ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ನಿಧನ

ಚೆನ್ನೈ: ತಮಿಳುನಾಡಿನ ಈರೋಡ್‌ನ ಹಾಲಿ ಲೋಕಸಭಾ ಸಂಸದ ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ (MDMK) ಎ.ಗಣೇಶಮೂರ್ತಿ (Ganeshamurthi) ಗುರುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಎಂಡಿಎಂಕೆ ನಾಯಕ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಮಾ.24 ರಂದು ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಈರೋಡ್‌ನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಪ್ರಾಥಮಿಕ ತಪಾಸಣೆಯ ನಂತರ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ನನ್ನಲ್ಲಿ ಸಾಕಷ್ಟು ಹಣವಿಲ್ಲ.. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ: ಕೇಂದ್ರ ಹಣಕಾಸು ಸಚಿವೆ

ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಬಳಿಕ ಅವರನ್ನು ಸಮೀಪದ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಇಂದು ಮುಂಜಾನೆ 5:05 ರ ಹೊತ್ತಿಗೆ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಮೂರು ಬಾರಿ ಸಂಸದರಾಗಿದ್ದ ಗಣೇಶಮೂರ್ತಿ ಅವರು ಎಂಡಿಎಂಕೆ ಶ್ರೇಣಿಯಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಈರೋಡ್ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷವು ಟಿಕೆಟ್ ನೀಡಲು ನಿರಾಕರಿಸಿದ್ದಕ್ಕಾಗಿ ಅವರು ಅಸಮಾಧಾನಗೊಂಡಿದ್ದರು. ಡಿಎಂಕೆ ಈರೋಡ್‌ನಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ತಿರುಚ್ಚಿ ಕ್ಷೇತ್ರವನ್ನು ಎಂಡಿಎಂಕೆಗೆ ನೀಡಲು ನಿರ್ಧರಿಸಿದೆ. ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೋ ಅವರ ಪುತ್ರ ದುರೈ ವೈಕೋ ಅವರನ್ನು ತಿರುಚ್ಚಿಯಿಂದ ಪಕ್ಷದ ಅಭ್ಯರ್ಥಿಯಾಗಿ ಹೆಸರಿಸಲಾಗಿದೆ. ಇದನ್ನೂ ಓದಿ: ‘ಲೋಕ’ಸಮರಕ್ಕೆ ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಬಿಕ್ಕಟ್ಟು – ಸಿಎಂ, ಡಿಸಿಎಂ ನೇತೃತ್ವದಲ್ಲಿ ಸಂಧಾನ ಸಭೆ