ್ದಾರೆ. ಟಿ20 ಮಾದರಿಯಲ್ಲಿ 59 ಪಂದ್ಯಗಳನ್ನು ಆಡಿದ್ದು, ಅರ್ಧ ಶತಕದೊಂದಿಗೆ 686 ರನ್ ಗಳಿಸಿದ್ದಾರೆ. ಸ್ಥಿರ ಪ್ರದರ್ಶನ ನೀಡಲು ವಿಫಲರಾದ ಹಿನ್ನೆಲೆಯಲ್ಲಿ ಸದ್ಯ ಟೀಂ ಇಂಡಿಯಾದಿಂದ ಹೊರಗಿದ್ದಾರೆ.

ಮೇ 06 ರಿಂದ ಆರಂಭವಾಗಲಿರುವ ಚೊಚ್ಚಲ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ವೇದಾ ಭಾಗವಹಿಸಲಿದ್ದು, ಮಿಥಾಲಿ ರಾಜ್ ನಾಯಕತ್ವದ ವೆಲಾಸಿಟಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಜೈಪುರದಲ್ಲಿ ಮೇ 06 ರಿಂದ 11 ರವರೆಗೂ ಈ ಪ್ರಯೋಗಾತ್ಮಕ ಮಹಿಳಾ ಚುಟುಕು ಟೂರ್ನಿ ನಡೆಯಲಿದೆ.

Comments

Leave a Reply

Your email address will not be published. Required fields are marked *