Tag: yuva Brigade

  • ಇದು ಪುಕ್ಕಲು ಸರ್ಕಾರ, ಬೆದರಿಕೆಗೆ ಜಗ್ಗುವುದಿಲ್ಲ: ಚಕ್ರವರ್ತಿ ಸೂಲಿಬೆಲೆ

    ಇದು ಪುಕ್ಕಲು ಸರ್ಕಾರ, ಬೆದರಿಕೆಗೆ ಜಗ್ಗುವುದಿಲ್ಲ: ಚಕ್ರವರ್ತಿ ಸೂಲಿಬೆಲೆ

    ಶಿವಮೊಗ್ಗ: ರಾಜ್ಯ ಸರ್ಕಾರ ಪುಕ್ಕಲು ಸರ್ಕಾರ. ಧೈರ್ಯವಾಗಿ ಇರುವಂತಹ ಧ್ವನಿಯನ್ನು, ಕೇಳಿರುವ ಪ್ರಶ್ನೆಯನ್ನು, ಕೇಳಿರುವ ಮಾತುಗಳನ್ನು ಎದುರಿಸಲು ಸಾಧ್ಯವಾಗದಿರುವ ಸರ್ಕಾರ ಎಂದು ಯುವ ಬ್ರಿಗೇಡ್ (Yuva Brigade) ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakravarthi Sulibele) ಕಾಂಗ್ರೆಸ್ (Congress) ವಿರುದ್ಧ ಗುಡುಗಿದ್ದಾರೆ.

    ಫೇಸ್‌ಬುಕ್‌ನಲ್ಲಿ (Facebook) ಮಹಿಳೆಗೆ ಅವಹೇಳನ ಮಾಡಿದ ಆರೋಪ ಸಂಬಂಧ ಪ್ರಕರಣ ದಾಖಲಾಗಿರುವ ಹಿನ್ನೆಲೆ ಚಕ್ರವರ್ತಿ ಸೂಲಿಬೆಲೆ ವಿನೋಬನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಈ ವೇಳೆ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಠಾಣೆ ಮುಂದೆ ಜಮಾಯಿಸಿ ಘೋಷಣೆ ಕೂಗಿದರು. ಇದನ್ನೂ ಓದಿ: ಸುಧಾರಿಸಿದ ಹೆಚ್‌ಡಿಕೆ ಆರೋಗ್ಯ – ಐಸಿಯುನಿಂದ ವಾರ್ಡ್‌ಗೆ ಶಿಫ್ಟ್

    ಈ ವೇಳೆ ಮಾಧ್ಯಮಗಳ ಜೊತೆ ಮಾತಾಡಿದ ಚಕ್ರವರ್ತಿ ಸೂಲಿಬೆಲೆ, ಇಂತಹ ಬೆದರಿಕೆಗಳಿಗೆ ಜಗ್ಗುವುದಿಲ್ಲ, ಬಗ್ಗುವುದೂ ಇಲ್ಲ. ಇದು ದೂರು ದಾಖಲಿಸಿಕೊಳ್ಳುವ ಸಂಗತಿಯೇ ಅಲ್ಲ. ಪ್ರಿಯಾಂಕ್ ಖರ್ಗೆ ಅವರು ಠಾಣೆ ಮೆಟ್ಟಿಲು ಹತ್ತಿಸುತ್ತೇನೆ ಎಂದಿದ್ದರು. ಸುಳ್ಳು ದೂರು ಕೊಡಿಸಿ ಠಾಣೆ ಮೆಟ್ಟಿಲು ಹತ್ತಿಸಿದ್ದಾರೆ. ದೂರಿಗೆ ನನ್ನ ಹೇಳಿಕೆಯನ್ನು ದಾಖಲಿಸಿದ್ದೇನೆ ಎಂದರು. ಇದನ್ನೂ ಓದಿ: ಸೆ.3 ರಂದು ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಮತ್ತೆ ಚಾಲನೆ: ಜಯಮೃತ್ಯುಂಜಯ ಸ್ವಾಮೀಜಿ

    ರಾಜ್ಯ ಸರ್ಕಾರ ಇದು ಪುಕ್ಕಲು ಸರ್ಕಾರ. ಧೈರ್ಯವಾಗಿ ಇರುವಂತಹ ಧ್ವನಿಯನ್ನು, ಕೇಳಿರುವ ಪ್ರಶ್ನೆಯನ್ನು, ಕೇಳಿರುವ ಮಾತುಗಳನ್ನು ಎದುರಿಸಲು ಸಾಧ್ಯವಾಗದಿರುವ ಪುಕ್ಕಲು ಸರ್ಕಾರ. ಈ ಮೂಲಕ ಹೋರಾಟಗಾರರನ್ನು ಬೆದರಿಸಲು ಸಾಧ್ಯವಿಲ್ಲ. ಸರ್ಕಾರ ಸಣ್ಣ ಪ್ರಕರಣವನ್ನು ಮುಂದಿಟ್ಟುಕೊಂಡು ದೊಡ್ಡ ಹೆಜ್ಜೆ ಇಟ್ಟಿದೆ. ಈ ಬಗ್ಗೆ ನನಗೆ ಬೇಸರ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ರೈಲಿಗೆ ಬೆಂಕಿ ಆಕಸ್ಮಿಕ ಅಲ್ಲ, ಮಾನವ ಕೃತ್ಯದ ಶಂಕೆ

    ಬುಧವಾರ ರಾತ್ರಿ ಶಾಸಕ ಎಸ್.ಎನ್.ಚನ್ನಬಸಪ್ಪ ಅವರೊಂದಿಗೆ ಚಕ್ರವರ್ತಿ ಸೂಲಿಬೆಲೆ ವಿನೋಬನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಕಾಂಗ್ರೆಸ್ ಕಾರ್ಯಕರ್ತೆ ಸೌಗಂಧಿಕ ದಾಖಲಿಸಿರುವ ದೂರಿನ ಸಂಬಂಧ ಹೇಳಿಕೆ ನೀಡಿದರು. ಠಾಣೆಗೆ ತೆರಳಿದ ಚಕ್ರವರ್ತಿ ಸೂಲಿಬೆಲೆ ಅವರೊಂದಿಗೆ ವಿವಿಧ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆಗಮಿಸಿದ್ದರು. ಠಾಣೆ ಹೊರಗೆ ಜಮಾಯಿಸಿದ ಕಾರ್ಯಕರ್ತರು ರಾಜ್ಯ ಸರ್ಕಾರ, ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸುಳ್ಳು ದೂರು ದಾಖಲು ಮಾಡಿರುವುದಾಗಿ ಆರೋಪಿಸಿ ಘೋಷಣೆ ಕೂಗಿದರು. ಇದನ್ನೂ ಓದಿ: ಪ್ರವಾಸಿಗರೇ ಎಚ್ಚರ, ಕಾಫಿನಾಡ ನಾನ್ ವೆಜ್ ಹೋಟೆಲ್‍ನಲ್ಲಿ ಕುರಿ ಬದಲು ದನದ ಮಾಂಸದ ಬಿರಿಯಾನಿ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಧರ್ಮಕ್ಕಾಗಿಯೇ ನನ್ನ ಗಂಡನ ಕೊಲೆ ಆಗಿದೆ: ಯುವಬ್ರಿಗೇಡ್ ಕಾರ್ಯಕರ್ತನ ಪತ್ನಿ ಆರೋಪ

    ಧರ್ಮಕ್ಕಾಗಿಯೇ ನನ್ನ ಗಂಡನ ಕೊಲೆ ಆಗಿದೆ: ಯುವಬ್ರಿಗೇಡ್ ಕಾರ್ಯಕರ್ತನ ಪತ್ನಿ ಆರೋಪ

    ಮೈಸೂರು: ನನ್ನ ಗಂಡ ಹತ್ತು ಜನ ಬಂದರೂ ಹೆದರಲ್ಲ. ನನ್ನ ಗಂಡನ ಹತ್ಯೆ ವೈಯಕ್ತಿಕ ಕಾರಣಕ್ಕೆ ನಡೆದಿಲ್ಲ. ಧರ್ಮಕ್ಕಾಗಿಯೇ ನನ್ನ ಗಂಡನ ಕೊಲೆ ಆಗಿದೆ ಎಂದು ಯುವ ಬ್ರಿಗೇಡ್ (Yuva Brigade) ಕಾರ್ಯಕರ್ತ ದಿವಂಗತ ವೇಣುಗೋಪಾಲ್ (L.Venugopal) ಪತ್ನಿ ಪೂರ್ಣಿಮಾ ಆರೋಪಿಸಿದ್ದಾರೆ.

    ಮೈಸೂರಿನ (Mysuru) ಟಿ.ನರಸೀಪುರದಲ್ಲಿ (T.Narasipura) ಜುಲೈ 8ರಂದು ನಡೆದ ಹನುಮ ಜಯಂತಿ (Hanuma Jayanthi) ವೇಳೆ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಜಗಳ ನಡೆದಿದ್ದು, ಜಗಳದಲ್ಲಿ ಯುವಬ್ರಿಗೇಡ್ ಸಕ್ರಿಯ ಕಾರ್ಯಕರ್ತನಾಗಿದ್ದ ವೇಣುಗೋಪಾಲ್ ನಾಯಕ್ ಅವರನ್ನು ದುಷ್ಕರ್ಮಿಗಳು ಬಾಟಲಿಯಿಂದ ಇರಿದು ಹತ್ಯೆಗೈದಿದ್ದರು. ಇದನ್ನೂ ಓದಿ: ಕೇಂದ್ರ ಕೊಡುವ ಅಕ್ಕಿಯಲ್ಲೂ ಕಡಿತ; ಅನ್ನಭಾಗ್ಯವಲ್ಲ ಇದು ಕನ್ನ ಭಾಗ್ಯ – ಬೊಮ್ಮಾಯಿ

    ಈ ಕುರಿತು ಮಾತನಾಡಿದ ವೇಣುಗೋಪಾಲ್ ಪತ್ನಿ, ನಾನು, ವೇಣುಗೋಪಾಲ್ ಪ್ರೀತಿಸಿ ಮದುವೆ ಆಗಿದ್ದೆವು. ನಾವು ಮೂರು ವರ್ಷಗಳಿಂದ ಹನುಮ ಜಯಂತಿ ಆಚರಣೆ ಮಾಡುತ್ತಿದ್ದೇವೆ. ನನ್ನ ಗಂಡನ ಬಳಿ ಹಣ ಇಲ್ಲ, ಅಧಿಕಾರ ಇಲ್ಲ. ಆದರೂ ಅದ್ಧೂರಿಯಾಗಿ ಹನುಮ ಜಯಂತಿ ಆಚರಣೆ ಮಾಡಿದ್ದೆವು. ಅದನ್ನು ಸಹಿಸದೆ ಕೊಲೆ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಚಂದ್ರಯಾನ-3 ಯಶಸ್ವಿ ಆಗಲೆಂದು ತಿರುಪತಿಯಲ್ಲಿ ಪೂಜೆ ಸಲ್ಲಿಸಿದ ಇಸ್ರೋ ವಿಜ್ಞಾನಿಗಳು

    ನನ್ನ ಗಂಡನ ಸಾವಿಗೆ ನ್ಯಾಯ ಬೇಕು. ಇಲ್ಲವಾದರೇ ನಾನು ನನ್ನ ಮಗಳು, ಗಂಡ ಸತ್ತಂತೆಯೇ ಸಾಯುತ್ತೇವೆ. ಇಂದು ನನ್ನ ಗಂಡನನ್ನು ಸಾಯಿಸಿದ್ದಾರೆ. ಮುಂದಿನ ವರ್ಷ ನಾನು ಹನುಮ ಜಯಂತಿ ಮಾಡುತ್ತೇನೆ. ಆಗ ನನ್ನನ್ನು ಸಾಯಿಸುತ್ತಾರೆ. ಅದರ ಮುಂದಿನ ವರ್ಷ ನನ್ನ ಮಗಳು ಹನುಮ ಜಯಂತಿ ಮಾಡಿದರೆ ಆಗ ಅವಳನ್ನೂ ಸಾಯಿಸುತ್ತಾರೆ. ಅಲ್ಲಿಗೆ ಹಿಂದೂ ಧರ್ಮವೂ ಸಾಯುತ್ತದೆ. ನನ್ನ ಗಂಡನ ಏಳಿಗೆ ಸಹಿಸದೆ ಕೊಲೆ ಮಾಡಿದ್ದಾರೆ. ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ದೇಶವ್ಯಾಪಿ ಮುಂಗಾರು ಕುಂಠಿತ – ರಾಜ್ಯದ 25 ಜಿಲ್ಲೆಗಳಲ್ಲಿ ಮಳೆ ಕೊರತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೇಣುಗೋಪಾಲ್‌ ಹತ್ಯೆಯ ಹಿಂದೆ ಮಹದೇವಪ್ಪ ಪುತ್ರ ಸುನಿಲ್‌ ಬೋಸ್‌ ಕೈವಾಡ: ಸೂಲಿಬೆಲೆ

    ವೇಣುಗೋಪಾಲ್‌ ಹತ್ಯೆಯ ಹಿಂದೆ ಮಹದೇವಪ್ಪ ಪುತ್ರ ಸುನಿಲ್‌ ಬೋಸ್‌ ಕೈವಾಡ: ಸೂಲಿಬೆಲೆ

    ಬೆಂಗಳೂರು: ಟಿ ನರಸೀಪುರದಲ್ಲಿ ವೇಣುಗೋಪಾಲ್‌ (Venugopal) ಹತ್ಯೆಯ ಹಿಂದೆ ಸಚಿವ ಮಹದೇವಪ್ಪ (Mahadevappa) ಅವರ ಪುತ್ರ ಸುನಿಲ್‌ ಬೋಸ್‌ ಕೈವಾಡವಿದೆ ಎಂದು ಯುವ ಬ್ರಿಗೇಡ್‌ (Yuva Brigade) ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ನೇರವಾಗಿ ಆರೋಪ ಮಾಡಿದ್ದಾರೆ.

    ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ವೇಣುಗೋಪಾಲ್ ಹತ್ಯೆ ಹಿಂದೆ ಕಾಂಗ್ರೆಸ್ ಸರ್ಕಾರದ (Congress Government) ಕೈವಾಡ ಇದೆ. ಮಹದೇವಪ್ಪ ಮಗ ಸುನೀಲ್‍ಬೋಸ್ ತನ್ನ ಸಹಚರರಿಂದ ಈ ಕೆಲಸ ಮಾಡಿಸಿದ್ದಾರೆ ಎಂದು ವೇಣುಗೋಪಾಲ್ ಮನೆಯವರು, ಸ್ನೇಹಿತರು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

     

    ವೇಣುಗೋಪಾಲ್‌ ಮೃತದೇಹವನ್ನು ನೋಡಲು ತೆರಳಿದ ಮೊದಲ ದಿನವೇ ಟಿ ನರಸಿಪುರದ ಸ್ನೇಹಿತರು ಈ ಕೃತ್ಯವನ್ನು ಸುನಿಲ್‌ ಬೋಸ್‌ ಕಡೆಯವರು ಮಾಡಿದ್ದಾರೆ ಎಂದು ಹೇಳಿದ್ದರು. ಆದರೆ ಅಧಿಕೃತ ದಾಖಲೆಗಳು ಇಲ್ಲದೇ ಹೇಳುವುದು ಸರಿಯಲ್ಲ ಎಂದು ನಾನು ಹೇಳಲಿಲ್ಲ. ಆದರೆ ಈಗ ಸುನಿಲ್‌ ಬೋಸ್‌ ಜೊತೆಗೆ ಆರೋಪಿಗಳ ಇರುವ ಸಂಬಂಧ, ಫೋಟೋಗಳು ಎಲ್ಲವನ್ನು ನೋಡಿದಾಗ ಇದು ದೃಢವಾಗುತ್ತದೆ. ಹತ್ಯೆ ಮಾಡಿದ ಆರೋಪಿಗಳು ಕಾಂಗ್ರೆಸ್‌ ಪಕ್ಷ ಕಾರ್ಯಕರ್ತರು ಎಂದು ಹೇಳಿದರು.

    ದಲಿತ ವರ್ಗಕ್ಕೆ ಸೇರಿದ್ದ ವೇಣುಗೋಪಾಲ್‌ ಆರಂಭದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಯುವ ಬ್ರಿಗೇಡ್‌ ಸಂಪರ್ಕಕ್ಕೆ ಬಂದ ಬಳಿಕ ತಂಡವನ್ನು ಕಟ್ಟಿ ಕೆರೆ ಸ್ವಚ್ಛಗೊಳಿಸಿ ಬಾಳೆ ಮಂಡಿ ಹಾಕುವ ಮಟ್ಟಕ್ಕೆ ಬೆಳೆದಿದ್ದರು. ಅಷ್ಟೇ ಅಲ್ಲದೇ ತಾಲೂಕಿನ ಯುವ ಬಿಗ್ರೇಡ್‌ ಸಂಚಾಲಕರಾಗಿದ್ದರು. ವೇಣುಗೋಪಾಲ್‌ ಬೆಳವಣಿಗೆಯನ್ನು ಸಹಿಸದೇ ಅವರನ್ನು ಸುನಿಲ್‌ ಬೋಸ್‌ ಕಡೆಯವರು ಹತ್ಯೆ ಮಾಡಿದ್ದಾರೆ ಎಂದು ದೂರಿದರು.

    ಕಳೆದ ವರ್ಷ ಹನುಮಾನ್‌ ಜಯಂತಿ ಕಾರ್ಯಕ್ರಮಕ್ಕೆ ಅಡ್ಡಿ ಮಾಡಿದ್ದರೂ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದ್ದರು. ಈ ಬಾರಿಯೂ ಕಾರ್ಯಕ್ರಮಕ್ಕೆ ಅಡ್ಡಿ ಮಾಡಲು ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ಪುನಿತ್‌ ಫೋಟೋ ವಿಚಾರಕ್ಕೆ ಗಲಾಟೆ ನಡೆದಿದೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ವೇಣುಗೋಪಾಲ್‌ ಪುನೀತ್‌ ಅವರ ಅಭಿಮಾನಿಯಾಗಿದ್ದರು. ಪೊಲೀಸರು ತನಿಖೆಯನ್ನು ಸರಿಯಾಗಿ ನಡೆಸಿದರೆ ಸತ್ಯಾಂಶ ಹೊರ ಬರಬಹದು ಎಂದರು.

    ಇದೇ ವೇಳೆ ನಗರ ಪಾಲಿಕೆಯ ಬಿಜೆಪಿ ಸದಸ್ಯೆಯ ಸಹೋದರ 4ನೇ ಆರೋಪಿ ಆಗಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ಕೃತ್ಯ ಯಾರೇ ಮಾಡಿದರೂ ಅದು ತಪ್ಪು. ಬಿಜೆಪಿ ಪಕ್ಷದ ಸದಸ್ಯನಾಗಿದ್ದರೆ ಆತನನ್ನು ವಜಾ ಮಾಡಲಿ, ಅದೇ ರೀತಿಯಾಗಿ ಸಂಪುಟದಿಂದ ಮಹದೇವಪ್ಪ ಅವರನ್ನು ಕೈಬಿಡಲಿ. ಈ ಮೂಲಕ ಎಲ್ಲಾ ಕಾಂಗ್ರೆಸ್‌ ನಾಯಕರಿಗೆ ಸಿದ್ದರಾಮಯ್ಯ ಒಂದು ಸಂದೇಶ ಕಳುಹಿಸಲಿ. ಒಂದು ವೇಳೆ ಈಗಲೇ ಕ್ರಮ ಕೈಗೊಳ್ಳದೇ ಇದ್ದರೆ ಮುಂದೆ ಮತ್ತಷ್ಟು ಯುವ ಜನರ ಹತ್ಯೆಯಾಗಬಹುದು. ಮತದಾನಕ್ಕೆ ಹಾಕಿದ ಶಾಯಿ ಇನ್ನೂ ಅಳಿಸಿಲ್ಲ. ಸರ್ಕಾರ ಅಧಿಕಾರಕ್ಕೆ ಬಂದು 60 ದಿನ ಆಗಿಲ್ಲ. ಇನ್ನು 60 ತಿಂಗಳಲ್ಲಿ ಎಷ್ಟು ಮಂದಿ ಬಲಿಯಾಗಬೇಕು ಎಂದು ಸೂಲಿಬೆಲೆ ಸಿದ್ದರಾಮಯ್ಯ ಸರ್ಕಾರವನ್ನು ಪ್ರಶ್ನಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯೋಧರ ನೆನಪಿಗಾಗಿ ಬೆಂಗಳೂರಿನಲ್ಲಿ ಸೈನ್ಯ ವನ – ಯುವಾ ಬ್ರಿಗೇಡ್ ಅಭಿಯಾನ

    ಯೋಧರ ನೆನಪಿಗಾಗಿ ಬೆಂಗಳೂರಿನಲ್ಲಿ ಸೈನ್ಯ ವನ – ಯುವಾ ಬ್ರಿಗೇಡ್ ಅಭಿಯಾನ

    ಬೆಂಗಳೂರು: ರಾಷ್ಟ್ರ ರಕ್ಷಣೆಗಾಗಿ ಪ್ರಾಣ ಕೊಟ್ಟ ಕರ್ನಾಟಕದ ಯೋಧರ ನೆನಪಿಗಾಗಿ ಯುವಾ ಬ್ರಿಗೇಡ್ ಇಂದು ಮೈಲಸಂದ್ರದಲ್ಲಿ ಸಸಿ ನೆಡುವ ಸೈನ್ಯ ವನ ಅಭಿಯಾನ ಪ್ರಾರಂಭಿಸಿದೆ.

    50 ಸೈನಿಕ ದಂಪತಿ ಹಾಗೂ ಯುವಾ ಬ್ರಿಗೇಡ್ ಕಾರ್ಯಕರ್ತರು ಮೈಲಸಂದ್ರದ ಪಿಳೇಕಮ್ಮ ದೇಗುಲದ ಬಳಿ ಸಸಿ ನೆಟ್ಟು ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಸ್ವಾತಂತ್ರಕ್ಕೆ 75 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಕರ್ನಾಟಕದ ಹುತಾತ್ಮ ಯೋಧರ ಹೆಸರಿನಲ್ಲಿ ಕಾಡೊಂದನ್ನು ನಿರ್ಮಿಸುವ ಯೋಜನೆ ಇದು ಎಂದು ಖುಷಿ ಹಂಚಿಕೊಂಡರು. ಇದನ್ನೂ ಓದಿ: ಸಿಎಂ ಬೊಮ್ಮಾಯಿ 6-7 ತಿಂಗಳು ಅಧಿಕಾರ, 2022ರಲ್ಲಿ ಗಡ್ಡಧಾರಿ ಹೊಸ ಮುಖ್ಯಮಂತ್ರಿ: ಮೈಲಾರ ದೈವವಾಣಿ

    ಸೈನ್ಯ ವನದ ವಿಶೇಷ ಏನೆಂದರೆ ಈ ಕಾಡಿನಲ್ಲಿ ಪ್ರತಿ ಮರಗಳಿಗೂ ಹುತಾತ್ಮ ಯೋಧರ ಹೆಸರಿಡಲಿದ್ದು, ಸ್ಮಾರಕಗಳು ಸೈನ್ಯಕ್ಕೆ ಸೇರಿದ ಮಾಹಿತಿಗಳನ್ನು ಒಳಗೊಂಡಿರಲಿದೆ. ಮುಂದೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸೈನ್ಯವನವನ್ನು ನಿರ್ಮಿಸುವ ಯೋಜನೆ ಯುವಾ ಬ್ರಿಗೇಡಿನದ್ದಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡರು.

  • ಕನ್ನಡ ಶಾಲೆಗೆ ಹೊಸ ರೂಪಕೊಟ್ಟ ಯುವ ಬ್ರಿಗೇಡ್ ತಂಡ

    ಕನ್ನಡ ಶಾಲೆಗೆ ಹೊಸ ರೂಪಕೊಟ್ಟ ಯುವ ಬ್ರಿಗೇಡ್ ತಂಡ

    – ಯುವಕರ ನಡೆಗೆ ಪ್ರಶಂಸೆ

    ಬೆಂಗಳೂರು: ರಾಜ್ಯದ ಗಡಿಭಾಗವಾದ ಆನೇಕಲ್ ತಾಲೂಕಿನ ಸೊಲೂರು ಗ್ರಾಮದ ಕನ್ನಡ ಶಾಲೆಗೆ ಹೊಸ ರೂಪ ಕೊಟ್ಟು ನವೀಕರಿಸುವ ಮೂಲಕ ಶಕ್ತಿ ಸೇವಾ ಟ್ರಸ್ಟ್ ಹಾಗೂ ವಿವೇಕಾನಂದ ಯುವ ಬ್ರಿಗೇಡ್ ತಂಡದ ಯುವಕರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ಶಾಲೆಯ ನೂತನ ಕಟ್ಟಡವನ್ನ ಉದ್ಘಾಟನೆ ಮಾಡಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೊಲೂರಿನ ವಿನೋಬ ಭಾವೆ ಸರ್ಕಾರಿ ಶಾಲೆ ಭೇಟಿ ಕೊಟ್ಟು ನೂತನ ಕೊಠಡಿಗಳ ಉದ್ಘಾಟನೆ ನೆರವೇರಿಸಿದರು. ಸುಮಾರು 35 ಲಕ್ಷ ವೆಚ್ಚ ಮಾಡಿ ಶಾಲೆಯ ಮೊದಲ ಮಹಡಿಯಲ್ಲಿ ಮೂರು ಅತ್ಯಾಧುನಿಕ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಅತ್ಯಾಧುನಿಕ ಶೌಚಾಲಯವನ್ನು ನಿರ್ಮಿಸಲಾಗಿದೆ. ಹೀಗಾಗಿ ಖುದ್ದು ಸಚಿವರೇ ಶಾಲೆಯನ್ನು ವೀಕ್ಷಣೆ ಮಾಡಿ ಯುವ ಬ್ರಿಗೇಡ್ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

    ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಗಡಿಭಾಗದ ಕನ್ನಡ ಶಾಲೆಗಳು ನಿಜಕ್ಕೂ ಶೋಚನೀಯ ಸ್ಥಿತಿಯಲ್ಲಿದ್ದು ಅವುಗಳನ್ನು ಅಭಿವೃದ್ಧಿ ಮಾಡುವ ಮೂಲಕ ಕನ್ನಡ ಶಾಲೆಗಳನ್ನು ಉನ್ನತೀಕರಿಸುವ ಕೆಲಸ ಇಂದು ಸೊಲೂರಿನಲ್ಲಿ ನಡೆದಿದೆ. ಚಕ್ರವರ್ತಿ ಸೂಲಿಬೆಲೆಯವರ ಯುವ ಬ್ರಿಗೇಡ್ ಸದಸ್ಯರು ರಾಜ್ಯದ ಹಲವು ಕಡೆಗಳಲ್ಲಿ ಕೈಗಾರಿಕೆಗಳ ಜೊತೆಗೂಡಿ ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ಸಮಾಜದ ಮೇಲಿನ ಕಳಕಳಿ ಇದೇ ರೀತಿ ಮುಂದುವರಿಯಲಿ ಎಂದರು.

    ಭಗವಾನ್ ಅವರ ವಿವಾದಾತ್ಮಕ ಪುಸ್ತಕದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸುರೇಶ್ ಕುಮಾರ್, ಚರ್ಚೆ ಬೇಡ ಭಗವಾನ್ ಪುಸ್ತಕ ಖರೀದಿ ಮಾಡಿಲ್ಲ. ಈ ಬಗ್ಗೆ ಫೇಸ್‍ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದೇನೆ ಎಂದು ತಿಳಿಸಿದರು.

    ಯುವ ಬ್ರಿಗೇಡ್ ರಾಜ್ಯಾಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಸೋಲೂರಿನ ಸರ್ಕಾರಿ ಶಾಲಾ ಕಟ್ಟ ತೀರಾ ಕೆಟ್ಟ ಸ್ಥಿತಿಯಲ್ಲಿತ್ತು. ನಮ್ಮ ಸದಸ್ಯರೊಬ್ಬರು ಇದನ್ನು ನಮ್ಮ ಗಮನಕ್ಕೆ ತಂದರು. ನಾವು ಕಂಪನಿಯ ಅಡಿಯಲ್ಲಿ 22 ಲಕ್ಷ ಹಾಗೂ ನಮ್ಮ ಯುವ ಬ್ರಿಗೇಡ್ ಸದಸ್ಯರು ಸಾಮಾಜಿಕ ಜಾಲತಾಣದ ಮೂಲಕ ಹಣವನ್ನು ದಾನಿಗಳಿಂದ ಸಂಗ್ರಹಿಸಿ ಒಟ್ಟು 35 ಲಕ್ಷ ವೆಚ್ಚ ಮಾಡಿ ಸರ್ಕಾರಿ ಶಾಲೆಗೆ ಮೂರು ಹೊಸ ಕಟ್ಟಡ ನಿರ್ಮಿಸಿ ಹೊಸ ರೂಪವನ್ನು ನೀಡಿದ್ದೇವೆ. ಶಿಕ್ಷಣ ಸಚಿವರು ನೂತನ ಕಟ್ಟಡವನ್ನು ಉದ್ಘಾಟನೆ ಮಾಡಿರುವುದು ನಿಜಕ್ಕೂ ಇನ್ನು ಹೆಚ್ಚು ಸಂತಸ ನೀಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  • ಯುವಾ ಬ್ರಿಗೇಡ್ ಕೆಲಸವನ್ನು ಶ್ಲಾಘಿಸಿದ ಪ್ರಧಾನಿ ಮೋದಿ

    ಯುವಾ ಬ್ರಿಗೇಡ್ ಕೆಲಸವನ್ನು ಶ್ಲಾಘಿಸಿದ ಪ್ರಧಾನಿ ಮೋದಿ

    – ಶ್ರೀರಂಗಪಟ್ಟಣದಲ್ಲಿ ಪಾಳು ಬಿದ್ದ ದೇವಸ್ಥಾನಕ್ಕೆ ಕಾಯಕಲ್ಪ

    ಮಂಡ್ಯ: ಗಿಡಗಂಟೆಗಳು ಬೆಳೆದು ಪಾಳುಬಿದ್ದಿದ್ದ ದೇವಸ್ಥಾನವನ್ನು ಜೀರ್ಣಾದ್ಧಾರ ಮಾಡಿದ ಯುವಾ ಬ್ರಿಗೇಡ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

    ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂ ಸಮೀಪ ಕೃಷ್ಣದೇವರಾಯರ ಕಾಲದ ಶಿವನ ದೇವಾಲಯದಲ್ಲಿ ಆರಂಭದಲ್ಲಿ ಪೂಜೆ ಪುನಸ್ಕಾರ ಮಾಡಿಕೊಂಡು ಬರಲಾಗುತ್ತಿತ್ತು. ಆದರೆ 45 ವರ್ಷಗಳಿಂದ ಇಲ್ಲಿ ಪೂಜೆ ಸಲ್ಲಿಸುತ್ತಿದ್ದ ಮರಿಯಪ್ಪ ಎಂಬುವರು ಮೃತಪಟ್ಟ ಬಳಿಕ ಪಾಳುಬಿದ್ದಿತ್ತು. ದೇವಾಲಯದ ಗೋಡೆಗಳು ಶಿಥಿಲಾವಸ್ಥೆ ತಲುಪಿ, ಗಿಡಗಂಟೆಗಳು ಬೆಳೆದು, ವಿಷ ಜಂತುಗಳ ತಾಣವಾಗಿ ಪರಿವರ್ಗನೆಗೊಂಡಿತ್ತು.

    ಇದನ್ನು ಗಮನಿಸಿದ ಶ್ರೀರಂಗಪಟ್ಟಣದ ಯುವ ಬ್ರಿಗೇಡ್‍ನ ಯುವಕರ ತಂಡ ಎರಡು ತಿಂಗಳು ಪ್ರತೀ ಭಾನುವಾರ ಶ್ರಮದಾನ ಮಾಡುವ ಮೂಲಕ ದೇವಾಲಯವನ್ನನು ಸಂಪೂರ್ಣ ಜೀರ್ಣೋದ್ಧಾರ ಮಾಡಿದ್ದರು. ಬಳಿಕ ಹೊಸ ಲಿಂಗ ಪ್ರತಿಷ್ಠಾಪಿಸಿ, ನಿತ್ಯ ಪೂಜೆ ಪುನಸ್ಕಾರ ನೆರವೇರಿಸಿಕೊಂಡು ಬರುತ್ತಿದ್ದಾರೆ. ಈ ಕಾರ್ಯದ ಬಗ್ಗೆ ಇಂದು ಮನ್ ಕೀ ಬಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದು, ಯುವಕರನ್ನು ಗುಣಗಾನ ಮಾಡಿದ್ದಾರೆ.

  • ‘ಗ್ಲೋಕಲ್‌ ಇಂಡಿಯಾ’ ವೆಬ್‌ಸೈಟ್ ಮೂಲಕ ಸ್ಥಳೀಯ ಉತ್ಪನ್ನಗಳನ್ನು ಮಾರಾಟ ಮಾಡಿ ‌

    ‘ಗ್ಲೋಕಲ್‌ ಇಂಡಿಯಾ’ ವೆಬ್‌ಸೈಟ್ ಮೂಲಕ ಸ್ಥಳೀಯ ಉತ್ಪನ್ನಗಳನ್ನು ಮಾರಾಟ ಮಾಡಿ ‌

    ಬೆಂಗಳೂರು: ಇಲ್ಲಿಯವರೆಗೆ ಸ್ಥಳೀಯವಾಗಿ ಸಿಗಬಹುದಾದ ವಸ್ತುಗಳನ್ನು ಸ್ಥಳಕ್ಕೆ ಹೋಗಿ ಖರೀದಿಸಬೇಕಿತ್ತು. ಆದರೆ ಇನ್ನು ಮುಂದೆ ನೀವು ಕುಳಿತ ಸ್ಥಳದಲ್ಲೇ ಸ್ಥಳೀಯ ಉತ್ಪನ್ನಗಳನ್ನ ತಯಾರಿಸುವ ತಯಾರಕರ ಜೊತೆ ಮಾತನಾಡಿ ಉತ್ಪನ್ನಗಳನ್ನು ಬುಕ್ ಮಾಡಬಹುದು.

    ಹೌದು. ಕೊರೊನಾ ವಿರುದ್ಧ ಭಾರತ ಸಮರ ಮಾಡುವುದರ ಜೊತೆ ಈಗ ದೇಶವ್ಯಾಪಿ ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಸಿಗಬೇಕೆಂಬ ಪ್ರಬಲವಾದ ಧ್ವನಿ ಎದ್ದಿದೆ. ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ವಸ್ತುಗಳು ತಯಾರಾಗುತ್ತಿದ್ದರೂ ಪ್ರಚಾರ ಮತ್ತು ಸಂವಹನಕ್ಕೆ ಸರಿಯಾದ ವೇದಿಕೆ ಇಲ್ಲದ ಕಾರಣ ಇವುಗಳ ಬಗ್ಗೆ ಜನರಿಗೆ ಮಾಹಿತಿ ತಿಳಿಯುತ್ತಿರಲಿಲ್ಲ. ಈಗ ಇವುಗಳಿಗೆ ಒಂದು ಅತ್ಯುತ್ತಮ ವೇದಿಕೆಯಾಗಲು ಯುವಾ ಬ್ರಿಗೇಡ್‌ Glocal India ಹೆಸರಿನ ಸಂಸ್ಥೆಯನ್ನು ಆರಂಭಿಸಿದೆ.

    ಸದ್ಯ ಇರುವ ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ನಂತೆ ಈ www.glocalindia.org ಕಾರ್ಯ ನಿರ್ವಹಿಸುವುದಿಲ್ಲ. ನೇರವಾಗಿ ಈ ವೆಬ್‌ಸೈಟ್‌ ಮೂಲಕ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಿಲ್ಲ. ಇದು ಗ್ರಾಹಕರು ಮತ್ತು ತಯಾರಕರ ಮಧ್ಯೆ ಸಂವಹನ ಕಲ್ಪಿಸುವ ವೇದಿಕೆಯಾಗಿ ಕೆಲಸ ಮಾಡುತ್ತದೆ.

    ಪ್ರತಿಯೊಂದು ಉತ್ಪನ್ನದ ಬಗ್ಗೆ ಇದರಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ತಯಾರಕರ ಸಂಪರ್ಕದ ವಿಳಾಸವನ್ನು ನೀಡಲಾಗಿದೆ. ಇದು ಸ್ಥಳೀಯ ಉತ್ಪನ್ನಗಳಿಗೆ ಮಾತ್ರ ವೇದಿಕೆಯಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಪ್ರಮುಖವಾಗಿ ಮನೆ, ಪೀಠೋಪಕರಣ, ಆಹಾರ, ಫ್ಯಾಶನ್‌, ಆಟಿಕೆ, ಸೇವೆ, ಎಲೆಕ್ಟ್ರಿಕಲ್‌, ಆರೋಗ್ಯ ಮತ್ತು ಇತರೇ ವಿಭಾಗಗಳಿವೆ.

    ಸಂಸ್ಥೆ ಹೇಳಿದ್ದು ಏನು?
    ಪ್ರಧಾನಮಂತ್ರಿ ನರೇಂದ್ರಮೋದಿಯವರ ಆತ್ಮನಿರ್ಭರ ಭಾರತ ಕನಸಿನೊಂದಿಗೆ ಯುವಾಬ್ರಿಗೇಡ್ ಹುಟ್ಟುಹಾಕಿದ ಸಂಸ್ಥೆ Glocal India. ಇದು Global ಮಟ್ಟಕ್ಕೇರಬಲ್ಲ Local ವಸ್ತುಗಳಿಗೆ Vocal ಆಗುವ ಪ್ರಯತ್ನ. ಇಲ್ಲಿ ಜಿಲ್ಲಾಶಹ ಸ್ಥಳೀಯ ಉತ್ಪನ್ನಗಳನ್ನು ಪಟ್ಟಿಮಾಡಿ ಅವುಗಳು ಸಿಗುವ ಸ್ಥಳಗಳನ್ನು ತಿಳಿಸಲು ವೇದಿಕೆ ರೂಪಿಸಿಕೊಡಲಾಗಿದೆ.

    ಆಯಾ ಸ್ಥಳೀಯ ಕಂಪೆನಿಗಳು ತಾವು Global ಆಗುವ ಅರ್ಹತೆ ಇದೆಯೋ ಇಲ್ಲವೋ ಎಂಬುದನ್ನು ಕೂಡ ತಜ್ಞರ ಸಮಿತಿ ನಿರ್ಧರಿಸಿ ಅವರಿಗೆ ಗುಣಮಟ್ಟ ಪತ್ರವನ್ನು ಕೊಡಲಾಗುತ್ತದೆ. ಮತ್ತು ಈ ವೆಬ್‌ಸೈಟ್‌ನಲ್ಲಿ ಅಂತಹ ಉತ್ತಮ ಗುಣಮಟ್ಟದ ವಸ್ತುಗಳನ್ನು ಪ್ರತ್ಯೇಕವಾಗಿ ಬಿಂಬಿಸಲಾಗುತ್ತದೆ. ಇದು ಸ್ಥಳೀಯ ವಸ್ತುಗಳಿಗೆ ವೇದಿಕೆ ಮಾತ್ರ ಆಗಿದ್ದು ಇದರ ಮೂಲಕ ಮಾರಾಟ ನಡೆಯುವುದಿಲ್ಲ. ಬದಲಿಗೆ ಉತ್ಪಾದಕರ ನೇರ ಸಂಪರ್ಕವನ್ನು ಗ್ರಾಹಕರಿಗೆ ಈ ಮೂಲಕ ಕಲ್ಪಿಸಿಕೊಡಲಾಗುತ್ತದೆ.

  • ಮೂತ್ರವಿಸರ್ಜನೆಯಿಂದ ಹಾಳಾಗುತ್ತಿದ್ದ ಗೋಡೆಗಳ ಮೇಲೆ ಚಿತ್ತಾರ ಬಿಡಿಸಿದ ಯುವಾ ಬ್ರಿಗೇಡ್

    ಮೂತ್ರವಿಸರ್ಜನೆಯಿಂದ ಹಾಳಾಗುತ್ತಿದ್ದ ಗೋಡೆಗಳ ಮೇಲೆ ಚಿತ್ತಾರ ಬಿಡಿಸಿದ ಯುವಾ ಬ್ರಿಗೇಡ್

    ರಾಯಚೂರು: ಸಾಮಾನ್ಯವಾಗಿ ಬಸ್ ನಿಲ್ದಾಣಗಳ ಗೋಡೆಗಳು ಅಂದರೆ ಮೂತ್ರವಿಸರ್ಜನೆ ಮಾಡುವ ಸ್ಥಳವಾಗಿ ಬಹುತೇಕ ಕಡೆ ಮಾರ್ಪಟ್ಟಿವೆ. ಪಕ್ಕದಲ್ಲೇ ಶೌಚಾಲಯವಿದ್ದರೂ ನಿರ್ವಹಣೆ ಸರಿಯಿಲ್ಲ ಅಂತ ಜನರು ಗೋಡೆಗಳ ಮೇಲೆ ಮೂತ್ರ ಮಾಡಿ ಹೊರಟುಹೋಗುತ್ತಾರೆ. ಇಲ್ಲಿ ಮೂತ್ರ ಮಾಡಬಾರದು ಅಂತ ಎಷ್ಟೇ ದೊಡ್ಡ ಅಕ್ಷರದಲ್ಲಿ ಬರೆದರೂ ಯಾರೂ ತಲೆಕೆಡಿಸಿಕೊಳ್ಳಲ್ಲ. ಹೀಗಾಗಿ ಸಾರ್ವಜನಿಕ ಆಸ್ಥಿಯನ್ನು ಕಾಪಾಡಲು ಯುವಾ ಬ್ರಿಗೇಡ್ ಮೂತ್ರವಿಸರ್ಜನೆಯಿಂದ ಹಾಳಾಗುತ್ತಿದ್ದ ಗೋಡೆಗಳ ಮೇಲೆ ಅಂದದ ಚಿತ್ತಾರ ಬಿಡಿಸಿ ಎಲ್ಲರ ಗಮನ ಸೆಳೆದಿದೆ.

    ರಾಯಚೂರಿನ ಕೇಂದ್ರ ಬಸ್ ನಿಲ್ದಾಣದ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಗೋಡೆಗೆ ಮೂತ್ರ ಮಾಡಲು ಬರುವ ಜನ ವಾಪಸ್ ಶೌಚಾಲಯಕ್ಕೆ ಹೋಗುತ್ತಿದ್ದಾರೆ. ಯುವಾ ಬ್ರಿಗೇಡ್‍ನ ಉತ್ಸಾಹಿ ಯುವಕರ ಶ್ರಮದಿಂದ ಮೂತ್ರವಿಸರ್ಜನೆಯಿಂದ ಗಬ್ಬುನಾರುತ್ತಿದ್ದ ಗೋಡೆಗಳು ಅಂದದ ಚಿತ್ತಾರಗಳಿಂದ ಕಂಗೊಳಿಸುತ್ತಿದೆ. ಗೋಡೆಗಳ ಪಕ್ಕದಲ್ಲಿ ಮೂಗು ಮುಚ್ಚಿಕೊಂಡು ಹೋಗುತ್ತಿದ್ದ ಸಾರ್ವಜನಿಕರು ಈಗ ಗೋಡೆಗಳ ಮೇಲಿನ ಚಿತ್ರಗಳತ್ತ ಕಣ್ಣಾಯಿಸಿ ಹೋಗುತ್ತಿದ್ದಾರೆ.

    ಕಳೆದ ಐದು ವಾರಗಳಿಂದ ಪ್ರತಿ ರವಿವಾರ ಸುಂದರ ಸ್ವಚ್ಛ ರಾಯಚೂರಿಗಾಗಿ ಶ್ರಮದಾನ ಮಾಡುತ್ತಿರುವ ಯುವಾ ಬ್ರಿಗೇಡ್‍ನ ಹತ್ತು ಜನ ಸದಸ್ಯರು, ಮೊದಲೆರಡು ವಾರ ಕೇವಲ ಸ್ವಚ್ಛತೆಗೆ ಆದ್ಯತೆ ನೀಡಿದ್ದರು. ನಂತರ ಒಂದು ವಾರ ಬಣ್ಣ ಬಳಿದರು. ಕಳೆದೆರಡು ವಾರಗಳಿಂದ ಸುಂದರ ಕಲಾಕೃತಿಗಳನ್ನ ಸ್ವಚ್ಛಗೊಳಿಸಿದ ಸ್ಥಳಗಳಲ್ಲಿ ಅನಾವರಣಗೊಳಿಸುತ್ತಿದ್ದಾರೆ. ರಜಾದಿನವಾದ ಪ್ರತಿ ರವಿವಾರ ಬೆಳಗ್ಗೆ 7 ಗಂಟೆಯಿಂದ 10ರವರೆಗೆ ಯುವಾ ಬ್ರಿಗೇಡ್ ಸದಸ್ಯರು ಸೇವಾ ಕಾರ್ಯ ಕೈಗೊಳ್ಳುತ್ತಿದ್ದಾರೆ. ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗೋಡೆಗಳ ಮೇಲೆ ಗಿಡಗಳು, ಪರಿಸರ, ಹಳ್ಳಿಗಾಡಿನ ಸೊಗಡಿನ ಚಿತ್ರಗಳನ್ನ ಬಿಡಿಸಲಾಗುತ್ತಿದೆ. ಅದರ ಜೊತೆಗೆ ಜಿಲ್ಲೆಯ ಪ್ರಸಿದ್ಧ ಸ್ಥಳಗಳಾದ ಆರ್‍ಟಿಪಿಎಸ್, ಹಟ್ಟಿ ಚಿನ್ನದ ಗಣಿ, ಕಲ್ಲಾನೆ, ಕೋಟೆ, ಸಾಲುಮರದ ತಿಮ್ಮಕ್ಕ ಹಾಗೂ ದೇಶಭಕ್ತಿ ಸಾರುವ ಕಲಾಕೃತಿಗಳು ಗೋಡೆಗಳ ಮೇಲೆ ಚಿತ್ರಿಸಿರುವುದು ಸಾರ್ವಜನಿಕರನ್ನ ಆಕರ್ಷಿಸುತ್ತಿವೆ.

    ಯುವಾ ಬ್ರಿಗೇಡ್‍ನ ಸದಸ್ಯರು ತಮ್ಮ ಮುಂದಿನ ಕೆಲಸಗಳು ಹಾಗೂ ಅಗತ್ಯವಾಗಿ ಬೇಕಿರುವ ಸಹಾಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನ ಹರಿಬಿಡುತ್ತಾರೆ. ಆಸಕ್ತರು ಮುಂದೆ ಬಂದು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಇದರಿಂದ ಬಣ್ಣ, ಬ್ರೆಷ್ ಸೇರಿದಂತೆ ಇತರೆ ಖರ್ಚುಗಳು ಸರಿದೂಗುತ್ತವೆ. ಇನ್ನೂ ಹೆಚ್ಚು ಜನ ಕೈಜೋಡಿಸಿ ಶ್ರಮದಾನದಲ್ಲಿ ಭಾಗವಹಿಸಲು ಮುಂದೆ ಬರಬೇಕು ಆಗ ಸುಂದರ ನಗರ ಸೃಷ್ಟಿಸಲು ಸಾಧ್ಯ ಎಂದು ಯುವಾ ಬ್ರಿಗೆಡ್‍ನ ರಾಯಚೂರು ಜಿಲ್ಲಾ ಸಂಚಾಲಕ ಲಕ್ಷ್ಮಣ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.

    ಮಹಾತ್ಮ ಗಾಂಧೀಜಿ 150ನೇ ವರ್ಷಾಚರಣೆ ಹಿನ್ನೆಲೆ ರಾಯಚೂರು ರೈಲ್ವೇ ನಿಲ್ದಾಣವನ್ನ ಗಾಂಧೀಜಿ ಬದುಕನ್ನ ಸಾರುವ ಚಿತ್ರಕಲೆಗಳ ಮೂಲಕ ಆಕರ್ಷಣೀಯ ಕೇಂದ್ರವನ್ನಾಗಿ ಮಾಡಿರುವುದನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಬಸ್ ನಿಲ್ದಾಣದ ಗೋಡೆಗಳನ್ನ ಸುಂದರಗೊಳಿಸುವ ಕಾರ್ಯಕ್ಕೆ ಕೈಹಾಕಿ ಯುವಾ ಬ್ರಿಗೇಡ್ ಯಶಸ್ವಿಯಾಗಿದೆ.

  • ಯುವ ಬ್ರಿಗೇಡ್ ಬಳ್ಳಾರಿಯಿಂದ ಸ್ವಚ್ಛತಾ ಕಾರ್ಯ – ಜನರ ಮೆಚ್ಚುಗೆಗೆ ಪಾತ್ರವಾದ ಯುವಕರ ಕೆಲಸ

    ಯುವ ಬ್ರಿಗೇಡ್ ಬಳ್ಳಾರಿಯಿಂದ ಸ್ವಚ್ಛತಾ ಕಾರ್ಯ – ಜನರ ಮೆಚ್ಚುಗೆಗೆ ಪಾತ್ರವಾದ ಯುವಕರ ಕೆಲಸ

    ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಭಿತ್ತಿ ಚಿತ್ರಗಳು ಜಾಹೀರಾತು ಫಲಕಗಳದ್ದೇ ಕಾರುಬಾರು. ಈ ಭಿತ್ತಿ ಚಿತ್ರಗಳನ್ನು ಎಲ್ಲಂದರಲ್ಲಿ ಅಂಟಿಸಿ ನಗರದ ಸೌಂದರ್ಯ ಹಾಳಾಗುತಿತ್ತು.

    ಹೀಗಾಗಿ ಬಳ್ಳಾರಿಯ ಯುವ ಬ್ರಿಗೇಡ್ ಕಾರ್ಯಕರ್ತರ ವತಿಯಿಂದ ಸ್ವಚ್ಛತಾ ಕಾರ್ಯ ಹಮ್ಮಿಕೊಂಡು, ಬಳ್ಳಾರಿ ನಗರದ ತಾಲೂಕು ಕಚೇರಿ ಬಸ್ ನಿಲ್ದಾಣದ ಹೀಗೆ ಅನೇಕ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛ ಮಾಡಿದ್ದಾರೆ. ಬ್ರಿಗೇಡ್ ಯುವಕರ ತಂಡ ಸ್ವಂತ ಖರ್ಚಿನಲ್ಲಿ ಈ ಕಲಸ ಮಾಡಿದ್ದು, ಸಾರ್ವಜನಿಕ ಬಸ್ ನಿಲ್ದಾಣಕ್ಕೆ ಪೈಂಟ್ ಮಾಡಿದ್ದಾರೆ.

    ಪ್ರತಿ ರವಿವಾರ ಈ ಯುವಕರ ಪಡೆ ಒಂದೊಂದು ಸ್ಥಳವನ್ನು ಆಯ್ಕೆ ಮಾಡಿಕೊಂಡು ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾರೆ. ಯುವ ಬ್ರಿಗೇಡ್ ನಲ್ಲಿ ಬಹುತೇಕವಾಗಿ ವಿದ್ಯಾರ್ಥಿಗಳಿದ್ದು ಭಾನುವಾರದಲ್ಲಿ ಸಿನಿಮಾ ನೋಡಿ ಕಾಲಹರಣ ಮಾಡದೇ ನಗರವನ್ನು ಕ್ಲೀನ್ ಮಾಡುವುದನ್ನು ಹವ್ಯಾಸ ಮಾಡಿಕೊಂಡಿದ್ದಾರೆ. ಯುವಕರು ಈ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ನೆರೆಯಿಂದ ಸೂರು ಕಳೆದುಕೊಂಡಿದ್ದ ಅಜ್ಜ, ಅಜ್ಜಿಗೆ ಮನೆ ನಿರ್ಮಿಸಿ ಆಸರೆಯಾದ ಯುವಾ ಬ್ರಿಗೇಡ್

    ನೆರೆಯಿಂದ ಸೂರು ಕಳೆದುಕೊಂಡಿದ್ದ ಅಜ್ಜ, ಅಜ್ಜಿಗೆ ಮನೆ ನಿರ್ಮಿಸಿ ಆಸರೆಯಾದ ಯುವಾ ಬ್ರಿಗೇಡ್

    – ಸಂಪೂರ್ಣ ನೆಲಸಮವಾಗಿತ್ತು ಗುಡಿಸಲು
    – ನ. 15 ರಂದು ಮನೆಯ ಗೃಹಪ್ರವೇಶ
    – ಚಕ್ರವರ್ತಿ ಸೂಲಿಬೆಲೆಯವರಿಂದ ಕೀ ಹಸ್ತಾಂತರ

    ಶಿವಮೊಗ್ಗ: ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಇನ್ನು ಸರಿಯಾಗಿ ಪರಿಹಾರದ ಹಣ ವಿತರಣೆ ಮಾಡಿಲ್ಲ. ಆದರೆ ಶಿವಮೊಗ್ಗದಲ್ಲಿ ನೆರೆ ಸಂತ್ರಸ್ತ ವೃದ್ಧ ದಂಪತಿಗೆ ಯುವಾ ಬ್ರಿಗೇಡ್ ಸದಸ್ಯರು ಮನೆ ನಿರ್ಮಿಸಿಕೊಟ್ಟಿದ್ದಾರೆ.

    ರಾಜ್ಯದಲ್ಲಿ ಕಳೆದ ಎರಡು ತಿಂಗಳ ಹಿಂದಷ್ಟೇ ಕಂಡು ಕೇಳರಿಯದ ಭೀಕರ ಪ್ರವಾಹ ಬಂದು ಸಾಕಷ್ಟು ಹಾನಿ ಮಾಡಿತ್ತು. ಮಳೆ ಹೆಚ್ಚಾದ ಕಾರಣ ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿಯೂ ಕೂಡ ತುಂಗಾ ನದಿ ಉಕ್ಕಿ ಹರಿದು, ರಾಜಕಾಲುವೆಗಳ ಮೂಲಕ ಅದೆಷ್ಟೋ ಬಡಾವಣೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಈ ಪ್ರವಾಹದಲ್ಲಿ ನೂರಾರು ಮನೆಗಳು ನೆಲಕಚ್ಚಿದ್ದವು. ನೆರೆಯಿಂದ ನಲುಗಿದ ಜನರು ಅಕ್ಷರಶಃ ಬೀದಿಗೆ ಬಿದ್ದಿದ್ದರು. ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾ ಬಡಾವಣೆಯ ನಿವಾಸಿ ಮುನಿಯಪ್ಪ ಹಾಗೂ ನರಸಮ್ಮ ವೃದ್ಧ ದಂಪತಿ ಕೂಡ ನೆರೆ ಅವಘಡಕ್ಕೆ ಮನೆ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದ್ದರು. ಇದನ್ನೂ ಓದಿ:ಮಿಮ್ಸ್ ನೋಡಿ ಯುವ ಬ್ರಿಗೇಡ್‍ನಿಂದ ಚಾಮುಂಡಿ ಬೆಟ್ಟದಲ್ಲಿ ಸ್ವಚ್ಛತಾ ಕಾರ್ಯ

    ನೆರೆಗೆ ಅಜ್ಜ-ಅಜ್ಜಿಯ ಮನೆ ಸಂಪೂರ್ಣವಾಗಿ ನೆಲಸಮವಾಗಿತ್ತು. ಇದ್ದ ಒಂದು ಗುಡಿಸಲು ಕಳೆದುಕೊಂಡು ಪಡಬಾರದ ಕಷ್ಟ ಪಡುವಂತಾಗಿತ್ತು. ಇರುವ ಒಬ್ಬ ಮಗ ತನಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ಇದ್ದುಬಿಟ್ಟಿದ್ದನು. ಇಂತಹ ಸಂದರ್ಭದಲ್ಲಿ ಶಿವಮೊಗ್ಗದ ಯುವಾ ಬ್ರಿಗೇಡ್ ಸಂಘಟನೆ ತಂಡ ಇವರ ನೆರವಿಗೆ ಧಾವಿಸಿತ್ತು. ಇದನ್ನೂ ಓದಿ:ಯುವ ಬ್ರಿಗೇಡ್‍ನಿಂದ ಕುಮಾರ ಸಂಸ್ಕಾರ – ಬೆಚ್ಚಿ ಬೀಳುವ ಮಟ್ಟದಲ್ಲಿ ತ್ಯಾಜ್ಯದ ರಾಶಿ ಪತ್ತೆ

    ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ ತಂಡದ ಸದಸ್ಯರು ಈ ಅಜ್ಜ-ಅಜ್ಜಿಯ ನೆರವಿಗೆ ಧಾವಿಸಿದ್ದು, ಗುಡಿಸಲು ಬಿದ್ದು ಜೀವನವೇ ಹೋಯ್ತು ಎಂದುಕೊಂಡಿದ್ದ ವೃದ್ಧ ದಂಪತಿಗೆ ಆಸರೆಯಾಗಿ ಮನೆ ನಿರ್ಮಿಸಿಕೊಟ್ಟಿದ್ದಾರೆ. ಸುಮಾರು 1.25 ಲಕ್ಷ ರೂ. ವೆಚ್ಚದಲ್ಲಿ ಯಾವುದಕ್ಕೂ ಕೊರತೆಯಾಗದಂತೆ, ಅಚ್ಚುಕಟ್ಟಾಗಿ ಮನೆ ನಿರ್ಮಿಸಿಕೊಟ್ಟು ಸಾರ್ಥಕತೆ ಮೆರೆದಿದ್ದಾರೆ. ಸರ್ಕಾರದಿಂದ ಆಗದ ಕೆಲಸವನ್ನು ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ ತಂಡದ ಸದಸ್ಯರು ಮಾಡಿ ತೋರಿಸಿದ್ದಾರೆ. ಮಹಾ ಪ್ರವಾಹ-ಯುವಾ ಸಹಾಯ ಯೋಜನೆಯನ್ನ ಹಾಕಿಕೊಂಡು ಸಹಾಯದ ಹಸ್ತ ಚಾಚಿದ್ದಾರೆ.

    ನೆರೆಯಿಂದ ಸಂತ್ರಸ್ತಗೊಂಡರಿಗೆ ಸರಿಯಾಗಿ ಪರಿಹಾರ ಇನ್ನೂ ವಿತರಣೆ ಆಗಿಲ್ಲ. ಹೀಗಿರುವಾಗ ಸಿ.ಎಂ ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲಿಯೇ ದಂಪತಿಗೆ ಮನೆ ಕಟ್ಟಿಸುವ ಮೂಲಕ ಯುವಾ ಬ್ರಿಗೇಡ್ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನೂ ಓದಿ:ಪ್ರತಿನಿತ್ಯ 15 ನಿಮಿಷ ಫೋನಿನಲ್ಲಿ ಕನ್ನಡ ಕಲಿಯಿರಿ – ಯುವಾ ಬ್ರಿಗೇಡಿನಿಂದ ಕನ್ನಡ ಸುಗಂಧ

    ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಈ ರೀತಿಯ ಮನೆ ನಿರ್ಮಿಸಿಕೊಡಲು ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ ತಂಡದ ಪ್ಲ್ಯಾನ್ ರೂಪಿಸಿಕೊಂಡಿದ್ದೇವೆ. ಈಗಾಗಲೇ ಇದಕ್ಕೆ ಪಟ್ಟಿಯೂ ಕೂಡ ಸಿದ್ಧಪಡಿಸಿಕೊಂಡಿದ್ದೇವೆ ಎಂದು ಸಂಚಾಲಕ ಹರ್ಷ ತಿಳಿಸಿದ್ದಾರೆ.

    ಕಳೆದೆರೆಡು ತಿಂಗಳಿನಿಂದ ಮಳೆಗೆ ಬಿದ್ದಿದ್ದ ಗುಡಿಸಲು ಮುಂಭಾಗದಲ್ಲೇ ಇರುವ ದೇವಾಲಯದಲ್ಲಿ ಈ ವೃದ್ಧ ದಂಪತಿ ವಾಸವಾಗಿದ್ದು, ಅಲ್ಲಿಯೇ ಜೀವನದ ಬಂಡಿ ಸಾಗಿಸುತ್ತಿದ್ದಾರೆ. ನವೆಂಬರ್ 15ರ ಶುಕ್ರವಾರದಂದು ಈ ಮನೆಯ ಗೃಹಪ್ರವೇಶ ನಡೆಸಲು ಯುವಾ ಬ್ರಿಗೇಡ್ ತಂಡದ ಸದಸ್ಯರು ಉತ್ಸುಕರಾಗಿದ್ದು, ಅಂದು ಇದಕ್ಕೆಲ್ಲಾ ಬೆನ್ನೆಲುಬಾಗಿರುವ ಹಾಗೂ ಈ ಯೋಜನೆಯ ಸೂತ್ರದಾರರಾಗಿರುವ ಚಕ್ರವರ್ತಿ ಸೂಲಿಬೆಲೆ ಅವರಿಂದ ನೂತನ ಮನೆಯ ಬೀಗದ ಕೈಯನ್ನು ವೃದ್ಧ ದಂಪತಿ ಹಸ್ತಾಂತರಿಸುವುದಾಗಿ ಸದಸ್ಯರು ಹೇಳಿದ್ದಾರೆ.

    ವಿದ್ಯುತ್ ಸಂಪರ್ಕ ಕೂಡ ಇಲ್ಲದ ಗುಡಿಸಲಲ್ಲಿ ವಾಸವಾಗಿ ಅದನ್ನೂ ನೆರೆಯಿಂದ ಕಳೆದುಕೊಂಡಿದ್ದ ಅಜ್ಜ-ಅಜ್ಜಿಯ ನೂತನ ಮನೆಗೆ ವಿದ್ಯುತ್ ಸಂಪರ್ಕವನ್ನ ಕೂಡ ಕೊಡಿಸಲಾಗಿದೆ. ನಗರದ ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ ತಂಡದ ಸದಸ್ಯರ ಆಸಕ್ತಿಯಿಂದಾಗಿ ಇದೀಗ ತಮ್ಮ ಬಾಳ ಪಯಣದ ಇಳಿ ಸಂಜೆಯಲ್ಲಿರುವ ವೃದ್ಧ ದಂಪತಿ ಬೆಳಕು ಕಾಣುವಂತಾಗಿದೆ.