Tag: Zomato Delivery Boy

  • ಕಾರು, ಮೋಟಾರ್ ಬೈಕ್ ಡಿಕ್ಕಿ – ಝೊಮ್ಯಾಟೋ ಡೆಲಿವರಿ ಬಾಯ್, ಇಬ್ಬರು ಯುವತಿಯರು ಸಾವು

    ಕಾರು, ಮೋಟಾರ್ ಬೈಕ್ ಡಿಕ್ಕಿ – ಝೊಮ್ಯಾಟೋ ಡೆಲಿವರಿ ಬಾಯ್, ಇಬ್ಬರು ಯುವತಿಯರು ಸಾವು

    ನವದೆಹಲಿ: ಕಾರು ಮತ್ತು ಮೋಟಾರ್ ಬೈಕ್ ಡಿಕ್ಕಿಯಾಗಿ ಝೊಮ್ಯಾಟೋ ಡೆಲಿವರಿ ಬಾಯ್ ಸೇರಿ ಇಬ್ಬರು ಹದಿಹರೆಯದವರು ಸಾವನ್ನಪ್ಪಿದ ಘಟನೆ ನಿನ್ನೆ ರಾತ್ರಿ ಈಶಾನ್ಯ ದೆಹಲಿಯ ಶಕರ್‌ಪುರ್ ಪ್ರದೇಶದಲ್ಲಿ ನಡೆದಿದೆ.

    ಜ್ಯೋತಿ (17) ಮತ್ತು ಭಾರತಿ (19) ಮೃತ ದುರ್ದೈವಿಗಳು. ಯುವತಿಯರು ಮತ್ತು ಅವರ ಕುಟುಂಬದ ಇತರ ಐವರು ಪಶ್ಚಿಮ ದೆಹಲಿಯ ಪೀರಾಗರ್ಹಿಯಿಂದ ಕರ್ಕರ್ಡೂಮಾದಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದರು. ಕಾರಿನ ಮುಂಬದಿಯಲ್ಲಿ ಮೂವರು ಕುಳಿತಿದ್ದರೆ, ನಾಲ್ವರು ಹಿಂದೆ ಕುಳಿತಿದ್ದರು. ಈ ವೇಳೆ ಕಾರು ಲಕ್ಷ್ಮಿನಗರದಲ್ಲಿ ಹಾದು ಹೋಗುತ್ತಿದ್ದಾಗ ಝೊಮ್ಯಾಟೋ ಡೆಲಿವರಿ ಬಾಯ್ ಬೈಕ್ ಅಡ್ಡ ಬಂದಿದೆ. ಈ ವೇಳೆ ಕಾರು ಬೈಕ್‍ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ನರ್ಸ್ ಮೃತದೇಹ ಪತ್ತೆ – ಅತ್ಯಾಚಾರ ಆರೋಪ ಮಾಡಿದ ಕುಟುಂಬಸ್ಥರು

    ಪಲ್ಟಿಯಾದ ಕಾರಿನೊಳಗೆ ಸಿಲುಕಿದ್ದವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿದ್ದು, ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೃತ ಝೊಮ್ಯಾಟೋ ಡೆಲಿವರಿ ಬಾಯ್ ಯಾರು ಎಂದು ಇನ್ನೂ ಗುರುತಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಅಪಘಾತದ ನಂತರ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯ ಅಧಿಕಾರಿಗಳು, ಯಾವುದೇ ಹಾಸಿಗೆ ಲಭ್ಯವಿಲ್ಲ ಎಂದು ಹೇಳಿದರು. ಅವರು ಹಾಸಿಗೆಯ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದ್ದಂತೆ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಇದನ್ನೂ ಓದಿ:  ಆ್ಯಸಿಡ್ ದಾಳಿಗೆ ಒಳಗಾದ ಯುವತಿ ಚಿಕಿತ್ಸೆಗೆ 1 ಲಕ್ಷ ರೂ. ಚಕ್ ಕೊಟ್ಟ 

    ಗ್ರಾಹಕರಿಗೆ ಆರ್ಡರ್ ಮಾಡಿದ ಆಹಾರವನ್ನು 10 ನಿಮಿಷದಲ್ಲಿ ತಲುಪಿಸಲಾಗುವುದು ಎಂದು ಝೊಮ್ಯಾಟೋ ಘೋಷಿಸಿದ ಒಂದು ತಿಂಗಳ ನಂತರ ಈ ರೀತಿಯ ಅನಾಹುತಗಳು ಸಂಭವಿಸುತ್ತಿವೆ. ನಿಗದಿತ ಸಮಯಕ್ಕೆ ಆರ್ಡರ್ ಡೆಲಿವರಿ ಮಾಡುವ ಧಾವಂತದಲ್ಲಿ ಇಂತಹ ದುರಂತಗಳು ಸಂಭವಿಸುತ್ತಿರುವುದು ಡೆಲಿವರಿ ಬಾಯ್‍ಗಳ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ.

     

  • ಝೊಮ್ಯಾಟೊ ಡೆಲಿವರಿ ಬಾಯ್ ಆದ ಶಿಕ್ಷಕ- ಕಥೆಯೇ ರೋಚಕ!

    ಝೊಮ್ಯಾಟೊ ಡೆಲಿವರಿ ಬಾಯ್ ಆದ ಶಿಕ್ಷಕ- ಕಥೆಯೇ ರೋಚಕ!

    ಜೈಪುರ: ಶಿಕ್ಷಕ ವೃತ್ತಿಯನ್ನು ಬಿಟ್ಟು ಝೊಮ್ಯಾಟೊ ಬಾಯ್ ಆದ ವ್ಯಕ್ತಿಯೊಬ್ಬರ ಜೀವನ ಕಥೆಯನ್ನು ವೀಡಿಯೋ ಮಾಡಿ ಟ್ವಿಟ್ಟರ್ ಬಳಕೆದಾರರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಶಿಕ್ಷಕನೊಬ್ಬ ಝೊಮ್ಯಾಟೊ ಬಾಯ್ ಆದ ಕಥೆಯೇ ರೋಚಕ. ಕೊರೊನಾ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಶಿಕ್ಷಕ ತನ್ನ ವೃತ್ತಿಗೆ ರಾಜೀನಾಮೆ ನೀಡಿ ಝೊಮ್ಯಾಟೊ ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರುತ್ತಾರೆ. ಬೈಕ್ ತೆಗೆದುಕೊಳ್ಳಲು ಹಣವಿಲ್ಲದೇ ಸೈಕಲ್‍ನಲ್ಲೇ ಫುಡ್ ಆರ್ಡರ್‌ಗಳನ್ನು ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡಿಕೊಂಡಿರುತ್ತಾರೆ. ಇದನ್ನೂ ಓದಿ: ದೇಶಿ ನಿರ್ಮಿತ ಪಿಸ್ತೂಲ್ ಇಟ್ಟುಕೊಂಡಿದ್ದ ಶಿಕ್ಷಕಿ ಅರೆಸ್ಟ್

    ಝೊಮ್ಯಾಟೊ ಡೆಲಿವರಿ ಬಾಯ್ ದುರ್ಗ ಮೀನಾಳ್ ಸಂಕಷ್ಟ ಹಾಗೂ ಕಾಯಕ ನಿಷ್ಠೆಯನ್ನು ಕಂಡ ಟ್ವಿಟ್ಟರ್ ಬಳಕೆದಾರ ಆದಿತ್ಯ ಶರ್ಮಾ ಅವರು ಒಂದು ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಕೆಲವರು ಝೊಮ್ಯಾಟೊ ಡೆಲಿವರಿ ಬಾಯ್ ಆದ ಶಿಕ್ಷಕರಿಂದ ಸ್ಫೂರ್ತಿ ಪಡೆದರೆ, ಕೆಲವರು ಸಹಾಯ ಹಸ್ತ ಚಾಚಿದ್ದಾರೆ. ಡೆಲಿವರಿ ಬಾಯ್‍ಗಾಗಿ ಕ್ರೌಡ್ ಫಂಡಿಂಗ್ ಪ್ರಾರಂಭವಾಯಿತು. ಇಂಟರ್‍ನೆಟ್ ಬಳಕೆದಾರರು ಆ ವ್ಯಕ್ತಿಯ ಕಠಿಣ ಪರಿಶ್ರಮಕ್ಕಾಗಿ ಅಪಾರ ಪ್ರೀತಿ ಮತ್ತು ಧನ ಸಹಾಯ ಮಾಡಿದ್ದಾರೆ. ಸಾರ್ವಜನಿಕರ ನೆರವಿನಿಂದ ವ್ಯಕ್ತಿಯು ಈಗ ಬೈಕ್ ಖರೀದಿಸಲು ಸಾಧ್ಯವಾಯಿತು. ಇದನ್ನೂ ಓದಿ: ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮರಾದವರ ತ್ಯಾಗ ಮುಂದಿನ ಪೀಳಿಗೆಗೆ ಪ್ರೇರಣೆ: ಮೋದಿ

    ಈ ಕಥೆ ರಾಜಸ್ಥಾನದ ದುರ್ಗಾ ಮೀನಾಳ್ ಅವರದ್ದು. ದುರ್ಗ ಕಳೆದ 4 ತಿಂಗಳಿಂದ ಝೊಮ್ಯಾಟೊದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಹೊಡೆತದಿಂದ ಅವರು ಶಿಕ್ಷಕ ವೃತ್ತಿ ಕಳೆದುಕೊಳ್ಳುತ್ತಾರೆ. ನಂತರ ಅವರು ಝೊಮ್ಯಾಟೊನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಭಾನುವಾರ ಟ್ವಿಟರ್ ಬಳಕೆದಾರರಾದ ಆದಿತ್ಯ ಶರ್ಮಾ ಅವರು ದುರ್ಗರವರ ಕುರಿತು ವೀಡಿಯೋ ಮಾಡಿ ಟ್ವೀಟ್ ಮಾಡಿದ್ದಾರೆ.

    ರಾಜಸ್ಥಾನದ ಸುಡುವ ಬಿಸಿಲಿನಲ್ಲೂ ಸೈಕಲ್ ತುಳಿದು ಸಮಯಕ್ಕೆ ಸರಿಯಾಗಿ ಆರ್ಡರ್‍ಗಳನ್ನು ತಲುಪಿಸುವ ಅವರ ಪರಿಶ್ರಮವನ್ನು ವೀಡಿಯೋದಲ್ಲಿ ಚಿತ್ರಿಸಿದ್ದಾರೆ. ಇದರೊಂದಿಗೆ ದುರ್ಗ ಅವರ ಅಧ್ಯಯನ ಮತ್ತು ಕೊರೊನಾ ಅವರ ಮೇಲೆ ಬೀರಿದ ಪರಿಣಾಮದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.

    ಆದಿತ್ಯ ಅವರ ಈ ಟ್ವೀಟ್, ಟ್ವಿಟ್ಟರ್‍ನಲ್ಲಿ ಬಹು ಬೇಗನೇ ವೈರಲ್ ಆಗಿದೆ. ದುರ್ಗ ಅವರ ಸಹಾಯಕ್ಕೆ ಜನ ಮುಂದೆ ಬರತೊಡಗಿದ್ದು, ಕ್ರೌಡ್ ಫಂಡಿಂಗ್ ಮೂಲಕ ಸುಮಾರು 1.90 ಲಕ್ಷ ರೂ. ಧನ ಸಹಾಯ ಹರಿದುಬಂದಿದೆ.

    ಈ ಹಣದಲ್ಲಿ ಮೊದಲು ಬೈಕ್ ಖರೀದಿಸುತ್ತೇನೆ. ಉಳಿದ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸುತ್ತೇನೆ ಎಂದು ದುರ್ಗ ಅವರು ತಿಳಿಸಿದ್ದಾರೆ. ಅಂತರ್ಜಾಲದ ಬಳಕೆದಾರರಿಂದ ಪಡೆದ ಧನ ಸಹಾಯದಿಂದ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ.

  • ಝೊಮ್ಯಾಟೋ ಬಾಯ್ ಹಲ್ಲೆ ಪ್ರಕರಣ – ಮಾಡೆಲ್ ಹಿತೇಶಾ ಚಂದ್ರಾನೀ ಸುರಕ್ಷತೆಯ ಬಗ್ಗೆ ಕಳವಳ

    ಝೊಮ್ಯಾಟೋ ಬಾಯ್ ಹಲ್ಲೆ ಪ್ರಕರಣ – ಮಾಡೆಲ್ ಹಿತೇಶಾ ಚಂದ್ರಾನೀ ಸುರಕ್ಷತೆಯ ಬಗ್ಗೆ ಕಳವಳ

    ಬೆಂಗಳೂರು: ಮಾಡೆಲ್ ಹಿತೇಶಾ ಚಂದ್ರಾನೀ ಮತ್ತು ಝೋಮ್ಯಾಟೋ ಡೆಲಿವರಿ ಬಾಯ್ ಕಾಮರಾಜ್ ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಹಿತೇಶಾ ಚಂದ್ರಾನೀ, ನಾನು ನನ್ನ ಸುರಕ್ಷತೆಯ ಬಗ್ಗೆ ಚಿಂತೆಗೊಳಗಾಗಿದ್ದೇನೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

    ಮಾರ್ಚ್ 9 ರಂದು ಡೆಲಿವರಿ ಬಾಯ್ ಮತ್ತು ಮಾಡೆಲ್ ನಡುವೆ ಹೊಡೆದಾಟ ನಡೆದಿದೆ ಎಂದು ವರದಿಯಾಗಿತ್ತು. ದೊಡ್ಡತಗೂರು ಪ್ರದೇಶದ ಯುವತಿ ಹಿತೇಶಾ ಚಂದ್ರಾನೀ ಝೊಮ್ಯಾಟೋ ಡೆಲಿವರಿ ಬಾಯ್ ತಮ್ಮ ಮೂಗಿಗೆ ಗುದ್ದಿ ಗಾಯಗೊಳಿಸಿದ್ದಾನೆ ಎಂದು ಆರೋಪಿಸಿ ವೀಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದರು. ಅದಾದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮರಾಜ್ ನೀಡಿರುವ ದೂರಿನ ಮೇರೆಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಹಿತೇಶಾ ಚಂದ್ರಾನೀ ವಿರುದ್ಧ ಪೊಲೀಸರು ಸೆಕ್ಷನ್ 355 (ದಾಳಿ), 504 (ಅವಮಾನ), 506(ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಹಿತೇಶಾ ಚಂದ್ರಾನೀ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

    ಇದೀಗ ಇನ್‍ಸ್ಟಾಗ್ರಾಂ ನಲ್ಲಿ ಪತ್ರದ ಮೂಲಕ ಬರೆದುಕೊಂಡಿರುವ ಹಿತೇಶಾ ಚಂದ್ರಾನೀ, ಕೆಲವು ಸೆಲೆಬ್ರಿಟಿಗಳು ಈ ಘಟನೆಗೆ ನಾನೇ ಕಾರಣವೆಂದು ಮನಸ್ಸು ನೋಯಿಸಿದ್ದಾರೆ. ಇದರಿಂದಾಗಿ ನನಗೆ ನಾನು ನೋಡಿದ್ದ ಜನರು ಇವರೇನಾ ಎಂಬ ಸಂಶಯ ಮೂಡುತ್ತಿದೆ ಎಂದಿದ್ದಾರೆ.

    ನಾನು ನನ್ನ ಜೀವನವನ್ನು ಮತ್ತು ಗೌರವವನ್ನು ಯಾವುದೇ ಅಪಾಯಕ್ಕೆ ಒಳಪಡಿಸಲು ಇಷ್ಟ ಪಡುವುದಿಲ್ಲ. ಸೂಕ್ತವಾದ ಕಾನೂನು ಹೋರಾಟ ಮುಗಿಯುವವರೆಗೆ ಯಾರು ಕೂಡ ಈ ಕುರಿತು ಹೇಳಿಕೆಗಳನ್ನು ನೀಡಬಾರದೆಂದು ಅಭಿಮಾನಿಗಳೊಂದಿಗೆ ವಿನಂತಿ ಮಾಡಿಕೊಂಡಿದ್ದಾರೆ.

    ಈಗಾಗಲೇ ನಾನು ಬೆಂಗಳೂರು ಬಿಟ್ಟು ಹೋಗಿದ್ದೇನೆಂಬ ಹಲವು ಗಾಳಿ ಸುದ್ದಿಗಳು ಹರಿದಾಡುತ್ತಿದೆ. ನಾನು ಎಲ್ಲೂ ಹೋಗಿಲ್ಲ. ನಾನು ಬೆಂಗಳೂರಿನಲ್ಲಿ ಜೀವನ ನಡೆಸುತ್ತಿದ್ದು, ಕಳೆದ ಮೂರು ನಾಲ್ಕು ದಿನಗಳಿಂದ ನನ್ನ ಸುರಕ್ಷತೆಯ ಬಗ್ಗೆ ಚಿಂತೆಗೊಳಗಾಗಿದ್ದೇನೆ. ತನಿಖೆಯ ಸತ್ಯಾಸತ್ಯತೆ ಹೊರ ಬರುವುದಕ್ಕಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

  • ಪಾರ್ಕಿಂಗ್ ವಿಚಾರಕ್ಕೆ ಕಿತ್ತಾಟ – ಝೊಮ್ಯಾಟೋ ಡೆಲಿವರಿ ಬಾಯ್‍ಗೆ ಚಾಕು ಇರಿದು ಕೊಂದ ವ್ಯಾಪಾರಿ

    ಪಾರ್ಕಿಂಗ್ ವಿಚಾರಕ್ಕೆ ಕಿತ್ತಾಟ – ಝೊಮ್ಯಾಟೋ ಡೆಲಿವರಿ ಬಾಯ್‍ಗೆ ಚಾಕು ಇರಿದು ಕೊಂದ ವ್ಯಾಪಾರಿ

    – ಹಣ್ಣಿನ ಗಾಡಿಯನ್ನು ಅಡ್ಡಾದಿಡ್ಡಿ ನಿಲ್ಲಿಸಿದಕ್ಕೆ ಗಲಾಟೆ
    – ಇಬ್ಬರು ಹಣ್ಣಿನ ವ್ಯಾಪಾರಿಗಳು ಅರೆಸ್ಟ್

    ಮುಂಬೈ: ಹಣ್ಣು ಮಾರುವ ಗಾಡಿಯನ್ನು ಅಡ್ಡಾದಿಡ್ಡಿ ನಿಲ್ಲಿಸಿದಕ್ಕೆ ಬೇರೆ ವಾಹನಗಳ ಪಾರ್ಕಿಂಗ್‍ಗೆ ತೊಂದರೆ ಆಗುತ್ತಿದೆ ಎಂದು ಆರಂಭವಾದ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯಕಂಡಿದೆ.

    ನಗರದ ಸಬ್ ಅರ್ಬನ್ ಪೊವಾಯಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬುಧವಾರ ಹಣ್ಣಿನ ವ್ಯಾಪಾರಿಗಳಿಬ್ಬರು ಜೊತೆಗೂಡಿ ಝೊಮ್ಯಾಟೋ ಡೆಲಿವರಿ ಬಾಯ್‍ಗೆ ಚಾಕು ಇರಿದು ಕೊಲೆ ಮಾಡಿದ್ದಾರೆ. ಆರೋಪಿಗಳನ್ನು ಪೊವಾಯಿ ನಿವಾಸಿ ಸಚಿನ್ ದಿನೇಶ್ ಸಿಂಗ್(20) ಹಾಗೂ ಜಿತೇಂದ್ರ ಹರಿರಾಮ್ ರೈಕರ್(32) ಎಂದು ಗುರುತಿಸಲಾಗಿದೆ. ಕೊಲೆಯಾದ ಝೊಮ್ಯಾಟೋ ಡೆಲಿವರಿ ಬಾಯ್ ಅನ್ನು ಅನ್ಮೋಲ್ ಭಾಸ್ಕರ್ ಸುರತ್ಕಲ್(30) ಎಂದು ಗುರುತಿಸಲಾಗಿದೆ.

    ಸಚಿನ್ ಮತ್ತು ಜಿತೇಂದ್ರ ಇಬ್ಬರು ಪೊವಾಯಿಯಲ್ಲಿ ತಳ್ಳುವ ಗಾಡಿಯ ಹಣ್ಣಿನ ವ್ಯಾಪ್ಯಾರಿಗಳಾಗಿದ್ದು, ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ಹಣ್ಣಿನ ಗಾಡಿಯನ್ನು ಅಡ್ಡಾದಿಡ್ಡಿ ನಿಲ್ಲಿಸುತ್ತಿದ್ದರು. ಇದರಿಂದ ಇತರೆ ವಾಹನಗಳನ್ನು ನಿಲ್ಲಿಸಲು ಸಮಸ್ಯೆ ಆಗುತ್ತಿತ್ತು. ಆದ್ದರಿಂದ ಮಂಗಳವಾರ ಅನ್ಮೋಲ್ ನಿಮ್ಮ ಗಾಡಿಯನ್ನು ಸರಿಯಾಗಿ ನಿಲ್ಲಿಸಿ, ನಿಮ್ಮಿಂದ ಬೇರೆಯವರಿಗೆ ತೊಂದರೆ ಆಗುತ್ತಿದೆ ಎಂದು ಹೇಳಿದ್ದನು. ಈ ವೇಳೆ ಸಚಿನ್ ಹಾಗೂ ಅನ್ಮೋಲ್ ನಡುವೆ ಜಗಳವಾಗಿತ್ತು.

    ಅದೇ ಸಿಟ್ಟಲ್ಲಿದ್ದ ಸಚಿನ್ ರಾತ್ರಿ ಸ್ನೇಹಿತರೊಂದಿಗೆ ಮದ್ಯ ಸೇವಿಸಿ ಅನ್ಮೋಲ್ ವಿರುದ್ಧ ಕಿಡಿಕಾರಿದ್ದನು. ಆಗ ಜಿತೇಂದ್ರ ಹಾಗೂ ಇತರೆ ಸ್ನೇಹಿತರು ಈ ವಿಚಾರವನ್ನು ಅಂತ್ಯಗೊಳಿಸು ಎಂದು ಹೇಳಿದ್ದರು. ಅದನ್ನೇ ತಲೆಯಲ್ಲಿ ಇಟ್ಟುಕೊಂಡಿದ್ದ ಸಚೀನ್ ಅನ್ಮೋಲ್‍ನನ್ನು ಕೊಲೆ ಮಾಡಲು ನಿರ್ಧರಿಸಿದ. ಬೇಕಂತಲೇ ಅನ್ಮೋಲ್ ಜೊತೆ ಜಗಳವಾಡುತ್ತಾ ಏಕಾಏಕಿ ಆತನಿಗೆ ಚಾಕು ಇರಿದು ಸಚೀನ್ ಪರಾರಿಯಾದ. ಆರೋಪಿಯೊಂದಿಗೆ ಇದ್ದ ಜಿತೇಂದ್ರ ಕೂಡ ಓಡಿಹೋದ.

    ರಸ್ತೆ ಮೇಲೆ ಬಿದ್ದಿದ್ದ ಅನ್ಮೋಲ್‍ನನ್ನು ಗಮನಿಸಿದ ಸ್ಥಳೀಯರು ಆತನನ್ನು ಆಸ್ಪತ್ರೆಗೆ ರವಾನಿಸಿದರು. ಆದರೆ ಅಷ್ಟರಲ್ಲಿ ಅನ್ಮೋಲ್ ಸಾವನ್ನಪ್ಪಿದ್ದನು. ಆರೋಪಿಗಳು ಅನ್ಮೋಲ್‍ನ ಹೊಟ್ಟೆ ಹಾಗೂ ಎದೆಗೆ ಚಾಕು ಇರಿದಿದ್ದ ಪರಿಣಾಮ ಅಧಿಕ ರಕ್ತಸ್ರಾವವಾಗಿ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದನು ಎಂದು ವೈದ್ಯರು ತಿಳಿಸಿದರು.

    ಈ ಘಟನೆ ನಡೆದ ಬಳಿಕ ಆರೋಪಿಗಳು ಉತ್ತರ ಪ್ರದೇಶಕ್ಕೆ ಹೋಗಿ ತಲೆಮರಿಸಿಕೊಳ್ಳಲು ರೈಲ್ವೆ ನಿಲ್ದಾಣಕ್ಕೆ ತೆರೆಳಿದ್ದರು. ಈ ಬಗ್ಗೆ ತಿಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಅವರ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಪ್ರಕರಣ ದಾಖಲಿಸಿದ್ದಾರೆ.