ಬ್ಯೂಟಿ ಕಾಂಟೆಸ್ಟ್ ನಲ್ಲಿ ಹೆಂಡ್ತಿ ಚೆನ್ನಾಗಿ ಕಾಣಲೆಂದು ಡಿಸೈನರ್ ಸೀರೆಗಳನ್ನ ಕದ್ದ ಶಿಕ್ಷಕ!

ರಾಯ್ಪುರ್: ಬ್ಯೂಟಿ ಕಾಂಟೆಸ್ಟ್ ನಲ್ಲಿ ತನ್ನ ಹೆಂಡತಿ ಚೆನ್ನಾಗಿ ಕಾಣಬೇಕು ಅಂತ ವ್ಯಕ್ತಿಯೊಬ್ಬ ಡಿಸೈನರ್ ಸೀರೆಗಳನ್ನ ಕಳ್ಳತನ ಮಾಡಿರೋ ಘಟನೆ ಛತ್ತೀಸ್‍ಗಢದ ಬಿಲಾಸ್‍ಪುರ್‍ನಲ್ಲಿ ನಡೆದಿದೆ.

ವರದಿಯ ಪ್ರಕಾರ 26 ವರ್ಷದ ಪ್ರಮಿಳಾ ಗುಪ್ತಾ ಬಿಲಾಸ್‍ಪುರದಲ್ಲಿ ಪ್ರತಿ ಮುಂಗಾರಿನಲ್ಲಿ ಆಯೋಜಿಸಲಾಗುವ ಸಾವನ್ ಸುಂದರಿ ಎಂಬ ಸ್ಥಳೀಯ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ರು. ತನ್ನ ಪತ್ನಿ ಎಲ್ಲರಿಗಿಂತ ಚೆನ್ನಾಗಿ ಕಂಡು ಸ್ಪರ್ಧೆಯಲ್ಲಿ ಗೆಲ್ಲಬೇಕು ಅನ್ನೋದು ಪತಿ ಶ್ರೀಕಾಂತ್ ಗುಪ್ತ ಆಸೆಯಾಗಿತ್ತು. ಶಿಕ್ಷಾ ಮಿತ್ರಾ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಶಿಕ್ಷಕನಾಗಿರೋ ಗುಪ್ತಾಗೆ ತಿಂಗಳಿಗೆ 2500 ರೂ. ಸಂಬಳ. ಹೀಗಾಗಿ ದುಬಾರಿ ಸೀರೆಗಾಗಿ ಖರ್ಚು ಮಾಡುವಷ್ಟು ಹಣ ಇಲ್ಲದ ಕಾರಣ ಗುಪ್ತಾ ಬಿಲಾಸ್‍ಪುರದ ಸ್ಥಳೀಯ ಅಂಗಡಿಯೊಂದರಿಂದ ಸುಮಾರು 56 ಸಾವಿರ ರೂಪಾಯಿಗೂ ಹೆಚ್ಚು ಬೆಲೆ ಬಾಳುವ ದುಬಾರಿ ಸೀರೆಗಳನ್ನ ಕದ್ದಿದ್ದಾನೆ ಅಂತ ಪೊಲೀಸರು ಹೇಳಿದ್ದಾರೆ.

ಸೀರೆಗಳನ್ನು ಕೊಳ್ಳೋ ಶಕ್ತಿ ಇರಲಿಲ್ಲ, ಆದ್ರೆ ನನ್ನ ಹೆಂಡತಿಗೆ ಇತರೆ ಮಹಿಳೆಯರ ನಡುವೆ ಕೀಳರಿಮೆ ಬರಬಾರದು ಅಂತ ಸೀರೆ ಕದ್ದಿದ್ದಾಗಿ ಗುಪ್ತಾ ಒಪ್ಪಿಕೊಂಡಿದ್ದಾನೆ. ಗುಪ್ತಾ ಸೀರೆಗಳನ್ನ ಕದ್ದು ಹೆಂಡತಿಗೆ ಉಡುಗೊರೆಯಾಗಿ ನೀಡಿದ ಎಂದು ಬಿಲಾಸ್‍ಪುರದ ಎಸ್‍ಹೆಚ್‍ಓ ನಸರ್ ಸಿದ್ದೀಕಿ ಹೇಳಿದ್ದಾರೆ.

ಸಿಕ್ಕಿ ಬಿದ್ದಿದ್ದು ಹೇಗೆ?: ಅಂಗಡಿ ಮಾಲೀಕರು ಕಳ್ಳತನದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ನಂತರ ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನ ಪರಿಶೀಲಿಸಿದ್ರು ಅದನ್ನ ಹಂಚಿಕೊಂಡಿದ್ರು. ಆದ್ರೆ ಕಳ್ಳನ ಸುಳಿವು ನೀಡಿದ್ದು ಸಾವನ್ ಸುಂದರಿ ಸ್ಪರ್ಧೆಯ ವಿಡಿಯೋ. ಸ್ಪರ್ಧೆ ನೋಡಲು ಹೋಗಿದ್ದವರಲ್ಲಿ ಒಬ್ಬರು ಸ್ಪರ್ಧಿ ಪ್ರಮಿಳಾ ಗುಪ್ತಾ ಕಳ್ಳತನವಾಗಿದ್ದ ಸೀರೆ ಉಟ್ಟು ವೇದಿಕೆ ಮೇಲೆ ನಡೆಯೋದನ್ನ ಕಂಡು ಪೊಲೀಸರಿಗೆ ಮಾಹಿತಿ ನಿಡಿದ್ದರು. ಬಳಿಕ ಪೊಲೀಸರು ಶ್ರೀಕಾಂತ್ ಗುಪ್ತಾ, ಆತನ ಪತ್ನಿ ಹಾಗೂ ಕಳ್ಳತನಕ್ಕೆ ಸಹಕರಿಸಿದ ಸಂಬಂಧಿಯೊಬ್ಬನನ್ನ ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *