Tag: zebra cross

  • ತಾಯಿಗೆ ಡಿಕ್ಕಿ ಹೊಡೆದ ಕಾರಿಗೆ ಒದ್ದ ಬಾಲಕ- ವಿಡಿಯೋ ವೈರಲ್

    ತಾಯಿಗೆ ಡಿಕ್ಕಿ ಹೊಡೆದ ಕಾರಿಗೆ ಒದ್ದ ಬಾಲಕ- ವಿಡಿಯೋ ವೈರಲ್

    – ಬಾಲಕನ ತಾಯಿ ಪ್ರೀತಿಗೆ ನೆಟ್ಟಿಗರು ಫಿದಾ

    ಚಾಂಗ್ಕಿಂಗ್: ತಾಯಿಗೆ ಕಾರು ಡಿಕ್ಕಿ ಹೊಡೆದ ನಂತರ ಪುಟ್ಟ ಬಾಲಕ ಸಿಟ್ಟಿನಿಂದ ಕಾರಿಗೆ ಒದೆಯುವ ಮೂಲಕ ತಾಯಿಯ ಮೇಲಿನ ಪ್ರೀತಿಯನ್ನು ಹೊರಹಾಕಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಚೀನಾದ ಚಾಂಗ್ಕಿಂಗ್ ನಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ತಾಯಿ ಝೀಬ್ರಾ ಕ್ರಾಸ್ ಮೂಲಕ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ಆಗ ತಾಯಿ ನೆಲಕ್ಕೆ ಬಿದ್ದಿದ್ದು, ತಕ್ಷಣ ಎಚ್ಚೆತ್ತ ಬಾಲಕ ಮೊದಲು ತಾಯಿಯನ್ನು ಮಾತನಾಡಿಸುತ್ತಾನೆ. ನಂತರ ಸಿಟ್ಟಿಗೆದ್ದು ಕಾರಿಗೆ ಒದೆಯಲು ಪ್ರಾರಂಭಿಸಿದ್ದಾನೆ.

    ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾರು ಚಾಲಕನ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾಯಿ ಜೊತೆಗೆ ಬಾಲಕ ರಸ್ತೆ ದಾಟುತ್ತಿರುತ್ತಾನೆ. ಕಾರು ಡಿಕ್ಕಿ ಹೊಡೆಯುತ್ತಿದ್ದಂತೆ ತಾಯಿ ಕೆಳಗೆ ಬೀಳುತ್ತಾರೆ. ಮೊದಲು ತಾಯಿಯನ್ನು ಮಾತನಾಡಿಸಿ, ನಂತರ ಬಾಲಕ ಕಾರಿಗೆ ಒದೆಯುತ್ತಾನೆ. ಆಗ ಚಾಲಕ ಕಾರಿನಿಂದ ಇಳಿದು ಬಂದಿದ್ದು, ಬಾಲಕ ತನ್ನ ತಾಯಿ ಬಳಿ ಓಡಿ ಹೋಗುತ್ತಾನೆ. ನಂತರ ಸುತ್ತಲಿನ ಜನ ಘಟನಾ ಸ್ಥಳದತ್ತ ಧಾವಿಸುತ್ತಾರೆ. ಕೆಳಗೆ ಬಿದ್ದಿದ್ದ ಮಹಿಳೆಯನ್ನು ಎತ್ತಿ ಅದೇ ಕಾರಿನ ಹಿಂದಿನ ಸೀಟಿನಲ್ಲಿ ಕೂರಿಸುತ್ತಾರೆ.

    ಅದೃಷ್ಟವಶಾತ್ ಬಾಲಕ ಹಾಗೂ ತಾಯಿಗೆ ಗಂಭೀರ ಗಾಯಗಳಾಗಿಲ್ಲ. ಅಪಘಾತಕ್ಕೆ ಕಾರು ಚಾಲಕನೇ ಸಂಪೂರ್ಣ ಹೊಣೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಅಲ್ಲಿನ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಈ ವಿಡಿಯೋ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟ್ವಿಟ್ಟರಿನಲ್ಲಿ 83,500 ಜನ ವೀಕ್ಷಿಸಿದ್ದಾರೆ. ಬಾಲಕ ಸಾವಿರಾರು ನೆಟ್ಟಿಗರ ಹೃದಯವನ್ನು ಗೆದ್ದಿದ್ದಾನೆ. ದಯವಿಟ್ಟು ನಿನ್ನ ಮುಗ್ಧ, ಪರಿಶುದ್ಧ ಹೃದಯವನ್ನು ಸದಾ ಕಾಪಾಡಿಕೋ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.