ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಮನೆಯ ಬಳಿ ಕೆಲವು ಅಪರಿಚಿತರು ಸೆಲ್ಫಿ ಕ್ಲಿಕ್ಕಿಸಿದ ಬಳಿಕ ಭದ್ರತಾ ಲೋಪ ಆರೋಪ ಕೇಳಿಬಂದಿತ್ತು. ಆದರೆ ಈಗ ಸೆಲ್ಫಿ ಕ್ಲಿಕ್ಕಿಸಿದ ವ್ಯಕ್ತಿಗಳು ಕಾಂಗ್ರೆಸ್ ಕಾರ್ಯಕರ್ತರು ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಈ ಬಗ್ಗೆ ಮಾಧ್ಯಮ ವರದಿ ಮಾಡಿದ್ದು ಸೆಲ್ಫಿ ಕ್ಲಿಕ್ಕಿಸಲು ಬಂದವರು ಸೋನಿಯಾ ಗಾಂಧಿಗೆ ಪರಿಚಯಸ್ಥರು. ಅಲ್ಲದೆ ಇದರಲ್ಲಿ ಕುಟುಂಬದವರ ಕೈವಾಡವಿದೆ ಎಂಬುದನ್ನು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ ಎಂದು ಹೇಳಿದೆ.
ಪ್ರಿಯಾಂಕಾ ಗಾಂಧಿಯವರನ್ನು ಭೇಟಿಯಾಗಲು ತೆರಳಿದ್ದ ಶಾರದಾ ತ್ಯಾಗಿಯವರು ಈ ಕುರಿತು ಪ್ರತಿಕ್ರಿಯಿಸಿದ್ದು, ನಾವು ತೆರಳಿದಾಗ ಯಾವುದೇ ಭದ್ರತಾ ಪರಿಶೀಲನೆ ಇರಲಿಲ್ಲ. ಈ ಕುರಿತು ನನಗೆ ಆಶ್ಚರ್ಯವಾಯಿತು. ಇದು ಹೊಸ ನಿಯಮವಿರಬೇಕು ಎಂದು ನಾನು ಭಾವಿಸಿದೆ. ಈ ಹಿಂದೆ ನಾನು ಅವರನ್ನು ಯಾವತ್ತೂ ಭೇಟಿಯಾಗಿರಲಿಲ್ಲ. ಬಹಳ ವರ್ಷಗಳಿಂದ ಚುನಾವಣೆಗಾಗಿ ಪ್ರಚಾರ ನಡೆಸುತ್ತಿದ್ದೆವು. ಪಕ್ಷದಲ್ಲಿ ಎಲ್ಲರಿಗೂ ನಾನು ಗೊತ್ತು. ಮಾತ್ರವಲ್ಲದೆ ಸೋನಿಯಾ ಗಾಂಧಿಯವರಿಗೂ ನನ್ನ ಹೆಸರು ತಿಳಿದಿದೆ ಎಂದು ವಿವರಿಸಿದ್ದಾರೆ.
ನಾವು ಪ್ರಿಯಾಂಕಾ ಗಾಂಧಿಯವರನ್ನು ಭೇಟಿಯಾಗಲು ಅಪಾಯಿಂಟ್‍ಮೆಂಟ್ ಪಡೆಯಲು ತೆರಳಿದ್ದೆವು. ಎರಡು ದಿನಗಳ ಹಿಂದೆ ಅವರ ಪಿಎಗೆ ನಾನು ಕರೆ ಮಾಡಿದ್ದೆ. ಅವರು ಡ್ರೈವ್ ಮಾಡುತ್ತಿದ್ದೇನೆ ಆಮೇಲೆ ಕರೆ ಮಾಡಿ ಎಂದು ಹೇಳಿದರು. ನಾವು ಏಮ್ಸ್ ಆಸ್ಪತ್ರೆಯಿಂದ ಬರುತ್ತಿದ್ದೇವೆ ಎಂದು ಹೇಳಿ ಅಪಾಯಿಂಟ್‍ಮೆಂಟ್ ಪಡೆಯಲು ಯತ್ನಿಸಿದೆವು ಎಂದು ತಿಳಿಸಿದ್ದಾರೆ.
ಶಾರದಾ ತ್ಯಾಗಿಯವರ ಮಗ ಮಾತನಾಡಿ, ಗಾಂಧಿಯವರ ಮನೆಗೆ ತೆರಳಿದಾಗ ನಮ್ಮ ಕುಟುಂಬದವರನ್ನು ಭದ್ರತಾ ಸಿಬ್ಬಂದಿ ನಿಲ್ಲಿಸಿ ತಪಾಸಣೆ ನಡೆಸಲಿಲ್ಲ. ನನ್ನ ತಾಯಿ ಅವರನ್ನು ಭೇಟಿಯಾಗಲು ಹತ್ತಿರ ತೆರಳಿದರೂ ಆಗಲೂ ಇವರು ತಡೆದು ಪರಿಶೀಲಿಸಲಿಲ್ಲ. ಅಲ್ಲದೆ ಯಾವುದೇ ಪ್ರಶ್ನೆಗಳನ್ನು ಕೇಳಲಿಲ್ಲ. ನಾನೂ ಸಹ ವಾಹನ ನಿಲ್ಲಿಸಿ ಗೇಟ್ ತೆರೆದು ಮನೆಯ ಒಳಗೆ ತೆರಳಿದೆ. ಪ್ರಿಯಾಂಕಾ ಗಾಂಧಿಯವರು ಗಾರ್ಡನ್‍ನಲ್ಲಿಯೇ ಇದ್ದರು. ನಮ್ಮ ತಾಯಿ ಅವರನ್ನು ನೋಡಿ ಕಾರಿನಿಂದ ಇಳಿದು, ಅವರ ಬಳಿ ಮಾತನಾಡಿದರು. ಪ್ರಿಯಾಂಕಾ ಗಾಂಧಿ ಎಲ್ಲಿಗೋ ಹೊರಟಿದ್ದರು. ನನ್ನ ಮಗ ಹಾಗೂ ಸಹೋದರಿ ಸಹ ಜೊತೆಗಿದ್ದರು. ಮಕ್ಕಳು ಪ್ರಿಯಾಂಕಾ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಾರಂಭಿಸಿದರು. ನಾವೆಲ್ಲರೂ ಫೋಟೋ ತೆಗೆದುಕೊಳ್ಳಲು ಪ್ರಾರಂಭಿಸಿದೆವು ಎಂದು ಅವರ ಮಗ ಹೇಳಿದ್ದಾರೆ.
ನವೆಂಬರ್ 26ರಂದು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಲೋಧಿ ಎಸ್ಟೇಟ್ ನ ಮನೆಯ ಬಳಿ ಭದ್ರತೆಯ ಉಲ್ಲಂಘನೆಯಾಗಿತ್ತು. ಅಪರಿಚಿತ ವ್ಯಕ್ತಿಗಳು ಆಗಮಿಸಿ ಪ್ರಿಯಾಂಕಾ ಗಾಂಧಿ ಅವರ ಮನೆಯ ಬಳಿ ಆಗಮಿಸಿ ಸೆಲ್ಫಿ ಕೇಳಲು ಮುಂದಾಗಿದ್ದರು. ಈ ವೇಳೆ ಭದ್ರತಾ ಲೋಪ ಉಂಟಾಗಿತ್ತು ಎನ್ನುವ ಆರೋಪ ಕೇಳಿಬಂದಿತ್ತು.

ಪ್ರಿಯಾಂಕಾ ಗಾಂಧಿಯವರನ್ನು ಭೇಟಿಯಾಗಿ ಸೆಲ್ಫಿ ತೆಗದುಕೊಳ್ಳಲು ಎಸ್‍ಯುವಿ(ಸ್ಫೋಟ್ಸ್ ಯುಟಿಲಿಟಿ ವೆಹಿಕಲ್) ಕಾರಿನಲ್ಲಿ ಬಂದಿದ್ದರು. ಈ ಕಾರು ಟಾಟಾ ಕಂಪನಿಯದ್ದಾಗಿತ್ತು.
ಈ ಕುರಿತು ಸೋಮವಾರ ಅವರ ಕಚೇರಿಯ ಅಧಿಕಾರಿಗಳು ಪ್ರತಿಕ್ರಿಯಿಸಿ, ಪ್ರಿಯಾಂಕಾ ಗಾಂಧಿಯವರ ಭದ್ರತೆಯನ್ನು ಸೆಂಟ್ರಲ್ ರಿಸರ್ವ್ ಪೊಲೀಸ್(ಸಿಆರ್ ಪಿಎಫ್) ಹೊತ್ತಿದೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದ್ದರು.
ನವೆಂಬರ್ 26ರಂದು ಮಧ್ಯಾಹ್ನ 2ಗಂಟೆ ಸುಮಾರಿಗೆ ಕಾರು ಅವರ ಮನೆ ಬಳಿ ಬಂದಿತ್ತು. ಮೂವರು ಪುರುಷರು, ಮೂವರು ಮಹಿಳೆಯರು ಹಾಗೂ ಮಕ್ಕಳು ವಾಹನದಲ್ಲಿ ಇದ್ದರು. ಈ ಘಟನೆ ನಡೆದಾಗ ಪ್ರಿಯಾಂಕಾ ಗಾಂಧಿ ಸಭೆಯಲ್ಲಿದ್ದರು. ನಾವು ಅವರ ಅಭಿಮನಿಗಳು, ಅವರನ್ನು ಭೇಟಿಯಾಗಲು ಬಂದಿದ್ದೇವೆ ಎಂದು ಕಾಂಗ್ರೆಸ್ ನಾಯಕರಿಗೆ ಅಪರಿಚಿತರು ತಿಳಿಸಿದ್ದರು ಎಂದು ಮೂಲಗಳು ತಿಳಿಸಿದ್ದವು.

ನವೆಂಬರ್ ನಲ್ಲಿ ಕೇಂದ್ರ ಸರ್ಕಾರ ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್‍ಪಿಜಿಯ ಝಡ್ ಪ್ಲಸ್ ಭದ್ರತೆಯನ್ನು ಹಿಂಪಡೆದು ಸಿಆರ್‍ಪಿಎಫ್‍ಗೆ ವಹಿಸಿತ್ತು. ಈ ಹಿಂದೆ ಗಾಂಧಿ ಕುಟುಂಬದ ಸದಸ್ಯರಿಗೆ ಝಡ್ ಪ್ಲಸ್ ಭದ್ರತೆ ನೀಡಲಾಗುತ್ತಿತ್ತು, ಇದೀಗ ಕೇವಲ ಸಿಆರ್ ಪಿಎಫ್ ಭದ್ರತೆಯನ್ನು ಒದಗಿಸಲಾಗಿದೆ.