ಕ್ಷೇತ್ರ ಪುನರ್ ವಿಂಗಡಣೆ – ಕೇಂದ್ರದ ಪ್ರಕ್ರಿಯೆ ವಿರುದ್ಧ ಹೋರಾಟಕ್ಕೆ ಕರೆ; ಕರ್ನಾಟಕ ಸೇರಿ 7 ರಾಜ್ಯದ ಸಿಎಂಗಳಿಗೆ ಸ್ಟಾಲಿನ್ ಪತ್ರ

ಚೆನ್ನೈ: ಲೋಕಸಭಾ ಕ್ಷೇತ್ರ ಪುನರ್‌ ವಿಂಗಡಣೆ (Delimitation) ವಿಚಾರಕ್ಕೆ ಸಂಬಂಧಿಸಿದಂತೆ ದಕ್ಷಿಣದ ರಾಜ್ಯಗಳು ಕೇಂದ್ರ ಸರ್ಕಾರದ (Union Govt) ವಿರುದ್ಧ ಸಿಡಿದೆದ್ದಿವೆ. ಈ ನಡುವೆ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ (M.K.Stalin) ಅವರು ಕರ್ನಾಟಕ ಸೇರಿದಂತೆ 7 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಕೇಂದ್ರದ ಈ ಪ್ರಕ್ರಿಯೆ ವಿರುದ್ಧ ಸಂಘಟಿತ ಹೋರಾಟಕ್ಕೆ ಕರೆ ನೀಡಿದ್ದಾರೆ.

ಕೇಂದ್ರದ ಪ್ರಕ್ರಿಯು ಅನ್ಯಾಯಯುತವಾಗಿದೆ, ಒಕ್ಕೂಟ ವ್ಯವಸ್ಥೆಯ ಮೇಲಿನ ಸ್ಪಷ್ಟ ದಾಳಿಯಾಗಿದೆ. ಈ ವಿಚಾರದಲ್ಲಿ ರಾಜಿಯಾಗದೇ ಹೋರಾಡಬೇಕು ಜೊತೆಗೆ ಜಂಟಿ ಕ್ರಿಯಾ ಸಮಿತಿ (ಜೆಎಸಿ) ಭಾಗವಾಗಲು ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರು ಶುಕ್ರವಾರ (ಇಂದು) ಕರ್ನಾಟಕದ ಮುಖ್ಯಮಂತ್ರಿ ಸೇರಿ 7 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಕರೆ ನೀಡಿದ್ದಾರೆ. ಇದನ್ನೂ ಓದಿ: ಹಿಂದುಳಿದ ವರ್ಗಗಳ ನಿರುದ್ಯೋಗಿಗಳಿಗೆ ಬಂಪರ್‌ – 3 ಲಕ್ಷ ರೂ. ವರೆಗೆ ಸಹಾಯಧನ

ಮಾರ್ಚ್‌ 22ರಂದು ಚೆನ್ನೈನಲ್ಲಿ ಜಂಟಿ ಕ್ರಿಯಾ ಸಮಿತಿಯ ಉದ್ಘಾಟನಾ ಸಭೆ ನಡೆಯಲಿದೆ. ಈ ಸಭೆಯಲ್ಲಿ ಒಗ್ಗಟ್ಟಿನಿಂದ ಪಾಲ್ಗೊಳ್ಳುವಂತೆ, ಕರ್ನಾಟಕದ ಸಿಎಂ ಸಿದ್ದರಾಮಯ್ಯ (Siddaramaiah), ಕೇರಳದ ಸಿಎಂ ಪಿಣರಾಯಿ ವಿಜಯನ್, ತೆಲಂಗಾಣದ ಸಿಎಂ ರೇವಂತ್ ರೆಡ್ಡಿ, ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಒಡಿಶಾದ ಸಿಎಂ ಮೋಹನ್ ಮಾಂಜಿ ಮತ್ತು ಪಂಜಾಬ್‌ ಸಿಎಂ ಭಗವಂತ್ ಮಾನ್ ಅವರಿಗೆ ಸ್ಟಾಲಿನ್‌ ಪತ್ರ ಬರೆದು ವಿನಂತಿ ಮಾಡಿದ್ದಾರೆ.

ಸದ್ಯ ಮೊದಲ ಹಂತದಲ್ಲಿ ಈಗ ಇರುವ 543 ಲೋಕಸಭಾ ಕ್ಷೇತ್ರಗಳನ್ನು ರಾಜ್ಯಗಳ ನಡುವೆ ಪುನರ್‌ ಹಂಚಿಕೆ ಮಾಡಲಾಗುತ್ತದೆ. 2ನೇ ಹಂತದಲ್ಲಿ ಕ್ಷೇತ್ರಗಳ ಸಂಖ್ಯೆಯನ್ನು 800ಕ್ಕೂ ಹೆಚ್ಚು ಮಾಡಲಾಗುತ್ತದೆ. 2026ರ ನಂತರದ ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ನಡೆದರೆ, ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಎಲ್ಲಾ ರಾಜ್ಯಗಳು ಗಮನಾರ್ಹವಾಗಿ ಕ್ಷೇತ್ರಗಳನ್ನು ಕಳೆದುಕೊಳ್ಳುತ್ತವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಜನಸಂಖ್ಯೆಯ ಬೆಳವಣಿಗೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮತ್ತು ರಾಷ್ಟ್ರೀಯ ಅಭಿವೃದ್ಧಿ ಗುರಿ ಸಾಧಿಸಲು ನಾವು ದಂಡನೆಗೆ ಒಳಗಾಗಬಾರದು ಎಂದು ಪತ್ರದಲ್ಲಿ ಸ್ಟಾಲಿನ್ ಉಲ್ಲೇಖಿಸಿದ್ದಾರೆ.

ಇಂತಹ ಮಹತ್ವದ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಸ್ಪಷ್ಪತೆ ನೀಡುತ್ತಿಲ್ಲ, ಕಳವಳಗಳನ್ನೂ ಬಗೆಹರಿಸುತ್ತಿಲ್ಲ. ಪ್ರಜಾಪ್ರಭುತ್ವದ ತಳಪಾಯ ಅಲುಗಾಡುತ್ತಿರುವಾಗ, ನಮ್ಮ ರಾಜ್ಯಗಳ ಭವಿಷ್ಯ ತೂಗುಯ್ಯಾಲೆಯಲ್ಲಿರುವಾಗ ಪಾರದರ್ಶಕ ಮಾತುಕತೆಗೆ ನಾವು ಅರ್ಹತೆ ಹೊಂದಿಲ್ಲವೇ? ಕೇಂದ್ರದ ಈ ಪ್ರಕ್ರಿಯೆ ಅನ್ಯಾಯುತವಾಗಿದ್ದು, ಇದರ ವಿರುದ್ಧ ಹೋರಾಡಲೇಬೇಕು ಎಂದು ಸ್ಟಾಲಿನ್‌ ಎಚ್ಚರಿಸಿದ್ದಾರೆ. ಇದನ್ನೂ ಓದಿ: 33 ಸೆಕೆಂಡ್‌ನಲ್ಲಿ 33 ಲಕ್ಷ ದೋಚಿದ ಖದೀಮರು – ಕಾರಿನ ಗ್ಲಾಸ್ ಒಡೆದು ಕಳ್ಳತನ

ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ತಮಿಳುನಾಡು ಸೇರಿದಂತೆ ದಕ್ಷಿಣ ರಾಜ್ಯಗಳ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಯಾವುದೇ ಪರಿಣಾಮ ಬೀರುವುದಿಲ್ಲ. ಸ್ಟಾಲಿನ್‌ ಈ ವಿಷಯದ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಹೇಳಿದ್ದರು. ಇದನ್ನೂ ಓದಿ:  ಬೆಂಗಳೂರಿನ 2ನೇ ಏರ್‌ಪೋರ್ಟ್‌ ಎಲ್ಲಿ ನಿರ್ಮಾಣ ಆಗುತ್ತೆ? – 3 ಜಾಗ ಫೈನಲ್‌, ಕೇಂದ್ರಕ್ಕೆ ರವಾನೆ