Tag: Zhihui

  • ಮೀರಾಬಾಯಿ ಗೆದ್ದಿರುವ ಬೆಳ್ಳಿ ಪದಕ ಚಿನ್ನದ್ದಾಗುವ ಸಾಧ್ಯತೆ

    ಮೀರಾಬಾಯಿ ಗೆದ್ದಿರುವ ಬೆಳ್ಳಿ ಪದಕ ಚಿನ್ನದ್ದಾಗುವ ಸಾಧ್ಯತೆ

    ಟೋಕಿಯೋ: ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ವೇಟ್‍ಲಿಫ್ಟರ್ ಮೀರಾಬಾಯಿ ಅವರ ಬೆಳ್ಳಿ ಪದಕ ಇದೀಗ ಚಿನ್ನದ ಪದಕವಾಗುವ ಸಾಧ್ಯತೆಯೊಂದು ದಟ್ಟವಾಗಿದೆ.

    ಟೋಕಿಯೋ ಒಲಿಂಪಿಕ್ಸ್‌ನಲ್ಲಿ 49 ಕೆ.ಜಿ ವಿಭಾಗದ ವೇಟ್‍ಲಿಫ್ಟಿಂಗ್‍ನಲ್ಲಿ ಚೀನಾದ ಹೊ ಜಿಹೂಹು ಒಟ್ಟು 210 ಕೆಜಿ (94+116 ಕೆಜಿ) ಭಾರ ಎತ್ತಿ ಚಿನ್ನದ ಪದಕ ಬೇಟೆಯಾಡಿದರೆ, ಮೀರಾಬಾಯಿ ಚಾನು 202 ಕೆಜಿ (87+115 ಕೆಜಿ) ಭಾರ ಎತ್ತಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಇಂಡೋನೇಷ್ಯಾದ ಐಸಾಹ್ ವಿಂಡಿ ಕಾಂಟಿಕಾ ವಿಂಡಿ 194 ಕೆಜಿ (84+110ಕೆಜಿ) ಕಂಚಿನ ಪದಕ ಪಡೆದಿದ್ದರು. ಆದರೆ ಇದೀಗ ಚೀನಾದ ಹೊ ಜಿಹೂಹು ಡೋಪಿಂಗ್ ಪರೀಕ್ಷೆಯಲ್ಲಿ ಫೈಲ್ ಆಗಿರುವುದರಿಂದಾಗಿ ಅವರು ಅನರ್ಹರಾಗಿ ಅವರ ಬಳಿಕ ದ್ವೀತಿಯ ಸ್ಥಾನ ಪಡೆದ ಮೀರಾಬಾಯಿಗೆ ಚಿನ್ನದ ಪದಕ ಸಿಗುವ ಕುರಿತು ವರದಿಯಾಗಿದೆ.

    ಟೋಕಿಯೋ ಒಲಿಂಪಿಕ್ಸ್ ಸಮಿತಿ ತಿಳಿಸಿರುವಂತೆ, ಹೊ ಜಿಹೂಹು ಮೊದಲ ಡೋಪಿಂಗ್ ಪರೀಕ್ಷೆಯಲ್ಲಿ ಫೈಲ್ ಆಗಿದ್ದು, ಅವರು ಸ್ಪರ್ಧೆಗು ಮುಂಚೆ ಯಾವುದಾದರು ಔಷಧಿಯನ್ನು ತೆಗೆದುಕೊಂಡಿದ್ದಾರಾ ಎಂದು ತಿಳಿಯಲು ಎರಡನೇ ಪರೀಕ್ಷೆ ನಡೆಸಲು ತೀರ್ಮಾನಿಸಿದೆ.

    ಟೋಕಿಯೋ ಒಲಿಂಪಿಕ್ಸ್‌ನಲ್ಲಿ 49 ಕೆ.ಜಿ ವಿಭಾಗದ ವೇಟ್‍ಲಿಫ್ಟಿಂಗ್‍ನಲ್ಲಿ 26 ವರ್ಷದ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದರು. ಈ ಮೂಲಕ ಯಶಸ್ವಿಯಾಗಿ ತನ್ನ ಸ್ಪರ್ಧೆ ಮುಗಿಸಿರುವ ಮೀರಾಬಾಯಿ ಚಾನು ಇಂದು ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಅವರು ಬರುತ್ತಿದ್ದಂತೆ ದೇಶದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಇದನ್ನೂ ಓದಿ: ಬೆಳ್ಳಿ ಪದಕ ಗೆದ್ದ ಮೀರಾಬಾಯಿಗೆ ಡೊಮಿನೊಸ್ ಕಡೆಯಿಂದ ಜೀವನ ಪೂರ್ತಿ ಪಿಜ್ಜಾ

    49 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗಳಿಸಿ ಕೊಟ್ಟ ಕೀರ್ತಿಗೆ ಭಾಜನರಾಗಿದ್ದಾರೆ. 84 ಕೆಜಿ ಮತ್ತು 87 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿದ ಮಿರಾಬಾಯ್ ಚಾನು 89 ಕೆಜಿ ಭಾರ ಎತ್ತುವಲ್ಲಿ ವಿಫಲರಾದರು. ಆದರೆ ಚೀನಾದ ಸ್ಪರ್ಧಿ ಜಿಹೂಹು 94 ಕೆಜಿ ಭಾರ ಎತ್ತಿ ಒಲಿಂಪಿಕ್ ದಾಖಲೆ ಬರೆದರು. ಇದು ಒಲಿಂಪಿಕ್ಸ್‍ನಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತದ ಶ್ರೇಷ್ಠ ಸಾಧನೆಯಾಗಿದೆ. ಈ ಹಿಂದೆ ಸಿಡ್ನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದರು. 69 ಕೆಜಿ ವಿಭಾಗದಲ್ಲಿ ಕರ್ಣಂ ಮಲ್ಲೇಶ್ವರಿ ಅವರು ಕಂಚಿನ ಪದಕ ಗಳಿಸಿದ್ದರು.