ನಿಲ್ಲದ ಫೈನಾನ್ಸ್‌ ಕಿರುಕುಳ – ದಾವಣಗೆರೆಯಲ್ಲಿ ಶಿಕ್ಷಕಿ ಆತ್ಮಹತ್ಯೆ

ದಾವಣಗೆರೆ: ಖಾಸಗಿ ಫೈನಾನ್ಸ್‌ (Finance) ಕಿರುಕುಳಕ್ಕೆ ಬೇಸತ್ತು ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು (Teacher) ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊನ್ನಾಳಿ (Honnali) ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ನಿವಾಸಿ ಪುಷ್ಪಲತ (46) ಅತ್ಮಹತ್ಯೆಗೆ ಶರಣಾದ ಶಿಕ್ಷಕಿ ಎಂದು ತಿಳಿದು ಬಂದಿದೆ. ಅವರು ತುಂಗಾಭದ್ರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊನ್ನಾಳಿಯಲ್ಲಿ ಮನೆ ಕಟ್ಟಲು ಶಿವಮೊಗ್ಗ ಮೂಲದ ಖಾಸಗಿ ಮೈಕ್ರೋ ಫೈನಾನ್ಸ್ ಹಾಗೂ ಕೈಗಡವಾಗಿ ಲಕ್ಷಾಂತರ ರೂ. ಸಾಲ ಮಾಡಿದ್ದರು.

ಸರಿಯಾಗಿ ಪಾವತಿ ಮಾಡದ ಹಿನ್ನೆಲೆ 20 ದಿನಗಳ ಹಿಂದೆ ಪುಷ್ಪಲತ ದಂಪತಿ ವಿರುದ್ಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಫೈನಾನ್ಸ್‌ ಸಿಬ್ಬಂದಿ ದೂರು ನೀಡಿದ್ದರು. ದೂರು ದಾಖಲಾದ ಬಳಿಕ ಹೊನ್ನಾಳಿ ಠಾಣೆ ಪೊಲೀಸರು ಫೈನಾನ್ಸ್ ಕಂಪನಿಯಿಂದ ಮುಚ್ಚಳಿಕೆ ಬರೆಸಿಕೊಂಡಿದ್ದರು. ಸೋಮವಾರ ಬೆಳಗಿನ ಜಾವ ತುಂಗಾಭದ್ರ ನದಿಗೆ ಹಾರಿ ಅವರು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.

ತುಂಗಭದ್ರಾ ನದಿಗೆ ಪುಷ್ಪಲತ ಹಾರಲು ಹೊರಟಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ನದಿ ದಂಡೆಯ ಬಳಿ ಕುಳಿತು ಆಳವಾಗಿ ಯೋಚಿಸಿ ನದಿಗೆ ದುಮುಕಿದ್ದಾರೆ. ಈ ದೃಶ್ಯ ರಾಘವೇಂದ್ರಸ್ವಾಮಿ ಮಠದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಶಿಕ್ಷಕಿಯ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಹೊನ್ನಾಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.