ವಿದ್ಯಾರ್ಥಿನಿ ಸಾವಿಗೆ ತೀವ್ರಗೊಂಡ ಪ್ರತಿಭಟನೆ – ಸ್ಕೂಲ್ ಬಸ್, ಪೊಲೀಸ್ ವಾಹನಗಳಿಗೆ ಬೆಂಕಿ

ಚೆನ್ನೈ: ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಇತ್ತೀಚೆಗೆ ಶಾಲಾ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶಾರಣಾಗಿದ್ದಳು. ಇದಕ್ಕೆ ಸಂಬಂಧಿಸಿದಂತೆ ಇದೀಗ ಪ್ರತಿಭಟನೆಗಳು ನಡೆಯುತ್ತಿದ್ದು, ಹಿಂಸಾಚಾರಕ್ಕೆ ತಿರುಗಿದೆ.

ಭಾನುವಾರ ಬೆಳಗ್ಗೆ ಪ್ರತಿಭಟನಾಕಾರರು ಚಿನ್ನ ಸೇಲಂ ಬಳಿಯ ಶಾಲೆಯ ಹೊರಗೆ ಜಮಾಯಿಸಿದ್ದು, 3 ಪೊಲೀಸ್ ವಾಹನಗಳು ಹಾಗೂ 15 ಶಾಲಾ ಬಸ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರೊಂದಿಗೆ ಕಲ್ಲುತೂರಾಟವೂ ನಡೆದಿದ್ದು, ಹಿರಿಯ ಪೊಲೀಸ್ ಅಧಿಕಾರಿ ಸೇರಿದಂತೆ ಹಲವರಿಗೆ ಗಾಯಗಳಾಗಿವೆ.

ಘಟನೆ ಏನು?
ಬುಧವಾರ, ಚಿನ್ನ ಸೇಲಂ ಸಮೀಪದ ಕಣಿಯಮೂರ್‌ನಲ್ಲಿರುವ ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ ಪ್ಲಸ್ 2 ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿದ್ದಳು. ಶಾಲೆಯ ಆಡಳಿತಾಧಿಕಾರಿಗಳು ಸಾವಿನ ಕುರಿತು ಮಾಹಿತಿ ನೀಡಿದ ಬಳಿಕ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಲ್ಲಕುರಿಚಿಯ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ರವಾನಿಸಿದ್ದಾರೆ. ಶಾಲೆಯ ಶಿಕ್ಷಕರು ತನಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಉಲ್ಲೇಖಿಸಿರುವ ಸೂಸೈಡ್ ನೋಟ್ ಕೂಡಾ ದೊರಕಿದೆ. ಇದನ್ನೂ ಓದಿ: ಬ್ಲಡ್ ಟೆಸ್ಟ್ ಮಾಡಿಸಿಕೊಳ್ಳಲು ಮಕ್ಕಳಂತೆ ಅತ್ತ ಪೊಲೀಸಪ್ಪ – ನೆಟ್ಟಿಗರಿಗೆ ಫುಲ್ ಮನರಂಜನೆ

ವರದಿಗಳ ಪ್ರಕಾರ ಘಟನೆ ನಡೆದಿರುವ ಶಾಲೆ ಹಾಗೂ ವಸತಿ ನಿಲಯದ ಬಳಿ 2,000ಕ್ಕೂ ಹೆಚ್ಚಿ ಪ್ರತಿಭಟನಾಕಾರರು ಜಮಾಯಿಸಿದ್ದಾರೆ. ಪ್ರತಿಭಟನೆಗಳು ಯಾವುದೇ ನಾಯಕತ್ವದೊಂದಿಗೆ ನಡೆಯುತ್ತಿಲ್ಲವಾದರೂ ಹಲವು ಯುವ ಗುಂಪುಗಳು ಪ್ರತಿಭಟನೆಯಲ್ಲಿ ಭಾಗಿಯಾಗಿವೆ. ವಾಟ್ಸಪ್ ಗ್ರೂಪ್ ಹಾಗೂ ಸಾಮಾಜಿಕ ಮಾಧ್ಯಮಗಳ ಮುಖಾಂತರ ಪ್ರತಿಭಟನಾಕಾರರನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ಪ್ರಾರಂಭವಾದ ಪ್ರತಿಭಟನೆ 10:30ರ ವೇಳೆಗೆ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರು ಶಾಲಾ ಕಟ್ಟಡ, ತರಗತಿ ಕೊಠಡಿಗಳು ಹಾಗೂ ಪ್ರಾಂಶುಪಾಲರ ಕ್ಯಾಬಿನ್ ಅನ್ನು ಧ್ವಂಸಗೊಳಿಸಿದ್ದಾರೆ. ಶಾಲಾ ಕ್ಯಾಂಪಸ್‌ನಲ್ಲಿದ್ದ ಬಸ್‌ಗಳಿಗೆ ಬೆಂಕಿಯನ್ನೂ ಹಚ್ಚಲಾಗಿದೆ. ಟ್ರ್ಯಾಕ್ಟರ್‌ಗಳ ಮೂಲಕ ಶಾಲಾ ಬಸ್‌ಗಳಿಗೆ ಗುದ್ದಿಸಲಾಗಿದೆ. ಆಯುಧಗಳಿಂದ ವಾಹನಗಳ ಗಾಜನ್ನು ಒಡೆದು ಹಾಕಿದ್ದಾರೆ. ಮಾತ್ರವಲ್ಲದೇ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದ ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ. ಇದನ್ನೂ ಓದಿ: 18 ತಿಂಗಳಲ್ಲಿ 200 ಕೋಟಿ ಡೋಸ್‌ ಕೊರೊನಾ ಲಸಿಕೆ- ದಾಖಲೆ ಸೃಷ್ಟಿಸಿದ ಭಾರತ

ವಿದ್ಯಾರ್ಥಿನಿ ಸಾವಿಗೆ ಬುಧವಾರವೇ ಪ್ರತಿಭಟನೆ ಪ್ರಾರಂಭವಾಗಿತ್ತು. ಅಧಿಕಾರಿಗಳು ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರಿಂದ ಅಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲಾಗಿತ್ತು. ಆದರೆ ಇಂದು ಮತ್ತೆ ಪ್ರತಿಭಟನೆ ಪ್ರಾರಂಭವಾಗಿದ್ದು, ತಪ್ಪಿತಸ್ಥರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರೂ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *