ಬೀದರ್: ಜಿಲ್ಲೆಯ ಔರಾದ್ ತಾಲೂಕಿನ ತೆಗಂಪೂರ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನವಾದರೂ ಶಾಲೆಗೆ ಶಿಕ್ಷಕರು ಹಾಜರಾಗಿಲ್ಲ. ಹಾಗಾಗಿ ಬೆಳಗ್ಗೆಯಿಂದ ಶಿಕ್ಷಕರಿಗಾಗಿ ಕಾದು ಕುಳಿತ ಮಕ್ಕಳು ಗೇಟ್ ಏರಿ ಶಾಲೆಯೊಳಗೆ ಹೋಗಿರುವ ಘಟನೆ ನಡೆದಿದೆ.
ಮಕ್ಕಳು ಗೇಟ್ ಏರಿ ಶಾಲೆಯೊಳಗೆ ಹೋಗಿರುವ ದೃಶ್ಯವನ್ನು ಸ್ಥಳೀಯರು ಚಿತ್ರೀಕರಿಸಿ ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟು 3 ಜನ ಶಿಕ್ಷಕರು ಇರುವ ಈ ಶಾಲೆಯಲ್ಲಿ 50ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.

ಗ್ರಾಮದಲ್ಲಿ ಬಹುತೇಕ ಮಕ್ಕಳು ಶಾಲೆಯ ದುರಾವಸ್ಥೆಯಿಂದ ಬೇಸತ್ತು ಸಮೀಪದ ಔರಾದ್ ಪಟ್ಟಣದ ಶಾಲೆಗೆ ತೆರಳುತ್ತಿದ್ದಾರೆ. ಆದರೂ ತಮ್ಮ ವರಸೆ ಬಿಡದ ಶಿಕ್ಷಕರು ಕಳೆದ 10 ವರ್ಷಗಳಿಂದ ಇದೇ ಚಾಳಿ ಮುಂದುವರಿಸಿದ್ದಾರೆ. ಇದರಿಂದ ಬಡವರ ಮಕ್ಕಳ ಭವಿಷ್ಯದ ಜೊತೆ ಶಿಕ್ಷಕರು ಆಟವಾಡುತ್ತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಶಿಕ್ಷಣ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Leave a Reply