Tag: Youths

  • ಬಡವರ ಹಸಿವು ನೀಗಿಸಲು ಮುಂದಾದ ಯುವಕರ ತಂಡ- ದಿನಸಿ ಕಿಟ್ ವಿತರಣೆ

    ಬಡವರ ಹಸಿವು ನೀಗಿಸಲು ಮುಂದಾದ ಯುವಕರ ತಂಡ- ದಿನಸಿ ಕಿಟ್ ವಿತರಣೆ

    ನೆಲಮಂಗಲ: ಕೊರೊನಾ ಲಾಕ್‍ಡೌನ್‍ನಿಂದಾಗಿ ಇನ್ನೂ ಅನೇಕ ಜನ ಸಂಕಷ್ಟ ಎದುರಿಸುತ್ತಿದ್ದು, ಇಂತಹವರಿಗೆ ಸಹಾಯ ಮಾಡುವತ್ತ ಯುವಕರ ತಂಡ ಹೆಜ್ಜೆ ಇಟ್ಟಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಹಂಚೀಪುರ ಗ್ರಾಮದ ಯುವಕರು ತಮ್ಮ ಗ್ರಾಮದ ಬಡವರ ಹಸಿವು ನೀಗಿಸಲು ಮುಂದಾಗಿದ್ದು, ಗ್ರಾಮದ ಯುವಕಾರದ ಗೋಪಿ ಮತ್ತು ರವಿ ಅವರ ತಂಡದಿಂದ ದಿನಸಿ ಕಿಟ್ ವಿತರಣೆ ಮಾಡಲಾಗುತ್ತಿದೆ. ಅಕ್ಕಿ, ಬೇಳೆ, ಸಕ್ಕರೆ, ಅಡುಗೆ ಎಣ್ಣೆ ಸೇರಿದಂತೆ ಅನೇಕೆ ದಿನಸಿ ಪದಾರ್ಥಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

    ಈ ಕುರಿತು ಯುವಕ ಗೋಪಿ ಮಾತನಾಡಿ, ನಮ್ಮ ಗ್ರಾಮದ ಯುವಕರೆಲ್ಲರೂ ಸೇರಿ ಸಮಸ್ಯೆ ಇದ್ದವರಿಗೆ ಸ್ಪಂದಿಸೋಣ ಎಂದು ತೀರ್ಮಾನಿಸಿದೆವು. ಹೀಗೆ ಎಲ್ಲರ ಸಹಕಾರದಿಂದ ಇಂದು ಆಹಾರ ಕಿಟ್ ವಿತರಣೆ ಮಾಡಿದ್ದೇವೆ ಗ್ರಾಮದ ಪ್ರತಿಯೊಬ್ಬರೂ ಯಾವುದೇ ಸಮಸ್ಯೆ ಇಲ್ಲದೆ ಜೀವನ ನಡೆಸಬೇಕು ಎಂಬುದು ನಮ್ಮೆಲ್ಲರ ಆಶಯ ಎಂದರು. ಈ ವೇಳೆ ತಾಲೂಕು ಪಂಚಾಯತಿ ಸದಸ್ಯ ರಮೇಶ್, ಬಾಳೆಕಾಯಿ ನಾಗರಾಜು, ಎಪಿಎಂಸಿ ನಿರ್ದೇಶಕ ಗೋವಿಂದರಾಜು, ಗೋಪಾಲಕೃಷ್ಣ, ರಾಮಚಂದ್ರಪ್ಪ, ರವಿಕುಮಾರ್, ರಾಮಕೃಷ್ಣ ನರಸಿಂಹಮೂರ್ತಿ, ಚೇತನ್, ಮಂಜುನಾಥ್ ಮತ್ತಿತರರು ಇದ್ದರು.

  • ಯುವಕರಿಂದ ಗಂಗರ ಕಾಲದ ಪುರಾತನ ದೇವಾಲಯ ಜೀರ್ಣೋದ್ಧಾರ

    ಯುವಕರಿಂದ ಗಂಗರ ಕಾಲದ ಪುರಾತನ ದೇವಾಲಯ ಜೀರ್ಣೋದ್ಧಾರ

    – ಲಾಕ್‍ಡೌನ್ ವೇಳೆ ಊರಿಗೆ ಬಂದಾಗ ದೇವಾಲಯದ ಕೆಲಸ

    ನೆಲಮಂಗಲ: ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯುವಕರು ಲಾಕ್‍ಡೌನ್ ಹಿನ್ನೆಲೆ ಊರಿಗೆ ಬಂದಿದ್ದು, ಇದೇ ಸಮಯವನ್ನು ಸದುಪಯೋಗಪಡಿಸಿಕೊಂಡು ಶಿಥಿಲಗೊಂಡಿದ್ದ ಗ್ರಾಮದಲ್ಲಿನ ಪುರಾತನ ಗಂಗರ ಕಾಲದ ಆಂಜನೇಯ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಮದ್ದೇನಹಳ್ಳಿ ಗ್ರಾಮದ ಪುರಾತನ ಗಂಗರ ಕಾಲದ ಆಂಜನೇಯ ದೇವಾಲಯ ಶಿಥಿಲವಾಗಿತ್ತು. ಲಾಕ್‍ಡೌನ್ ಹಿನ್ನೆಲೆ ಗ್ರಾಮದಲ್ಲಿ ಕಾಲ ಕಳೆಯುತ್ತಿದ್ದ ಯುವಕರು ಈ ದೇವಸ್ಥಾನದ ಅವಸ್ಥೆ ನೋಡಿ ಜೀರ್ಣೋದ್ಧಾರ ಮಾಡಲು ಪಣ ತೊಟ್ಟರು. ಅದರಂತೆ ಯುವಕರು ಒಟ್ಟಾಗಿ, ಗ್ರಾಮಸ್ಥರ ಮನವೊಲಿಸಿ ಹಣ ಹೊಂದಿಸಿ, ಕಾಮಗಾರಿ ನಡೆಸಲು ಅನುಮತಿ ಪಡೆದು ಇದೀಗ ದೇವಸ್ಥಾನವನ್ನು ಪುಶ್ಚೇತನಗೊಳಿಸಿದ್ದಾರೆ.

    ಸರ್ಕಾರದಿಂದ ಅನುಮತಿ ಪಡೆದು, ಸಾಮಾಜಿಕ ಅಂತರ ಹಾಗೂ ಸರ್ಕಾರದ ಇತರೆ ಕಟ್ಟುನಿಟ್ಟಿನ ನಿಯಮ ಪಾಲಿಸಿ ಕಾಮಗಾರಿ ನಡೆಸಲಾಗಿದೆ. ಗ್ರಾಮದಲ್ಲಿರುವ ಏಕೈಕ ಆಂಜನೇಯ ದೇವಾಲಯವನ್ನು ಸುಸ್ಥಿಯಲ್ಲಿಡಬೇಕೆಂಬ ಗ್ರಾಮಸ್ಥರ ಕನಸು ಇದರಿಂದ ನನಸಾಗಿದೆ. ಜೀರ್ಣೋದ್ಧಾರವಾದ ಖುಷಿಯಲ್ಲಿ ದೇಶ ಬೇಗ ಕರೊನಾ ಮುಕ್ತವಾಗಲಿ ಎಂಬ ಸಂಕಲ್ಪದಿಂದ ಪೂಜಾ ಕಾರ್ಯಕ್ರಮ ನಡೆಸಲಾಯಿತು. ಪುರಾತನ ದೇವಾಲಯಗಳನ್ನು ಉಳಿಸುವಲ್ಲಿ ಯುವಕರ ಕೊಡುಗೆ ದೊಡ್ಡದು ಎಂದು ಊರಿನ ಹಿರಿಯ ಮುಖಂಡ ಭಾನುಪ್ರಕಾಶ್ ಹೇಳಿದರು.

  • ಲಾಕ್‍ಡೌನ್- ಬೆಟ್ಟದ ಮೇಲೆ ಕೋಟೆ ಭಾಗದಲ್ಲಿ ಜೂಜಾಟ

    ಲಾಕ್‍ಡೌನ್- ಬೆಟ್ಟದ ಮೇಲೆ ಕೋಟೆ ಭಾಗದಲ್ಲಿ ಜೂಜಾಟ

    ಗದಗ: ಕೊರೊನಾ ವೈರಸ್ ನಿಯಂತ್ರಿಸಲು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದ್ದು, ಮನೆಯಲ್ಲೇ ಇರುವಂತೆ ಹೇಳಿದರೂ ಕೆಲ ಯುವಕರು ಪುಂಡಾಟ ಮೆರೆಯುತ್ತಿದ್ದಾರೆ. ಬೆಟ್ಟದಂತಹ ಪ್ರದೇಶದಲ್ಲಿ ಗುಂಪು ಸೇರಿ ಜೂಜಾಟ ಆಡುತ್ತಿದ್ದಾರೆ.

    ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಯುವಕರು ಜೂಜಾಟ ಆಡಲು ಬೆಟ್ಟದ ಬಳಿ ತೆರಳುತ್ತಿದ್ದು, ಬೆಟ್ಟದ ಮೇಲಿರುವ ಐತಿಹಾಸಿಕ ಕೋಟೆ ಭಾಗದಲ್ಲಿ ಯುವಕರ ದಂಡು ಜೂಜಾಟ ಆಡುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ಈ ಜೂಜಾಟದಲ್ಲಿ ತೊಡಗಿಕೊಂಡಿದ್ದಾರೆ. ಗಜೇಂಡ್ರಗಡ ನಗರದ ಸುತ್ತಮುತ್ತ ಅನೇಕ ಕಡೆಗಳಲ್ಲಿ ಅವ್ಯಾಹತವಾಗಿ ಈ ದಂಧೆ ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ.

    ಈ ಕುರಿತು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದು, ಬೆಟ್ಟದ ಮೇಲಿನ ಐತಿಹಾಸಿಕ ಕೋಟೆ ಭಾಗದ ಮಂಟಪ, ದ್ವಾರಬಾಗಿಲು, ಸಿಂಹಹೊಂಡ, ಮದ್ದಿನ ಕೋಣೆ, ಸರಸ್ವತಿ ಕೊಳ್ಳ ಸೇರಿದಂತೆ ಅನೇಕ ಕಡೆಗಳಲ್ಲಿ ಜೂಜಾಟವಾಡುತ್ತಿದ್ದಾರೆ. ಯಾರಾದರೂ ಬಂದರೆ ಎಸ್ಕೇಪ್ ಆಗಲು ಸರಳ ಮಾರ್ಗಕ್ಕೊಸ್ಕರ ಬೆಟ್ಟದ ಮೇಲೆ ಜೂಜಾಟವಾಡಲು ಹೊಗುತ್ತಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಅನೇಕ ಕುಟುಂಬಗಳು ಹಾಳಾಗುತ್ತಿದ್ದು, ಯುವಕರು ದುಷ್ಟಚಟಗಳಿಗೆ ಬಲಿಯಾಗುತ್ತಿದ್ದಾರೆ.

  • ಕ್ಷಯರೋಗಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಧಾರವಾಡ ಯುವಕರು

    ಕ್ಷಯರೋಗಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಧಾರವಾಡ ಯುವಕರು

    ಧಾರವಾಡ: ಕ್ಷಯರೋಗದಿಂದ ಬಳಲುತ್ತಿದ್ದ ಆಂಧ್ರ ಪ್ರದೇಶ ಮೂಲದ ವ್ಯಕ್ತಿಯನ್ನು ಯುವಕರು ರಕ್ಷಿಸಿ ಜಿಲ್ಲಾಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಧಾರವಾಡದಲ್ಲಿ ಘಟನೆ ನಡೆದಿದ್ದು, ನಗರ ಸಾರಿಗೆ ಬಸ್ ನಿಲ್ದಾಣ(ಸಿಬಿಟಿ)ದ ಬಳಿ ನರಳುತ್ತ ಬಿದ್ದಿದ್ದ ವ್ಯಕ್ತಿಯನ್ನು ಯುವಕರಾದ ದೇವರಾಜ್, ವಿನಾಯಕ ಗೊಂಧಳಿ ಮತ್ತು ಮಂಜುನಾಥ ನೀರಲಕಟ್ಟಿಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ರಸ್ತೆ ಬದಿ ಈತನ್ನು ಕಂಡ ಧಾರವಾಡ ಯುವಕರು, ಸಹಾಯ ಮಾಡಿ, ಉಪಚರಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ.

    ರಸ್ತೆ ಪಕ್ಕ ರಾತ್ರಿಯಿಡಿ ನರಳುತ್ತ ಮಲಗಿದ್ದ ಹುಸೇನಿ ಪೀರವಾಲಾ(55) ಕ್ಷಯರೋಗದಿಂದ ಬಳಲುತ್ತಿದ್ದ. ಈತ ಆಂಧ್ರ ಪ್ರದೇಶದ ಗುಂಟೂರು ನಗರದ ಕುಮಾರ ಸ್ಟ್ರೀಟ್ ನಿವಾಸಿಯಾಗಿದ್ದು, ಹೇಗೋ ಧಾರವಾಡಕ್ಕೆ ಬಂದು ಸಿಲುಕಿದ್ದ. ಲಾಕ್‍ಡೌನ್ ಕಾರಣ ಎಲ್ಲಿಯೂ ಹೋಗಲಾಗದೆ ರಸ್ತೆ ಪಕ್ಕ ಮಲಗಿದ್ದ. ಈತನನ್ನು ಗಮನಿಸಿದ ಯುವಕರು, ಆಹಾರ ನೀಡಿ, ಉಪಚರಿಸಿ ನಂತರ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ.

  • ಆಸ್ಪತ್ರೆಯಲ್ಲಿನ ರೋಗಿಗಳಿಗೆ ಊಟದ ಸಮಸ್ಯೆ- ಬಿಸ್ಕೆಟ್ ತಿಂದು ದಿನ ದೂಡುತ್ತಿರುವ ಸಹಾಯಕರು

    ಆಸ್ಪತ್ರೆಯಲ್ಲಿನ ರೋಗಿಗಳಿಗೆ ಊಟದ ಸಮಸ್ಯೆ- ಬಿಸ್ಕೆಟ್ ತಿಂದು ದಿನ ದೂಡುತ್ತಿರುವ ಸಹಾಯಕರು

    – ರಾಯಚೂರಿನಲ್ಲಿ ಉಚಿತವಾಗಿ ಊಟ ನೀಡಲು ಮುಂದಾದ ಸಂಘ-ಸಂಸ್ಥೆಗಳು

    ರಾಯಚೂರು: ಇಡೀ ದೇಶವೇ ಲಾಕ್‍ಡೌನ್ ಆಗಿರುವುದರಿಂದ ಬಹಳಷ್ಟು ಜನರಿಗೆ ಊಟದ ಸಮಸ್ಯೆ ಎದುರಾಗಿದೆ. ಹೀಗಾಗಿ ರಾಯಚೂರಿನಲ್ಲಿ ಕೆಲ ಯುವಕರು ಹಾಗೂ ಕೆಲ ಸಂಘ ಸಂಸ್ಥೆಗಳು ಉಚಿತವಾಗಿ ಊಟವನ್ನು ನೀಡಲು ಮುಂದಾಗಿವೆ.

    ರಸ್ತೆ ಬದಿಯ ಭಿಕ್ಷುಕರು, ನಿರ್ಗತಿಕರಿಗೆ ಊಟ ನೀಡಲಾಗುತ್ತಿದೆ. ಅಲ್ಲದೆ ಕರ್ತವ್ಯದ ಹಿನ್ನೆಲೆ ಸದಾ ಹೊರಗಡೆಯಿರುವ ಪೊಲೀಸ್ ಸಿಬ್ಬಂದಿ, ಆಸ್ಪತ್ರೆ ರೋಗಿಗಳಿಗು ಊಟವನ್ನು ಪ್ಯಾಕೇಟ್ ಮೂಲಕ ನೀಡಲಾಗುತ್ತಿದೆ. ಕೆಲ ಹೋಟೆಲ್ ಮಾಲೀಕರು, ಯುವಕರು ಕೈ ಜೋಡಿಸಿ ಊಟವನ್ನು ನೀಡುತ್ತಿದ್ದಾರೆ. ಸಾಮಾಜಿಕ ಅಂತರ ಹಾಗೂ ಸ್ವಚ್ಛತೆ ಕಾಯ್ದುಕೊಂಡು ಊಟದ ಪ್ಯಾಕೇಟ್‍ಗಳನ್ನ ವಿತರಿಸಲಾಗುತ್ತಿದೆ.

    ಹೀಗಿರುವಾಗ ಜಿಲ್ಲೆಯ ಕೆಲ ಆಸ್ಪತ್ರೆಯಲ್ಲಿನ ರೋಗಿಗಳು ಹಾಗೂ ರೋಗಿಗಳ ಜೊತೆಗೆ ಬಂದ ಸಹಾಯಕರು ಊಟದ ಸಮಸ್ಯೆ ಎದುರಿಸುತ್ತಿದ್ದಾರೆ. ಊಟವಿಲ್ಲದೆ ಬಿಸ್ಕೆಟ್ ತಿಂದು ದಿನ ಕಳೆಯುತ್ತಿದ್ದಾರೆ. ಲಾಕ್‍ಡೌನ್ ಇರುವುದರಿಂದ ಊಟಕ್ಕೆ ಜಿಲ್ಲಾಡಳಿತವೇ ವ್ಯವಸ್ಥೆ ಮಾಡಬೇಕು ಎಂದು ರೋಗಿಗಳ ಕಡೆಯವರು ಕೇಳುತ್ತಿದ್ದಾರೆ. ಕಡಿಮೆ ದರದಲ್ಲಿ ಊಟದ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತೆ ಎಂದು ಅಧಿಕಾರಿಗಳಲ್ಲಿ ಕೇಳಿಕೊಂಡಿದ್ದಾರೆ.

  • ಲಾಕ್‍ಡೌನ್ ಎಫೆಕ್ಟ್: ಅನ್ನಕ್ಕಾಗಿ ಪರದಾಡ್ತಿರುವವರಿಗೆ ಉಚಿತ ಆಹಾರ, ನೀರು ವಿತರಣೆ

    ಲಾಕ್‍ಡೌನ್ ಎಫೆಕ್ಟ್: ಅನ್ನಕ್ಕಾಗಿ ಪರದಾಡ್ತಿರುವವರಿಗೆ ಉಚಿತ ಆಹಾರ, ನೀರು ವಿತರಣೆ

    ಚಿತ್ರದುರ್ಗ: ಕೊರೊನಾ ಹರಡದಂತೆ ಭಾರತ ಲಾಕ್‍ಡೌನ್ ಆಗಿ ಇಂದಿಗೆ ಎರಡು ದಿನವಾಗಿದೆ. ಹೀಗಾಗಿ ಪ್ರವಾಸಿತಾಣ ಚಿತ್ರದುರ್ಗದಲ್ಲಿ ನೆಲೆಸಿರುವ ಭಿಕ್ಷಕರು, ನಿರ್ಗತಿಕರು ಹಾಗೂ ಆಸ್ಪತ್ರೆಯಲ್ಲಿರುವ ರೋಗಿಗಳು ಚಿತ್ರದುರ್ಗ ನಗರದಲ್ಲಿ ಆಹಾರ ಸಿಗಲಾರದೇ ಕಂಗಾಲಾಗಿದ್ದರು. ಇದೀಗ ಸ್ವಯಂ ಸೇವರು ಇವರಿಗೆ ಉಚಿತ ಆಹಾರ, ನೀರು ವಿತರಿಸುತ್ತಿದ್ದಾರೆ.

    ಆಹಾರ ನೀರು ತರಲು ಹೋಟೆಲ್‍ಗಳಿಲ್ಲದೇ ಜನರು ಪರದಾಡುತ್ತಿದ್ದರು. ಹೀಗಾಗಿ ಬುಧವಾರ ಅವರ ಸ್ಥಿತಿ ಕಂಡ ಗರುಡಕೇಸರಿ ಎಂಬ ಸ್ವಯಂ ಸೇವಕ ಯುವಕರ ಬಳಗವು ರಾತ್ರಿಯಿಂದಲೇ ಆಹಾರವನ್ನು ಪ್ಯಾಕ್ ಮಾಡಿಕೊಂಡು ಬಿಸ್ಲೇರಿ ನೀರು ಸಹಿತ ಆಟೋದಲ್ಲಿ ಸೇವೆ ನೀಡುತ್ತಿದ್ದಾರೆ.


    ಹಸಿದವರಿಗೆ ಉಚಿತ ಅನ್ನ, ನೀರು ನೀಡುವ ಮೂಲಕ ಯುವಕರು ಮಾನವೀಯತೆ ಮೆರೆಯುತ್ತಿದ್ದಾರೆ. ಇವರ ಕಾರ್ಯಕ್ಕೆ ಕೋಟೆನಾಡಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆಹಾರ ಹಾಗೂ ನೀರಿನ ಬಾಟಲಿಗಳನ್ನು ಆಟೋದಲ್ಲಿ ಹಾಕಿಕೊಂಡು ಯುವಕರು ನಗರದಾದ್ಯಂತ ವಿತರಣೆ ಮಾಡುತ್ತಿದ್ದಾರೆ.

    ಆಸ್ಪತ್ರೆ, ಬಸ್ ನಿಲ್ದಾಣ ಹಾಗೂ ಸ್ಲಂಗಳಲ್ಲಿ ಆಹಾರ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

  • ರೇವಣ್ಣನಿಂದಾಗಿ ಜಿಲ್ಲೆಯ ಯುವಕರಿಗೆ ಹೆಣ್ಣು ಸಿಗ್ತಿಲ್ಲ – ಎ.ಮಂಜು

    ರೇವಣ್ಣನಿಂದಾಗಿ ಜಿಲ್ಲೆಯ ಯುವಕರಿಗೆ ಹೆಣ್ಣು ಸಿಗ್ತಿಲ್ಲ – ಎ.ಮಂಜು

    ಹಾಸನ: ದಲಿತರು ಬಂದರೆ ಮತ್ತೆ ಹೋಗಿ ಸ್ನಾನ ಮಾಡುವ ನೀಚ ರಾಜಕಾರಣಿ ರೇವಣ್ಣನಿಂದಾಗಿ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ ಎಂದು ಎ.ಮಂಜು ಗಂಭೀರ ಆರೋಪ ಮಾಡಿದ್ದಾರೆ.

    ಹಾಸನದ ಶಾಂತಿಗ್ರಾಮದಲ್ಲಿ ನೂತನ ಮಂಡಲ ಅಧ್ಯಕ್ಷ ಮೋಹನ್‍ಕುಮಾರ್ ಗೆ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ರೇವಣ್ಣ ವಿರುದ್ಧ ಆಕ್ರೋಶ ಹೊರಹಾಕಿದ ಮಾಜಿ ಸಚಿವ ಎ.ಮಂಜು, ಅವರು ಪೊಲೀಸರ ಮೂಲಕ ಕೇಸ್ ಹಾಕಿಸುತ್ತೇನೆ ಎಂದು ಹೆದರಿಸಿ ಪಕ್ಷ ಮತ್ತು ಮನೆಯನ್ನು ಸಂಘಟನೆ ಮಾಡಿಕೊಂಡಿದ್ದಾರೆ. ಅವರು ಪ್ರೀತಿಯಿಂದ ಜಿಲ್ಲೆಯನ್ನು ಹಿಡಿತದಲ್ಲಿ ಇಟ್ಟುಕೊಂಡಿಲ್ಲ ಎಂದರು.

    ಯಾರಾದರೂ ಸತ್ತರೆ ರೇವಣ್ಣ ತನ್ನ ಸ್ವಂತ ಕಾರಲ್ಲಿ ಹೋಗಲ್ಲ. ಏನೋ ಮಂತ್ರ ಮಾಡಿಸಿಕೊಂಡು ಬಂದಿದ್ದಾರೆ ಅಂತ ಶರ್ಟ್ ಗುಂಡಿ ಬಿಚ್ಚಿಕೊಂಡು ಏಲಕ್ಕಿ ಹಾರ ಎಲ್ಲ ತೋರಿಸ್ತಾನೆ. ಅವರು ಮಾಡಿರುವ ಕೆಲಸದಿಂದ ಹಿಂದೆ ಮುಂದೆ ಪೊಲೀಸ್ ಇಲ್ಲದೇ ಅವರಿಗೆ ಊರಿಗೆ ಬರಲು ಆಗಲ್ಲ. ಒಂದು ದಿನ ಜನ ಅವರಿಗೆ ಪಾಠ ಕಲಿಸುತ್ತಾರೆ. ರೇವಣ್ಣನಿಂದ ಈ ಭಾಗದಲ್ಲಿ ಯುವಕರಿಗೆ ಹೆಣ್ಣು ಸಿಗದಂತಾಗಿದೆ. ಅವರ ಜೊತೆ ಸೇರಿ ಆ ಕೇಸ್, ಈ ಕೇಸ್ ಅಂತಾ ಆಗಿ ಯಾರೂ ಯುವಕರಿಗೆ ಹೆಣ್ಣು ಕೊಡುತ್ತಿಲ್ಲ. ಹೀಗಾಗಿ ಜನರಿಗೆ ಒಳ್ಳೆಯದಾಗಲು ನಮ್ಮ ಜೊತೆ ಬನ್ನಿ ಎಂದು ಎ.ಮಂಜು ತಿಳಿಸಿದರು.

    ಎ.ಮಂಜು ಮಾತನ್ನು ಬೆಂಬಲಿಸಿದ ನೂತನ ಮಂಡಲ ಅಧ್ಯಕ್ಷ ಮೋಹನ್ ಕುಮಾರ್, ರೇವಣ್ಣ ಅವರಿಂದಾಗಿ ಯುವಕರ ಮೇಲೆ ಕೇಸ್ ಬೀಳುತ್ತಿರುವುದು ಹೆಚ್ಚಾಗಿದೆ. ಯುವರಿಗೆ ಹೆಣ್ಣು ಸಿಗದಿರುವುದು ಕೂಡ ನಿಜ ಎಂದು ಹೇಳಿದರು.

  • ಕೊರೊನಾ ವಿನಾಶಕ್ಕೆ ಪೂಜೆಯ ಮೊರೆ ಹೋದ ಯುವಕರು

    ಕೊರೊನಾ ವಿನಾಶಕ್ಕೆ ಪೂಜೆಯ ಮೊರೆ ಹೋದ ಯುವಕರು

    ಯಾದಗಿರಿ: ಡೆಡ್ಲಿ ಕೊರೊನಾ ವೈರಸ್ ತಡೆಗೆ ಯಾದಗಿರಿಯಲ್ಲಿ ಯುವಕರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ನಗರದ ಸ್ಟೇಷನ್ ರಸ್ತೆಯಲ್ಲಿರುವ ಅಂಬಾಭವಾನಿ ದೇವಸ್ಥಾನದಲ್ಲಿ ಯುವಕರ ಗೆಳೆಯರ ಬಳಗದಿಂದ ವಿಶೇಷ ಪೂಜೆ ಸಲ್ಲಿಸಿ, ಕೊರೊನಾ ವೈರಸ್ ನಾಶವಗಾಲಿ ಎಂದು ಪ್ರಾರ್ಥಿಸಿದ್ದಾರೆ.

    ಚೀನಾ ದೇಶದಿಂದ ವಿಶ್ವದೆಲ್ಲಡೆ ಹರಡಿರುವ ವೈರಸ್ ಸಾವಿರಾರು ಜನರನ್ನು ಬಲಿ ಪಡೆದಿದ್ದು, ಭಾರತ ಹಾಗೂ ಕರ್ನಾಟಕಕ್ಕೂ ವೈರಸ್ ಒಕ್ಕರಿಸಿದೆ. ಜನರನ್ನು ಭಯಬೀತರನ್ನಾಗಿದೆ. ದೈವ ಶಕ್ತಿಯಿಂದ ವೈರಸ್ ನಾಶವಾಗುತ್ತದೆ ಎಂಬ ನಂಬಿಕೆ ಮೇಲೆ ಯುವಕರು ದೇವಿ ಮೊರೆ ಹೋಗಿದ್ದು, ಯಾದಗಿರಿ ಗಡಿ ಭಾಗದ ಹೈದ್ರಾಬಾದ್ ನಲ್ಲಿ ವೈರಸ್ ಶಂಕಿತ ವ್ಯಕ್ತಿ ಪತ್ತೆಯಾದ ಹಿನ್ನಲೆ ಜಿಲ್ಲೆಯ ಜನ ಮತ್ತಷ್ಟು ಗಾಬರಿಗೊಂಡಿದ್ದಾರೆ. ಹೀಗಾಗಿ ದೇವಿ ಅಂಬಾ ಭವಾನಿಗೆ ಯುವಕರು ಆರತಿ ಬೆಳಗಿ, ದೀರ್ಘ ದಂಡ ನಮಸ್ಕಾರ ಹಾಕಿ ಕೊರೊನಾ ತಡೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

  • ಪತ್ನಿಯ ಶವದ ಮುಂದೆ ದಾರಿ ತೋಚದೆ ಕಂಗಾಲಾಗಿದ್ದ ವ್ಯಕ್ತಿಗೆ ಯುವಕರ ತಂಡ ಸಹಾಯ

    ಪತ್ನಿಯ ಶವದ ಮುಂದೆ ದಾರಿ ತೋಚದೆ ಕಂಗಾಲಾಗಿದ್ದ ವ್ಯಕ್ತಿಗೆ ಯುವಕರ ತಂಡ ಸಹಾಯ

    ಮಡಿಕೇರಿ: ಪತಿಯ ಶವ ಮುಂದಿಟ್ಟುಕೊಂಡು ದಾರಿ ತೋಚದೆ ಕಂಗಾಲಾಗಿದ್ದ ವ್ಯಕ್ತಿಗೆ ಯುವಕರ ತಂಡ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದೆ.

    ಹೊನ್ನಪ್ಪ ಹಾಗೂ ಮಣಿ ಮಡಿಕೇರಿ ತಾಲೂಕಿನ ಭಾಗಮಂಡಲ ಸಮೀಪದ ಚೆಟ್ಟಿಮಾನಿಯ ನಿವಾಸಿಗಳಾಗಿದ್ದು, ಅದೇ ಗ್ರಾಮದ ಮಂಜು ಎಂಬವರ ತೋಟದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಇಬ್ಬರು ಪುಟ್ಟ ಹೆಣ್ಣು ಮಕ್ಕಳಿದ್ದು, ಒಬ್ಬಳು ತನ್ನ ತಂದೆಯ ಸ್ನೇಹಿತ ಮನೆಯಲ್ಲಿದ್ದರೆ, ಇನ್ನೂ ಚಿಕ್ಕ ಮಗು ಪೋಷಕರ ಜೊತೆಯಲ್ಲಿದ್ದಳು.

    ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದ ಮಣಿ, ಮಂಗಳವಾರ ಸಂಜೆ ಏಕಾಏಕಿ ಅಸ್ವಸ್ಥರಾಗಿದ್ದರು. ತೋಟ ಮಾಲೀಕರಿಂದ ಸಾಲ ಬೇಡಿದ ಹೊನ್ನಪ್ಪ, ಪತ್ನಿಯನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದರು. ಅಷ್ಟರಲ್ಲಿ ಮಣಿ ನಿಧನರಾಗಿದ್ದಾರೆ.

    ಈ ವಿದ್ಯಮಾನಗಳು ಮುಗಿಯುವಾಗ ಮಧ್ಯರಾತ್ರಿಯಾಗಿತ್ತು. ಆಸ್ಪತ್ರೆಯಲ್ಲಿ ಪತ್ನಿ ಶವವಿದ್ದು, ಬೆಳಕರಿಯಲು ಇನ್ನು ಕೆಲವೇ ಗಂಟೆ ಬಾಕಿಯಿತ್ತು. ಹೊನ್ನಪ್ಪ ಅವರಿಗೆ ದಾರಿ ತೋಚಲಿಲ್ಲ. ಮರಳಿ ಊರಿಗೆ ತೆರಳಲು ಸಾಧ್ಯವಿರಲಿಲ್ಲ. ತನ್ನವರು ಅಥವಾ ಪತ್ನಿಯ ಕಡೆಯವರು ಯಾರೂ ಇಲ್ಲ. ಪತ್ನಿಯ ಅಂತ್ಯಕ್ರಿಯೆ ಮಾಡುವುದಾದರೂ ಹೇಗೆ ಎಂದು ಯೋಚಿಸುತ್ತಾ ಮಡಿಕೇರಿಯ ಟೋಲ್‍ಗೇಟ್ ಬಳಿ ಅಲೆದಾಡುತ್ತಿದ್ದರು.

    ಝೈನುಲ್ಲಾ ಆಬಿದ್ ಹಾಗೂ ಮಡಿಕೇರಿ ಯೂತ್ ಕಮಿಟಿಯ ಅಧ್ಯಕ್ಷರಾದ ಆಬಿದ್, ಹೊನ್ನಪ್ಪ ಅವರಿಂದ ಎಲ್ಲ ಮಾಹಿತಿ ಪಡೆದು, “ಬನ್ನಿ ನಾವಿದ್ದೇವೆ” ಎಂದರು. ಆಸ್ಪತ್ರೆಯಿಂದ ಶವವನ್ನು ರುದ್ರಭೂಮಿಗೆ ಕೊಂಡೊಯ್ಯಲಾಯ್ತು. ಹೂವು, ಧೂಪ, ಊದುಬತ್ತಿ, ಮಣ್ಣಿನ ಕುಡಿಕೆ, ಶ್ವೇತ ವಸ್ತ್ರ, ಚಾಪೆ, ನೀರು, ಕತ್ತಿ, ಗುದ್ದಲಿ, ಹಾರೆ ಎಲ್ಲವೂ ಬಂದವು. ಕೆಲವೇ ನಿಮಿಷಗಳಲ್ಲಿ ಗುಂಡಿಯೂ ಸಜ್ಜಾಯ್ತು. ಬಳಿಕ ನೆರೆದವರೆಲ್ಲ ಬಂಧುಗಳಾಗಿ ಮಣಿ ಅವರ ಅಂತ್ಯಕ್ರಿಯೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು.

  • ಕೊರೊನಾ ಕಟ್ಟೆಚ್ಚರ ಕೊಡಗಿನ ಇಬ್ಬರು ಯುವಕರ ಮೇಲೆ ನಿಗಾ

    ಕೊರೊನಾ ಕಟ್ಟೆಚ್ಚರ ಕೊಡಗಿನ ಇಬ್ಬರು ಯುವಕರ ಮೇಲೆ ನಿಗಾ

    – ಚೀನಾಕ್ಕೆ ಹೋಗಿ ಬಂದಿರುವ ಇಬ್ಬರು ಯುವಕರು

    ಮಡಿಕೇರಿ: ಚೀನಾದಲ್ಲಿ ಮರಣ ಮೃದಂಗ ಬಾರಿಸಿ ಕರ್ನಾಟಕಕ್ಕೂ ಎಂಟ್ರಿ ಕೊಟ್ಟಿರುವ ಕೊರೊನಾ ವೈರಸ್ ಕೊಡಗಿನಲ್ಲೂ ಆತಂಕ ಸೃಷ್ಟಿಸಿದೆ.

    ಚೀನಾಕ್ಕೆ ಹೋಗಿ ಬಂದಿರುವ ಇಬ್ಬರು ಯುವಕರು ಕೊಡಗಿನಲ್ಲಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದ್ದು, 20 ದಿನಗಳ ಹಿಂದೆ ಈ ಇಬ್ಬರು ಚೀನಾದಿಂದ ಬಂದಿದ್ದರು. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಆರೋಗ್ಯ ಇಲಾಖೆ ಮತ್ತಷ್ಟು ಮುನ್ನೆಚ್ಚರಿಕೆ ವಹಿಸಿದೆ.

    ಮಂಜಿನ ನಗರಿ ಮಡಿಕೇರಿಯಲ್ಲೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಭಿತ್ತಿ ಪತ್ರ ಹಂಚುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಕೊಡಗು ಪ್ರವಾಸೋದ್ಯಮ ತಾಣವಾದ್ದರಿಂದ ಅಧಿಕ ಸಂಖ್ಯೆಯಲ್ಲಿ ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಹೀಗಾಗಿ ಕೊವೀಡ್-19 ವೈರಸ್ ಬಗ್ಗೆ ನಗರದ ಪ್ರಮುಖ ಪ್ರವಾಸಿ ತಾಣ ರಾಜಾಸೀಟ್ ಸೇರಿದಂತೆ ಜನ ನಿಬಿಡ ಪ್ರದೇಶಗಳಲ್ಲಿ ವೈರಸ್ ಲಕ್ಷಣಗಳು ಹಾಗೂ ಅದು ಹರಡುವ ವಿಧಾನ, ಸಾರ್ವಜನಿಕರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಚಿಕಿತ್ಸೆ ಬಗ್ಗೆ ಪ್ರವಾಸಿಗರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

    ಜಿಲ್ಲೆಯ ಗಡಿ ಭಾಗಗಳಾದ ಕುಟ್ಟ-ಮಾಕುಟ್ಟಾ ಹಾಗೆಯೇ ಕರಿಕೆ ವ್ಯಾಪ್ತಿಯಲ್ಲಿ ವಿದೇಶಗಳಿಂದ ಆಗಮಿಸಿದವರ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ. ಜ್ವರ, ಶೀತ, ಕೆಮ್ಮು ಇದ್ದರೆ ತಕ್ಷಣ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿಕೊಳ್ಳುವಂತೆ ಮಾಹಿತಿ ನೀಡಿದ್ದೇವೆ. ಚೀನಾದಿಂದ ಇಬ್ಬರು ವಾಪಸ್ಸಾಗಿದ್ದು, ಅವರಿಗೆ ಯಾವುದೇ ವೈರಸ್ ಲಕ್ಷಣಗಳು ವ್ಯಕ್ತವಾಗಿಲ್ಲ. 28 ದಿನಗಳ ಕಾಲ ಅವರ ಮೇಲೆ ನಿಗಾ ಇಟ್ಟಿದ್ದೇವೆ ಎಂದು ಅರೋಗ್ಯ ಇಲಾಖೆ ಡಿಎಚ್‍ಓ ಮೋಹನ್ ಕುಮಾರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಕೊರೊನಾ ವೈರಸ್ ಕಂಡು ಬಂದಲ್ಲಿ ಜಿಲ್ಲಾ ಆಸ್ಪತ್ರೆಯಿಂದ 5 ಹಾಗೆಯೇ ತಾಲೂಕು ಆಸ್ಪತ್ರೆಗಳಲ್ಲಿ ತಲಾ ಎರಡೆರಡು ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಚಿಕಿತ್ಸೆಗೆ ಅಗತ್ಯ ಮಾಸ್ಕ್, ಗೌನ್ ಸೇರಿದಂತೆ ಅಗತ್ಯ ಸಲಕರಣೆಗಳನ್ನು ಸಿದ್ಧಪಡಿಸಿಕೊಂಡಿದ್ದು, ಜಿಲ್ಲೆಯ ಜನತೆ ಯಾವುದಕ್ಕೂ ಹೆದರುವ ಅಗತ್ಯವಿಲ್ಲ ಎಂದರು.