Tag: YSR mla

  • ಎಂಎಲ್‍ಎಗಾಗಿ ಠಾಣೆಯಲ್ಲೇ ದಲಿತ ಯುವಕನ ತಲೆ ಬೋಳಿಸಿ ಹಲ್ಲೆ ಮಾಡಿದ ಪೊಲೀಸರು

    ಎಂಎಲ್‍ಎಗಾಗಿ ಠಾಣೆಯಲ್ಲೇ ದಲಿತ ಯುವಕನ ತಲೆ ಬೋಳಿಸಿ ಹಲ್ಲೆ ಮಾಡಿದ ಪೊಲೀಸರು

    – ತಾಯಿಯ ಮುಂದೆ ಮಗನನ್ನು ಮಾರಣಾಂತಿಕವಾಗಿ ಥಳಿಸಿದ ಪೊಲೀಸ್ರು

    ಹೈದರಾಬಾದ್: ಶಾಸಕರೊಬ್ಬರ ಆದೇಶವನ್ನು ಪಾಲಿಸಿದ ಇಬ್ಬರು ಪೊಲೀಸರು ಠಾಣೆಯಲ್ಲೇ ದಲಿತ ಯುವಕನ ತಲೆ ಬೋಳಿಸಿ ಅವನ ಮೇಲೆ ಹಲ್ಲೆ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಅಂಧ್ರ ಪ್ರದೇಶದ ಆಡಳಿತದಲ್ಲಿರುವ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರ ಸೂಚನೆಯಂತೆ ಪೊಲೀಸರು ಈ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಈ ಘಟನೆ ಸೋಮವಾರ ಹೈದರಾಬಾದ್‍ನಿಂದ 271 ಕಿ.ಮೀ ದೂರದಲ್ಲಿರುವ ಪೂರ್ವ ಗೋದಾವರಿ ಜಿಲ್ಲೆಯ ಪೊಲೀಸ್ ಠಾಣೆ ಒಳಗೆ ನಡೆದಿದ್ದು, ಈಗ ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸಬ್ ಇನ್ಸ್‌ಪೆಕ್ಟರ್‌ ಮತ್ತು ಇಬ್ಬರು ಪೇದೆಗಳನ್ನು ಅರೆಸ್ಟ್ ಮಾಡಲಾಗಿದೆ.

    ಶೋಷಣೆಗೆ ಒಳಗಾದ ದಲಿತ ಯುವಕನನ್ನು ವೇದುಲ್ಲಪಲ್ಲಿ ಗ್ರಾಮದ ವರಪ್ರಸಾದ್ ಎಂದು ಗುರುತಿಸಲಾಗಿದೆ. ಆತ ಪೊಲೀಸರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ನಡೆದಾಗ ವರಪ್ರಸಾದ್ ತಾಯಿ ಕೂಡ ಠಾಣೆಯಲ್ಲೇ ಇದ್ದರು ಎಂದು ಹೇಳಲಾಗಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಗೌತಮ್ ಸಾವಂಗ್ ಈ ಘಟನೆಯನ್ನು ಖಂಡಿಸಿ ತನಿಖೆಗೆ ಆದೇಶಿಸಿದ್ದಾರೆ. ಜೊತೆಗೆ ಘಟನೆಯಲ್ಲಿ ಭಾಗಿಯಾದ ಮೂವರು ಪೊಲೀಸರನ್ನು ಅಮಾನತು ಮಾಡಿ ಅರೆಸ್ಟ್ ಮಾಡಲಾಗಿದೆ.

    ವರಪ್ರಸಾದ್ ಹೇಳುವ ಪ್ರಕಾರ, ಸ್ಥಳೀಯರೊಬ್ಬರ ಅಂತ್ಯಕ್ರಿಯೆ ನಡೆಯುತ್ತಿದ್ದ ವೇಳೆ ಅಲ್ಲಿ ಹೋಗುತ್ತಿದ್ದ ಮರಳಿನ ಟ್ರಕ್‍ಗಳನ್ನು ಪ್ರಸಾದ್ ಮತ್ತು ಆತನ ಇನ್ನಿಬ್ಬರು ತಡೆದು ನಿಲ್ಲಿಸಿದ್ದಾರೆ. ಇದರಿಂದ ಕೋಪಗೊಂಡ ಎಂಎಲ್‍ಎ ವರಪ್ರಸಾದ್‍ಗೆ ಕಾರಿನಲ್ಲಿ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಶಾಸಕರಿಗೂ ಮತ್ತು ವರಪ್ರಸಾದ್ ನಡುವೆ ಜಗಳವಾಗಿದೆ. ಇದರಿಂದ ಕೋಪಗೊಂಡ ಶಾಸಕ ಪೊಲೀಸರನ್ನು ಕರೆಸಿ ಆತನಿಗೆ ಸರಿಯಾಗಿ ಬುದ್ಧಿ ಕಲಿಸಿ ಎಂದು ಸೂಚಿಸಿದ್ದಾರೆ. ಆಗ ಪೊಲೀಸರು ವರಪ್ರಸಾದ್‍ನನ್ನು ಅರೆಸ್ಟ್ ಮಾಡಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

    ಶಾಸಕರ ಜೊತೆ ಗಲಾಟೆಯಾದ ಮರುದಿನ ಪ್ರಸಾದ್ ಮನೆಗೆ ಬಂದ ಪೊಲೀಸ್ ಅಧಿಕಾರಿಗಳು, ನಿನ್ನನ್ನು ವಿಚಾರಣೆ ಮಾಡಬೇಕು ಎಂದು ಹೇಳಿ ಕರೆದುಕೊಂಡು ಹೋಗಿದ್ದಾರೆ. ನಂತರ ಠಾಣೆಯ ಒಳಗೆ ಇನ್ಸ್‌ ಪೆಕ್ಟರ್‌ ಆತನಿಗೆ ಮನಬದಂತೆ ಥಳಿಸಿದ್ದಾನೆ. ಬೆಲ್ಟ್ ಮತ್ತು ಶೂನಲ್ಲಿ ಹಲ್ಲೆ ಮಾಡಿದ್ದಾರೆ. ನಂತರ ಠಾಣೆಗೆ ಕ್ಷೌರಿಕನನ್ನು ಕರೆಸಿ, ವರಪ್ರಸಾದ್‍ನ ತಲೆ ಮತ್ತು ಮೀಸೆಯನ್ನು ಬೋಳಿಸಿದ್ದಾರೆ. ಜೊತೆಗೆ ಮತ್ತೆ ಹಲ್ಲೇ ಮಾಡಿ, ನಂತರ ಆತನನ್ನು ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದಾರೆ.

    ಎಸ್‍ಸಿ/ಎಸ್‍ಟಿ ದೌರ್ಜನ್ಯ (ತಡೆಗಟ್ಟುವಿಕೆ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯಡಿ ಸಬ್‍ಇನ್ಸ್‌ಪೆಕ್ಟರ್‌ ಮತ್ತು ಇಬ್ಬರು ಪೇದೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೀತಾನಗರಂ ಪೊಲೀಸರು ಯುವಕನನ್ನು ಅವಮಾನಿಸಿದ ಘಟನೆಗೆ ನಾವು ವಿಷಾದಿಸುತ್ತೇವೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಮತ್ತು ಅಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದು ಪೊಲೀಸ್ ಮುಖ್ಯ ಅಧಿಕಾರಿ ಕೆ.ವಿ.ಮೋಹನ್ ರಾವ್ ಹೇಳಿದ್ದಾರೆ.

    https://twitter.com/ncbn/status/1285549093830291456

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ ಮುಖಂಡ ಚಂದ್ರಬಾಬು ನಾಯ್ಡು, ಜಂಗಲ್ ರಾಜ್ ಆಂಧ್ರಪ್ರದೇಶಕ್ಕೆ ವಾಪಸ್ ಬಂದಿದೆ. ವೈಎಸ್‍ಆರ್ ಪಕ್ಷದ ಶಾಸಕರೊಬ್ಬ ವರಪ್ರಸಾದ್ ತಲೆಯನ್ನು ಬೋಳಿಸಿರುವುದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.