Tag: Zealand

  • ಹರ್ಮನ್‍ಪ್ರೀತ್ ಕೌರ್ ಏಕಾಂಗಿ ಹೋರಾಟ ವ್ಯರ್ಥ – ಭಾರತ ವಿರುದ್ಧ ನ್ಯೂಜಿಲೆಂಡ್‍ಗೆ ಜಯ

    ಹರ್ಮನ್‍ಪ್ರೀತ್ ಕೌರ್ ಏಕಾಂಗಿ ಹೋರಾಟ ವ್ಯರ್ಥ – ಭಾರತ ವಿರುದ್ಧ ನ್ಯೂಜಿಲೆಂಡ್‍ಗೆ ಜಯ

    ವೆಲ್ಲಿಂಗ್ಟನ್: ಮಹಿಳಾ ವಿಶ್ವಕಪ್‍ನ ಎರಡನೇ ಹೋರಾಟದಲ್ಲಿ ಭಾರತ ತಂಡ ಸೋಲು ಕಂಡಿದೆ. ಭಾರತದ ಪರ ಹರ್ಮನ್‍ಪ್ರೀತ್ ಕೌರ್ ಏಕಾಂಗಿ ಹೋರಾಟದ ನಡುವೆಯೂ ನ್ಯೂಜಿಲೆಂಡ್ ತಂಡ 65 ರನ್‍ಗಳಿಂದ ಗೆದ್ದಿದೆ.

    ಭಾರತ ತಂಡ ವಿಶ್ವಕಪ್‍ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ದಾಖಲಿಸಿದರೆ, ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಬ್ಯಾಟಿಂಗ್‍ನಲ್ಲಿ ವೈಫಲ್ಯ ಅನುಭವಿಸಿ ಸೋಲು ಕಂಡಿದೆ. ಗೆಲ್ಲಲು 261 ರನ್ ಗುರಿ ಪಡೆದ ಭಾರತ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಸ್ಮೃತಿ ಮಂದಾನ 6 ಮತ್ತು ದೀಪ್ತಿ ಶರ್ಮಾ 5 ರನ್‍ಗಳಿಗೆ ವಿಕೆಟ್ ನೀಡಿ ನಿರಾಸೆ ಅನುಭವಿಸಿದರು. ಇದನ್ನೂ ಓದಿ: ವಿಶ್ವಕಪ್‍ನಲ್ಲಿ ಅತೀ ಹೆಚ್ಚು ವಿಕೆಟ್ – ದಾಖಲೆ ಸರಿಗಟ್ಟಿದ ಜೂಲನ್ ಗೋಸ್ವಾಮಿ

    ನಂತರ ಜೊತೆಯಾದ ನಾಯಕಿ ಮಿಥಾಲಿ ರಾಜ್ ಮತ್ತು ಹರ್ಮನ್‍ಪ್ರೀತ್ ಕೌರ್ ತಂಡಕ್ಕೆ ಚೇತರಿಕೆ ನೀಡಿದರು. ಈ ಜೋಡಿ 4ನೇ ವಿಕೆಟ್‍ಗೆ 47 ರನ್ (63 ಎಸೆತ) ಜೊತೆಯಾಟವಾಡಿ ಬೇರ್ಪಟ್ಟಿತು. ಮಿಥಾಲಿ ರಾಜ್ 31 ರನ್ (56 ಎಸೆತ, 1 ಬೌಂಡರಿ) ಸಿಡಿಸಿ ಔಟ್ ಆದರು. ಆ ಬಳಿಕ ಏಕಾಂಗಿ ಹೋರಾಟ ನಡೆಸಿದ ಹರ್ಮನ್‍ಪ್ರೀತ್ ಕೌರ್ 71 ರನ್ (63 ಎಸೆತ, 6 ಬೌಂಡರಿ, 2 ಸಿಕ್ಸ್) ಸಿಡಿಸಿ ಕೊನೆಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.

    ಆ ಬಳಿಕ ಭಾರತದ ಯಾವೊಬ್ಬ ಬ್ಯಾಟರ್ ಕೂಡ ಹೋರಾಡಲಿಲ್ಲ. ಕೊನೆಗೆ 46.4 ಓವರ್‌ಗಳಲ್ಲಿ ಟೀಂ ಇಂಡಿಯಾ 198 ರನ್‍ಗಳಿಗೆ ಸರ್ವಪತನ ಕಂಡಿತು. ನ್ಯೂಜಿಲೆಂಡ್ ಪರ ಲೀ ತಹುಹು ಮತ್ತು ಅಮೆಲಿಯಾ ಕೆರ್ ತಲಾ 3 ವಿಕೆಟ್, ಹೇಲಿ ಜೆನ್ಸನ್ 2 ವಿಕೆಟ್ ಮತ್ತು ಹನ್ನಾ ರೋವ್, ಜೆಸ್ ಕೆರ್ ತಲಾ 1 ವಿಕೆಟ್ ಕಿತ್ತು ಭಾರತದ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರು. ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಶ್ರೀಶಾಂತ್‌ ವಿದಾಯ

    ಈ ಮೊದಲು ನ್ಯೂಜಿಲೆಂಡ್ ತಂಡ ಅಮೆಲಿಯಾ ಕೆರ್ 50 ರನ್ (64 ಎಸೆತ, 5 ಬೌಂಡರಿ), ಆಮಿ ಸ್ಯಾಟರ್ಥ್‍ವೈಟ್ 75 ರನ್ (84 ಎಸೆತ, 9 ಬೌಂಡರಿ) ಮತ್ತು ಕೇಟಿ ಮಾರ್ಟಿನ್ 41 ರನ್ (51 ಎಸೆತ, 3 ಬೌಂಡರಿ) ಬಾರಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ 50 ಓವರ್‌ಗಳ ಅಂತ್ಯಕ್ಕೆ ನ್ಯೂಜಿಲೆಂಡ್ 9 ವಿಕೆಟ್ ಕಳೆದುಕೊಂಡು 260 ರನ್ ಮಾಡಿತು. ಭಾರತದ ಪರ ಪೂಜಾ ವಸ್ತ್ರಕರ್ 4 ವಿಕೆಟ್ ಕಿತ್ತು ಮಿಂಚಿದರು.

  • ಭಾರತ vs ನ್ಯೂಜಿಲೆಂಡ್ ಟಿ20 ಕಿಚ್ಚು ಹೆಚ್ಚಿಸಿದ ಚಹರ್, ಗುಪ್ಟಿಲ್ ದೃಷ್ಟಿಯುದ್ಧ

    ಭಾರತ vs ನ್ಯೂಜಿಲೆಂಡ್ ಟಿ20 ಕಿಚ್ಚು ಹೆಚ್ಚಿಸಿದ ಚಹರ್, ಗುಪ್ಟಿಲ್ ದೃಷ್ಟಿಯುದ್ಧ

    ಜೈಪುರ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತ ಗೆದ್ದು ಬೀಗಿದೆ. ಈ ನಡುವೆ ಪಂದ್ಯದ ವೇಳೆ ಭಾರತದ ವೇಗಿ ದೀಪಕ್ ಚಹರ್ ಮತ್ತು ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ ನಡುವೆ ದೃಷ್ಟಿಯುದ್ಧ ನಡೆದಿದೆ. ಇದು ಅಭಿಮಾನಿಗಳಲ್ಲಿ ಕಿಚ್ಚು ಹೆಚ್ಚಿಸಿತು.

    ರೋಚಕವಾಗಿ ಕಂಡುಬಂದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 165 ರನ್ ಗಳ ಗುರಿಯನ್ನು ಭಾರತ ತಂಡ 19.4 ಓವರ್‌ಗಳ ಅಂತ್ಯಕ್ಕೆ 166 ರನ್ ಸಿಡಿಸಿ ಗುರಿ ಮುಟ್ಟಿತ್ತು. ಕೊನೆಯವರೆಗೂ ಕ್ರಿಕೆಟ್ ಪ್ರೇಮಿಗಳ ಎದೆ ಬಡಿತ ಹೆಚ್ಚಿಸಿದ ಈ ಪಂದ್ಯದಲ್ಲಿ ಆಟಗಾರರ ನಡುವೆ ನೆಕ್ ಟು ನೆಕ್ ಫೈಟ್ ಕೂಡ ಜೋರಾಗಿತ್ತು. ಇದನ್ನೂ ಓದಿ: ಸೂರ್ಯ ಸ್ಫೋಟಕ ಅರ್ಧಶತಕ – ಭಾರತಕ್ಕೆ 5 ವಿಕೆಟ್‌ಗಳ ರೋಚಕ ಜಯ

    ಕಿವೀಸ್ ತಂಡ ದೊಡ್ಡ ಮೊತ್ತ ಕಳೆಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ 70 ರನ್ (42 ಎಸೆತ, 3 ಬೌಂಡರಿ, 4 ಸಿಕ್ಸ್) ಸಿಡಿಸಿ 17 ನೇನಲ್ಲಿ ಓವರ್‍ ನಲ್ಲಿ ಔಟ್ ಆದರು. ಗುಪ್ಟಿಲ್ ಔಟ್ ಆಗುವ ಮೊದಲು 17 ನೇ ಓವರ್ ಎಸೆಯಲು ಬಂದ ದೀಪಕ್ ಚಹರ್ ಅವರ ಮೊದಲ ಎಸೆತವನ್ನು ಮಿಡ್ ವಿಕೆಟ್ ಮೇಲೆ ಭರ್ಜರಿ ಸಿಕ್ಸರ್‌ಗಟ್ಟಿ ಚಹರ್‌ರನ್ನು ದುರುಗುಟ್ಟಿ ನೋಡಿದರು. ಆಗ ಸುಮ್ಮನಿದ್ದ, ಚಹರ್ ಮರು ಎಸೆತದಲ್ಲೇ ಗುಪ್ಟಿಲ್ ವಿಕೆಟ್ ಪಡೆಯಲು ಯಶಸ್ವಿಯಾದರು. ಈ ವೇಳೆ ಚಹರ್ ಗುಪ್ಟಿಲ್‍ರನ್ನು ದುರುಗುಟ್ಟಿ ನೋಡಿ ಏಟಿಗೆ ಎದುರೇಟು ನೀಡಿದರು. ಇದನ್ನೂ ಓದಿ: ಐಸಿಸಿಯ 3 ಟೂರ್ನಿಗೆ ಭಾರತ ಆತಿಥ್ಯ, ಚಾಂಪಿಯನ್ ಟ್ರೋಫಿ ಪಾಕಿಸ್ತಾನದಲ್ಲಿ

    ಚಹರ್ ಮತ್ತು ಗುಪ್ಟಿಲ್ ದೃಷ್ಟಿಯುದ್ಧ ನೋಡಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಹಲವು ಕಾಮೆಂಟ್‍ನೊಂದಿಗೆ ಪೋಸ್ಟ್ ಮಾಡಿ ಕಿಕ್ ಹೆಚ್ಚಿಸಿದರೆ, ಕೊರೊನಾ ಬಳಿಕ ಮೈದಾನಕ್ಕೆ ಎಂಟ್ರಿಕೊಟ್ಟು ಪಂದ್ಯ ವೀಕ್ಷಿಸಿದ ಪ್ರೇಕ್ಷಕರು ಈ ಸನ್ನಿವೇಶವನ್ನು ಎಂಜಾಯ್ ಮಾಡಿದರು.