ತೂತುಕುಡಿ ಸ್ಟರ್ಲೈಟ್ ತಾಮ್ರ ಘಟಕ ಮುಚ್ಚುವಂತೆ ತಮಿಳುನಾಡು ಸರ್ಕಾರದಿಂದ ಆದೇಶ

ಚೆನ್ನೈ: ಸಾಕಷ್ಟು ಪ್ರತಿಭಟನೆ ಗೋಲಿಬಾರ್ ನಂತರ ತೂತುಕುಡಿ ಸ್ಟರ್ಲೈಟ್ ತಾಮ್ರ ಘಟಕವನ್ನು ಮುಚ್ಚುವಂತೆ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದೆ.

ಕಳೆದ ಕೆಲವು ತಿಂಗಳಿನಿಂದ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪೊಲೀಸರ ಗೋಲಿಬಾರ್ ನಿಂದ 13 ಜನ ಸಾವಿಗೀಡಾಗಿದ್ದರು. ಇದರ ಬೆನ್ನಲ್ಲೆ ಜನತೆಯ ಆಗ್ರಹದಂತೆ ವೇದಾಂತ ಸಮೂಹ ಸಂಸ್ಥೆಗೆ ಸೇರಿರುವ ಸ್ಟರ್ಲೈಟ್ ತಾಮ್ರ ಘಟಕವನ್ನು ಸಂಪೂರ್ಣವಾಗಿ ಮುಚ್ಚುವಂತೆ ತಮಿಳುನಾಡು ಉಪ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಧೃಢವಾದ ನಿರ್ಧಾರ ತೆಗೆದುಕೊಂಡಿದ್ದಾರೆ.

ತೂತುಕುಡಿ ಸರ್ಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟ ಅವರು ಮೇ 22 ರ ಪೊಲೀಸ್ ಕಾರ್ಯಾಚರಣೆ ವೇಳೆ ಗಾಯಗೊಂಡಿರುವವರ ಆರೋಗ್ಯ ವಿಚಾರಿಸಿದರು. ನಂತರ ಮಾತನಾಡಿದ ಅವರು ಅಮ್ಮ ಸರ್ಕಾರ ಘಟಕವನ್ನು ಮುಚ್ಚಿಸುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ:ತಾಮ್ರದ ಕುಲುಮೆ ಘಟಕ ಮುಚ್ಚುವಂತೆ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಗೋಲಿಬಾರ್: 9 ಸಾವು

ಪೊಲೀಸ್ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದವರನ್ನು ನೆನೆದು ಅವರುಗಳ ಕುಟುಂಬಗಳಿಗೆ ಹಾಗೂ ಗಾಯಗೊಂಡವರಿಗೆ ಸಾಂತ್ವಾನವನ್ನು ಹೇಳಿದರು. 2013ರಲ್ಲಿ ಮಾಜಿ ಸಿಎಂ ಜೆ ಜಯಲಲಿತಾ ಘಟಕ ಮುಚ್ಚಿಸಿದ್ದನ್ನು ನೆನಪಿಸಿದರು.

ಕೇಂದ್ರ ಹಸಿರು ಪೀಠದಿಂದ ಸ್ಟರ್ಲೈಟ್ ಕಂಪೆನಿ ಘಟಕವನ್ನು ನಡೆಸಲು ಅನುಮತಿ ತಂದಿದೆ. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮಾಡಿರುವ ದೂರಿನ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಇನ್ನೂ ಬಾಕಿ ಇದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕಂಪೆನಿಯ ಪರವಾನಗಿಯನ್ನು ನವೀಕರಿಸುವುದಿಲ್ಲ ಹಾಗಾಗಿ ಘಟಕವನ್ನು ನಡೆಸಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

 

 

 

Comments

Leave a Reply

Your email address will not be published. Required fields are marked *