ಭಜರಂಗಿ 2 ಸಿನಿಮಾಗೆ ಮತ್ತೆ ಸಂಕಷ್ಟ – ಬೆಂಕಿ ಬಿದ್ದ ಸೆಟ್ ಗೋದಾಮಿಗೆ ಬೀಗ ಹಾಕಿ ಅಧಿಕಾರಿಗಳಿಂದ ಸೀಜ್

ಬೆಂಗಳೂರು: ನೆಲಮಂಗಲದ ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಭಜರಂಗಿ-2 ಸಿನಿಮಾ ಶೂಟಿಂಗ್ ವೇಳೆ ನಡೆದ ಅಗ್ನಿ ಅವಘಡ ಪ್ರಕರಣದಿಂದ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡಿದೆ. ಸ್ಟುಡಿಯೋಗೆ ಭೇಟಿ ಕೊಟ್ಟ ತಹಶೀಲ್ದಾರ್ ಬೀಗ ಜಡಿದು ನೋಟಿಸ್ ಕೊಟ್ಟು ಬಂದಿದ್ದಾರೆ.

ಮೋಹನ್ ಬಿ.ಕೆರೆ ಸ್ಟುಡಿಯೋ ಅಂದರೆ ಸಿನಿಮಾ ಮಂದಿಗೆ ಸಿಗುವ ಅದ್ಧೂರಿಯಾಗಿ ಮತ್ತೊಂದು ಪ್ರಪಂಚ ಸೃಷ್ಟಿಸುವ ಲೋಕ. ಅಥಾರ್ತ್ ಸಿನಿಮಾಗಾಗಿ ಸೆಟ್ ಹಾಕಿ ಶೂಟಿಂಗ್ ಮಾಡಿಕೊಳ್ಳುವ ಹಾಟ್ ಸ್ಪಾಟ್. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶ್ರೀನಿವಾಸಪುರ ಗ್ರಾಮದ ಬಳಿಯ ಆರ್ಟ್ ಡೈರೆಕ್ಟರ್ ಮೋಹನ್ ಬಿ.ಕೆರೆ ಒಡೆತನದ ಸ್ಟುಡಿಯೋದಲ್ಲಿ ಕಳೆದ 10 ದಿನಗಳಿಂದ ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ ‘ಭಜರಂಗಿ-2’ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಇದನ್ನೂ ಓದಿ:   ಭಜರಂಗಿ-2 ಸಿನಿಮಾ ಸೆಟ್‍ನಲ್ಲಿ ಮತ್ತೆ ಬೆಂಕಿ ಅವಘಡ

ದುರಾದೃಷ್ಟವಶಾತ್ ಎರಡು ಬಾರಿ ಈ ಸಿನಿಮಾಗೆ ಹಾಕಲಾಗಿದ್ದ ಗುಹೆಯ ಬೃಹತ್ ಸೆಟ್‍ಗೆ ಬೆಂಕಿ ಬಿದ್ದು ಅನಾಹುತ ಸಂಭವಿಸಿತ್ತು. ಹೀಗಾಗಿ ಸತತ ಎರಡು ಬೆಂಕಿ ಅವಘಡಗಳ ಬಳಿಕ ಎಚ್ಚೆತ್ತ ಸ್ಥಳೀಯ ಆಡಳಿತ ಮೋಹನ್ ಬಿ.ಕೆರೆ ಸ್ಟುಡಿಯೋಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಸೀಜ್ ಮಾಡಿದೆ. ಈ ಸ್ಟುಡಿಯೋ ಸಿನಿಮಾ ಶೂಟಿಂಗ್ ಮಾಡಲು ಯೋಗ್ಯ ಜಾಗವಾಗಿದೆಯೇ, ಫೈರ್ ಎಕ್ಸಿಟ್ ಸೇರಿ ಮೂಲಭೂತ ಸೌಕರ್ಯಗಳು, ಅಧಿಕೃತ ಪರವಾನಗಿ ಹೀಗೆ ಚಲನಚಿತ್ರ ಚಿತ್ರೀಕರಣದ ಸಮಯದಲ್ಲಿ ಇರಬೇಕಾದ ಎಲ್ಲಾ ಸೌಕರ್ಯಗಳು ಮತ್ತು ದಾಖಲೆಗಳನ್ನ ಕೂಡಲೇ ನೀಡುವಂತೆ ನೆಲಮಂಗಲ ತಹಶೀಲ್ದಾರ್ ಶ್ರೀನಿವಾಸಯ್ಯ ಸ್ಟುಡಿಯೋ ಮಾಲೀಕರಿಗೆ ನೋಟಿಸ್ ಜಾರಿ, ಸ್ಟುಡಿಯೋವನ್ನು ಸೀಜ್ ಮಾಡಿದ್ದಾರೆ. ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ನೀಡುವಂತೆ ಹೇಳಿ ನೋಟಿಸ್ ಜಾರಿ ಮಾಡಿದ್ದೇವೆ ಸೂಕ್ತ ಸಮಯದಲ್ಲಿ ನೋಟಿಸ್ ಗೆ ಉತ್ತರ ಕೊಡದೆ ಇದ್ದರೆ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳುವುದಾಗಿ ತಹಶೀಲ್ದಾರ್ ಶ್ರೀನಿವಾಸಯ್ಯ ಹೇಳಿದ್ದಾರೆ. ಇದನ್ನೂ ಓದಿ:  ‘ಭಜರಂಗಿ-2’ ಚಿತ್ರತಂಡಕ್ಕೆ ಮತ್ತೊಂದು ಶಾಕ್- 60 ಮಂದಿ ಕಲಾವಿದರಿದ್ದ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ

ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯ ಹನುಮಂತರಾಜು ಮಾತನಾಡಿ, ನಾವು ಈ ಜಮೀನಿನಲ್ಲಿ ವ್ಯವಹಾರಿಕ ಕೆಲಸ ಮಾಡುತ್ತಿರುವ ಬಗ್ಗೆ ಈ ಹಿಂದೆಯೇ ಪ್ರಶ್ನೆ ಮಾಡಿದ್ದೇವು. ಆಗಲೂ ಯಾವುದೇ ಸೂಕ್ತ ಉತ್ತರ ನೀಡಿರಲಿಲ್ಲ. ಈಗಲಾದರೂ ಸ್ಥಳೀಯ ಆಡಳಿತ ಎಚ್ಚೆತ್ತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಆಗ್ರಹಿಸಿದರು.

Comments

Leave a Reply

Your email address will not be published. Required fields are marked *