ಪಿಯುಸಿಯಲ್ಲಿ 99 ಅಂಕ ಪಡೆದ ವಿದ್ಯಾರ್ಥಿನಿಗೆ 0 ಅಂಕ ನೀಡಿದ್ದ ಶಿಕ್ಷಕಿ ಅಮಾನತು

ಹೈದರಾಬಾದ್: ತೆಲಂಗಾಣದ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ ಕಳೆದ 10 ದಿನಗಳಲ್ಲಿ 23 ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ, ಮೌಲ್ಯಮಾಪನದಲ್ಲಿ ಶಿಕ್ಷಕಿ ಮಾಡಿದ ಎಡವಟ್ಟೊಂದು ಬೆಳಕಿಗೆ ಬಂದಿದೆ.

ತೆಲುಗು ಭಾಷೆ ಪರೀಕ್ಷೆಯಲ್ಲಿ 99 ಅಂಕ ಗಳಿಸಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಮೌಲ್ಯಮಾಪಕಿ ಶೂನ್ಯ ಅಂಕ ನೀಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಲೋಪದ ಬಗ್ಗೆ ಮತ್ತೊಬ್ಬ ಮೌಲ್ಯಮಾಪಕ ಪರಿಶೀಲನೆ ನಡೆಸಬೇಕಿತ್ತು. ಆದರೆ ಆತ ಕೂಡ ನಿರ್ಲಕ್ಷ್ಯ ತೋರಿದ್ದಾನೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಮೌಲ್ಯಮಾಪಕರನ್ನು ಅಮಾನತುಗೊಳಿಸಲಾಗಿದೆ.

12 ನೇ ತರಗತಿ ವಿದ್ಯಾರ್ಥಿಯ ತೆಲುಗು ಪತ್ರಿಕೆಯ ಮೌಲ್ಯಮಾಪನ ಮಾಡುವಾಗ 99 ಅಂಕದ ಬದಲಿಗೆ ಶೂನ್ಯ ಅಂಕಗಳನ್ನು ನೀಡಿದ್ದ ಖಾಸಗಿ ಶಾಲೆಯ ಶಿಕ್ಷಕಿಯ ಮೇಲೆ 5 ಸಾವಿರ ರೂ. ದಂಡ ವಿಧಿಸಲಾಗಿದೆ. ಅಲ್ಲದೆ ಶಿಕ್ಷಕಿಯನ್ನು ಶಾಲೆಯ ಆಡಳಿತ ಮಂಡಳಿ ವಜಾ ಮಾಡಿದೆ.

ಪಿಯು ಮಂಡಳಿ ಏಪ್ರಿಲ್ 18 ರಂದು ಫಲಿತಾಂಶವನ್ನು ಪ್ರಕಟಗೊಳಿಸಿತ್ತು. ಪರೀಕ್ಷೆಗಳಲ್ಲಿ ಫೇಲ್ ಆದ ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.

ಪಿಯುಸಿ ಪರೀಕ್ಷೆ ಫಲಿತಾಂಶ ಬಂದ ನಂತರ ರಾಜ್ಯದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಆದ್ದರಿಂದ ಇದನ್ನು ಖಂಡಿಸಿ ಬೃಹತ್ ಪ್ರತಿಭಟನೆಗಳು ಕೂಡ ಎಲ್ಲೆಡೆ ನಡೆದಿತ್ತು. ಅಲ್ಲದೇ ಫೇಲ್ ಆಗಿರುವ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಉಚಿತವಾಗಿ ಮರು-ಮೌಲ್ಯಮಾಪನವನ್ನು ಮಾಡಬೇಕು ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಒತ್ತಾಯಿಸಿದ್ದರು. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.

ಪೋಷಕರು, ವಿದ್ಯಾರ್ಥಿ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿ, ಪಿಯು ಬೋರ್ಡ್ ಮತ್ತು ಫಲಿತಾಂಶದ ಎಡವಟ್ಟಿಗೆ ಕಾರಣವಾದ ಐಟಿ ಕಂಪನಿ ಗ್ಲೋಬರೆನಾ ಟೆಕ್ನಾಲಜೀಸ್, ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ.

Comments

Leave a Reply

Your email address will not be published. Required fields are marked *