Tag: Zika virus

  • ರಾಯಚೂರಿನಲ್ಲಿ ಝಿಕಾ ವೈರಸ್ ಪತ್ತೆ – ದಂಪತಿಗೆ ಕಾಂಡೋಮ್ ನೀಡಿ ಜಾಗೃತಿ

    ರಾಯಚೂರಿನಲ್ಲಿ ಝಿಕಾ ವೈರಸ್ ಪತ್ತೆ – ದಂಪತಿಗೆ ಕಾಂಡೋಮ್ ನೀಡಿ ಜಾಗೃತಿ

    ರಾಯಚೂರು: ರಾಜ್ಯದಲ್ಲೇ ಮೊದಲ ಝಿಕಾ ವೈರಸ್ (Zika Virus) ಪ್ರಕರಣ ರಾಯಚೂರಿನಲ್ಲಿ (Raichur) ಪತ್ತೆಯಾಗಿರುವ ಹಿನ್ನೆಲೆ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ರಾಜ್ಯ, ಕೇಂದ್ರ ತಂಡಗಳು ರಾಯಚೂರಿನಲ್ಲಿ ಬೀಡು ಬಿಟ್ಟಿವೆ. ಗರ್ಭಿಣಿಯರ ಮೇಲೆ ವೈರಸ್ ಹೆಚ್ಚು ಪರಿಣಾಮ ಬೀರುವುದರಿಂದ ಆರೋಗ್ಯ ಇಲಾಖೆ (Health Department)‌ ಕಾಂಡೋಮ್ (Condom) ವಿತರಣೆ ಮಾಡುತ್ತಿದೆ.

    ರಾಯಚೂರಿನ ಮಾನ್ವಿಯ ಕೋಳಿ ಕ್ಯಾಂಪ್‌ನ ಬಾಲಕಿಯಲ್ಲಿ ಝಿಕಾ ವೈರಸ್ ಪತ್ತೆಯಾಗಿರುವುದು ರಾಜ್ಯದ ಮೊದಲ ಪ್ರಕರಣವಾಗಿರುವುದರಿಂದ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹೀಗಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತರು ಕೋಳಿ ಕ್ಯಾಂಪ್ ಸುತ್ತಮುತ್ತಲ ಗ್ರಾಮಗಳಲ್ಲಿ ಸೊಳ್ಳೆಗಳ ನಿಯಂತ್ರಣ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ನಿರಂತರ ಫಾಗಿಂಗ್ ನಡೆಸಲಾಗುತ್ತಿದೆ.

    ಕೋಳಿ ಕ್ಯಾಂಪ್ ಸುತ್ತಮುತ್ತಲ 5 ಕಿ.ಮೀ ವ್ಯಾಪ್ತಿಯ ಗ್ರಾಮಗಳಲ್ಲಿ ಲಾರ್ವಾ ಸರ್ವೆ, ಗರ್ಭಿಣಿಯರ ರಕ್ತ ಪರೀಕ್ಷೆ, ಜ್ವರದ ಪ್ರಕರಣ ಪತ್ತೆ ಕಾರ್ಯ ನಡೆದಿದೆ. ಗರ್ಭಿಣಿಯರಲ್ಲಿ ಝಿಕಾ ವೈರಸ್ ಪತ್ತೆಯಾದರೆ ಹುಟ್ಟುವ ಮಗುವಿನ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಗರ್ಭಿಣಿಯರ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಜೊತೆಗೆ ಮಗುವನ್ನು ಬಯಸುವವರು ಇನ್ನೂ 6 ತಿಂಗಳು ಮುಂದೂಡಿ ಎಂದು ಜಾಗೃತಿ ಮೂಡಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ದಂಪತಿಗೆ ಕಾಂಡೋಮ್ ವಿತರಣೆ ಮಾಡುತ್ತಿದ್ದಾರೆ. ಮನೆ ಮನೆಗೆ ತೆರಳಿ ತಪಾಸಣೆ ಮಾಡುವುದರ ಜೊತೆಗೆ ಅರಿವು ಮೂಡಿಸುತ್ತಿದ್ದಾರೆ. ಇದನ್ನೂ ಓದಿ: ಗಡಿ ವಿವಾದದ ನಡುವೆಯೂ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಭೇಟಿ

    ವೈರಸ್ ಪತ್ತೆಗೆ ಕಾರಣ ತಿಳಿಯುವ ಹಿನ್ನೆಲೆ ಕೇಂದ್ರ ತಜ್ಞರ ತಂಡ, ವೈದ್ಯರು, ಅಧಿಕಾರಿಗಳು ನಿರಂತರ ಸಭೆ ನಡೆಸುತ್ತಿದ್ದಾರೆ. ಜಿಲ್ಲೆಯ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಮಲೇರಿಯಾ ವಿಭಾಗದ ವೈದ್ಯರು ಝಿಕಾ ವೈರಸ್ ನಿಂದ ಆರೋಗ್ಯದ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳು ಹಾಗೂ ನಿಯಂತ್ರಣ ಬಗ್ಗೆ ಚರ್ಚೆ ನಡೆಸಿದ್ದಾರೆ. ಗ್ರಾಮಗಳಲ್ಲಿ ಸಂಗ್ರಹಿಸಿರುವ ರಕ್ತ ಮಾದರಿಗಳನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಧಿಕಾರಿಗಳು, ವೈದ್ಯರು ವೈರಸ್ ಪತ್ತೆಯಾದ ಬಾಲಕಿ ಮನೆಗೆ ಪದೇ ಪದೇ ಬಂದು ಹೋಗುತ್ತಿರುವುದಕ್ಕೆ ಬಾಲಕಿ ಕುಟುಂಬಸ್ಥರು ಗಾಬರಿಗೊಂಡಿದ್ದಾರೆ.

    ಒಟ್ಟಿನಲ್ಲಿ ರಾಜ್ಯದಲ್ಲಿ ಪತ್ತೆಯಾದ ಮೊದಲ ಝಿಕಾ ಪ್ರಕರಣ ಅಧಿಕಾರಿಗಳನ್ನು ಅಲರ್ಟ್ ಮಾಡಿದೆ. ಕೇಂದ್ರದಿಂದ ಬಂದ ತಂಡ ರಾಯಚೂರು ಜಿಲ್ಲೆಯಲ್ಲಿನ ತ್ಯಾಜ್ಯ ವಿಲೆವಾರಿ ನಿರ್ವಹಣೆ ವೈಫಲ್ಯ, ಗ್ರಾಮೀಣ ಪ್ರದೇಶಗಳಲ್ಲಿನ ಸ್ವಚ್ಛತೆ ಕೊರತೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿದೆ. ಸೊಳ್ಳೆ ಕಚ್ಚುವುದರಿಂದ ಮಾತ್ರ ವೈರಸ್ ಹರಡುವುದರಿಂದ ಜನ ಗಾಬರಿಗೊಳ್ಳಬಾರದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಜನರಿಗೆ ಧೈರ್ಯ ನೀಡುತ್ತಿದ್ದಾರೆ. ಇದನ್ನೂ ಓದಿ: ಭಾರತ-ಚೀನಾ ಗಡಿ ಸಂಘರ್ಷ – ಅರುಣಾಚಲ ಪ್ರದೇಶದಲ್ಲಿ ವಾಯು ಗಸ್ತು ಆರಂಭಿಸಿದ ಭಾರತೀಯ ಸೇನೆ

    Live Tv

    [brid partner=56869869 player=32851 video=960834 autoplay=true]

  • ರಾಯಚೂರಿನ 5 ವರ್ಷದ ಮಗುವಿನಲ್ಲಿ ಝಿಕಾ ವೈರಸ್ ಪತ್ತೆ

    ರಾಯಚೂರಿನ 5 ವರ್ಷದ ಮಗುವಿನಲ್ಲಿ ಝಿಕಾ ವೈರಸ್ ಪತ್ತೆ

    ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಕೋಳಿ ಕ್ಯಾಂಪ್‌ನ 5 ವರ್ಷದ ಮಗುವಿನಲ್ಲಿ ಝಿಕಾ ವೈರಸ್ (Zika Virus) ಪತ್ತೆಯಾಗಿರುವುದಾಗಿ ವೈದ್ಯರು (Doctors) ತಿಳಿಸಿದ್ದಾರೆ.

    ವೈರಸ್ ಪತ್ತೆಯಾದ ಬೆನ್ನಲ್ಲೇ ಆರೋಗ್ಯ ಇಲಾಖೆ ಅಧಿಕಾರಿಗಳ (Health Department) ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದೆ. ಗ್ರಾಮದ ವಾತಾವರಣ ಬಗ್ಗೆ ಅಧ್ಯಯನವನ್ನೂ ನಡೆಸಿದೆ. ಇದನ್ನೂ ಓದಿ: ಸತತ ಎರಡನೇ ಬಾರಿ ಮುಖ್ಯಮಂತ್ರಿ ಗದ್ದುಗೆ ಏರಿದ ಭೂಪೇಂದ್ರ ಪಟೇಲ್

    5 ವರ್ಷದ ಮಗುವಿಗೆ ಜ್ವರ ಹೆಚ್ಚಾಗಿದ್ದರಿಂದ ರಾಯಚೂರಿನಿಂದ ಬಳ್ಳಾರಿಯ ರಿಮ್ಸ್ (RIMS) ಆಸ್ಪತ್ರೆಗೆ  ದಾಖಲಿಸಲಾಗಿತ್ತು. ಡೆಂಗ್ಯೂ, ಚಿಕನ್ ಗುನ್ಯಾ ಲಕ್ಷಣಗಳು ಇತ್ತೆಂದು ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದ್ರೆ ಎಲ್ಲವೂ ನೆಗೆಟಿವ್ ಬಂದಿದ್ದರಿಂದ ಮಗುವಿನ ರಕ್ತದ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಝಿಕಾ ವೈರಸ್ ಪತ್ತೆಯಾಗಿರುವುದು ತಿಳಿದುಬಂದಿತು. ಆದ್ರೆ ಮಗುವಿಗೆ ಯಾವುದೇ ಟ್ರಾವೆಲ್ ಹಿಸ್ಟರಿಯೂ ಇರಲಿಲ್ಲ. ವರದಿ ಕೈ ಸೇರುವಷ್ಟರಲ್ಲಿ ಸಂಪೂರ್ಣ ಗುಣಮುಖವಾಗಿತ್ತು. ಆರೋಗ್ಯ ಇಲಾಖೆ ಮತ್ತೊಮ್ಮೆ ಕಳುಹಿಸಿದ್ದ ಬಾಲಕಿ ಹಾಗೂ ಪೋಷಕರ ಮಾದರಿಗಳು ನೆಗೆಟಿವ್ ಬಂದಿದೆ ಎಂದು ಡಿಎಚ್‌ಒ ಡಾ.ಸುರೇಂದ್ರ ಬಾಬು ತಿಳಿಸಿದ್ದಾರೆ.

    ಸದ್ಯ ಮಗು ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡಿದೆ. ಝಿಕಾ ವೈರಸ್ ಪತ್ತೆ ಹಿನ್ನಲೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಹಾಗೂ ಸಾಂಕ್ರಾಮಿಕ ರೋಗ ತಜ್ಞರ ವಿಶೇಷ ತಂಡ ಕೋಲ್ಕತ್ತಾದಿಂದ ಬಂದಿದ್ದು ಪರಿಶೀಲನೆ ನಡೆಸಿದೆ. ಮಗು ವಾಸವಾದ ಸ್ಥಳ ಹಾಗೂ ಗ್ರಾಮದಲ್ಲಿ ಸ್ವಚ್ಚತೆ ಕಾಪಾಡುವಂತೆ ಅಧಿಕಾರಿಗಳು ಸ್ಥಳೀಯರಿಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಪತ್ರಕರ್ತರ 37ನೇ ರಾಜ್ಯ ಸಮ್ಮೇಳನಕ್ಕೆ ಡಾ.ವೀರೇಂದ್ರ ಹೆಗ್ಗಡೆಗೆ ಆಹ್ವಾನ

    ಝಿಕಾ ವೈರಸ್ ಲಕ್ಷಣಗಳು: ಸಾಮಾನ್ಯವಾಗಿ ಪ್ರಾರಂಭಿಕ ಹಂತದಲ್ಲಿ ಜ್ವರ, ತಲೆನೋವು, ಕೀಲು ನೋವು, ಕಣ್ಣು ಕೆಂಪಾಗುವುದು ಮತ್ತು ಸ್ನಾಯು ನೋವುಗಳು ಕಂಡುಬರುತ್ತದೆ. ಇದು ಸೊಳ್ಳೆ ಕಡಿತದಿಂದ ಉಂಟಾಗುವ ರೋಗವಾಗಿದೆ. ಗರ್ಭಿಣಿಯರು ಹೆಚ್ಚಾಗಿ ಜಾಗೃತಿ ವಹಿಸುವುದು ಅತ್ಯಂತ ಅಗತ್ಯವಾಗಿದೆ. ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ.

    Live Tv
    [brid partner=56869869 player=32851 video=960834 autoplay=true]

  • ನೆರೆ ರಾಜ್ಯ ಮಹಾರಾಷ್ಟ್ರದ ಪುಣೆ ವ್ಯಕ್ತಿಯಲ್ಲಿ ಝಿಕಾ ವೈರಸ್‌ ಸೋಂಕು ಪತ್ತೆ

    ನೆರೆ ರಾಜ್ಯ ಮಹಾರಾಷ್ಟ್ರದ ಪುಣೆ ವ್ಯಕ್ತಿಯಲ್ಲಿ ಝಿಕಾ ವೈರಸ್‌ ಸೋಂಕು ಪತ್ತೆ

    ಮುಂಬೈ: ಮಹಾರಾಷ್ಟ್ರದ (Maharashtra) ಪುಣೆ (Pune) ಜಿಲ್ಲೆಯ ಬವ್‌ಧಾನ್ ಪ್ರದೇಶದಲ್ಲಿ 67 ವರ್ಷದ ವ್ಯಕ್ತಿಯೊಬ್ಬರಿಗೆ ಝಿಕಾ ವೈರಸ್ (Zika Virus) ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ಸೋಂಕಿತ ವ್ಯಕ್ತಿ ನಾಸಿಕ್ ನಿವಾಸಿಯಾಗಿದ್ದು, ನವೆಂಬರ್ 6 ರಂದು ಪುಣೆಗೆ ಬಂದಿದ್ದರು. ರೋಗಿಯು ನವೆಂಬರ್ 16 ರಂದು ಜ್ವರ, ಕೆಮ್ಮು, ಕೀಲು ನೋವು ಮತ್ತು ಆಯಾಸದಿಂದ ಜಹಾಂಗೀರ್ ಆಸ್ಪತ್ರೆಗೆ ದಾಖಲಾಗಿದ್ದರು. ನವೆಂಬರ್ 18 ರಂದು ಖಾಸಗಿ ಪ್ರಯೋಗಾಲಯದಲ್ಲಿ ಅವರಿಗೆ ಝಿಕಾ ವೈರಸ್ ಇರುವುದು ಪತ್ತೆಯಾಗಿದೆ. ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ – ಅಬ್ಬರದ ಪ್ರಚಾರಕ್ಕೆ ತೆರೆ

    ಈ ಹಿಂದೆ ಅಕ್ಟೋಬರ್ 22 ರಂದು ಅವರು ಸೂರತ್‌ಗೆ ಪ್ರಯಾಣ ಬೆಳೆಸಿದ್ದರು. ನವೆಂಬರ್ 30 ರಂದು, ಆತನಿಗೆ ಝಿಕಾ ವೈರಸ್‌ ತಗುಲಿರುವುದು ದೃಢಪಟ್ಟಿದೆ. ಸದ್ಯ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಭವಿಷ್ಯದಲ್ಲಿ ಏಕಾಏಕಿ ಹರಡುವುದನ್ನು ತಗ್ಗಿಸಲು ಪುಣೆ ನಗರದಾದ್ಯಂತ ಝಿಕಾ ವೈರಸ್‌ನ ಕೀಟಶಾಸ್ತ್ರೀಯ ಸಮೀಕ್ಷೆಗೆ ಅಧಿಕಾರಿಗಳು ಆದೇಶಿಸಿದ್ದಾರೆ. ನಗರದಲ್ಲಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಝಿಕಾ ವೈರಸ್‌ ದೃಢಪಟ್ಟ ಮೂರನೇ ಪ್ರಕರಣ ಇದಾಗಿದೆ. ಇದಕ್ಕೂ ಮೊದಲು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಏಳು ವರ್ಷದ ಬಾಲಕಿಗೆ ಸೋಂಕು ತಗುಲಿತ್ತು. ಇದಕ್ಕೂ ಮೊದಲು, ಕಳೆದ ವರ್ಷ ಜುಲೈನಲ್ಲಿ ಪುಣೆಯಲ್ಲಿ ಮೊದಲ ರೋಗಿ ಪತ್ತೆಯಾಗಿದ್ದರು. ಇದನ್ನೂ ಓದಿ: TMC ನಾಯಕನ ಮನೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ – ರಾಜಕೀಯ ಕೆಸರೆರಚಾಟಕ್ಕೆ ಗ್ರಾಸವಾದ ಘಟನೆ

    1947 ರಲ್ಲಿ ಉಗಾಂಡಾದ ಕೋತಿಯಲ್ಲಿ ಮೊದಲ ಬಾರಿಗೆ ಝಿಕಾ ವೈರಸ್ ಪತ್ತೆಯಾಯಿತು. 2007 ರಲ್ಲಿ ಮೈಕ್ರೋನೇಷಿಯಾದಲ್ಲೂ ಸೋಂಕು ದೃಢಪಟ್ಟಿತ್ತು. 2015 ರಲ್ಲಿ ಲ್ಯಾಟಿನ್ ಅಮೆರಿಕಾದಲ್ಲಿ ಸೋಂಕು ಪತ್ತೆಯಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಮಹಾರಾಷ್ಟ್ರದಲ್ಲಿ 7 ವರ್ಷದ ಬಾಲಕಿಗೆ ಝಿಕಾ ವೈರಸ್

    ಮಹಾರಾಷ್ಟ್ರದಲ್ಲಿ 7 ವರ್ಷದ ಬಾಲಕಿಗೆ ಝಿಕಾ ವೈರಸ್

    ಮುಂಬೈ: ಕೊರೋನಾ ತಣ್ಣಗಾಯ್ತು ಅಂತ ನಿಟ್ಟುಸಿರು ಬಿಟ್ಟಿದ್ದ ಮಹಾರಾಷ್ಟ್ರದಲ್ಲಿ ಝಿಕಾ ವೈರಸ್ ಭೀತಿ ಶುರುವಾಗಿದೆ.

    ಪಾಲ್ಗರ್ ಜಿಲ್ಲೆಯಲ್ಲಿ 7 ವರ್ಷದ ಬಾಲಕಿಗೆ ಝಿಕಾ ವೈರಸ್ ತಗುಲಿದೆ. ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.

    2021ರ ಜುಲೈನಲ್ಲಿ ಝಿಕಾ ವೈರಸ್ ಮೊದಲ ಪ್ರಕರಣ ಪುಣೆಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದಿಂದ ಮತ್ತಷ್ಟು ಆತಂಕ ಹೆಚ್ಚಿದೆ. ಒಟ್ಟಿನಲ್ಲಿ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಸೂಕ್ತ ಚಿಕಿತ್ಸೆ ಹಾಗೂ ಮುನ್ನೆಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ.

    ರೋಗ ಲಕ್ಷಣಗಳೇನು..?
    – ಸೌಮ್ಯ ಜ್ವರ
    – ರ್ಯಾಶ್
    – ಕೆಂಪು ಕಣ್ಣು ಅಥವಾ ಕಾಂಜಂಕ್ಟಿವಿಟಿಸ್
    – ಸ್ನಾಯು ಮತ್ತು ಕೀಲು ನೋವು
    – ತಲೆನೋವು
    – ಆಯಾಸ ಅಥವಾ ಅಸ್ವಸ್ಥತೆಯ ಸಾಮಾನ್ಯ ಭಾವನೆ
    – ಹೊಟ್ಟೆ ನೋವು

    ಈ ರೋಗಲಕ್ಷಣಗಳು ಸಾಮಾನ್ಯವಾಗಿ 2-7 ದಿನಗಳವರೆಗೆ ಇರುತ್ತವೆ. ಆದರೆ ಒಮ್ಮೊಮ್ಮೆ ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಳ್ಳದಿರುವ ಸಾಧ್ಯಗಳು ಕೂಡ ಇವೆ.

    Live Tv
    [brid partner=56869869 player=32851 video=960834 autoplay=true]

  • ಕಾನ್ಪುರದಲ್ಲಿ ಝಿಕಾ ವೈರಸ್ ಪತ್ತೆ – ಮತ್ತೆ 3 ಪ್ರಕರಣ, ಸೋಂಕಿತರ ಸಂಖ್ಯೆ 91ಕ್ಕೆ ಏರಿಕೆ

    ಕಾನ್ಪುರದಲ್ಲಿ ಝಿಕಾ ವೈರಸ್ ಪತ್ತೆ – ಮತ್ತೆ 3 ಪ್ರಕರಣ, ಸೋಂಕಿತರ ಸಂಖ್ಯೆ 91ಕ್ಕೆ ಏರಿಕೆ

    ಲಕ್ನೋ: ಕಾನ್ಪುರದಲ್ಲಿ ಮತ್ತೆ ಮೂವರು ಮಂದಿಗೆ ಝಿಕಾ ವೈರಸ್ ದೃಢಪಟ್ಟಿದೆ.

    ಕಾನ್ಪುರದಲ್ಲಿ ದಿನೇ ದಿನೇ ಜಿಕಾ ವೈರಸ್ ಪ್ರಕರಣಗಳು ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆಯ ಪ್ರಕಾರ, ಇಲ್ಲಿಯವರೆಗೂ 17 ಮಂದಿ ಝಿಕಾ ವೈರಸ್‍ನಿಂದ ಚೇತರಿಸಿಕೊಂಡಿದ್ದಾರೆ. ಮತ್ತು ಒಟ್ಟು 91 ಸಕ್ರಿಯ ಪ್ರಕರಣಗಳು ವರದಿಯಾಗಿದೆ.

    ಭಾನುವಾರ ಮೂವರು ಭಾರತೀಯ ವಾಯುಪಡೆ ಸಿಬ್ಬಂದಿ ಸೇರಿದಂತೆ ಇನ್ನೂ 10 ಮಂದಿಯಲ್ಲಿ ಝಿಕಾ ವೈರಸ್ ಪತ್ತೆಯಾಗಿತ್ತು. ಒಟ್ಟು 89 ಪ್ರಕರಣಗಳಿದ್ದ ಝಿಕಾ ವೈರಸ್ ಇದೀಗ 91ಕ್ಕೆ ಏರಿಕೆಯಾಗಿದೆ. ಶನಿವಾರ 13 ಮಂದಿಯಲ್ಲಿ ಝಿಕಾ ವೈರಸ್ ಪಾಸಿಟಿವ್ ದೃಢಪಟ್ಟಿತ್ತು. ಜೊತೆಗೆ ಕನ್ನೌಜ್ ಜಿಲ್ಲೆಯಿಂದಲೂ ಒಂದು ಪ್ರಕರಣ ವರದಿಯಾಗಿತ್ತು. ಇದನ್ನೂ ಓದಿ: ವಿಚಾರಣೆ ವೇಳೆ ನ್ಯಾಯಾಧೀಶರಿಗೆ ಚಪ್ಪಲಿ ಎಸೆದ ಕೊಲೆ ಆರೋಪಿ!

    ಒಟ್ಟು 89 ಸೋಂಕಿತರಲ್ಲಿ 55 ಮಂದಿ ಪುರುಷರಾಗಿದ್ದು, 34 ಮಂದಿ ಮಹಿಳೆಯರಾಗಿದ್ದಾರೆ. ಇವರಲ್ಲಿ 23 ಮಂದಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಅಲ್ಲದೇ ಸೋಂಕಿತರಲ್ಲಿ 12 ಮಂದಿ ಭಾರತೀಯ ವಾಯುಪಡೆ (ಐಎಎಫ್) ಸಿಬ್ಬಂದಿಯರಿದ್ದು, ಇದರಲ್ಲಿ 11 ಪುರುಷರು ಮತ್ತು ಓರ್ವ ಮಹಿಳೆಯಾಗಿದ್ದಾರೆ ಎಂದು ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಶಾಕ್ ಜಿ ಅಯ್ಯರ್ ಹೇಳಿದ್ದಾರೆ.

    Mosquito

    ಆರೋಗ್ಯ ತಂಡಗಳು ಗುರುವಾರ, ಶುಕ್ರವಾರ ಮತ್ತು ಶನಿವಾರ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ 525 ಮಂದಿಯ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದು, ಅವುಗಳನ್ನು ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ವೈರಾಲಜಿ ಲ್ಯಾಬ್ ಮತ್ತು ಪುಣೆಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಪರೀಕ್ಷೆಗಾಗಿ ಕಳುಹಿಸಿದೆ. ಇದನ್ನೂ ಓದಿ: ವಿವಾಹವಾಗಲು ನಿರಾಕರಿಸಿದ್ದಕ್ಕೆ ಪ್ರೇಯಸಿಗೆ ಚಾಕುವಿನಿಂದ 18 ಬಾರಿ ಇರಿದ ಪ್ರಿಯಕರ!

    ಅಕ್ಟೋಬರ್ 23 ಐಎಎಫ್‍ನ ವಾರಂಟ್ ಅಧಿಕಾರಿಯೊಬ್ಬರಲ್ಲಿ ಝಿಕಾ ವೈರಸ್ ಮೊದಲ ಬಾರಿಗೆ ಪತ್ತೆಯಾಯಿತು. ಇದೀಗ ನಗರದಲ್ಲಿ ಒಟ್ಟು 3,283 ಮಂದಿಯ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಅವುಗಳನ್ನು ಲಕ್ನೋದ ಕೆಜಿಎಂಯು ಮತ್ತು ಪುಣೆಯ ಎನ್‍ಐವಿಯ ವೈರಾಲಜಿ ಲ್ಯಾಬ್‍ಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ.

    ರೋಗದ ಹರಡುವಿಕೆಯನ್ನು ಪರಿಶೀಲಿಸಲು, ಆರೋಗ್ಯ ತಂಡಗಳು ಆಂಟಿ-ಲಾರ್ವಾ ಸಿಂಪರಣೆ ಮತ್ತು ಜ್ವರ ರೋಗಿಗಳನ್ನು ಗುರುತಿಸುವುದು, ಗಂಭೀರವಾಗಿ ಅನಾರೋಗ್ಯ ಪೀಡಿತರು ಮತ್ತು ಗರ್ಭಿಣಿಯರನ್ನು ಪರೀಕ್ಷಿಸುವುದು ಸೇರಿದಂತೆ ನೈರ್ಮಲ್ಯ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿವೆ. ಕಣ್ಗಾವಲು ಹೆಚ್ಚಿಸಲು ಮತ್ತು ಝಿಕಾ ವೈರಸ್‍ಗಾಗಿ ಮನೆ-ಮನೆಗೆ ಮಾದರಿ ಮತ್ತು ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಅಧಿಕಾರಿಗಳನ್ನು ಕೇಳಲಾಗಿದೆ.

  • ಮಹಾರಾಷ್ಟ್ರಕ್ಕೆ ಎಂಟ್ರಿ ಕೊಟ್ಟ ಜಿಕಾ ವೈರಸ್ – ಪುಣೆಯ ಮಹಿಳೆಯಲ್ಲಿ ಸೋಂಕು ಪತ್ತೆ

    ಮಹಾರಾಷ್ಟ್ರಕ್ಕೆ ಎಂಟ್ರಿ ಕೊಟ್ಟ ಜಿಕಾ ವೈರಸ್ – ಪುಣೆಯ ಮಹಿಳೆಯಲ್ಲಿ ಸೋಂಕು ಪತ್ತೆ

    ಮುಂಬೈ: ಮಹಾರಾಷ್ಟ್ರದ ಪುಣೆಯ 50 ವರ್ಷದ ಮಹಿಳೆ ಜಿಕಾ ವೈರಸ್ ಸೋಂಕಿಗೆ ತುತ್ತಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮಹಿಳೆ ಪುಣೆ ಜಿಲ್ಲೆಯ ಪುರಂದರ ತೆಹ್‍ಸಿಲ್ ನ ಬೆಲಸರ್ ನಿವಾಸಿಯಾಗಿದ್ದಾರೆ. ಇದು ಮಹಾರಾಷ್ಟ್ರದಲ್ಲಿ ಕಂಡು ಬಂದ ಮೊದಲ ಜಿಕಾ ವೈರಸ್ ಪ್ರಕರಣ ಎಂದು ಆರೋಗ್ಯ ಸಚಿವಾಲಯ ಖಚಿತಪಡಿಸಿದೆ.

    ಸದ್ಯ ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು, ಕುಟುಂಬಸ್ಥರಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಅನಾರೋಗ್ಯ ಹಿನ್ನೆಲೆ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿನ ಜಿಕಾ ವೈರಸ್ ಸೋಂಕು ತಗುಲಿರೋದು ತಿಳಿದು ಬಂದಿದೆ.

    ಇನ್ನೂ ಮಹಿಳೆ ಸೋಂಕಿಗೆ ತುತ್ತಾಗಿರುವ ವಿಷಯ ತಿಳಿಯುತ್ತಲೇ ಆರೋಗ್ಯಾಧಿಕಾರಿಗಳು ಬೆಲಸರ್ ಗ್ರಾಮಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಿ, ಗ್ರಾಮಸ್ಥರು ಆರೋಗ್ಯದ ಮಾಹಿತಿ ಕಲೆಹಾಕುತ್ತಿದ್ದಾರೆ. ಗ್ರಾಮದ ಮುಖಂಡರ ಜೊತೆ ಮಾತುಕತೆ ನಡೆಸಿ, ಎಲ್ಲರೂ ಎಚ್ಚರಿಕೆಯಿಂದಿರಬೇಕು. ಯಾವುದೇ ರೀತಿಯ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಆರೋಗ್ಯಾಧಿಕಾರಿಳು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಜಿಕಾ ವೈರಸ್ ಲಸಿಕೆಗೆ ಪೇಟೆಂಟ್ ಸಿಕ್ಕಿದ ವಿಶ್ವದ ಮೊದಲ ಕಂಪನಿ ನಮ್ಮದು – ಭಾರತ್ ಬಯೋಟೆಕ್

  • ಕೊರೊನಾ ಕೇಸ್‌ ಇಳಿಯುತ್ತಿಲ್ಲ, ಕೇರಳದಲ್ಲಿ ಪತ್ತೆಯಾಗಿದೆ ಝಿಕಾ‌ ವೈರಸ್ – ಎಲ್ಲ ಜಿಲ್ಲೆಗಳಲ್ಲಿ ಹೈಅಲರ್ಟ್‌

    ಕೊರೊನಾ ಕೇಸ್‌ ಇಳಿಯುತ್ತಿಲ್ಲ, ಕೇರಳದಲ್ಲಿ ಪತ್ತೆಯಾಗಿದೆ ಝಿಕಾ‌ ವೈರಸ್ – ಎಲ್ಲ ಜಿಲ್ಲೆಗಳಲ್ಲಿ ಹೈಅಲರ್ಟ್‌

    ತಿರುವನಂತಪುರಂ: ಒಂದೆಡೆ ಇನ್ನೂ ನಿಯಂತ್ರಣಕ್ಕೆ ಬಾರದ ಕೊರೊನಾ ವೈರಸ್‌, ಇನ್ನೊಂದೆಡೆ ಹೊಸ ವೈರಸ್‌ ಕಾಟ ಕೇರಳ ರಾಜ್ಯವನ್ನು ಕಾಡತೊಡಗಿದೆ. ಕೇರಳದಲ್ಲಿ ಇದೇ ಮೊದಲ ಬಾರಿಗೆ ಝಿಕಾ ವೈರಸ್‌ (Zika Virus) ಪತ್ತೆಯಾಗಿದ್ದು, ಗರ್ಭಿಣಿಯೊಬ್ಬರ ಟೆಸ್ಟ್‌ ರಿಪೋರ್ಟ್‌ ಪಾಸಿಟಿವ್‌ ಬಂದಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಹೇಳಿದ್ದಾರೆ. ಕೇರಳದಲ್ಲಿ ಇಂದು 13,772 ಪ್ರಕರಣಗಳು ಪತ್ತೆಯಾಗಿದ್ದು, 142 ಮಂದಿ ಸಾವನ್ನಪ್ಪಿದ್ದಾರೆ. ಕೇರಳದ ಟೆಸ್ಟ್‌ ಪಾಸಿಟಿವಿಟಿ ರೇಟ್‌ 10.83 ಇದೆ. ಇದರ ಬೆನ್ನಲ್ಲೆ ಝಿಕಾ ವೈರಸ್‌ ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ.

    ತಿರುವನಂತಪುರನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಪಾರಶಾಲ ಎಂಬಲ್ಲಿಯ 24 ವರ್ಷದ ಗರ್ಭಿಣಿಯಲ್ಲಿ ಝಿಕಾ ವೈರಸ್‌ ಪತ್ತೆಯಾಗಿದೆ. ಕಳೆದ ಜೂನ್‌ 28ರಂದು ಈ ಮಹಿಳೆಗೆ ಜ್ವರ, ತಲೆನೋವು ಕಾಣಿಸಿಕೊಂಡಿತ್ತು. ಈ ವೇಳೆ ನಡೆದ ವೈದ್ಯ ಪರಿಶೋಧನೆಯಲ್ಲಿ ಝಿಕಾ ಆರಂಭಿಕ ಹಂತ ಕಾಣಿಸಿಕೊಂಡಿತ್ತು. ಬಳಿಕ ಇವರ ಸ್ಯಾಂಪಲನ್ನು ಪುಣೆಯ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ (NIV) ಗೆ ಕಳಿಸಲಾಗಿತ್ತು. ಇದರ ವರದಿ ಬಂದಿದ್ದು, ಈ ಗರ್ಭಿಣಿಯ ಸ್ಯಾಂಪಲ್‌ ಪಾಸಿಟಿವ್‌ ಆಗಿದೆ. ಇದನ್ನೂ ಓದಿ: ಬ್ಲ್ಯಾಕ್ ಫಂಗಸ್‍ಗೆ ಬೆಂಗಳೂರಿನಲ್ಲಿ 11ರ ಬಾಲಕ ಸಾವು

    ಸದ್ಯ ಈ ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು ಜುಲೈ 7ರಂದು ಅವರು ಮಗುವಿಗೆ ಜನ್ಮ ನೀಡಿದ್ದಾರೆ. ಇವರು ರಾಜ್ಯವನ್ನು ಬಿಟ್ಟು ಬೇರೆಲ್ಲೂ ಪ್ರಯಾಣ ಮಾಡಿಲ್ಲ. ಇವರ ಮನೆ ಕೇರಳ ತಮಿಳುನಾಡು ಗಡಿಭಾಗದಲ್ಲಿದೆ. ಒಂದು ವಾರ ಹಿಂದೆ ಈ ಮಹಿಳೆಯ ತಾಯಿಯಲ್ಲೂ ಇದೇ ಗುಣ ಲಕ್ಷಣಗಳು ಕಾಣಿಸಿಕೊಂಡಿತ್ತು.

    ಇದಲ್ಲದೆ ಇದೇ ಗುಣಲಕ್ಷಣಗಳು ಕಾಣಿಸಿಕೊಂಡ ತಿರುವನಂತಪುರಂ ಜಿಲ್ಲೆಯ 19 ಜನರ ಸ್ಯಾಂಪಲ್‌ ಕೂಡಾ ಪುಣೆ ಎನ್‌ಐವಿಗೆ ರವಾನೆಯಾಗಿದೆ. ಇದರಲ್ಲಿ 13 ಸ್ಯಾಂಪಲ್‌ ಪಾಸಿಟಿವ್‌ ಆಗುವ ಸಾಧ್ಯತೆಯಿದೆ. ಆದರೆ ಇದರ ಖಚಿತ ಫಲಿತಾಂಶ ಇನ್ನಷ್ಟೇ ಬರಬೇಕಿದೆ ಎಂದು ಸಚಿವೆ ವೀಣಾ ಜಾರ್ಜ್‌ ತಿಳಿಸಿದ್ದಾರೆ.

    ಆರಂಭಿಕ ಹಂತದಲ್ಲೇ ಆರೋಗ್ಯ ಇಲಾಖೆ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಈಗ ವೈರಸ್‌ ಕಾಣಿಸಿಕೊಂಡ ಸ್ಥಳದಿಂದ ಈಡಿಸ್‌ ಸೊಳ್ಳೆಗಳನ್ನು ಪಿಸಿಆರ್‌ ಟೆಸ್ಟ್‌ಗೆ ಸ್ಯಾಂಪಲ್‌ ಸಂಗ್ರಹಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲ ಜಿಲ್ಲೆಗಳಲ್ಲೂ ಅಲರ್ಟ್‌ ಆಗಿರುವಂತೆ ನಿರ್ದೇಶನ ನೀಡಲಾಗಿದೆ.

    Zika Virus (ಝಿಕಾ ವೈರಸ್)‌ ಬರುವುದು ಹೇಗೆ?: ಇದು ಸೊಳ್ಳೆಗಳಿಂದ ಹರಡುವ ವೈರಸ್.‌ ಈಡಿಸ್‌ ಸೊಳ್ಳೆಗಳೇ ಝಿಕಾ ವೈರಸ್‌ನ ಮೂಲಕಾರಣ. ಸಾಧಾರಣವಾಗಿ ಹಗಲುಹೊತ್ತಿನಲ್ಲೇ ಈ ಸೊಳ್ಳೆಗಳು ಕಡಿಯುತ್ತವೆ.

    ರೋಗ ಲಕ್ಷಣಗಳೇನು?: ಜ್ವರ, ತಲೆ ನೋವು, ಕೀಲು ನೋವು, ಸ್ನಾಯು ನೋವು ಇದರ ಪ್ರಮುಖ ಲಕ್ಷಣಗಳು. ಸಾಧಾರಣವಾಗಿ 2ರಿಂದ 7 ದಿನಗಳ ಕಾಲ ಈ ಲಕ್ಷಣ ಕಾಣಿಸುತ್ತದೆ. ಸೊಳ್ಳೆ ನಿಮ್ಮನ್ನು ಕಚ್ಚಿದ ತಕ್ಷಣ ಲಕ್ಷಣಗಳು ಕಾಣಿಸಲ್ಲ. ಆದರೆ 3ರಿಂದ 12 ದಿನಗಳ ಅವಧಿಯೊಳಗೆ ದೇಹ ಹೊಕ್ಕ ವೈರಸ್‌ ಗುಣಲಕ್ಷಣಗಳನ್ನು ತೋರಿಸಲು ಆರಂಭಿಸುತ್ತದೆ. ಈ ವೈರಸ್‌ ಬಾಧಿಸಿದರೆ ಮರಣವನ್ನಪ್ಪುವ ಸಾಧ್ಯತೆ ತೀರಾ ಕಡಿಮೆ.

    ಆದರೆ ಗರ್ಭಿಣಿಯರು ಎಚ್ಚರದಿಂದಿರಬೇಕು. ಗರ್ಭಾವಸ್ಥೆಯ ವೇಳೆ ಝಿಕಾ ವೈರಸ್‌ ಕಾಣಿಸಿದರೆ ಹುಟ್ಟುವ ಮಗು ಅಂಗವೈಕಲ್ಯಕ್ಕೀಡಾಗಬಹುದು. ಕೆಲವೊಮ್ಮೆ ಗರ್ಭಪಾತಕ್ಕೂ ಕಾರಣವಾಗಬಹುದು. ಮಕ್ಕಳು ಹಾಗೂ ಹಿರಿಯರಿಗೆ ವೈರಸ್‌ ತಗುಲಿದರೆ ನರ ಸಂಬಂಧಿತ ಸಮಸ್ಯೆ ಕಾಡುವ ಸಾಧ್ಯತೆಯೂ ಇದೆ.

    ಔಷಧವಿಲ್ಲ, ಆದರೆ ಎಚ್ಚರವಿರಲಿ..!: ಸದ್ಯ ಝಿಕಾ ವೈರಸ್‌ ಬಾಧಿಸಿದರೆ ರೋಗ ನಿಯಂತ್ರಣಕ್ಕೆ ಅಥವಾ ಚಿಕಿತ್ಸೆಗೆ ಯಾವುದೇ ಔಷಧಿ ಲಭ್ಯವಿಲ್ಲ. ಆದರೆ ರೋಗ ಲಕ್ಷಣ ಇರುವವರಿಗೆ ಸಾಕಷ್ಟು ವಿಶ್ರಾಂತಿ ಅಗತ್ಯ. ಹೆಚ್ಚು ನೀರು ಕುಡಿಯಬೇಕು. ಇಷ್ಟು ಮಾಡಿದ ಮೇಲೂ ರೋಗ ಲಕ್ಷಣ ಕಡಿಮೆಯಾಗದಿದ್ದರೆ ಚಿಕಿತ್ಸೆಗೆ ವೈದ್ಯರನ್ನು ಭೇಟಿಯಾಗಲೇಬೇಕು. ಝಿಕಾ ಬಾಧಿತ ಪ್ರದೇಶಗಳಲ್ಲಿ ಗರ್ಭಿಣಿಯರಿದ್ದರೆ ವೈದ್ಯರನ್ನು ಭೇಟಿಯಾಗಿ ಸಮಾಲೋಚನೆ ಮಾಡುವುದು ಒಳಿತು. ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳುವುದೇ ಝಿಕಾ ವೈರಸ್‌ನಿಂದ ದೂರವಿರಲು ಪರಿಣಾಮಕಾರಿ ಆಯುಧ. ಸಾಧ್ಯವಾದಷ್ಟು ಮಕ್ಕಳು, ಗರ್ಭಿಣಿಯರು ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಬೇಕು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಮನೆಯೊಳಗೆ ಬೆಳೆಸುವ ಸಸ್ಯಗಳು, ಫ್ರಿಡ್ಜ್‌ ಟ್ರೇಗಳನ್ನು ವಾರಕ್ಕೊಮ್ಮೆ ಕ್ಲೀನ್‌ ಮಾಡಿಕೊಳ್ಳಬೇಕು.

    ಝಿಕಾ ವೈರಸ್‌ ಎಲ್ಲಿಂದ ಬಂತು?: 1947ರಲ್ಲಿ ಉಗಾಂಡದಲ್ಲಿ ಕೋತಿಗಳಲ್ಲಿ ಮೊದಲ ಬಾರಿ ಝಿಕಾ ವೈರಸ್‌ ಪತ್ತೆಯಾಯಿತು. ಇದಾಗಿ 5 ವರ್ಷದ ಬಳಿಕ ಮನುಷ್ಯರಲ್ಲಿ ಝಿಕಾ ವೈರಸ್‌ ಕಾಣಿಸಿತು.

    1960ರ ಬಳಿಕ ವಿಶ್ವದ ಹಲವೆಡೆ ಈ ವೈರಸ್‌ ವಿರಳವಾಗಿ ಕಾಣಿಸಿಕೊಂಡಿತು. 2007ರಲ್ಲಿ ಪೆಸಿಫಿಕ್‌ನ ಯಾಪ್‌ ದ್ವೀಪದಲ್ಲಿ ಮೊದಲ ಬಾರಿಗೆ ಭಾರೀ ಪ್ರಮಾಣದಲ್ಲಿ ಝಿಕಾ ವೈರಸ್‌ ಪ್ರಕರಣಗಳು ಕಾಣಿಸಿಕೊಂಡಿತು. 2015ರಲ್ಲಿ ಬ್ರೆಜಿಲ್‌ನಲ್ಲಿ ಪೂರ್ಣಪ್ರಮಾಣದಲ್ಲಿ ಬೆಳೆಯದ ಸಣ್ಣ ಗಾತ್ರದ ತಲೆ ಹಾಗೂ ಮೆದುಳಿನ ಜೊತೆ ಮಕ್ಕಳು ಹುಟ್ಟಿದಾಗ ಈ ವೈರಸ್‌ನ ತೀವ್ರತೆ ಜಗತ್ತಿಗೆ ಅರಿವಾಯಿತು.

    ಭಾರತದಲ್ಲಿ ಕಾಣಿಸಿಕೊಂಡಿದ್ದು ಯಾವಾಗ?: 2017ರ ಮೇ 15ರಂದು ಗುಜರಾತ್‌ನ ಅಹಮದಾಬಾದ್‌ ಜಿಲ್ಲೆಯ ಬಾಪೂನಗರ ಪ್ರದೇಶದಲ್ಲಿ ಮೂರು ಪ್ರಕರಣಗಳು ಪತ್ತೆಯಾಗಿದೆ ಎಂದು ಭಾರತದ ಆರೋಗ್ಯ ಸಚಿವಾಲಯ ಖಚಿತಪಡಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಹೇಳಿತ್ತು.

    2017ರ ಜುಲೈ ತಿಂಗಳಲ್ಲಿ ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಆರೋಗ್ಯ ಇಲಾಖೆ, ಭಾರತದಲ್ಲಿ ಒಟ್ಟು 4 ಪ್ರಕರಣಗಳು ಪತ್ತೆಯಾಗಿದೆ. 4ನೇ ಪ್ರಕರಣ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ಉತ್ತರ ನೀಡಿತ್ತು.

    ಇದಾದ ಬಳಿಕ 2018ರಲ್ಲಿ ರಾಜಸ್ಥಾನದ ಜೈಪುರದಲ್ಲಿ 80 ಜನರಲ್ಲಿ ಕಾಣಿಸಿಕೊಂಡಿತ್ತು. ಇದು ಭಾರತದಲ್ಲಿ ಇದುವರೆಗಿನ ಅತ್ಯಧಿಕ ಝಿಕಾ ವೈರಸ್ ಕಾಣಿಸಿಕೊಂಡ ಪ್ರಕರಣವಾಗಿದೆ.

  • ರಾಜಸ್ಥಾನದ 22 ಜನರಲ್ಲಿ ಭಯಾನಕ ಜಿಕಾ ವೈರಸ್ ಪತ್ತೆ

    ರಾಜಸ್ಥಾನದ 22 ಜನರಲ್ಲಿ ಭಯಾನಕ ಜಿಕಾ ವೈರಸ್ ಪತ್ತೆ

    ಜೈಪುರ: ನಗರದ 22 ಜನರಲ್ಲಿ ಭಯಾನಕ ಜಿಕಾ ವೈರಸ್ ಪತ್ತೆಯಾಗಿದ್ದು, ರಾಜಸ್ಥಾನ ಮತ್ತು ಬಿಹಾರ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    ಸೆಪ್ಟೆಂಬರ್ 24ರಂದು ಓರ್ವ ಪುರುಷ ಮತ್ತು ಮಹಿಳೆಯ ರಕ್ತದ ಮಾದರಿಯ ತಪಾಸಣೆಯಲ್ಲಿ ಜಿಕಾ ವೈರಸ್ ಇರೋದು ಬೆಳಕಿಗೆ ಬಂದಿದೆ. ಈ ಇಬ್ಬರ ನೆರೆಹೊರೆಯ ಜನರ ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದೆ. ಈಗಾಗಲೇ 7 ಜನರು ಜಿಕಾ ವೈರಸ್ ನಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ.

    ಇತ್ತ ಬಿಹಾರದ 38 ಜಿಲ್ಲೆಯಲ್ಲಿಯೂ ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷನೆ ಮಾಡಿದೆ. ಬಿಹಾರ ರಾಜ್ಯದ ವಿದ್ಯಾರ್ಥಿಯೋರ್ವ ಆಗಸ್ಟ್ 28ರಿಂದ ಸೆಪ್ಟೆಂಬರ್ 12ರವರೆಗೆ ಜೈಪುರನಲ್ಲಿ ನಡೆದ ಪರೀಕ್ಷೆಗೆ ಹಾಜರಾಗಿದ್ದನು. ಈ ಹಿನ್ನೆಲೆಯಲ್ಲಿ ಆತನಿಗೆ ಜ್ವರ ಕಾಣಿಸಿಕೊಂಡಿದ್ದರಿಂದ, ವಿದ್ಯಾರ್ಥಿಯ ಕುಟುಂಬಸ್ಥರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ.

    ಜಿಕಾ ವೈರಸ್ ಸೋಂಕು ಕಂಡು ಬಂದ ರೋಗಿಗಳನ್ನು ಜೈಪುರ ನಗರದ ಎಸ್‍ಎಂಎಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 7 ವೈದ್ಯರ ತಂಡ ಜಿಕಾ ವೈರಸ್ ಶಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಜೈಪುರದ ಆರು ವಾರ್ಡ್ ಗಳಲ್ಲಿ 179 ಮೆಡಿಕಲ್ ಟೀಂ ವೈದ್ಯರ ಜನರ ತಪಾಸಣೆಯಲ್ಲಿ ನಿರತವಾಗಿವಾಗಿದೆ. ಗರ್ಭಿಣಿ, ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ಗಮನ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಇತ್ತ ಜೈಪುರ ಕಾರ್ಪೋರೇಷನ್ ಸಿಬ್ಬಂದಿ ಸಹ 2000 ಕಂಟೇನರ್ ಗಳ ಮೂಲಕ ನಗರದಾದ್ಯಂತ ವಾಯು ವಿಶ್ರಿತ ಔಷಧಿ ಸಿಂಪಡನೆಯಲ್ಲಿ ನಿರತರಾಗಿದ್ದಾರೆ.

    ಒಟ್ಟು 89 ದೇಶಗಳಲ್ಲಿ ಜಿಕಾ ವೈರಸ್ ಕಂಡು ಬಂದಿದ್ದು, 2017ರ ಫೆಬ್ರವರಿಯಲ್ಲಿ ಅಹಮದಾಬಾದ್ ಮೂಲದ ವ್ಯಕ್ತಿಯೊಬ್ಬರಲ್ಲಿ ಕಂಡು ಬಂದಿತ್ತು. ಜುಲೈ 2017ರಲ್ಲಿ ತಮಿಳುನಾಡು ರಾಜ್ಯದ ಕೃಷ್ಣಗಿರಿಯ ಜಿಲ್ಲೆಯಲ್ಲಿ ಎರಡನೇ ಪ್ರಕರಣ ಬೆಳಕಿಗೆ ಬಂದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗರ್ಭಿಣಿಯರೇ ಎಚ್ಚರ: ರಾಜ್ಯದಲ್ಲಿ ಝೀಕಾ ಸೋಂಕಿನ ಭೀತಿ- ಮುನ್ನೆಚ್ಚರಿಕಾ ಕ್ರಮಕ್ಕೆ ಆಸ್ಪತ್ರೆಗಳಿಗೆ ಸುತ್ತೋಲೆ

    ಗರ್ಭಿಣಿಯರೇ ಎಚ್ಚರ: ರಾಜ್ಯದಲ್ಲಿ ಝೀಕಾ ಸೋಂಕಿನ ಭೀತಿ- ಮುನ್ನೆಚ್ಚರಿಕಾ ಕ್ರಮಕ್ಕೆ ಆಸ್ಪತ್ರೆಗಳಿಗೆ ಸುತ್ತೋಲೆ

    ಬೆಂಗಳೂರು: ಝೀಕಾ.. ಇದು ಡೆಂಘೀ, ಮಲೇರಿಯಾಗಿಂತಲೂ ಭಯಾನಕ. ಒಂದು ವೇಳೆ ಝೀಕಾ ಸೋಂಕು ಗರ್ಭಿಣಯರಿಗೆ ಹರಡಿದ್ರೆ ಹುಟ್ಟೋ ಮಕ್ಕಳು ಜೀವನಪರ್ಯಂತ ಬುದ್ಧಿಮಾಂದ್ಯರಾಗ್ತಾರೆ. ನಮ್ಮ ರಾಜ್ಯದಲ್ಲೂ ಝೀಕಾ ಸೋಂಕಿನ ಭೀತಿ ಎದುರಾಗಿದೆ. ಅದಕ್ಕೆ ಕಾರಣ ಪಕ್ಕದ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಝೀಕಾ ವೈರಸ್. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಿದೆ.

    ಗರ್ಭಿಣಿಯರಿಗೆ ಜ್ವರವಿದ್ರೆ ತಕ್ಷಣವೇ ಎಲ್ಲಾ ಸ್ಯಾಂಪಲ್‍ಗಳನ್ನು ನಿಮ್ಹಾನ್ಸ್ ಮತ್ತು ಮಣಿಪಾಲ ಆಸ್ಪತ್ರೆಗೆ ಕಳುಹಿಸಿ ಝೀಕಾ ವೈರಸ್ ಟೆಸ್ಟ್ ಮಾಡಿಸುವಂತೆ ಸೂಚಿಸಿದೆ. ಈ ವೈರಸ್‍ನಿಂದ ಮಗುವಿನ ಮೆದುಳು ಬೆಳವಣಿಗೆ ಆಗದೆ ಇರೋದ್ರಿಂದ ಸ್ಕ್ಯಾನಿಂಗ್ ರಿಪೋರ್ಟ್ ಬಗ್ಗೆ ನಿಗಾ ವಹಿಸುವಂತೆ ಸೂಚಿಸಲಾಗಿದೆ.

    ಏರ್‍ಪೋರ್ಟ್ ಮತ್ತು ತಮಿಳುನಾಡು-ಕರ್ನಾಟಕ ಗಡಿ, ತಮಿಳರು ಹೆಚ್ಚಾಗಿ ವಾಸಿಸುವ ಕಾಲೋನಿಗಳಲ್ಲಿ ನಿಗಾ ವಹಿಸುವಂತೆ ನಿರ್ದೇಶಿಸಲಾಗಿದೆ. ಜೊತೆಗೆ ತಮಿಳರ ಏರಿಯಾಗಳಿಗೆ ತೆರಳಿ ಪರಿಶೀಲಿಸುವಂತೆಯೂ ಸೂಚಿಸಲಾಗಿದೆ. ಆದ್ರೆ ಸಮಾಧಾನಕಾರಿ ಸಂಗತಿ ಅಂದ್ರೆ ಇದುವೆರೆಗೆ ನಮ್ಮ ರಾಜ್ಯದಲ್ಲಿ ಝೀಕಾ ಪಾಸಿಟಿವ್ ಕಂಡುಬಂದಿಲ್ಲ. ಆದರೂ ಮಾದರಿ ಪರೀಕ್ಷೆಗೆ ಸೂಚಿಸಿದ್ದೇವೆ ಅಂತಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಷರೀಫ್ ಹೇಳಿದ್ದಾರೆ.