ಮಹಿಳೆಯರ ಮುಂದೆ ಬಟ್ಟೆ ಬದಲಿಸಿದ ಕಂಡಕ್ಟರ್ – ವಿರೋಧಿಸಿದವನಿಗೆ ಥಳಿತ

ಚೆನ್ನೈ: ಬಸ್ಸಿನಲ್ಲಿ ಮಹಿಳೆಯರ ಮುಂದೆಯೇ ನಿರ್ವಾಹನೊಬ್ಬ ಬಟ್ಟೆ ಬದಲಿಸಿದ್ದು, ಇದನ್ನು ಪ್ರಶ್ನೆ ಮಾಡಿದ ಪ್ರಯಾಣಿಕನಿಗೆ ಕೆಲ ಬಸ್ ಚಾಲಕರು ಮತ್ತು ನಿರ್ವಾಹಕರು ಸೇರಿ ಥಳಿಸಿರುವ ಘಟನೆ ತಮಿಳುನಾಡಿನ ದಿಂಡಿಗುಲ್ ಜಿಲ್ಲೆಯಲ್ಲಿ ನಡೆದಿದೆ.

ಬಸ್‍ನಲ್ಲಿ ಮಹಿಳಾ ಪ್ರಯಾಣಿಕರ ಮುಂದೆಯೇ ಕಂಡಕ್ಟರ್ ಬಟ್ಟೆ ಬದಲಿಸಿದ್ದಾನೆ. ಇದನ್ನು ಥೇನಿ ಜಿಲ್ಲೆಯ ನಿವಾಸಿ ವಿಜಯ್ ವಿರೋಧ ಮಾಡಿದ್ದಕ್ಕೆ ಸಾರಿಗೆ ನೌಕರರು ಮನಬಂದಂತೆ ಹಲ್ಲೆ ಮಾಡಿದ್ದಾರೆ. ಇದನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ.

ಈ ವಿಡಿಯೋದಲ್ಲಿ ವಿಜಯ್ ಮತ್ತು ಕಂಡಕ್ಟರ್ ನಡುವೆ ಮಾತಿನ ಚಕಮಕಿ ನಡೆಯುತ್ತಿರುತ್ತದೆ. ಈ ಸಮಯದಲ್ಲಿ ಕೋಪಗೊಂಡ ಕಂಡಕ್ಟರ್ ಮೊದಲು ವಿಜಯ್‍ನ ಕಪಾಳಕ್ಕೆ ಹೊಡೆಯುತ್ತಾನೆ. ನಂತರ ಕೋಪಗೊಂಡ ವಿಜಯ್ ಕಂಡಕ್ಟರ್‍ ಗೆ ಹೊಡೆಯುತ್ತಾರೆ. ಈ ವೇಳೆ ಕಂಡಕ್ಟರ್ ಜೊತೆ ಇದ್ದ ಕೆಲ ಸರ್ಕಾರಿ ನೌಕರರು ವಿಜಯ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಪ್ರಯಾಣಿಕ ವಿಜಯ್, ಕಂಡಕ್ಟರ್ ಇದ್ದಕ್ಕಿದಂತೆ ಮಹಿಳೆಯರು ಸೇರಿದಂತೆ ಪ್ರಯಾಣಿಕರ ಮುಂದೆಯೇ ಬಟ್ಟೆ ಬದಲಾಯಿಸುತ್ತಿದ್ದರು. ಇದರಿಂದ ನಾನು ಬೇರೆ ಕಡೆ ಹೋಗಿ ಬಟ್ಟೆ ಬದಲಾಯಿಸಿ ಎಂದು ಹೇಳಿದೆ. ಇದರಿಂದ ಕೋಪಗೊಂಡ ಕಂಡಕ್ಟರ್ ಬಸ್ ದಿಂಡಿಗಲ್ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಹಾಗೇ ನನ್ನ ಮೇಲೆ ಜಗಳಕ್ಕೆ ಬಂದು ಅವರ ಸಿಬ್ಬಂದಿ ಕರೆಸಿ ನನ್ನ ಮೇಲೆ ಹಲ್ಲೆ ಮಾಡಿಸಿದರು ಎಂದು ಹೇಳಿದ್ದಾರೆ.

ಈಗ ಪ್ರಯಾಣಿಕ ಕುಡಿದು ನಮ್ಮ ಬಳಿ ಕೆಟ್ಟದಾಗಿ ವರ್ತಿಸಿದ ಎಂದು ಬಸ್ ಕಂಡಕ್ಟರ್ ವಿಜಯ್ ವಿರುದ್ಧ ದೂರು ನೀಡಿದ್ದಾರೆ. ಆದರೆ ಕೆಲ ಸ್ಥಳೀಯರು ಈ ಘಟನೆಯಲ್ಲಿ ಇಬ್ಬರ ಕಡೆಯಿಂದಲು ತಪ್ಪಾಗಿದೆ ಪೊಲೀಸರು ಈ ಬಗ್ಗೆ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ. ಹಲ್ಲೆ ಮಾಡಿದ ವಿಡಿಯೋ ಕೂಡ ಪೊಲೀಸರಿಗೆ ಸಿಕ್ಕಿದ್ದು, ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *