Tag: Youths

  • ಯುವಕ-ಯುವತಿಯರ ತಂಡದ ಅಸಹ್ಯ ವರ್ತನೆ

    ಯುವಕ-ಯುವತಿಯರ ತಂಡದ ಅಸಹ್ಯ ವರ್ತನೆ

    – ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

    ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಅಸಹ್ಯ ರೀತಿಯಲ್ಲಿ ವರ್ತಿಸುತ್ತಿದ್ದ ಪ್ರತ್ಯೇಕ ಕೋಮಿನ ಯುವಕ-ಯುವತಿಯರ ತಂಡವನ್ನು ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಪುತ್ತೂರಿನ ಪ್ರವಾಸಿ ತಾಣವಾಗಿರುವ ಬಿರುಮಲೆ ಗುಡ್ಡದಲ್ಲಿ ಈ ತಂಡ ಅಸಭ್ಯವಾಗಿ ವರ್ತಿಸುತ್ತಿದೆ ಎನ್ನುವ ದೂರು ಭಜರಂಗದಳಕ್ಕೆ ದೊರೆತಿದೆ. ಈ ದೂರು ದೊರೆತ ಹಿನ್ನೆಲೆಯಲ್ಲಿ ಭಜರಂಗದಳ ಕಾರ್ಯಕರ್ತರು ಈ ತಂಡವನ್ನು ಈ ವಿಚಾರವಾಗಿ ಪ್ರಶ್ನಿಸಿದ್ದು, ಬಳಿಕ ಸಾರ್ವಜನಿಕ ಸ್ಥಳದಲ್ಲಿ ಅಸಹ್ಯ ರೀತಿಯಲ್ಲಿ ವರ್ತಿಸುತ್ತಿದ್ದ ಪ್ರತ್ಯೇಕ ಕೋಮಿನ ಯುವಕ-ಯುವತಿಯರ ತಂಡವನ್ನು ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಪೊಲೀಸರು ಎಲ್ಲರನ್ನೂ ಠಾಣೆಗೆ ಕರೆದುಕೊಂಡು ವಿಚಾರಣೆ ನಡೆಸಿದ್ದು, ಬಳಿಕ ತಂಡಕ್ಕೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಎರಡು ಕೋಮಿನ ಜನ ಪುತ್ತೂರು ನಗರ ಪೊಲೀಸ್ ಠಾಣೆಯ ಬಳಿ ಜಮಾಯಿಸಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಬೀಸಿ ಎರಡು ಗುಂಪುಗಳನ್ನು ಚದುರಿಸಿದ್ದಾರೆ.

  • ಜೊತೆಯಲ್ಲಿದ್ದ ಹುಡುಗಿ ಎದುರೇ ಬಡಿದಾಡಿಕೊಂಡ ಇಬ್ಬರು ಯುವಕರು

    ಜೊತೆಯಲ್ಲಿದ್ದ ಹುಡುಗಿ ಎದುರೇ ಬಡಿದಾಡಿಕೊಂಡ ಇಬ್ಬರು ಯುವಕರು

    ಹಾಸನ: ಕ್ಷುಲ್ಲಕ ಕಾರಣಕ್ಕೆ ಹುಡುಗಿಯ ಎದುರೇ ಯುವಕರಿಬ್ಬರು ಬಡಿದಾಡಿಕೊಂಡಿರುವ ಘಟನೆ ಹಾಸನ ನಗರದ ಸ್ವಾಗತ್ ಪಾರ್ಟಿ ಹಾಲ್ ಬಳಿ ನಡೆದಿದೆ.

    ಸೋಮವಾರ ರಾತ್ರಿ ಯುವಕರಿಬ್ಬರು ಕೊರಳ ಪಟ್ಟಿ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ಜಗಳಕ್ಕೆ ನಿಂತಿದ್ದರು. ಈ ವೇಳೆ ಜೊತೆಯಲ್ಲಿದ್ದ ಯುವತಿಯೊಬ್ಬಳು ಮಧ್ಯ ಪ್ರವೇಶಿಸಿ ಇಬ್ಬರ ಜಗಳ ಬಿಡಿಸಲು ಮುಂದಾಗಿದ್ದಾಳೆ. ಆದರೆ ಹುಡುಗಿಯ ಮನವಿಗೂ ಕ್ಯಾರೆ ಎನ್ನದ ಇಬ್ಬರು ಯುವಕರು ಒಬ್ಬರನ್ನೊಬ್ಬರು ಹಿಡಿದು ಎಳೆದಾಡಿದ್ದಾರೆ.

    ಯುವಕರಿಬ್ಬರ ಜಗಳವನ್ನು ಗಮನಿಸಿ ಸುತ್ತಲೂ ಜಮಾಯಿಸಿದ ಸಾರ್ವಜನಿಕರು ಯುವತಿ ಮತ್ತು ಯುವಕರಿಗೆ ಬೈದು ಬುದ್ದಿ ಹೇಳಿ ಕಳುಹಿಸಿದ್ದಾರೆ. ಜಗಳ ಯಾವ ಕಾರಣಕ್ಕೆ ಶುರುವಾಯಿತು, ಅವರು ಎಲ್ಲಿಯವರು ಎಂಬ ಮಾಹಿತಿ ಲಭ್ಯವಾಗಿಲ್ಲ.

    ಸದ್ಯ ಯುವಕರ ಕಿತ್ತಾಟದ ವಿಡಿಯೋವನ್ನು ಸಾರ್ವಜನಿಕರೊಬ್ಬರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ.

  • ಉಡುಪಿ ಅಪಘಾತ: ಬಂಡೆಗೆ ಉಜ್ಜಿಕೊಂಡೇ 50 ಮೀ. ಸಾಗಿದ ಬಸ್- 9 ಸಾವು

    ಉಡುಪಿ ಅಪಘಾತ: ಬಂಡೆಗೆ ಉಜ್ಜಿಕೊಂಡೇ 50 ಮೀ. ಸಾಗಿದ ಬಸ್- 9 ಸಾವು

    -ಬಸ್ ಬಲಭಾಗದಲ್ಲಿ ಕುಳಿತಿದ್ದವರ ಸಾವು
    -ಅಪಘಾತಕ್ಕೆ ಕಾರಣ ಏನು?

    ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನ ಎಸ್.ಕೆ ಬಾರ್ಡರ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಮೈಸೂರಿನಿಂದ ಪ್ರವಾಸ ಬಂದಿದ್ದ ಒಂಬತ್ತು ಮಂದಿ ಅಪಘಾತದಲ್ಲಿ ಅಸುನೀಗಿದ್ದಾರೆ. 25 ಮಂದಿ ಗಾಯಗೊಂಡಿದ್ದು ಓರ್ವನ ಸ್ಥಿತಿ ಗಂಭೀರವಾಗಿದೆ.

    ಕುದುರೆಮುಖದ ಸುಂದರ ಪರ್ವತ ಶ್ರೇಣಿಯ ನಡುವಿನ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ 9 ಮಂದಿ ಸ್ಥಳದಲ್ಲೇ ಅಸುನೀಗಿದ್ದಾರೆ. ಮೃತರನ್ನು ಮೈಸೂರಿನ ನಂಜನಗೂಡು ಸಮೀಪದ ಸೆಂಚುರಿ ವೈಟಲ್ ರೆಕಾರ್ಡ್ಸ್ ಕಂಪನಿಯ ನೌಕರರು ಎಂದು ಗುರುತಿಸಲಾಗಿದೆ. ಈ ಕಂಪನಿಯ ನೌಕರರು ಫೆಬ್ರುವರಿ 14ರಂದು ಮೈಸೂರಿನಿಂದ ಪ್ರವಾಸ ಹೊರಟು ಶೃಂಗೇರಿ, ಹೊರನಾಡು, ಕಳಸ ಸುತ್ತಾಡಿದ್ದಾರೆ. ಉಡುಪಿ ಜಿಲ್ಲೆಯ ಮಲ್ಪೆಗೆ ಸಮುದ್ರ ನೋಡಲು ಹೊರಟಿದ್ದರು. ಆದರೆ ಮಾರ್ಗಮಧ್ಯದಲ್ಲೇ ಒಂಬತ್ತು ಮಂದಿಯ ಪ್ರವಾಸ ದುರಂತ ಕಂಡಿದೆ.

    ಶನಿವಾರ ಸಂಜೆ ಐದು ಮೂವತ್ತರ ಸುಮಾರಿಗೆ ಖಾಸಗಿ ಮಿನಿ ಬಸ್ ಘಾಟಿಯಿಂದಿಳಿದು ಬರುತ್ತಿದ್ದಾಗ ಎಡಗಡೆಯ ತಡೆಗೋಡೆಗೆ ಗುದ್ದಿದೆ. ಚಾಲಕ ಒಂದೇ ಸಮನೆ ಬಲಕ್ಕೆ ತಿರುಗಿಸಿದ್ದರಿಂದ ಬಂಡೆಗೆ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ 9 ಮಂದಿ ಸ್ಥಳದಲ್ಲೇ ಮೃತರಾಗಿದ್ದಾರೆ. ಘಟನೆಯಲ್ಲಿ 25 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಾರ್ಕಳದ ಸಿಟಿ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆ, ಮಣಿಪಾಲದ ಕೆಎಂಸಿಗೆ ದಾಖಲಿಸಲಾಗಿದೆ. ಗಾಯಗೊಂಡವರ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಸ್‍ಪಿ, ಎಎಸ್‍ಪಿ, ಸರ್ಕಲ್ ಇನ್‍ಸ್ಪೆಕ್ಟರ್ ಗಳ ತಂಡ ಆಸ್ಪತ್ರೆಯಲ್ಲಿ ಮೊಕ್ಕಾಂ ಹೂಡಿದ್ದು ಗಾಯಾಳುಗಳು ಮತ್ತು ಮೃತರ ವಿವರ ಸಂಗ್ರಹಿಸಿ ಕುಟುಂಬಗಳಿಗೆ ಮಾಹಿತಿ ನೀಡುತ್ತಿದ್ದಾರೆ.

    ಕರಾವಳಿ ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಭೀಕರ ಅಪಘಾತವಿದು. ನಂಜನಗೂಡಿನ ವೈಟಲ್ ರೆಕಾರ್ಡ್ ಕಂಪನಿಯಲ್ಲಿ ಡಾಟಾ ಎಂಟ್ರಿ ಮಾಡುವ ಯುವಕರ ತಂಡವಿದು. ಪ್ರವಾಸದ ಸಂತೋಷದಲ್ಲಿದ್ದ ಯುವಕ-ಯುವತಿಯರ ತಂಡಕ್ಕೆ ಈ ಅಪಘಾತ ಬರಸಿಡಿಲಿನಂತೆ ಹೊಡೆದಿದೆ. ಬಸ್ ನಲ್ಲಿ ಮೋಜು-ಮಸ್ತಿ ಮಾಡಿಕೊಂಡು ಅಂತ್ಯಕ್ಷರಿ ಹಾಡುತ್ತಾ ಯುವಕರ ತಂಡ ಖುಷಿಖುಷಿಯಾಗಿ ಬರುತ್ತಿದ್ದರು. ಗೌಜು, ಗಲಾಟೆ ತಾರಕಕ್ಕೇರಿದಾಗ ಚಾಲಕನ ಗಮನ ಬೇರೆಡೆಗೆ ಹೋಗಿದೆ ಇದರಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

    ಒಂಬತ್ತು ಮೃತರ ಪೈಕಿ ಎಂಟು ಮಂದಿಯ ಗುರುತು ಪತ್ತೆಯಾಗಿದ್ದು ಮೃತರನ್ನು ಗುರುತಿಸಲಾಗಿದೆ. ಅನಜ್ಞಾ (21,) ರಂಜಿತಾ ಪಿ, ಯೋಗೆಂದ್ರ (21), ರಾಧಾ ರವಿ(22), ಪ್ರೀತಂ ಗೌಡ ಶಾರೋಲ್(21), ಅಡುಗೆ ಸಹಾಯಕ ಬಸವರಾಜ್ (22), ಬಸ್ ಚಾಲಕ ಮಾರುತಿ ಎಂದು ಗುರುತಿಸಲಾಗಿದೆ. ಶವಗಳನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಕಾರ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

    ಭಾನುವಾರ ಮೈಸೂರಿನಿಂದ ಮೃತರ ಕುಟುಂಬದವರು ಬಂದ ನಂತರ ಶವ ಪರೀಕ್ಷೆ ನಡೆಸಿ ಹಸ್ತಾಂತರಿಸಲಾಗುತ್ತದೆ. ಎಸ್.ಕೆ.ಬಾರ್ಡರ್ ಬಳಿಯ ಅಬ್ಬಾಸ್ ಕಟ್ಟಿಂಗ್ ಬಳಿ ಅಪಘಾತ ನಡೆದಿದ್ದು ಈ ಭಾಗದಲ್ಲಿ ತುಂಬಾ ಕಿರಿದಾದ ತಿರುವಿನ ರಸ್ತೆ ಅಪಘಾತಕ್ಕೆ ಕಾರಣ ಎನ್ನುವುದು ಸ್ಥಳೀಯರ ಆಕ್ರೋಶವಾಗಿದೆ.

    ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವಂತೆ ಅಪಘಾತ ಸ್ಥಳದಲ್ಲಿದ್ದ ಬಸ್ ತೆರವು ಮಾಡಲಾಗಿದೆ. ಕಂಪನಿ ಎಚ್.ಆರ್. ಸೇರಿದಂತೆ 20 ವರ್ಷದೊಳಗಿನ ತರುಣ-ತರುಣಿಯರು ಬಸ್ ನ ಪ್ರಯಾಣಿಕರಾಗಿದ್ದರು. ಇದೊಂದು ಧಾರುಣ ಘಟನೆ ಮಲೆನಾಡು ಕರಾವಳಿ ಭಾಗದ ಜನರನ್ನು ಬೆಚ್ಚಿಬೀಳಿಸಿದೆ. ಭೀಕರ ಘಟನೆಗೆ ನಿಖರ ಕಾರಣ ತನಿಖೆಯಿಂದ ಗೊತ್ತಾಗಲಿದೆ.

  • ಸೇನೆಗೆ ಆಯ್ಕೆಯಾದ ಸುಲ್ತಾನಪೂರದ 9 ಯುವಕರು- ಎಕ್ಸಂಬಾ ಪಟ್ಟಣದ 8 ಯುವಕರು

    ಸೇನೆಗೆ ಆಯ್ಕೆಯಾದ ಸುಲ್ತಾನಪೂರದ 9 ಯುವಕರು- ಎಕ್ಸಂಬಾ ಪಟ್ಟಣದ 8 ಯುವಕರು

    ಬೆಳಗಾವಿ/ಚಿಕ್ಕೋಡಿ: ಗಡಿ ಕಾಯ್ದು ದೇಶ ಸೇವೆ ಮಾಡಬೇಕು ಎನ್ನುವ ಹಂಬಲ ಸಾಕಷ್ಟು ಯುವಕರಲ್ಲಿ ಇರುತ್ತದೆ. ಆದರೆ ಬಹಳಷ್ಟು ಯುವಕರ ಆಸೆ ಆಸೆಯಾಗಿಯೇ ಉಳಿದಿರುತ್ತದೆ. ಆದರೆ ಇಲ್ಲಿ ವಿಶೇಷ ಎನ್ನುವಂತೆ ಒಂದೇ ಊರಿನ 9 ಯುವಕರು ಸೇನೆಗೆ ಭರ್ತಿಯಾಗುವ ಮೂಲಕ ಇಡೀ ಊರಿಗೆ ಹೆಮ್ಮೆ ತಂದಿದ್ದಾರೆ.

    ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸುಲ್ತಾನಪೂರ ಗ್ರಾಮದ 9 ಯುವಕರು ಭಾರತೀಯ ಸೇನೆಗೆ ಆಯ್ಕೆಯಾಗಿ ದೇಶ ಸೇವೆಗೆ ಸಿದ್ಧವಾಗಿದ್ದಾರೆ. ಕೊಪ್ಪಳದಲ್ಲಿ ನಡೆದ ಸೇನಾ ಭರ್ತಿ ರ‌್ಯಾಲಿಯಲ್ಲಿ ಭಾಗವಹಿಸಿ ದೈಹಿಕ ಹಾಗೂ ಲಿಖಿತ ಪರೀಕ್ಷೆ ಬರೆದು ಯುವಕರು ಸೇನೆಯ ಜನರಲ್ ಡ್ಯೂಟಿಗೆ ಜಿ.ಡಿ.ಗೆ ಆಯ್ಕೆಯಾಗಿದ್ದಾರೆ. ಸೇನೆಗೆ ಆಯ್ಕೆಯಾಗಲು ಸಾಕಷ್ಟು ಪರಿಶ್ರಮ ಪಟ್ಟಿರುವ ಯುವಕರು ದೇಶ ಸೇವೆ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

    ಎಕ್ಸಂಬಾ ಪಟ್ಟಣದ ಯುವಕರು

    ಸುಲ್ತಾನಪೂರ ಗ್ರಾಮ ಅಷ್ಟೇ ಅಲ್ಲ ಚಿಕ್ಕೋಡಿ ತಾಲೂಕಿನ ಎಕ್ಸಂಬಾ ಪಟ್ಟಣದ 8 ಜನ ಯುವಕರು ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ. ಭಾರತೀಯ ಸೇನೆಗೆ ಆಯ್ಕೆಯಾದ ಯುವಕರನ್ನ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಸನ್ಮಾನಿಸಿದ್ದಾರೆ. ತಮ್ಮ ಗ್ರಾಮಗಳಿಂದ ಇಷ್ಟೊಂದು ಯುವಕರು ಸೇನೆಗೆ ಆಯ್ಕೆಯಾಗಿ ದೇಶ ಸೇವೆ ಮಾಡಲು ಹೋಗುತ್ತಿರುವದಕ್ಕೆ ಗ್ರಾಮಸ್ಥರು ಕೂಡ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

  • ನಾಯಿ ತಂದ ಎಡವಟ್ಟು- ಎರಡು ಗುಂಪುಗಳ ನಡುವೆ ಮಾರಾಮಾರಿ

    ನಾಯಿ ತಂದ ಎಡವಟ್ಟು- ಎರಡು ಗುಂಪುಗಳ ನಡುವೆ ಮಾರಾಮಾರಿ

    ಬೆಂಗಳೂರು: ನಾಯಿಯಿಂದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಬೆಂಗಳೂರಿನ ರಾಜಾರಾಜೇಶ್ವರಿನಗರ ಸಾಯಿ ಪೆಟ್ರೋಲ್ ಬಂಕ್‍ನಲ್ಲಿ ನಡೆದಿದೆ.

    ಖಾಸಗಿ ಕ್ಲಬ್‍ವೊಂದರಲ್ಲಿ ಟೆನ್ನಿಸ್ ಕೋಚ್ ಆಗಿ ಕೆಲಸ ಮಾಡುವ ದೀಪಕ್ ಮತ್ತು ಸ್ನೇಹಿತ ಗಗನ್ ರಾತ್ರಿ ಪೆಟ್ರೋಲ್ ಹಾಕಿಸಿಕೊಳ್ಳಲು ಬೈಕ್‍ನಲ್ಲಿ ಹೋಗಿದ್ದರು. ಈ ವೇಳೆ ಪೆಟ್ರೋಲ್ ಬಂಕ್‍ಗೆ ಹೋಗುವ ದಾರಿಯಲ್ಲಿ ಬೀದಿ ನಾಯಿಯೊಂದು ರಸ್ತೆಗೆ ಅಡ್ಡಲಾಗಿ ಮಲಗಿತ್ತು.

    ನಾಯಿಯನ್ನು ನೋಡಿದ ದೀಪಕ್ ಅದನ್ನು ಪಕ್ಕಕ್ಕೆ ಹೋಗುವಂತೆ ಗದರುತ್ತಿದ್ದ ವೇಳೆ ಅದೇ ದಾರಿಯಲ್ಲಿ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ನಾಯಿ ಮೇಲೆ ಯಾಕೆ ಗಲಾಟೆ ಮಾಡ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನು ಕೇಳಿದ ದೀಪಕ್ ನಾವು ಗಲಾಟೆ ಮಾಡುತ್ತಿಲ್ಲ ನಾಯಿಯನ್ನು ಪಕ್ಕಕ್ಕೆ ಹೋಗುವಂತೆ ಬೆದರಿಸುತ್ತಿದ್ದೇವೆ ಎಂದು ಹೇಳಿದ್ದರು.

    ಇದೇ ವಿಚಾರಕ್ಕೆ ನಾಲ್ವರ ಮಧ್ಯೆ ಗಲಾಟೆ ಆಗಿ ಕಾರಿನಲ್ಲಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಟೆನ್ನಿಸ್ ಕೋಚ್ ದೀಪಕ್ ಮತ್ತು ಸ್ನೇಹಿತ ಗಗನ್ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆಗೊಳಾದ ಗಗನ್ ತಮ್ಮ ಸ್ನೇಹಿತರಾದ ಮಧು, ಶಾನು ಎಂಬವರಿಗೆ ಫೋನ್ ಮಾಡಿ ಸಹಾಯಕ್ಕೆ ಕರೆದಿದ್ದರು.

    ಗಲಾಟೆ ಸ್ಥಳಕ್ಕೆ ಬಂದ ಮಧು, ಶಾನು ಕೂಡ ಕಾರಿನಲ್ಲಿದ್ದ ಇಬ್ಬರು ಅಪರಿಚಿತರ ಮೇಲೆ ಮರದ ದಿಮ್ಮಿಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬೀದಿ ನಾಯಿಯ ಕ್ಷಲ್ಲಕ ವಿಚಾರಕ್ಕೆ ತಡರಾತ್ರಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಬಗ್ಗೆ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ.

  • ಲುಕೇಮಿಯಾ ಕಾಯಿಲೆಯಿಂದ ಬಳಲುತ್ತಿದ್ದ ಮಗುವನ್ನು ಉಳಿಸಲು ಚೆಂಡೆ ಪ್ರದರ್ಶನ ಮಾಡಿ  ಹಣ ಸಂಗ್ರಹ

    ಲುಕೇಮಿಯಾ ಕಾಯಿಲೆಯಿಂದ ಬಳಲುತ್ತಿದ್ದ ಮಗುವನ್ನು ಉಳಿಸಲು ಚೆಂಡೆ ಪ್ರದರ್ಶನ ಮಾಡಿ ಹಣ ಸಂಗ್ರಹ

    – ಬಾಲಕಿಯ ಕುಟುಂಬಸ್ಥರಿಗೆ 79,551 ರೂ. ಹಸ್ತಾಂತರ

    ಬೆಂಗಳೂರು: ಮಗುವಿನ ಜೀವ ಉಳಿಸಲು ಚೆಂಡೆ ತಂಡ ಹಲವೆಡೆ ಚೆಂಡೆ ಪ್ರದರ್ಶನ ನೀಡಿ ಹಣ ಸಂಗ್ರಹಿಸುವ ಮೂಲಕ ಮಾನವೀಯತೆ ಮರೆದಿದೆ.

    ಆಟವಾಡಿಕೊಂಡು ಮನೆಯವರ ಮುದ್ದಿನ ಕಣ್ಮಿಣಿಯಾಗಿದ್ದ ಕುಂದಾಪುರದ ನಿಹಾರಿಕ ಲುಕೇಮಿಯಾ ಕ್ಯಾನ್ಸರ್ ನಿಂದ ಬಳಲುತ್ತಿದ್ದಾಳೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನಿಹಾರಿಕ ತಂದೆ ಮಹೇಶ್ 5 ವರ್ಷದ ಕಂದಮ್ಮನನ್ನು ಉಳಿಸಲು ಹರಸಾಹಸ ಪಡುತ್ತಿದ್ದಾರೆ. ಇನ್ನೊಂದಡೆ ಮಹೇಶ್ ತಾಯಿಗೂ ಇತ್ತೀಚೆಗೆಷ್ಟೇ ಕ್ಯಾನ್ಸರ್ ಬಂದಿತ್ತು.

    ನಿಹಾರಿಕಳನ್ನು ಮಹೇಶ್ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲದೆ ಎರಡೂವರೆ ವರ್ಷಗಳ ನಿರಂತರವಾದ ಚಿಕಿತ್ಸೆ ನೀಡಿದರೆ, ನಿಹಾರಿಕಳನ್ನು ಉಳಿಸಬಹುದು. ಈ ಚಿಕಿತ್ಸೆಗೆ 10 ಲಕ್ಷ ರೂ. ಖರ್ಚು ಆಗುತ್ತೆ ಎಂದು ವೈದ್ಯರು ತಿಳಿಸಿದ್ದಾರೆ.

    ಈಗ ನಿಹಾರಿಕಗಳ ಸಹಾಯಕ್ಕೆ ಬಂದಿರುವ ಶ್ರೀ ಸಾಯಿ ಚೆಂಡೆ ಬಳಗದ ಟೀಂ ಉಡುಪಿಯ ಹಲವಡೆ ಚೆಂಡೆ ಪ್ರದರ್ಶನವನ್ನು ನೀಡಿ ಚಿಕಿತ್ಸೆಗೆ ಹಣ ಸಂಗ್ರಹವನ್ನು ಮಾಡಿದ್ದಾರೆ. ಈ ಟೀಮ್‍ನ ಸದಸ್ಯರು ಚೆಂಡೆ ಕಲೆಯನ್ನು ಪ್ರದರ್ಶಿಸಿ, ಸದ್ಯ 79,551 ರೂ. ಹಸ್ತಾಂತರ ಮಾಡಿದ್ದಾರೆ.

  • ಹೊಸ ವರ್ಷ ಆಚರಣೆ ವೇಳೆ ಅನ್ಯ ರಾಜ್ಯದ ಯುವಕರ ಮೇಲೆ ಮನಬಂದಂತೆ ಹಲ್ಲೆ

    ಹೊಸ ವರ್ಷ ಆಚರಣೆ ವೇಳೆ ಅನ್ಯ ರಾಜ್ಯದ ಯುವಕರ ಮೇಲೆ ಮನಬಂದಂತೆ ಹಲ್ಲೆ

    ಹುಬ್ಬಳ್ಳಿ: ಹೊಸ ವರ್ಷ ಸಂಭ್ರಮಾಚರಣೆ ಮಾಡುತ್ತಿದ್ದ ಅನ್ಯ ರಾಜ್ಯದ ಯುವಕರ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಕಳೆದ ರಾತ್ರಿ ಹುಬ್ಬಳ್ಳಿಯ ಅಫೇಕ್ಸ್ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಹೊಸ ವರ್ಷ ಆಚರಣೆ ಮಾಡುವ ವೇಳೆ ಈ ಘಟನೆ ಸಂಭವಿಸಿದೆ. ಮೂತ್ರ ವಿಸರ್ಜನೆ ಮಾಡುತ್ತಿದ್ದ ಯುವಕರಿಗೆ ಕಿಡಿಗೇಡಿಗಳು ಮೂತ್ರ ವಿಸರ್ಜನೆ ಮಾಡದಂತೆ ಅವಾಜ್ ಹಾಕಿದ್ದಾರೆ. ಈ ವೇಳೆ ಅನ್ಯರಾಜ್ಯದ ಯುವಕರು ಹಾಗೂ ಕಿಡಿಗೇಡಿಗಳ ಮಧ್ಯೆ ಮಾತಿನ ಚಕಮಕಿ ನಡೆದು ಗಲಾಟೆ ಸಂಭವಿಸಿದೆ.

    ಬೈಕ್ ಮೇಲೆ ಬಂದಿದ್ದ 10-12 ಕಿಡಿಗೇಡಿಗಳು ಅನ್ಯರಾಜ್ಯದ ಕಾರ್ಮಿಕ ಯುವಕರ ರೂಂಗೆ ನುಗ್ಗಿ ಕಲ್ಲು ಬೊಂಬಿನಿಂದ ಹಲ್ಲೆ ಮಾಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಯುವಕರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಿಲ್, ಆಷಾರಾಮ, ವಿಜಯಲಾಲ, ಬೊಲೋ, ಕರಣ, ಹರಿದಯಾಳ ಮೇಲೆ ಹಲ್ಲೆ ನಡೆಸಲಾಗಿದ್ದು, ನಾಲ್ವರು ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಘಟನೆಯ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಹಲ್ಲೆಗೊಳಗಾದ ಯುವಕರ ಬಳಿ ಮಾಹಿತಿ ಕಲೆ ಹಾಕಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

  • ಹೊಸ ವರ್ಷಾಚರಣೆಗೆ ಹೋಟೆಲ್ ತೋರಿಸೋ ನೆಪದಲ್ಲಿ ದರೋಡೆ – ನಾಲ್ವರ ಬಂಧನ

    ಹೊಸ ವರ್ಷಾಚರಣೆಗೆ ಹೋಟೆಲ್ ತೋರಿಸೋ ನೆಪದಲ್ಲಿ ದರೋಡೆ – ನಾಲ್ವರ ಬಂಧನ

    ಮೈಸೂರು: ಹೊಸ ವರ್ಷ ಆಚರಣೆಗೆಂದು ಬೆಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಯುವಕರನ್ನು ದೋಚಿದ್ದ ನಾಲ್ವರು ದರೋಡೆಕೋರರನ್ನು ಪ್ರಕರಣ ನಡೆದ 24 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ರಾಘವೇಂದ್ರ, ನಿಖಿಲ್, ಕೀರ್ತಿ ಹಾಗೂ ಅಭಿಷೇಕ್ ಎಂದು ಗುರುತಿಸಲಾಗಿದೆ. ಹುಣಸೂರು ಪೊಲೀಸರು ಕಾರ್ಯಾಚರಣೆ ನಡೆಸಿ ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ವರು ದರೋಡೆಕೋರರನ್ನು ಬಂಧಿಸಿ, ಅವರಿಂದ 20 ಗ್ರಾಂ ಚಿನ್ನ, 5,800 ರೂ. ನಗದು ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

    ಹೊಸ ವರ್ಷ ಆಚರಣೆಗೆಂದು ಬೆಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಯುವಕರನ್ನು ಆರೋಪಿಗಳು ಟಾರ್ಗೆಟ್ ಮಾಡಿ, ಹೋಟೆಲ್ ತೋರಿಸುವ ನೆಪದಲ್ಲಿ ಅವರನ್ನು ಕರೆದುಕೊಂಡು ಹೋಗಿ 20 ಗ್ರಾಂ ಚಿನ್ನದ ಸರ ಹಾಗೂ 7 ಸಾವಿರ ನಗದು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಯುವಕರು ಪೊಲೀಸರಿಗೆ ದೂರು ನೀಡಿದ್ದರು.

    ಯುವಕರ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ಕೇವಲ 24 ಗಂಟೆಯೊಳಗೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • ಸ್ಮಶಾನದಲ್ಲಿ ತಿಂಡಿ ತಿಂದು ಗ್ರಹಣ ಆಚರಿಸಿದ ಯುವಕರು

    ಸ್ಮಶಾನದಲ್ಲಿ ತಿಂಡಿ ತಿಂದು ಗ್ರಹಣ ಆಚರಿಸಿದ ಯುವಕರು

    ಚಿಕ್ಕಮಗಳೂರು: ಈ ಶತಮಾನದ ಕೊನೆಯ ಸೂರ್ಯ ಗ್ರಹಣದಂದು ಯಾವುದೇ ಹೆದರಿಕೆ, ಅಂಜಿಕೆ ಇಲ್ಲದೆ ಗ್ರಹಣದ ಸಮಯದಲ್ಲಿ ಸ್ಮಶಾನದಲ್ಲಿ ಊಟ ಮಾಡಿದ್ದಾರೆ.

    ಜಿಲ್ಲೆಯ ತರೀಕೆರೆ ತಾಲೂಕಿನ ಗಾಳಿಹಳ್ಳಿ ನಿವಾಸಿಗಳಾದ ಮೋಹನ್ ಹಾಗೂ ಪರಶುರಾಮ ಎಂಬವರು ಸ್ಮಶಾನದಲ್ಲಿ ಸಮಾಧಿಯೊಂದರ ಮೇಲೆ ಕೂತು ತಿಂಡಿ ತಿಂದಿದ್ದಾರೆ. ಅಷ್ಟೇ ಅಲ್ಲದೆ ಗ್ರಹಣ ಆರಂಭವಾದಾಗಿನಿಂದ ಸ್ಮಶಾನದಲ್ಲೇ ಇದ್ದು, ಸ್ಮಶಾನವನ್ನು ಶುಚಿ ಮಾಡಿದ್ದಾರೆ.

    ಮೋಹನ್ ಹಾಗೂ ಪರಶುರಾಮ ಸ್ಮಶಾನದಲ್ಲಿ ಅಲ್ಲಲ್ಲೇ ಬಿದ್ದಿದ್ದ ಪೇಪರ್, ಪ್ಲಾಸ್ಟಿಕ್, ಕಸ-ಕಡ್ಡಿಯನ್ನೆಲ್ಲಾ ಒಂದೆಡೆ ಹಾಕಿ ಬೆಂಕಿ ಹಾಕಿದ್ದಾರೆ. ಗ್ರಹಣ ಮುಗಿಯೋವರೆಗೂ ಸ್ಮಶಾನದಲ್ಲೇ ಇದ್ದು 12 ಗಂಟೆ ನಂತರ ಮನೆಗೆ ಹಿಂದಿರುಗಿದ್ದಾರೆ.

    ಸ್ಮಶಾನ, ಅಮವಾಸ್ಯೆ, ಗ್ರಹಣ ಇವ್ಯಾವು ನರಮಾನವನಷ್ಟು ಕ್ರೂರಿ ಅಲ್ಲ ಎನ್ನುವುದು ಈ ಯುವಕರ ನಂಬಿಕೆಯಾಗಿದೆ. ಇವುಗಳಿಗೆ ಮನುಷ್ಯನಲ್ಲಿರುವಷ್ಟು ಕೆಟ್ಟ ಯೋಚನೆ, ಆಲೋಚನೆ ಹಾಗೂ ಚಿಂತನೆಗಳಿಲ್ಲ ಎಂಬುದು ಇವರ ಧೃಡ ನಂಬಿಕೆಯಾಗಿದೆ. ಒಳ್ಳೆಯದ್ದನ್ನ ಯೋಚಿಸುವವರಿಗೆ ಒಳ್ಳೆಯದ್ದೆ ಆಗಲಿದ್ದು, ಕೆಟ್ಟ ಯೋಚನೆ ಇರುವವರಿಗೆ ಆಗುವುದೆಲ್ಲಾ ಕೆಟ್ಟದ್ದೇ ಎಂದು ಹೇಳಿದ್ದಾರೆ.

    ಅಲ್ಲದೆ ಮಾಡುವ ಕೆಲಸ, ಆಡುವ ಮಾತು, ನೋಡುವ ನೋಟ ಚೆನ್ನಾಗಿದ್ದರೆ ಆಗುವುದೆಲ್ಲಾ ಒಳ್ಳೆಯದ್ದೆ. ಗ್ರಹಣ, ಅಮವಾಸ್ಯೆ, ಹುಣ್ಣಿಮೆ ಇದ್ಯಾವುದು ಕೆಟ್ಟದ್ದು ಮಾಡುವುದಿಲ್ಲ ಎಂದು ಮೋಹನ್ ಹಾಗೂ ಪರಶುರಾಮ ನಂಬಿದ್ದಾರೆ.

  • ಮತಾಂತರ ಮಾಡ್ತಿದ್ದಾರೆಂದು ಕ್ರಿಶ್ಚಿಯನ್ ಯುವಕರಿಗೆ ಥಳಿತ

    ಮತಾಂತರ ಮಾಡ್ತಿದ್ದಾರೆಂದು ಕ್ರಿಶ್ಚಿಯನ್ ಯುವಕರಿಗೆ ಥಳಿತ

    ಮಂಡ್ಯ: ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಕ್ರಿಶ್ಚಿಯನ್ ಯುವಕರಿಗೆ ಥಳಿಸಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾರ್ಕಾರ್‍ದೊಡ್ಡಿ ಗ್ರಾಮದಲ್ಲಿ ಜರುಗಿದೆ.

    ಜನರಿಗೆ ಬೇರೆ ಬೇರೆಯ ರೀತಿಯ ಆಮಿಷಗಳನ್ನು ಒಡ್ಡಿ ಬಲವಂತವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಥಳಿಸಿದ್ದಾರೆ. 6 ಮಂದಿ ಕ್ರಿಶ್ಚಿಯನ್ ಯುವಕರಾದ ಜಾನ್ ರಿದ್ಯಾ, ಪ್ರೇಮ್, ಕುಮಾರ್, ಸಂಪತ್, ಕಾರ್ತಿಕ್, ಪ್ರಶಾಂತ್ ಎಂಬವರ ಮೇಲೆ ಹಲ್ಲೆ ಮಾಡಲಾಗಿದೆ.

    ಈ 6 ಮಂದಿ ಯುವಕರು ಹಲವು ದಿನಗಳಿಂದ ಈ ಭಾಗದ ಸುತ್ತಮುತ್ತಲಿನ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಮುಂದಾಗುತ್ತಿದ್ದರು. ಬಡ ಕುಟುಂಬಗಳ ಬಳಿ ಹೋಗಿ, ಅವರುಗಳಿಗೆ ಸವಲತ್ತುಗಳ ಆಮೀಷವನ್ನು ಹೊಡ್ಡಿ ಮತಾಂತರ ಮಾಡಲು ಮುಂದಾಗುತ್ತಿದ್ದರು ಎಂದು ಆರೋಪಿಸಿ ಈ 6 ಮಂದಿ ಯುವಕರಿಗೆ ಥಳಿಸಿದ್ದಾರೆ. ನಂತರ ಈ ಯುವಕರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

    ಈ ಬಗ್ಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.