Tag: yuvraj swamy

  • ಯುವರಾಜ್ ಸ್ವಾಮಿ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆ- ಪ್ರಮುಖ ಸಚಿವರ ಬಯೋಡೆಟಾ, ಲೆಟರ್ ಹೆಡ್ ಪತ್ತೆ

    ಯುವರಾಜ್ ಸ್ವಾಮಿ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆ- ಪ್ರಮುಖ ಸಚಿವರ ಬಯೋಡೆಟಾ, ಲೆಟರ್ ಹೆಡ್ ಪತ್ತೆ

    ಬೆಂಗಳೂರು: ಯುವರಾಜ್ ಸ್ವಾಮಿ ವಿರುದ್ಧ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದು, ಪ್ರಮುಖ ಸಚಿವರ ಬಯೋಡೆಟಾ ಹಾಗೂ ಲೆಟರ್‍ಹೆಡ್ ಪತ್ತೆಯಾಗಿವೆ. ಅಲ್ಲದೆ ಆರೋಪಿ ಹೇಗೆ ವಂಚನೆ ಮಾಡಿದ್ದಾನೆ ಎಂಬುದರ ವಿವರವನ್ನು ಸಹ ಇದರಲ್ಲಿ ತಿಳಿಸಲಾಗಿದೆ.

    ಸಿಸಿಬಿ ಪೊಲೀಸರು ಯುವರಾಜ್ ಮನೆಯ ಮೇಲೆ ದಾಳಿ ಮಾಡಿದ್ದ ವೇಳೆ ಬರೋಬ್ಬರಿ 89ಕ್ಕೂ ಹೆಚ್ಚು ದಾಖಲೆಗಳನ್ನು ಸೀಜ್ ಮಾಡಿದ್ದರು. ಯುವರಾಜ್ ನ ಪರ್ಸನಲ್ ಹಾಗೂ ಬ್ಯಾಂಕ್, ಆಸ್ತಿ ದಾಖಲೆಗಳು ಪತ್ತೆಯಾಗಿದ್ದವು. ಅಲ್ಲದೆ ಇದೇ ಸಂದರ್ಭದಲ್ಲಿ ಅನೇಕ ಗಣ್ಯರಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ಸೀಜ್ ಮಾಡಲಾಗಿತ್ತು. ಇದೀಗ ಎಲ್ಲ ಪಿನ್ ಟು ಪಿನ್ ದಾಖಲೆಗಳನ್ನು ಪೊಲೀಸರು ಚಾರ್ಜ್ ಶೀಟ್‍ನಲ್ಲಿ ಉಲ್ಲೇಖಿಸಿದ್ದಾರೆ.

    ಪ್ರಮುಖ ದಾಖಲೆಗಳು
    ಚಾರ್ಜ್ ಶೀಟ್ ನಲ್ಲಿ ಹೇಳಿರುವ ಕೆಲವು ಪ್ರಮುಖ ದಾಖಲೆಗಳ ಲಭ್ಯವಾಗಿದ್ದು, ಇದರಲ್ಲಿ ಸಚಿವ ಮುರಗೇಶ್ ನಿರಾಣಿ ಲೇಟರ್ ಹೆಡ್ ಮತ್ತು ಬಯೋಡೆಟಾ, ಪ್ರಮೋದ್ ಮಧ್ವರಾಜ್ ಲೇಟರ್ ಹೆಡ್, ಬಯೋಡೆಟಾ, ಉಮೇಶ್ ಕತ್ತಿಯವರ ಲೇಟರ್ ಹೆಡ್, ಬಯೋಡೆಟಾ ಹಾಗೂ ಸಚಿವ ಶ್ರೀರಾಮುಲು ಅವರಿಗೆ ಸೇರಿದ ಕೆಲ ದಾಖಲೆಗಳನ್ನು ಸಹ ಸೀಜ್ ಮಾಡಲಾಗಿದೆ. ಮುತ್ತಪ್ಪ ರೈಗೆ ಸೆಕ್ಯೂರಿಟಿ ಕೋರಿ ಶ್ರೀರಾಮುಲು ಹೆಸರಲ್ಲಿ ಪತ್ರ ಬರೆದಿರುವುದು ಸಹ ಸಿಕ್ಕಿದೆ. ಶ್ರೀರಾಮುಲು ಅವರ ಲೇಟರ್ ಹೆಡ್ ನಲ್ಲಿ ಗೃಹ ಇಲಾಖೆಗೆ ಪತ್ರ ಬರೆಯಲಾಗಿದೆ.

    ಬಿಜೆಪಿ ಪಕ್ಷದ ಹೆಸರಿನ ಅನೇಕ ಲೇಟರ್ ಹೆಡ್ ಸಮೇತ ಪತ್ರಗಳು, ಉಪಚುನಾವಣೆಗೆ ವಸಂತ್ ಬೆಳವಾಯಿ ಟಿಕೆಟ್ ಕೋರಿಕೆ ಪತ್ರ. ಟಿ.ಶ್ಯಾಮ್ ಭಟ್ ವಯಕ್ತಿಕ ಸೇವಾ ವಿವರ ಇರುವ ದಾಖಲೆಗಳು, ನಿವೃತ್ತ ಜಡ್ಜ್ ಇಂದ್ರಕಲಾ ಅವರ ಪರ್ಸನಲ್ ಪ್ರೋಫೈಲ್ ಗಳು ಲಭ್ಯವಾಗಿವೆ. 9 ಮಂದಿ ಸಾಕ್ಷಿಗಳ ಸಮೇತ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದು, ಯುವರಾಜ್ ಸ್ವಾಮಿ ವಿರುದ್ಧ ಐಪಿಸಿ ಸೆಕ್ಷನ್ 420, 504, 506 ಅಡಿ ಚಾರ್ಜ್ ಸಲ್ಲಿಸಲಾಗಿದೆ. ಮಾಡಿದ ಕೃತ್ಯವನ್ನು ಯುವರಾಜ್ ಸ್ವಾಮಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

    ಕೇಸ್ ನಂಬರ್ 12/2021 ಜ್ಞಾನಭಾರತಿ ಪೊಲೀಸ್ ಠಾಣೆ:
    ಎಇಇ ಹುದ್ದೆ ಕೊಡಿಸುವುದಾಗಿ ರಾಜಾಜಿನಗರ ನಿವಾಸಿ ಜಿ.ನರಸಿಂಹ ಮೂರ್ತಿಯವರಿಗೆ ಲಕ್ಷಾಂತರ ಹಣ ಪಡೆದು ವಂಚನೆ ಮಾಡಲಾಗಿದೆ. ವಾಪಸ್ ಹಣ ಕೇಳಿದಾಗ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾನೆ. ನೀನು ಕೊಟ್ಟ ಹಣದಿಂದಲೇ ನಿನ್ನ ಕೊಲೆಗೆ ಸುಪಾರಿ ಕೊಡುತ್ತೇನೆ. ನಿನ್ನ ಹಣದಿಂದಲೇ ರೌಡಿಗಳಿಂದ ನಿನ್ನನ್ನು ಕೊಲ್ಲಿಸುತ್ತೇನೆ ಎಂದು ಯುವರಾಜ್ ಸ್ವಾಮಿ ದೂರುದಾರರಿಗೆ ಜೀವ ಬೆದರಿಕೆ ಹಾಕಿದ್ದಾನೆ.

    ಕೇಸ್ ನಲ್ಲಿ ಯುವರಾಜ್ ಮೇಲೆ ಬಂದಿದ್ದ ಆರೋಪ:
    ರಾಜಾಜಿನಗರ ಡಾಕ್ಟರ್ ನರಸಿಂಹ ಸ್ವಾಮಿಯ ಪುತ್ರ ರವೀಂದ್ರ ಎಂ.ಟೆಕ್ ಮುಗಿಸಿದ್ದ. ಅವರಿಗೆ ಲೋಕೇಶ್ ಎಂಬಾತನ ಮೂಲಕ ಈ ಯುವರಾಜ್ ಪರಿಚಯವಾಗಿದ್ದನಂತೆ. ಆದರಂತೆ ಅಕ್ಟೋಬರ್ 20, 2019 ರಲ್ಲಿ ಭೇಟಿಯಾಗಿ, ನಾನು ಆರ್‍ಎಸ್‍ಎಸ್ ಮುಖಂಡ, ಬಿಜೆಪಿ ಮುಖಂಡರು ನನಗೆ ಪರಿಚಯ ಅದರಲ್ಲೂ ಕೇಂದ್ರದ ನಾಯಕರು ಪರಿಚಯ ಎಂದು ಹೇಳಿದ್ದನಂತೆ. ನಾನು ನನಗೆ ಗೊತ್ತಿರುವ ಮಂತ್ರಿಯ ಬಳಿ ಮಾತನಾಡಿ ಎಇಇ ಕೆಲಸ ಕೊಡಿಸುವುದಾಗಿ ಹೇಳಿದ್ದನಂತೆ. ಇದಕ್ಕಾಗಿ 75 ಲಕ್ಷ ರೂ. ಲಂಚ ಕೇಳಿದ್ದನಂತೆ. ಅದನ್ನು ಕ್ಯಾಶ್ ಮೂಲಕವೇ ಕೊಡಬೇಕು ಅಂದಿದ್ದ. ಇದಕ್ಕೆ ಒಪ್ಪಿ 30 ಲಕ್ಷ ರೂ.ಗಳನ್ನು ನೀಡಿದ್ದಾರೆ. ಖುದ್ದು ಯುವರಾಜ್ ಮನೆಗೆ ಹೋಗಿ ಆತನಿಗೆ ಹಣವನ್ನ ನೀಡಿದ್ದಾರೆ. ಆದರೆ ಈ ವರೆಗೆ ಆತ ಕೆಲಸ ಕೊಡಿಸಿಲ್ಲ. ಹಣವನ್ನೂ ವಾಪಸ್ ನೀಡಿಲ್ಲವಂತೆ. ಈ ಬಗ್ಗೆ ಕೇಳಲು ಹೋದಾಗ ಜೀವ ಬೆದರಿಕೆ ಹಾಕಿದ್ದಾನೆ. ನೀನು ಕೊಟ್ಟಿರುವ ಹಣವನ್ನು ರೌಡಿಗಳಿಗೆ ಕೊಟ್ಟು ಸುಪಾರಿ ನೀಡುತ್ತೇನೆ. ನೀನು ಕೊಟ್ಟ ಹಣದಿಂದಲೇ ನಿನ್ನನ್ನು ಕೊಲ್ಲಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನಂತೆ.

    ಯುವರಾಜ್ ಸ್ವಾಮಿಯಿಂದ ತಪ್ಪೊಪ್ಪಿಗೆ:
    2019ರ ಮಾರ್ಚ್ ನಲ್ಲಿ ಏರ್‍ಪೋರ್ಟ್ ನಲ್ಲಿ ಡ್ರೈವರ್ ಆಗಿ ಕೆಲಸ ಮಾಡುವ ಲೋಕೇಶ್ ಕಾರನ್ನು ಬುಕ್ ಮಾಡಿಕೊಂಡಿದ್ದೆ. ಈ ವೇಳೆ ಆತನ ಜೊತೆ ಪರಿಚಯವಾಗಿ ನಂತರ ಆತನ ಮೂಲಕ ಪಿಕ್ ಅಪ್ ಡ್ರಾಪ್ ಮಾಡಿಸಿಕೊಳ್ಳುತ್ತಿದೆ. 2019 ರಲ್ಲಿ ಆತನ ಮೂಲಕ ನರಸಿಂಹಸ್ವಾಮಿ ಅವರು ತಮ್ಮ ಮಗನಿಗೆ ಎಇಇ ಕೆಲಸ ಕೊಡಿಸಿ ಎಂದು ಬಂದಿದ್ದು ನಿಜ. ಈ ಬಗ್ಗೆ ನನ್ನ ಮನೆಯ ನೆಲಮಡಿಯಲ್ಲಿ ಕುಳಿತು ಮಾತನಾಡಿ, 75 ಲಕ್ಷ ಹಣವನ್ನು ಕ್ಯಾಶ್ ಕೇಳಿದ್ದೆ. ಅದಕ್ಕೆ ಒಪ್ಪಿದ ಅವರು, 30 ಲಕ್ಷ ಹಣವನ್ನು ಕ್ಯಾಶ್‍ನಲ್ಲಿ ಕೊಟ್ಟಿದ್ದರು. ಅದನ್ನು ನನ್ನ ಮತ್ತು ಕುಟುಂಬದ ಖರ್ಚಿಗಾಗಿ ಬಳಸಿಕೊಂಡಿದ್ದೇನೆ. ಅವರಿಗೆ ಇಲ್ಲಿತನಕ ಯಾವುದೇ ಕಲಸವನ್ನು ಸಹ ಕೊಡಿಸಿಲ್ಲ. ಕೇಳಲು ಬಂದಾಗಿ ಜೀವ ಬೆದರಿಕೆ ಹಾಕಿದ್ದು ನಿಜ. ಜಾಮೀನು ಪಡೆದು ಹೊರ ಬಂದ ತಕ್ಷಣ ಹಣ ವಾಪಸ್ ನೀಡುತ್ತೇನೆ ಎಂದಿದ್ದಾನೆ.

    ಕೇಸ್ ನಂಬರ್ 38/2020 ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ:
    ತನ್ನ ಬಳಿ ಕೆಲಸ ಮಾಡುತ್ತಿದ್ದ ಡ್ರೈವರ್ ಗೂ ಯುವರಾಜ್ ವಂಚಿಸಿದ್ದು, ಅಮಾಯಕ ಕೆಲಸಗಾರನ ಬ್ಯಾಂಕ್ ಅಕೌಂಟ್ ನ್ನು ದುರ್ಬಳಕೆ ಮಾಡಿಕೊಂಡು, ತಾನು ವಂಚಿಸಿ ಪಡೆದ ಹಣವನ್ನು ಡೆಪಾಸಿಟ್ ಮಾಡುತ್ತಿದ್ದ. ಐಟಿ ಇಲಾಖೆಯಿಂದ ಬಂದ ನೊಟೀಸ್ ನೋಡಿ ಡ್ರೈವರ್ ಗಾಬರಿಯಾಗಿದ್ದ. ಈ ಕುರಿತು ಯುವರಾಜ್ ನ ಪ್ರಶ್ನೆ ಮಾಡಿದಾಗ ಹೊಡೆದು ಮನೆಯಿಂದ ಆಚೆ ಹಾಕಿದ್ದ.

    ಕೇಸ್ ನಂಬರ್ 40/2020 ಸೆನ್ ಪೊಲೀಸ್ ಠಾಣೆ:
    ಕೆಎಸ್‍ಆರ್‍ಟಿಸಿ ಅಧ್ಯಕ್ಷ ಹುದ್ದೆ ಕೊಡಿಸುವುದಾಗಿ ಹೇಳಿ ರೈತ ಹಾಗೂ ಉದ್ಯಮಿ ಸುಧೀಂದ್ರ ರೆಡ್ಡಿಗೆ 1 ಕೋಟಿ ರೂಪಾಯಿ ಉಂಡೆನಾಮ ಹಾಕಿದ್ದಾನೆ. ಬರೋಬ್ಬರಿ 1 ಕೋಟಿ ರೂ.ಗಳನ್ನು ಪಡೆದು ಸ್ವಾಮಿ ವಂಚಿಸಿದ್ದಾನೆ. ಚೆಕ್ ಮೂಲಕ ಯುವರಾಜ್ ಸ್ವಾಮಿ ಹಣ ಪಡೆದಿದ್ದು, ಬಿಜೆಪಿ ಕಾರ್ಯಕರ್ತ ಮಧುರಾಜ್ ಜೊತೆ ಬಂದು ವಂಚನೆ ಮಾಡಿದ್ದಾನೆ. 10 ದಿನಗಳಲ್ಲಿ ಹುದ್ದೆ ಕೊಡಿಸುವುದಾಗಿ ಹೇಳಿ ಹಣ ಪಡೆದು ಮೋಸ ಮಾಡಿದ್ದಾರೆ. ಈ ಕುರಿತು ಯುವರಾಜ್ ಮತ್ತು ಮಧುರಾಜ್ ವಿರುದ್ಧ ಸೆನ್ ಠಾಣೆ ಪೊಲೀಸರು ಕೇಸ್ ದಾಖಲಿಸಿದ್ದಾರೆ.

    ಮೇ 2020ರಲ್ಲಿ ಬಿಜೆಪಿ ಕಾರ್ಯಕರ್ತ ಮಧುರಾಜ್ ಜೊತೆಯಲ್ಲಿ ಯುವರಾಜ್ ನ ಕರೆದುಕೊಂಡು ಸುಧೀಂದ್ರ ರೆಡ್ಡಿ ಮನೆಗೆ ಹೋಗಿದ್ದನಂತೆ. ನಿಮಗೆ ಕೆಎಸ್‍ಆರ್‍ಟಿ ಅಧ್ಯಕ್ಷ ಹುದ್ದೆ ಕೊಡಿಸುತ್ತೇನೆ ಎಂದು ನಂಬಿಸಿದ್ದರಂತೆ. ಅದಕ್ಕಾಗಿ 1 ಕೋಟಿ ಹಣವನ್ನು ಪಡೆದು, ಹುದ್ದೆ ಕೊಡಿಸದೇ ವಂಚನೆ ಮಾಡಿದ್ದಾನಂತೆ. ಬಳಿಕ ಮೊದಲು ಪೋನ್ ರಿಸಿವ್ ಮಾಡದೇ ತಪ್ಪಿಸಿಕೊಳ್ಳುತ್ತಿದ್ದನಂತೆ. ನಂತರ ನಿನಗೆ ಹಣ ವಾಪಸ್ ಕೊಡಲ್ಲ. ಹಣ ಕೇಳಿದರೆ ನಿನಗೊಂದು ಗತಿ ಕಾಣಿಸುತ್ತೆನೆಂದು ಬೆದರಿಕೆ. ಈ ಬಗ್ಗೆ ಯಾರ ಬಳಿಯಾದರೂ ಚರ್ಚೆ ಮಾಡಿದರೆ ಹುಷಾರ್ ಎಂದು ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.

    ನನಗೆ ಗೋವಿಂದರಾಜನಗರದ ಬಿಜೆಪಿ ಕಾರ್ಯಕರ್ತ ಮಧುರಾಜ್ ಮೂಲಕ ಸುಧೀಂದ್ರ ರೆಡ್ಡಿ 2020ರ ಮೇ ತಿಂಗಳಲ್ಲಿ ಪರಿಚಯವಾದರು. ಅವರಿಗೆ ಕೆಎಸ್‍ಆರ್‍ಟಿಸಿ ಅಧ್ಯಕ್ಷ ಹುದ್ದೆ ಕೊಡಿಸುವುದಾಗಿ ನಾನು ಹೇಳಿದ್ದು ನಿಜ. ಅದಕ್ಕೆ ಅವರ ಬ್ಯಾಂಕ್ ಖಾತೆಯಿಂದ ಹಾಗೂ ಕ್ಯಾಷ್ ಮೂಲಕ 1 ಕೋಟಿ ರೂಪಾಯಿ ಪಡೆದುಕೊಂಡಿದ್ದೇನೆ. ಆದರೆ ಅವರಿಗೆ ನಾನು ಕೆಲಸವನ್ನು ಕೊಡಿಸಿಲ್ಲ. ಅವರಿಂದ ಪಡೆದ ಹಣವನ್ನು ನನ್ನ ಮನೆಯಲ್ಲಿ ಇಟ್ಟಾಗ 26 ಲಕ್ಷ ರೂ.ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಉಳಿದ ಹಣವನ್ನು ಕಾಡುಕೊತ್ತನಹಳ್ಳಿ ಗ್ರಾಮದ ತೋಟದ ಮನೆಯ ಬೆಡ್ ರೂಂ ನ ಬೀರುವಿನಲ್ಲಿ ಇಟ್ಟಿದ್ದೇನೆ. ನೀವು ಕರೆದುಕೊಂಡು ಹೋದರೆ ಅದನ್ನು ನೀಡುತ್ತೇನೆ. ಮತ್ತಷ್ಟು ಹಣವನ್ನು ಕಾರುಗಳ ಖರೀದಿಗೆ ಬಳಸಿಕೊಂಡಿದ್ದೇನೆ ಎಂದು ಯುವರಾಜ್ ಹೇಳಿದ್ದಾನೆ.

  • ಯುವರಾಜ್ ಸ್ವಾಮಿ ವಿರುದ್ಧ ಮತ್ತೊಂದು ಎಫ್‍ಐಆರ್

    ಯುವರಾಜ್ ಸ್ವಾಮಿ ವಿರುದ್ಧ ಮತ್ತೊಂದು ಎಫ್‍ಐಆರ್

    ಬೆಂಗಳೂರು: ಬಂಧನದಲ್ಲಿರುವ ಯುವರಾಜ್ ಸ್ವಾಮಿ ವಿರುದ್ಧ ಮತ್ತೊಂದು ಎಫ್‍ಐಆರ್ ದಾಖಲಾಗಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೆಸರಲ್ಲಿ ಬಿಲ್ಡರ್ ಇನಿತ್ ಕುಮಾರ್ ಎಂಬವರಿಗೆ ಯುವರಾಜ್ ವಂಚಿಸಿರುವ ಆರೋಪ ಕೇಳಿ ಬಂದಿದೆ.

    ಇನಿತ್ ಕುಮಾರ್ ಅವರನ್ನ ಸೆಂಟ್ರಲ್ ಸಿಲ್ಕ್ ಬೋರ್ಡ್ ಚೇರ್ಮನ್ ಮಾಡೋದಾಗಿ ಹೇಳಿ 30 ಲಕ್ಷ ರೂ. ಪಡೆದು ವಂಚಿಸಿದ್ದಾನೆ. ಮೊದಲಿಗೆ ಸೆಂಟ್ರಲ್ ಸಿಲ್ಕ್ ಬೋರ್ಡ್ ಚೇರ್ಮನ್ ಪೋಸ್ಟ್ ಗೆ ಮೂರು ಕೋಟಿ ಡಿಮ್ಯಾಂಡ್ ಮಾಡಿದ್ದ ಎನ್ನಲಾಗಿದೆ. ಅಷ್ಟು ಹಣ ಇಲ್ಲ ಎಂದಾಗ 2 ಕೋಟಿ, 50 ಲಕ್ಷ ಕೊನೆಗೆ 30 ಲಕ್ಷಕ್ಕೆ ಡೀಲ್ ಮಾಡಿಕೊಂಡು ನವೆಂಬರ್ ನಲ್ಲಿ ಹಣ ಪಡೆದುಕೊಂಡಿದ್ದನು.

    ಡೀಲ್ ವೇಳೆ ಬಿ.ಎಲ್.ಸಂತೋಷ್ ಅವರ ಅಣ್ಣನ ಮಗ ಎಂದು ಯುವರಾಜ್ ಪರಿಚಯ ಮಾಡಿಕೊಂಡಿದ್ದನು. ನೀವು ಯುವಕರಿದ್ದೀರಿ ರಾಜಕೀಯಕ್ಕೆ ಬರಬೇಕು. ನಿಮ್ಮನ್ನ ರಾಷ್ಟ್ರ ಮಟ್ಟದಲ್ಲಿ ಯೂತ್ ಐಕಾನ್ ಮಾಡುತ್ತೇನೆ ಎಂದು ನಂಬಿಸಿದ್ದನು. ರೇಸ್ ಕೋರ್ಸ್ ರಸ್ತೆಯ ಐಷಾರಾಮಿ ಹೊಟೇಲ್ ನಲ್ಲಿ ಮೂರು ಸೀಟಿಂಗ್ ಹಾಕಿ ಹಣ ಡೀಲ್ ಮಾಡಿಕೊಳ್ಳಲಾಗಿತ್ತು. ಸದ್ಯ ಯುವರಾಜ್ ವಂಚನೆ ಬಗ್ಗೆ ಬಿಲ್ಡರ್ ಇನಿತ್ ಕುಮಾರ್ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನ ಹೈಗ್ರೌಂಡ್ ಪೊಲೀಸರು ಸಿಸಿಬಿಗೆ ವರ್ಗಾಯಿಸಿದ್ದಾರೆ.

  • ಯುವರಾಜ್ ಜೊತೆ ನಂಟು – ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್

    ಯುವರಾಜ್ ಜೊತೆ ನಂಟು – ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್

    ಬೆಂಗಳೂರು: ಯುವರಾಜ್ ಜೊತೆಗಿನ ನಂಟು ಹಿನ್ನೆಲೆಯಲ್ಲಿ ನಟಿ ರಾಧಿಕಾ ಕುಮಾರಸ್ವಾಮಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ.

    ಕೋಟಿ ಕೋಟಿ ಹಣಕ್ಕೆ ಸಂಬಂಧಿಸಿದಂತೆ ಸಿಕ್ಕಿಬಿದ್ದ ಸ್ವೀಟಿ ರಾಧಿಕಾ ಕುಮಾರಸ್ವಾಮಿಗೆ ಹಣ ಒಂದೇ ಕಂಟಕವಾಗುತ್ತಾ ಅಥವಾ ಆ ಆಡಿಯೋ ಕೂಡ ಕಂಟಕ ತಂದಿಡಲಿದ್ಯಾ ಎಂಬ ಪ್ರಶ್ನೆ ಎದ್ದಿದೆ.

    ಒಂದು ವೇಳೆ ಹಣದ ವಿಚಾರವನ್ನು ಬಿಟ್ಟರೂ ಆಡಿಯೋ ವಿಚಾರದಲ್ಲಿ ರಾಧಿಕಾ ಸಿಕ್ಕಿಬೀಳ್ತಾರಾ ಎಂಬ ಅನುಮಾನ ಕೂಡ ಮೂಡಿದೆ. ರಾಜಕಾರಣಿಯೊಬ್ಬರ ವಿಚಾರವಾಗಿ ಯುವರಾಜ್ ಮತ್ತು ರಾಧಿಕಾ ನಡುವಿನ ಸಂಭಾಷಣೆಯ ಆಡಿಯೋ ಸಿಸಿಬಿ ಬಳಿ ಇದೆ. ಮೊಬೈಲ್ ಅನ್ನು ರಿಟ್ರೀವ್ ಮಾಡಿದ ಬಳಿಕ ಈ ಆಡಿಯೋ ಸಿಕ್ಕಿದೆ.

    ರಾಧಿಕಾ ಮತ್ತು ಯುವರಾಜ್ ಇಬ್ಬರೂ ಕೂಡ ಆ ರಾಜಕಾರಣಿಯ ವಿಚಾರವಾಗಿ ಮಾತನಾಡಿದ್ದಾರೆ. ಅವರನ್ನು ಕರೆದುಕೊಂಡು ಬರುತ್ತೇನೆ. ನಾನು ಹೇಳಿದ ಹಾಗೇ ನೀನು ಹೇಳಬೇಕು. ಈಗಾಗಲೇ ಹೈಕಮಾಂಡ್ ನಿಮ್ಮ ಮಾತಿಗೆ ಒಪ್ಪಿಗೆ ಸೂಚಿಸಿದ್ದಾರೆ. ಸೆಕೆಂಡ್ ಲೆವೆಲ್ ಕ್ಲಿಯರ್ ಆಗಬೇಕು ಅಷ್ಟೇ ಅಂತ ಹೇಳಬೇಕು ಅಂತ ಯುವರಾಜ್ ರಾಧಿಕಾಗೆ ಆಡಿಯೋದಲ್ಲಿ ಹೇಳಿದ್ದಾನೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಸದ್ಯ ಈ ಆಡಿಯೋ ಬಗ್ಗೆ ತಲೆಕೆಡಿಸಿಕೊಂಡಿರೋ ಸಿಸಿಬಿ ಇನ್ನಷ್ಟು ಮಾಹಿತಿ ಕಲೆಹಾಕುತ್ತಿದೆ. ಈ ಮೂಲಕ ಹಣದ ವಿಚಾರವನ್ನು ಬಿಟ್ಟರೂ ಆಡಿಯೋ ವಿಚಾರ ಬಿಡೋದು ಅನುಮಾನ ಎನ್ನಲಾಗುತ್ತಿದೆ.

     

    ತಿಂಗಳಿಂದ ಸುಮ್ಮನಿದ್ದ ಸಿಸಿಬಿ ಈಗ ಪ್ಲಾನ್ ಮಾಡಿಕೊಂಡಿದೆ. ಯುವರಾಜ್ ಅರೆಸ್ಟ್ ಆಗಿ ತಿಂಗಳಾದರೂ ಸಿಸಿಬಿ ಅಧಿಕಾರಿಗಳು ಮಾತ್ರ ಸೈಲೆಂಟ್ ಆಗಿದ್ದರು. ಯುವರಾಜ್ ಯಾರ್ಯಾರ ಜೊತೆ ಸಂಪರ್ಕ ಹೊಂದಿದ್ದ ಅನ್ನೊ ಕಂಪ್ಲೀಟ್ ಡೀಟೈಲ್ಸ್ ಸಿಸಿಬಿ ಬಳಿಯಿತ್ತು. ಆದರೆ ಸರ್ಕಾರದ ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಸುಮ್ಮನಾಗಿದ್ದರು ಎಂಬುದಾಗಿ ತಿಳಿದುಬಂದಿದೆ.

    ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ರಾಧಿಕಾ, 75 ಲಕ್ಷ ಪಡೆದುಕೊಂಡಿರುವ ಬಗ್ಗೆ ಹೇಳಿದ್ದಾರೆ. ಯುವರಾಜ್ ಹಾಗೂ ಅವರ ಬಾವ 60  ಲಕ್ಷ ಹಣ ಹಾಕಿರುವ ಬಗ್ಗೆ ಮಾಹಿತಿ ನೀಡಿದ್ದರು.

  • ಮೋದಿ, ಅಮಿತ್ ಶಾ, ನಡ್ಡಾ ಹೆಸರಲ್ಲಿ ಮಹಾ ಮೋಸ- 100 ಕೋಟಿಗೂ ಅಧಿಕ ವಂಚನೆ

    ಮೋದಿ, ಅಮಿತ್ ಶಾ, ನಡ್ಡಾ ಹೆಸರಲ್ಲಿ ಮಹಾ ಮೋಸ- 100 ಕೋಟಿಗೂ ಅಧಿಕ ವಂಚನೆ

    ನವದೆಹಲಿ/ಬೆಂಗಳೂರು: ಪ್ರಧಾನಿ ಮೋದಿ ಗೊತ್ತು, ಅಮಿತ್ ಶಾ, ಜೆಪಿ ನಡ್ಡಾ ಎಲ್ಲರೂ ಗೊತ್ತು ಅಂತ ಯುವರಾಜ್ ಸ್ವಾಮಿ ಎಂಬ ಮಹಾನ್ ವಂಚಕ ಕೋಟ್ಯಂತರ ರೂಪಾಯಿ ವಂಚಿಸಿರೋದು ಬೆಳಕಿಗೆ ಬಂದಿದೆ. ಅಮಿತ್ ಶಾ ಸೂಚನೆ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿದಾಗ ಯುವರಾಜ್‍ನ ಮಹಾಮೋಸ ಎಳೆಎಳೆಯಾಗಿ ಬಯಲಾಗಿದೆ.

    ಹೌದು. ನೋಡೋಕೆ ಡೀಸೆಂಟ್ ಆಗಿ ಕಾಣಿಸೋ ಯುವರಾಜ ಸ್ವಾಮಿ ಎಂಬ ಐನಾತಿ ಗಿರಾಕಿ ಮಾಡಿರೋದು ಮಾತ್ರ ಎಲ್ಲರೂ ಬೆರಗಾಗೋ ವಂಚನೆ. ನಂಗೆ ಪ್ರಧಾನಿ ಮೋದಿ ಗೊತ್ತು, ಅಮಿತ್ ಶಾ ಗೊತ್ತು, ಜೆಪಿ ನಡ್ಡಾ ಎಲ್ಲಾ ಗೊತ್ತು ಅಂತ ಹೋದಾಗ ಬಂದಾಗ ಫೋಟೋ ಕ್ಲಿಕ್ಕಿಸಿಕೊಂಡು ಅದನ್ನೇ ತನ್ನ ಮನಿ ಮೇಕಿಂಗ್ ದಂಧೆಗೆ ದುರ್ಬಳಕೆ ಮಾಡಿಕೊಂಡಿದ್ದಾನೆ.

    ಓದಿದ್ದು ಅಲ್ಪಸ್ವಲ್ಪವಾದ್ರು ಮಾತು ಮಾತ್ರ ಸತ್ಯ ತಲೆ ಮೇಲೆ ಹೊಡೆದ ರೀತಿ ಮಾತನಾಡಿ ನಂಬಿಸ್ತಾ ಇದ್ದ. ರಾಜಕಾರಣಿಗಳು, ಐಎಎಸ್-ಐಪಿಎಸ್ ಅಧಿಕಾರಿಗಳಿಗೆ ಈ ಉಂಡೆನಾಮ ಹಾಕಿಬಿಟ್ಟಿದ್ದಾನೆ. ಹಣವಂತರು ಅಂತ ಗೊತ್ತಾದರೆ ಸಾಕು ನಿಮ್ಮನ್ನೇ ಟಾರ್ಗೆಟ್ ಮಾಡಿ, ಮಕ್ಮಲ್ ಟೋಪಿ ಹಾಕೇ ಬಿಡ್ತಾನೆ.

    ಸಿಸಿಬಿ ಪೊಲೀಸರು ಆರೋಪಿ ಯುವರಾಜ್ ಸ್ವಾಮಿ ಪೂರ್ವ ಪರ ತಿಳಿದಾಗ ಬಿಜೆಪಿ ಮುಖಂಡರ ಫೋಟೊಗಳನ್ನ ತೋರಿಸಿ ನಿಗಮ ಮಂಡಳಿ, ಕೇಂದ್ರ ಸಚಿವ, ರಾಜ್ಯ ಸಭೆ ಸದಸ್ಯ ಮಾಡಿಸಿಕೊಡುವುದಾಗಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿರೋ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಯುವರಾಜ್ ಸ್ವಾಮಿಯ ವಂಚನೆ ಜಾಲ ರೋಚಕವಾಗಿದೆ. ವಿಮಾನಗಳಲ್ಲೇ ಡೀಲ್ ಮಾಡ್ತಿದ್ದ ಯುವರಾಜ ಸ್ವಾಮಿ, ದೆಹಲಿ-ಬೆಂಗಳೂರಿಗೆ ಪ್ಲೈಟ್‍ನಲ್ಲಿ ಸದಾ ಓಡಾಟ ಮಾಡ್ತಿದ್ದ. ರಾಜಕಾರಣಿಗಳ ಪಕ್ಕದಲ್ಲಿ ಸೀಟ್ ಪಡೆದು, ವಿವಿಧ ಆಸೆ ಹುಟ್ಟಿಸ್ತಿದ್ದ. 4 ಕೋಟಿ ಡೀಲ್ ಮಾಡಿದ್ರೆ 2 ಕೋಟಿ ಅಕೌಂಟ್‍ಗೆ, ಇನ್ನುಳಿದ 2 ಕೋಟಿ ಬ್ಲಾಕ್‍ನಲ್ಲಿ ತೆಗೆದುಕೊಳ್ತಿದ್ದ. ಇದೇ ರೀತಿಯಾಗಿ ಈತ ಹಲವು ಮಂದಿಗೆ ಟೋಪಿ ಹಾಕ್ತಿದ್ದ.

    ದೊಡ್ಡವರಿಗೆ ‘ಟೋಪಿ’
    ಕೇಸ್ 1: ಹಾಲಿ ಪ್ರಭಾವಿ ಸಚಿವರಿಗೆ ಫೇವರ್ ಹೆಸರಲ್ಲಿ ವಂಚನೆ
    ಕೇಸ್ 2: ಬೆಂಗಳೂರು ಮೂಲದ ಸಚಿವರಿಗೂ ವಂಚನೆ
    ಕೇಸ್ 3: ಮಾಜಿ ರಾಜ್ಯಸಭಾ ಸದಸ್ಯರಿಗೆ ಪುನಾರಾಯ್ಕೆ ಹೆಸರಲ್ಲಿ ದೋಖಾ
    ಕೇಸ್ 4: ಸಚಿವರ ಮೂವರು ಆಪ್ತರಿಗೆ ಕೋಟಿಗಟ್ಟಲೆ ವಂಚನೆ
    ಕೇಸ್ 5: ರಾಜ್ಯಪಾಲ ಹುದ್ದೆ ಕೊಡಿಸುವ ಅಮಿಷ
    ಕೇಸ್ 6: ಐಎಎಸ್ ಅಧಿಕಾರಿಗಳಿಗೂ ಫೇವರ್ ಹೆಸರಲ್ಲಿ ವಂಚನೆ
    ಕೇಸ್ 7: ನಿಗಮ-ಮಂಡಳಿ ಹೆಸರಲ್ಲಿ ನಾಮ
    ಕೇಸ್ 8: ಬಿಜೆಪಿಯಲ್ಲಿ ಉನ್ನತ ಸ್ಥಾನಮಾನ ಹೆಸರಲ್ಲಿ ವಂಚನೆ

    ಆರೋಪಿ ಯುವರಾಜ್ ವಂಚನೆ ಬಗ್ಗೆ ಸಿಸಿಬಿಗೆ ಉದ್ಯಮಿ ಸುದೀಂದ್ರ ರೆಡ್ಡಿ ದೂರು ಕೊಟ್ಟಿದ್ರು. ಕೆಎಸ್‍ಆರ್‍ಟಿಸಿಯಲ್ಲಿ ಅಧ್ಯಕ್ಷ ಪಟ್ಟ ಕೊಡಿಸೋದಾಗಿ ರೆಡ್ಡಿಯಿಂದ ಒಂದು ಕೋಟಿ ಹಣ ಪಡೆದು ಮೊಸ ಮಾಡಿದ್ದ. ಸತತ 10 ಗಂಟೆ ಶೋಧಿಸಿದ ಸಿಸಿಬಿ, 90 ಕೋಟಿ ರೂ ಮೌಲ್ಯದ ಚೆಕ್ ಜೊತೆ 16 ಲಕ್ಷ ರೂಪಾಯಿ ನಗದು ಸೀಜ್ ಮಾಡಿದೆ. ಅಲ್ಲದೆ, ಆರ್‍ಎಸ್‍ಎಸ್, ಬಿಜೆಪಿ ನಾಯಕರ ಲೆಟರ್ ಹೆಡ್‍ಗಳು, ನಕಲಿ ಸೀಲ್‍ಗಳು ಸೇರಿ ಅಪಾರ ಪ್ರಮಾಣದ ದಾಖಲೆ, ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

    ಆದರೆ ನಾನು ಯಾವುದೇ ಅಪರಾಧ ಮಾಡಿಲ್ಲ. ರಾಜಕೀಯ ಪ್ರೇರಿತ ಉದ್ದೇಶಪೂರ್ವಕವಾಗಿ ತೊಂದರೆ ಕೊಡಲಾಗುತ್ತಿದೆ. ಎಲ್ಲವನ್ನು ನ್ಯಾಯಾಲಯ ನೋಡಿಕೊಳ್ಳುತ್ತೆ. ಅಂತ ಸಿಸಿಬಿ ವಶದಲ್ಲಿರುವಾಗಲೇ ಯುವರಾಜ್ ಸ್ವಾಮಿ ಅಬ್ಬರಿಸಿದ್ದಾನೆ.

    ಅಂದಹಾಗೆ ರಾಜ್ಯದ ಪ್ರಭಾವಿ ರಾಜಕಾರಣಿಗೆ ರಾಜ್ಯಸಭಾ ಟಿಕೆಟ್ ಕೊಡಿಸೋದಾಗಿ ಈತ ವಂಚಿಸಿದ್ದ, 10 ಕೋಟಿ ಹಣ ಪಡೆದು ಟಿಕೆಟ್ ಕೊಡೋದಾಗಿ ಹೇಳಿದ್ದ, ಆದರೆ ಟಿಕೆಟೂ ಇಲ್ಲ. 10 ಕೋಟಿ ಹಣವೂ ವಾಪಸ್ ಬಂದಿಲ್ಲ. ಇದರಿಂದ ಸಿಟ್ಟಿಗೆದ್ದ ಆ ರಾಜಕಾರಣಿಯೇ ಬಿಜೆಪಿ ಹೈಕಮಾಂಡ್‍ಗೆ ದೂರು ಕೊಟ್ಟಿದ್ದರು. ಸಿಸಿಬಿಗೂ ಮಾಹಿತಿ ಕೊಟ್ಟಿದ್ದರು. ಕೊನೆಗೆ, ಅಮಿತ್ ಶಾ ಸೂಚನೆ ಮೇರೆಗೆ ಈ ಸಿಸಿಬಿ ಪೊಲೀಸರು ಕಾರ್ಯೋನ್ಮುಖರಾದರು ಅಂತಲೂ ತಿಳಿದು ಬಂದಿದೆ.