‘ಇದೇನ್ ಇಂಡಿಯಾ, ಪಾಕಿಸ್ತಾನ ಯುದ್ಧನಾ’ – ಅಧಿಕಾರಿ, ಪ್ರಾಣಿ ದಯಾ ಸಂಘದವರ ಮಧ್ಯೆ ವಾಗ್ವಾದ

ಬೆಂಗಳೂರು: ಚಾಮರಾಜನಗರದ ಬಂಡೀಪುರದಲ್ಲಿ ಹುಲಿ ಹಿಡಿಯುವ ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಪ್ರಾಣಿ ದಯಾ ಸಂಘದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ.

ಮಂಗಳವಾರ ವ್ಯಕ್ತಿಯೊರ್ವನನ್ನು ಹುಲಿ ಕೊಂದು ಹಾಕಿತ್ತು. ಈ ಬೆನ್ನಲ್ಲೇ ಸ್ಥಳೀಯರು ಹುಲಿಯನ್ನು ಹಿಡಿಯುವಂತೆ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹುಲಿಯನ್ನು 24 ಗಂಟೆಯೊಳಗೆ ಹಿಡಿಯಬೇಕು. ಇಲ್ಲವೆಂದಲ್ಲಿ ಅದನ್ನು ಕೊಲ್ಲಲು ಆದೇಶ ಹೊರಡಿಸಿತ್ತು.

ಈ ಸಂಬಂಧ ಇಂದು ಮಲ್ಲೇಶ್ವರಂನ ಅರಣ್ಯ ಭವನದಲ್ಲಿರುವ ಅರಣ್ಯ ಇಲಾಖೆಯೊಳಗೆ ನಡೆದ ಅಧಿಕಾರಿಗಳು ಹಾಗೂ ಪ್ರಾಣಿದಯಾ ಸಂಘದವರ ಸಭೆಯಲ್ಲಿ ವಾಗ್ವಾದ ನಡೆದಿದೆ. ನಿನ್ನೆಯಷ್ಟೇ ದುರ್ಗಿಯನ್ನು ಆರಾಧನೆ ಮಾಡಿದ್ದೇವೆ. ಮೊದಲೇ ರಾಜ್ಯದ ಅರಣ್ಯದಲ್ಲಿ ಹುಲಿಗಳ ಸಂಖ್ಯೆ ಇಳಿಮುಖವಾಗಿದೆ. ಈ ಹುಲಿಯನ್ನು ಕೊಲ್ಲಬೇಡಿ ಎಂದು ಅರಣ್ಯ ಇಲಾಖೆಯ ಅಧಿಕಾರಿ ಸಂಜಯ್ ಮೌನಿಗೆ ಪ್ರಾಣಿ ದಯಾ ಸಂಘದವರು ಮನವಿ ಸಲ್ಲಿಸಿದರು.

ನಾವು ಹುಲಿಯನ್ನು ಹಿಡಿಯಲು ಯತ್ನ ಮಾಡುತ್ತಿದ್ದೇವೆ ಕೊಲ್ಲಲ್ಲ ಅಂತ ಹೇಳಿದ್ದಾರೆ. ಆದರೆ ಈಗಾಗಲೇ ಮಹಾರಾಷ್ಟ್ರದಿಂದ ಹುಲಿಯನ್ನು ಕೊಲ್ಲುವುದಕ್ಕಾಗಿಯೇ ತಜ್ಞರನ್ನು ಕರೆಸಿಕೊಳ್ಳಲಾಗಿದೆ. ಅಲ್ಲದೆ ಹುಲಿಯನ್ನು ಕೊಲ್ಲಲು ಅಧಿಕೃತ ಅದೇಶ ಕೊಡಲಾಗಿದೆ ಎಂದು ಪ್ರಾಣಿ ದಯಾ ಸಂಘದವರು ವಾದ ಮಾಡಿದರು.

ಪ್ರಾಣಿದಯಾ ಸಂಘದವರ ಆಕ್ಷೇಪಕ್ಕೆ ಸಿಟ್ಟಿಗೆದ್ದ ಅಧಿಕಾರಿ, ಇದೇನ್ ಇಂಡಿಯಾ – ಪಾಕಿಸ್ತಾನ ಯುದ್ಧನಾ. ನಾವು ಹುಲಿಯನ್ನು ಕೊಲ್ಲಲ್ಲ. ಹುಲಿಯನ್ನು ತಬ್ಬಿ ಹಿಡಿಯೋದಕ್ಕೆ ಆಗುತ್ತಾ? ಸ್ವಲ್ಪ ಏಟು ಮಾಡಿಯೇ ಅದನ್ನು ಹಿಡಿಯಬೇಕಲ್ಲವೇ ಎಂದು ವನ್ಯಜೀವಿ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಅವರು ಪ್ರಾಣಿ ದಯಾ ಸಂಘದವರಿಗೆ ಟಾಂಗ್ ಕೊಟ್ಟರು.

ಈ ಉತ್ತರಕ್ಕೆ ಸದಸ್ಯರು, ಹುಲಿಗೆ ಹಾನಿ ಮಾಡದೇ ಹಿಡಿಯಿರಿ ಎಂದು ಅಧಿಕಾರಿಗೇ ತಿರುಗೇಟು ನೀಡಿದರು. ಅಣ್ಣಾವ್ರ ಅಭಿಮಾನಿಗಳು ನಾವು, ಮಹಾರಾಷ್ಟ್ರದಲ್ಲಿ ಅವನಿ ಹುಲಿಯನ್ನು ಕೊಂದವನನ್ನು ಕರ್ನಾಟಕಕ್ಕೆ ಕರೆಸಿ ಇಲ್ಲಿ ಹುಲಿ ಹತ್ಯೆ ಮಾಡುವುದಕ್ಕೆ ಬಿಡಲ್ಲ ಎಂದು ಖಡಕ್ ಆಗಿ ತಿಳಿಸಿದರು.

ಈ ಹಿಂದೆಯೂ ಈ ಹುಲಿ ಸಾಕಷ್ಟು ಜನರಿಗೆ ಹಾನಿ ಮಾಡಿದೆ. ಈಗಾಗಲೇ ಅಲ್ಲಿನ ದೃಶ್ಯಗಳನ್ನು ಪರಿಶೀಲನೆ ಮಾಡಿ ಅದನ್ನು ಹಿಡಿಯುವ ಯತ್ನ ಮಾಡುತ್ತಿದ್ದೇವೆ. ಅಲ್ಲಿ ಮೂರು ಹುಲಿ ಇದೆ. ಬೇರೆ ಹುಲಿಗೆ ತೊಂದರೆಯಾಗದಂತೆ ಕಿಲ್ಲರ್ ಹುಲಿಯನ್ನು ಹಿಡಿದು ಟ್ರೈನ್ ಮಾಡುತ್ತೇವೆ. ಅದನ್ನು ಬೇರೆ ಕಡೆ ಸ್ಥಳಾಂತರ ಮಾಡಲಿದ್ದೇವೆ ಎಂದು ಅಧಿಕಾರಿ ತಿಳಿಸಿದರು.

Comments

Leave a Reply

Your email address will not be published. Required fields are marked *