ಚಿತ್ರದುರ್ಗ: ಜಿಲ್ಲೆಯಲ್ಲಿ ಏರ್ಪಡಿಸಿದ್ದ ಪರಿವರ್ತನಾ ಯಾತ್ರೆ ಬಂದಿದ್ದ ಟಾಟಾ ಏಸ್ ವಾಹನ ಪಲ್ಟಿಯಾಗಿ ನಾಲ್ಕು ಜನ ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ದು, ಸುಮಾರು ಐವರು ಗಾಯಗೊಂಡಿರುವ ಘಟನೆ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ನೆರ್ಲಹಳ್ಳಿ ಬಳಿ ನಡೆದಿದೆ.
ಮೃತರನ್ನು ಹೋನ್ನೂರಪ್ಪ (55), ಚಂದ್ರಪ್ಪ, ಹನುಮಂತ ಹಾಗೂ ಬಾಬು (28) ಎಂದು ಗುರುತಿಸಲಾಗಿದೆ. ಮೃತರು ಘಟಪರ್ತಿ ಹಾಗೂ ಹೊನ್ನೂರು ಗ್ರಾಮದ ನಿವಾಸಿಗಳು. ಇಂದು ಮೊಳಕಾಲ್ಮೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಗೆ ಇವರೆಲ್ಲ ಬಂದಿದ್ದರು. ಕಾರ್ಯಕ್ರಮ ಮುಗಿಸಿ ಗ್ರಾಮಕ್ಕೆ ಹಿಂತಿರುಗುವ ವೇಳೆ ನೆರ್ಲಹಳ್ಳಿ ಗ್ರಾಮದ ಬಳಿ ಚಾಲಕನ ನಿರ್ಲಕ್ಷದಿಂದಾಗಿ ಟಾಟಾ ಏಸ್ ಪಲ್ಟಿಯಾಗಿದೆ.

ವಾಹನದಲ್ಲಿದ್ದ ಸುಮಾರು 15 ಜನರಲ್ಲಿ ಸ್ಥಳದಲ್ಲಿ ಇಬ್ಬರು ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಅಪಘಾತ ನಡೆದಿದ್ದು ನೋಡಿದರೂ ಬಿಜೆಪಿ ಕಾರ್ಯಕರ್ತರನ್ನು ಕರೆ ತಂದಿದ್ದ ಬಸ್ ಹಾಗೆಯೇ ಹೋಗಿದ್ದೂ, ಇದು ಕಾರ್ಯಕರ್ತರನ್ನು ಕೆರಳಿಸಿದೆ.
ಅಪಘಾತ ನಡೆದ ಬಳಿಕ ಸುಮಾರು ಅರ್ಧ ಕಿಲೋ ಮಿಟರ್ ದೂರ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಹೆಚ್ಚವರಿ ಎಸ್ಪಿ ರಾಮ ಲಕ್ಷ್ಮಣ ಅರಸಿದ್ದಿ ಭೇಟಿ ನೀಡಿದರು. ವಿಷಯ ತಿಳಿದ ಸ್ಥಳೀಯ ಶಾಸಕ ತಿಪ್ಪೇಸ್ವಾಮಿ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವಾನ ಹೇಳಿದರು. ಸ್ಥಳಕ್ಕೆ ಮೊಳಕಾಲ್ಮೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.







Leave a Reply