Tag: Yuva Dasara 2019

  • ಚಂದನ್ ಶೆಟ್ಟಿಯನ್ನು ಮಹಾಪರಾಧ ಮಾಡಿದವನಂತೆ ಕಾಣೋದು ಸಾಕು: ಪ್ರತಾಪ್ ಸಿಂಹ

    ಚಂದನ್ ಶೆಟ್ಟಿಯನ್ನು ಮಹಾಪರಾಧ ಮಾಡಿದವನಂತೆ ಕಾಣೋದು ಸಾಕು: ಪ್ರತಾಪ್ ಸಿಂಹ

    ಬೆಂಗಳೂರು: ಮೈಸೂರಿನಲ್ಲಿ ಶುಕ್ರವಾರ ನಡೆದ ಯುವ ದಸರಾ ಕಾರ್ಯಕ್ರಮದ ವೇಳೆ ವೇದಿಕೆಯಲ್ಲೇ ಗಾಯಕ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡಾಗೆ ಪ್ರಪೋಸ್ ಮಾಡಿರುವುದು ಭಾರೀ ವಿವಾದಕ್ಕೀಡಾಗಿದೆ. ಈ ಬೆನ್ನಲ್ಲೇ ಸಂಸದ ಪ್ರತಾಪ್ ಸಿಂಹ ಅವರು, ಮಹಾಅಪರಾಧ ಮಾಡಿದವನಂತೆ ಚಂದನ್ ಶೆಟ್ಟಿಯನ್ನು ಕಾಣುವುದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.

    ಈ ಸಂಬಂಧ ಫೇಸ್‍ಬುಕ್ ನಲ್ಲಿ ಬರೆದುಕೊಂಡಿರುವ ಸಂಸದರು, “ಯುವ ದಸರಾದಲ್ಲಿ 2 ಗಂಟೆ ಮೈಸೂರಿಗರ ಮನಸ್ಸಿಗೆ ಮುದ ಕೊಟ್ಟು 2 ಸೆಕೆಂಡ್ ಪ್ರೇಮ ನಿವೇದನೆ ಮಾಡಿಕೊಂಡ ಚಂದನ್ ಶೆಟ್ಟಿಯವರನ್ನು ಏನೋ ಮಹಾಪರಾಧ ಮಾಡಿದವನಂತೆ ಕಾಣುವುದು ಸಾಕು. ಇಬ್ಬರಿಗೂ ಒಳ್ಳೆಯದಾಗಲಿ” ಎಂದು ಹೇಳಿದ್ದಾರೆ. ಅಲ್ಲದೆ ಚಂದನ್, ನಿವೇದಿತಾಗೆ ಪ್ರಪೋಸ್ ಮಾಡಿರುವ ಫೋಟೋವೊಂದನ್ನು ಕೂಡ ಅಪ್ಲೋಡ್ ಮಾಡಿದ್ದಾರೆ. ಇದನ್ನೂ ಓದಿ: ನಿಶ್ಚಿತಾರ್ಥ ಅಲ್ಲ, ನಮ್ಗೂ ಸರ್ಪ್ರೈಸ್ ಆಗಿದೆ- ನಿವೇದಿತಾ ಹೆತ್ತವರು

    ಟೀಕೆಯ ಕಮೆಂಟ್ ಬರಲಾರಂಭಿಸುತ್ತಿದ್ದಂತೆ ಪ್ರತಾಪ್ ಸಿಂಹ ಫೇಸ್‍ಬುಕ್ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಇದನ್ನೂ ಓದಿ: ತಪ್ಪಾಗಿದ್ದರೆ ಕ್ಷಮೆ ಇರಲಿ, ಸರ್ಪ್ರೈಸ್ ಕೊಡಲು ಈ ರೀತಿ ಮಾಡಿದೆ: ಚಂದನ್ ಶೆಟ್ಟಿ

    ವೇದಿಕೆಯಲ್ಲಿ ನಡೆದಿದ್ದೇನು..?
    ನಿನ್ನೆ ಯುವ ದಸರಾ ಕಾರ್ಯಕ್ರಮದಲ್ಲಿ ಚಂದನ್, ನಿವೇದಿತಾ ಪೋಷಕರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮ ನೀಡಿ ಜನರನ್ನು ಮನರಂಜಿಸುತ್ತಿದ್ದ ಚಂದನ್ ವೇದಿಕೆಯಲ್ಲೇ ನಿವೇದಿತಾಳಿಗೆ ಮಂಡಿಯೂರಿ ಪ್ರಪೋಸ್ ಮಾಡಿದ್ದರು ಅಲ್ಲದೆ ಉಂಗುರ ಕೂಡ ತೊಡಿಸಿದ್ದರು. ಈ ವೇಳೆ ನೆರೆದಿದ್ದ ಮಂದಿ ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟುವ ಮೂಲಕ ಇಬ್ಬರನ್ನೂ ಅಭಿನಂದಿಸಿದರು.

    ಆದರೆ ಈ ಬೆನ್ನಲ್ಲೇ ಪ್ರಪೋಸ್ ಮಾಡಿರುವ ವಿಚಾರ ಭಾರೀ ವಿವಾದಕ್ಕೀಡಾಯಿತು. ದಸರಾ ಕಾರ್ಯಕ್ರಮದ ವೇದಿಕೆಯಲ್ಲೇ ಇದು ಬೇಡವಾಗಿತ್ತು ಎಂದು ಅನೇಕರು ಖಂಡಿಸಿದರು. ಇನ್ನೂ ಕೆಲವರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು. ಈ ಸಂಬಂಧ ಪ್ರತಿಕ್ರಿಯಿಸಿದ ಚಂದನ್, ನಾನು ಮಾಡಿರುವುದು ತಪ್ಪಾಗಿದ್ದರೆ ಕ್ಷಮಿಸಿ ಬಿಡಿ ಅಂದಿದ್ದಾರೆ. ಇತ್ತ ನಾವು ವೇದಿಕೆಯಲ್ಲಿ ಮದುವೆಯಾಗಿಲ್ಲ. ಒಂದು ವೇಳೆ ನಾವು ಅಲ್ಲಿ ಮದುವೆಯಾಗುತ್ತಿದ್ದರೆ ಅದನ್ನು ನಾನು ತಪ್ಪು ಅಂತ ಒಪ್ಪಿಕೊಳ್ಳುತ್ತಿದ್ದೆ ಎಂದು ಸಮರ್ಥಿಸಿಕೊಂಡಿದ್ದಾರೆ.  ಇದನ್ನೂ ಓದಿ: ವೇದಿಕೆ ಮೇಲೆ ಮದುವೆ ಆಗಿದ್ರೆ ತಪ್ಪು ಅಂತ ಒಪ್ಪಿಕೊಳ್ಳುತ್ತಿದ್ದೆ: ನಿವೇದಿತಾ ಗೌಡ

    ಈ ಮಧ್ಯೆ ಉಸ್ತುವಾರಿ ಸಚಿವ ವಿ ಸೋಮಣ್ಣ ಪ್ರತಿಕ್ರಿಯಿಸಿ, ಯುವ ದಸರಾ ವೇದಿಕೆಯಲ್ಲಿ ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಿಶ್ಚಿತಾರ್ಥ ಮಾಡಿಕೊಂಡಿರುವುದು ಅಕ್ಷಮ್ಯ ಅಪರಾಧ. ನಾಡಿನ ಅಧಿದೇವತೆಯ ನಾಡಹಬ್ಬದ ವೇದಿಕೆಯಲ್ಲಿ ಈ ರೀತಿ ಆಗಬಾರದಿತ್ತು. ತಪ್ಪೆಸಗಿರುವ ಅವರಿಬ್ಬರಿಗೂ ಬರುವ ಆರು ತಿಂಗಳಲ್ಲಿ ದೇವಿಯೇ ಶಿಕ್ಷೆ ನೀಡುತ್ತಾರೆ. ಈ ರೀತಿ ಆಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಇದಕ್ಕೆ ದಸರಾ ಉಪಸಮಿತಿ ಕಾರಣವಲ್ಲ. ಈ ಸಂಬಂಧ ಮೈಸೂರು ಜಿಲ್ಲಾ ಅಧೀಕ್ಷಕ ಹಾಗೂ ಯುವ ದಸರಾ ಉಪಸಮಿತಿಯ ಕಾರ್ಯಾಧ್ಯಕ್ಷರೂ ಆಗಿರುವ ರಿಷ್ಯಂತ್ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಚಂದನ್ ಶೆಟ್ಟಿ ಮತ್ತು ನಿವೇದಿತಾರಿಗೆ ಕಾರಣ ಕೇಳಿ ಪೊಲೀಸ್ ಇಲಾಖೆಯಿಂದ ನೋಟಿಸ್ ನೀಡಲಾಗುತ್ತದೆ ಎಂದು ಕಿಡಿಕಾರಿದ್ದಾರೆ.  ಇದನ್ನೂ ಓದಿ: ಚಂದನ್-ನಿವೇದಿತಾ ನಿಶ್ಚಿತಾರ್ಥ ಮಾಡ್ಕೊಂಡಿರೋದು ಅಕ್ಷಮ್ಯ ಅಪರಾಧ- ವಿ.ಸೋಮಣ್ಣ

  • ಯುವ ದಸರಾದಲ್ಲಿ ಮೋಡಿ ಮಾಡಲಿದ್ದಾರೆ ರಾನು ಮೊಂಡಲ್

    ಯುವ ದಸರಾದಲ್ಲಿ ಮೋಡಿ ಮಾಡಲಿದ್ದಾರೆ ರಾನು ಮೊಂಡಲ್

    ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಯುವ ದಸರಾದಲ್ಲಿ ತೇರಿಮೇರಿ ಸ್ಟಾರ್ ರಾನು ಮೊಂಡಲ್ ಕಾರ್ಯಕ್ರಮ ನೀಡುವ ಮೂಲಕ ಮಿಂಚಲಿದ್ದಾರೆ. ನಮ್ಮ ಸುಮಧುರ ಕಂಠಸಿರಿಯಿಂದ ಎಲ್ಲರ ಮನ ಗೆಲ್ಲಲಿದ್ದಾರೆ.

    ನಾಡಹಬ್ಬಕ್ಕೆ ಇಂದು ಚಾಮುಂಡಿ ಬೆಟ್ಟದಲ್ಲಿ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಅವರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಕೇಂದ್ರ ಸಚಿವ ಸದಾನಂದ ಗೌಡ, ಜೆಡಿಎಸ್ ನಾಯಕ ಜಿ.ಟಿ ದೇವೇಗೌಡ, ಸಚಿವ ವಿ. ಸೋಮಣ್ಣ ಸೇರಿದಂತೆ ರಾಜ್ಯ ಸರ್ಕಾರದ ಸಚಿವರು ಭಾಗಿಯಾಗಿದ್ದು, ಸಾಂಸ್ಕೃತಿಕ ನಾಡಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ಅ.1 ರಿಂದ ಅ.6ರವರೆಗೆ ಯುವದಸರಾ ನಡೆಯಲಿದ್ದು, ಉದ್ಘಾಟನಾ ದಿನ ಅಂದರೆ ಅ.1ರಂದು ರಾನು ಮೊಂಡಲ್ ಕಾರ್ಯಕ್ರಮ ನೀಡಿ ಎಲ್ಲರನ್ನು ರಂಜಿಸಲಿದ್ದಾರೆ. ಇದನ್ನೂ ಓದಿ: ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ದಸರಾಗೆ ಎಸ್.ಎಲ್ ಭೈರಪ್ಪ ಚಾಲನೆ

    ಇದೇ ವೇಳೆ ರಾನು ಮೊಂಡಲ್‍ಗೆ ಯುವ ದಸರಾ ಉಪಸಮಿತಿ ಸನ್ಮಾನ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಂಡಿದೆ. ಯುವಜನತೆಗೆ ಸಾಧನೆಯ ಸಂದೇಶ ಸಾರುವ ಸಲುವಾಗಿ ರಾನು ಮೊಂಡಲ್ ಅವರಿಗೆ ಯುವದಸರಾಗೆ ಕಾರ್ಯಕ್ರಮ ನೀಡಲು ಆಮಂತ್ರಿಸಲಾಗಿದೆ. ಇದನ್ನೂ ಓದಿ:ಇಂದಿನಿಂದ ಮೈಸೂರು ದಸರಾ ವೈಭವ – ಎಸ್.ಎಲ್ ಬೈರಪ್ಪರಿಂದ ಉತ್ಸವಕ್ಕೆ ಚಾಲನೆ

    ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡಿ, ಹಾಡು ಹಾಡಿ ಜೀವನ ನಡೆಸುತ್ತಿದ್ದ ರಾನು ಮೊಂಡಲ್ ಹಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಸಖತ್ ಫೇಮಸ್ ಆಗಿತ್ತು. ಆ ಬಳಿಕ ರಾನು ಅವರಿಗೆ ಹಿಮೇಶ್ ರೇಶ್ಮಿಯಾ ಅವರು ತೇರಿ ಮೇರಿ ಕಹಾನಿ ಎಂಬ ಹಾಡನ್ನು ಹಾಡಲು ಅವಕಾಶ ನೀಡಿದರು. ಈ ಮೂಲಕ ರಾನು ಸ್ಟಾರ್ ಆದರು. ಸದ್ಯ ರಾನು ಅವರಿಗೆ ಬಾಲಿವುಡ್ ಹಾಗೂ ಇತರೆ ಸಿನಿಮಾದಲ್ಲಿ ಹಾಡಲು ಅವಕಾಶಗಳು ದೊರೆಯುತ್ತಿದ್ದು, ಸಖತ್ ಮಿಂಚುತ್ತಿದ್ದಾರೆ.

  • ಪಿ.ವಿ.ಸಿಂಧುರಿಂದ ಯುವ ದಸರಾ ಉದ್ಘಾಟನೆ- ಸಿಎಂ ಆಹ್ವಾನ

    ಪಿ.ವಿ.ಸಿಂಧುರಿಂದ ಯುವ ದಸರಾ ಉದ್ಘಾಟನೆ- ಸಿಎಂ ಆಹ್ವಾನ

    ಬೆಂಗಳೂರು: ಯುವ ದಸರಾ ಉದ್ಘಾಟನೆ ಮಾಡುವಂತೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಪದಕ ಗೆದ್ದ ಪಿ.ವಿ.ಸಿಂಧು ಅವರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಆಹ್ವಾನ ನೀಡಿದ್ದಾರೆ.

    ಈ ಕುರಿತು ಪತ್ರ ಬರೆದಿರುವ ಸಿಎಂ ಯಡಿಯೂರಪ್ಪ ಅವರು, ಕರ್ನಾಟಕ ಸರ್ಕಾರವು ವಿಶ್ವವಿಖ್ಯಾತ ದಸರಾ ಹಬ್ಬವನ್ನು ನಡೆಸುತ್ತಿದೆ. ಒಂಬತ್ತು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ದೇಶ-ವಿದೇಶದಿಂದ ಲಕ್ಷಂತಾರ ಜನರು ಮೈಸೂರಿಗೆ ಭೇಟಿ ನೀಡುತ್ತಾರೆ. 410ನೇ ದಸರಾ ಸಂಭ್ರಮಕ್ಕೆ ವಿವಿಧ ಕ್ಷೇತ್ರದ ಸಾಧಕರು, ಶ್ರೇಷ್ಠ ವ್ಯಕ್ತಿಗಳು ಸಾಕ್ಷಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

    ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಪದಕ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದೀರಿ. ಲಕ್ಷಾಂತರ ಯುವ ಕ್ರೀಡಾ ಪ್ರತಿಭೆಗಳಿಗೆ ಸ್ಫೂರ್ತಿಯಾಗಿರುವ ನೀವು ಅಕ್ಟೋಬರ್ 1ರಂದು ಯುವ ದಸರಾವನ್ನು ಉದ್ಘಾಟನೆ ಮಾಡಬೇಕು. ನಿಮ್ಮಿಂದ ಯುವ ದಸರಾ ಉದ್ಘಾಟನೆ ಆಗಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ ಎಂದು ಸಿಎಂ ಯಡಿಯೂರಪ್ಪ, ಪಿ.ವಿ.ಸಿಂಧು ಅವರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

    ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಪದಕ ಗೆದ್ದ ಪಿ.ವಿ.ಸಿಂಧು ಅವರಿಗೆ ಸಿಎಂ ಬಿ.ಎಸ್‍.ಯಡಿಯೂರಪ್ಪನವರ ನೇತೃತ್ವದ ಸರ್ಕಾರವು 10 ಲಕ್ಷ ರೂ. ಬಹುಮಾನ ಘೋಷಿಸಿತ್ತು.

    ಈ ಬಾರಿ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾವನ್ನು ಕನ್ನಡದ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಅವರು ಉದ್ಘಾಟನೆ ಮಾಡಲಿದ್ದಾರೆ. ಸೆಪ್ಟೆಂಬರ್ 29ರಂದು ಬೆಳಗ್ಗೆ ಸುಮಾರು 9.30ರ ವೃಶ್ಚಿಕ ಲಗ್ನದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಕೆ ಮಾಡಲಾಗುತ್ತದೆ. ಚಾಮುಂಡಿಬೆಟ್ಟದ ದೇವಾಲಯದ ಆವರಣದಲ್ಲಿ ಚಾಮುಂಡೇಶ್ವರಿ ಪೂಜೆ ಸಲ್ಲಿಸಿ ದಸರಾ ಉದ್ಘಾಟನೆ ಮಾಡಲಾಗುತ್ತದೆ.

    ಸಿಎಂ ಯಡಿಯೂರಪ್ಪ ಅವರು ಸೆಪ್ಟೆಂಬರ್ 29ರಂದು ಸಂಜೆ 7.30ಕ್ಕೆ ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮಾಡಲಿದ್ದಾರೆ. ಅಕ್ಟೋಬರ್ 8ರಂದು 2.15ರಿಂದ 2.58ರ ಮಕರ ಲಗ್ನದಲ್ಲಿ ನಂದಿ ಪೂಜೆ ಮಾಡಲಾಗುತ್ತದೆ. ಅದೇ ದಿನ ಸಂಜೆ 4.31ರಿಂದ 4.57ರವರೆಗೆ ಕುಂಭ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿರುವ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಲಾಗುತ್ತದೆ.