ತಮಿಳುನಾಡಿನ ಕಾಂಗ್ರೆಸ್ ಶಾಸಕಿ ಬಿಜೆಪಿ ಸೇರ್ಪಡೆ

ತಮಿಳುನಾಡು: ವಿಲವಂಕೋಡ್ ಕ್ಷೇತ್ರದ ಕಾಂಗ್ರೆಸ್‌ (Congress) ಶಾಸಕಿ ಎಸ್‌.ವಿಜಯಧರಣಿ (Vijayadharani) ಅವರು ಶನಿವಾರ ನವದೆಹಲಿಯಲ್ಲಿ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಗೊಂಡರು.

ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ, ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್‌.ಸಿ.ಮುರುಗನ್, ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಅರವಿಂದ್ ಮೆನನ್ ಮತ್ತು ಬಿಜೆಪಿ ತಮಿಳುನಾಡು ರಾಜ್ಯ ಬಿಜೆಪಿ ರಾಷ್ಟ್ರೀಯ ಸಹ-ಪ್ರಭಾರಿ ಪೊಂಗುಲೇಟಿ ಸುಧಾಕರ್ ರೆಡ್ಡಿ ಅವರ ಸಮ್ಮುಖದಲ್ಲಿ ಅವರು ಕೇಸರಿ ಪಕ್ಷಕ್ಕೆ ಸೇರಿದರು. ಇದನ್ನೂ ಓದಿ: Loksabha Election: ದೆಹಲಿಯಲ್ಲಿ ಕಾಂಗ್ರೆಸ್‌, ಎಎಪಿ ನಡುವೆ ಸೀಟು ಹಂಚಿಕೆ ಫೈನಲ್‌

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯವರಾದ ವಿಜಯಧರಣಿ ಅವರು ಸಾಂಪ್ರದಾಯಿಕ ಕಾಂಗ್ರೆಸ್ ಕುಟುಂಬಕ್ಕೆ ಸೇರಿದವರು. ಅವರ ಕುಟುಂಬದ ಮೂರು ತಲೆಮಾರುಗಳು ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದವರು.

ಈಚಿನ ದಿನಗಳಲ್ಲಿ ಕಾಂಗ್ರೆಸ್ ನಾಯಕತ್ವದ ವಿರುದ್ಧ ವಿಜಯಧರಣಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕೇಳಿದಾಗ, ‘ಪಕ್ಷದ ಆಂತರಿಕ ರಾಜಕೀಯವು ಕಾಂಗ್ರೆಸ್ ಪಕ್ಷದ ಪ್ರಮುಖ ದೌರ್ಬಲ್ಯಗಳಲ್ಲಿ ಒಂದಾಗಿದೆ. ಪಕ್ಷದೊಳಗೆ ಪ್ರತಿಯೊಬ್ಬ ನಾಯಕರೂ ತಮ್ಮದೇ ಆದ ಪ್ರತ್ಯೇಕ ಬೆಂಬಲಿಗರ ಗುಂಪು ಮಾಡಿಕೊಂಡು ಸ್ಪರ್ಧಿಸಿ, ಪಕ್ಷದ ಏಳಿಗೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಇದನ್ನೂ ಓದಿ: ನಾನು ರಾಜಕಾರಣಿಯಾಗಿ ಹುಟ್ಟಿಲ್ಲ, ರಾಜಕಾರಣಿಯಾಗಿ ಸಾಯಲ್ಲ: ಅನಂತ್ ಕುಮಾರ್ ಹೆಗಡೆ

ಬಿಜೆಪಿ ಸೇರಿದ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯಧರಣಿ, ನಾನು ಬಾಲ್ಯದಿಂದಲೂ ಕಾಂಗ್ರೆಸ್‌ನ ಭಾಗವಾಗಿದ್ದೆ. ಈಗ ಬಿಜೆಪಿ ಸೇರುವ ಪರಿಸ್ಥಿತಿ ಎದುರಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಚಟುವಟಿಕೆ ಮತ್ತು ಕಾರ್ಯಕ್ರಮಗಳಿಂದಾಗಿ ನಾನು ಕೂಡ ಬಿಜೆಪಿ ಸೇರಿದ್ದೇನೆ. ತಮಿಳುನಾಡಿನಲ್ಲಿ ಬಿಜೆಪಿಯನ್ನು ಬಲಿಷ್ಠಗೊಳಿಸೋಣ. ಅಣ್ಣಾಮಲೈ ಅವರು ತಮಿಳುನಾಡಿನಲ್ಲಿ ಬಿಜೆಪಿಯನ್ನು ಚೆನ್ನಾಗಿ ಬೆಳೆಯುತ್ತಿದ್ದಾರೆ. ಬಿಜೆಪಿಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ ಎಂದು ಮಾತನಾಡಿದ್ದಾರೆ.