ವಿಜಯ್ ಸಂಭಾವನೆ ಗುಟ್ಟು ಬಿಚ್ಚಿಟ್ಟ ಐಟಿ ಅಧಿಕಾರಿಗಳು

ಚೆನ್ನೈ: ಸಿನಿಮಾಗಳ ಬಗ್ಗೆ ಚರ್ಚೆ ನಡೆಯುವಂತೆಯೇ ನಟರ ಸಂಭಾವನೆ ಬಗ್ಗೆ ಸಹ ಚರ್ಚೆ ನಡೆಯುತ್ತಲೇ ಇರುತ್ತದೆ. ಆದರೆ ಈ ವಿಚಾರ ಅಷ್ಟು ಸುಲಭವಾಗಿ ತಿಳಿಯುವುದಿಲ್ಲ. ಕೇವಲ ಗಾಸಿಪ್‍ಗಳ ಮೂಲಕ ಸಂಭಾವನೆ ಸುದ್ದಿ ಹರಿದಾಡುತ್ತಿರುತ್ತದೆ. ಆದರೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಬಳಿಕ ಇದೀಗ ತಮಿಳು ನಟ ವಿಜಯ್ ದಳಪತಿಯವರ ಸಂಭಾವನೆ ಜಗಜ್ಜಾಹೀರಾಗಿದ್ದು, ಹುಬ್ಬೇರಿಸುವಂತೆ ಮಾಡಿದೆ.

ಹೌದು ಕಳೆದ ವರ್ಷ ಧೂಳೆಬ್ಬೆಸಿದ್ದ ಬಿಗಿಲ್ ಚಿತ್ರದ ನಿರ್ಮಾಪಕ ಎಜಿಎಸ್ ಎಂಟರ್‍ಟೈನ್ಮೆಂಟ್ ಆ್ಯಂಡ್ ಫೈನಾನ್ಶಿಯರ್ ಕಚೇರಿ ಹಾಗೂ ಅಂಬು ಚೆಜಿಯನ್ ಅವರ ಮೆನೆ ಮೇಲೆ ಐಟಿ ಅಧಿಕಾರಿಗಳು ಇತ್ತೀಚೆಗೆ ದಾಳಿ ನಡೆಸಿದ್ದರು. ಈ ವೇಳೆ ಕೋಟಿಗಟ್ಟಲೆ ಹಣ ಹಾಗೂ ಚಿನ್ನವನ್ನು ವಶಪಡಿಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಂಭಾವನೆ ವಿಚಾರವಾಗಿ ನಟ ದಳಪತಿ ವಿಜಯ್ ಮನೆ ಮೇಲೆ ಸಹ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೀಗ ಐಟಿ ಅಧಿಕಾರಿಗಳಿಂದ ವಿಜಯ್ ಸಂಭಾವನೆ ಬಗ್ಗೆ ಮಾಹಿತಿ ಬಹಿರಂಗವಾಗಿದೆ.

‘ಬಿಗಿಲ್’ ಹಾಗೂ ‘ಮಾಸ್ಟರ್’ ಚಿತ್ರಗಳಿಗೆ ನಟ ದಳಪತಿ ವಿಜಯ್ ಪಡೆದಿರುವ ಸಂಭಾವನೆಗೆ ಸೂಕ್ತ ತೆರಗೆ ಪಾವತಿಸಿದ್ದಾರೆ ಎಂದು ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದ್ದು, ಈ ಮೂಲಕ ವಿಜಯ್ ಐಟಿ ಕುಣಿಕೆಯಿಂದ ಪಾರಾಗಿದ್ದಾರೆ. ಇದೇ ವೇಳೆ ಸಂಭಾವನೆ ಕುರಿತ ಮಾಹಿತಿ ಬಹಿರಂಗವಾಗಿದೆ. ನಟ ದಳಪತಿ ವಿಜಯ್ ಅವರ ಸಂಭಾವನೆ ಚಿತ್ರದಿಂದ ಚಿತ್ರಕ್ಕೆ ಭಾರೀ ಪ್ರಮಾಣದಲ್ಲಿ ಜಿಗಿದಿದೆ ಎಂಬ ಗುಟ್ಟು ರಟ್ಟಾಗಿದೆ.

ವಿಜಯ್ ಅವರು ಬಿಗಿಲ್ ಸಿನಿಮಾಗೆ 50 ಕೋಟಿ ರೂ. ಸಂಭಾವನೆ ಪಡೆದಿದ್ದು, ಅವರ ಮುಂದಿನ ಚಿತ್ರ ಮಾಸ್ಟರ್‍ಗೆ 80 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಐಟಿ ಮೂಲಗಳನ್ನು ಆಧಾರಿಸಿ ವರದಿಯಾಗಿದೆ. ಅಲ್ಲದೆ ತನಿಖೆ ಮುಕ್ತಾಯವಾಗಿದ್ದು, ಮೂವರಿಗೆ ಸಂಬಂಧಿಸಿದ ದಾಖಲೆ ಪರಿಶೀಲಿಸುವುದು ಬಾಕಿ ಇದೆ. ವಿಜಯ್ ಹಾಗೂ ಕುಟುಂಬಸ್ಥರು ಹೂಡಿರುವ ಬಂಡವಾಳದ ಬಗ್ಗೆ ಸಂಶಯವಿದೆ ಎಂದಿದ್ದಾರೆ.

ಬಿಗಿಲ್ ಸಿನಿಮಾ ಕಳೆದ ವರ್ಷ ಭರ್ಜರಿ ಸದ್ದು ಮಾಡಿತ್ತು. ಅಲ್ಲದೆ ಸುಮಾರು 300 ಕೋಟಿ ರೂ. ಗಳಿಕೆ ಕಂಡಿದೆ ಎನ್ನಲಾಗಿತ್ತು. ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಮಾಸ್ಟರ್ ಚಿತ್ರ ಮೂಡಿ ಬಂದಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಬಹು ತಾರಾಗಣವೇ ಇದ್ದು, ವಿಜಯ್ ಸೇತುಪತಿ, ಮಾಳವಿಕಾ ಮೋಹನನ್ ಹಾಗೂ ಆಂಡ್ರಿಯಾ ಜೆರೆಮಯ್ಯಾ ಅಭಿನಯಿಸಿದ್ದರು.

Comments

Leave a Reply

Your email address will not be published. Required fields are marked *