Tag: Youths

  • ಹಾಸನದಲ್ಲಿ ಪ್ರತಿನಿತ್ಯ ಯುವಕರ ಗಲಾಟೆ-ಪ್ರಶ್ನಿಸಿದ್ರೆ ಹಲ್ಲೆಗೆ ಯತ್ನ

    ಹಾಸನದಲ್ಲಿ ಪ್ರತಿನಿತ್ಯ ಯುವಕರ ಗಲಾಟೆ-ಪ್ರಶ್ನಿಸಿದ್ರೆ ಹಲ್ಲೆಗೆ ಯತ್ನ

    -ನಶೆಯಲ್ಲಿ ಪುಂಡರ ಗಲಾಟೆ

    ಹಾಸನ: ನಗರದ ಪಂಚಮುಖಿ ಸರ್ಕಲ್ ಬಳಿ ಪ್ರತಿ ದಿನ ಮತ್ತಿನಲ್ಲಿರುವ ಹುಡುಗರು ಗಲಾಟೆ ಮಾಡುತ್ತಾರೆ ಎಂದು ಆರೋಪಿಸಿರುವ ಸ್ಥಳೀಯರು ಅದನ್ನ ವಿಡಿಯೋ ಮಾಡಿ ಸಾಮಾಜಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

    ಪ್ರತಿ ನಿತ್ಯ ರಸ್ತೆಯ ಬದಿಯಲ್ಲಿ ಗುಂಪಾಗಿ ನಿಲ್ಲುವ ಹುಡುಗರು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಕೂಗಾಡುತ್ತಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಭಾಗದಲ್ಲಿ ಅಕ್ರಮವಾಗಿ ಮನೆಯೊಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಆರೋಪ ಸಹ ಕೇಳಿ ಬಂದಿದೆ. ಇಲ್ಲಿ ಬರುವ ಯುವಕರು ಗಾಂಜಾ ಸೇವನೆ ಮಾಡಿ ಹೀಗೆ ಗಲಾಟೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

    ಒಂದು ವೇಳೆ ಗಲಾಟೆ ಮಾಡುವ ಯುವಕರನ್ನು ಪ್ರಶ್ನಿಸಿದ್ರೆ, ಹಲ್ಲೆಗೆ ಮುಂದಾಗುತ್ತಾರಂತೆ. ಹೀಗಾಗಿ ಪುಂಡ ಯುವಕರನ್ನು ಹೆದರಿಸಲು ಸಾಧ್ಯವಾಗದೇ ಸ್ಥಳೀಯರು ಮೂಕ ಪ್ರೇಕ್ಷಕರಾಗಿದ್ದಾರೆ. ಮಂಗಳವಾರ ರಾತ್ರಿ ಕೂಡ ಯುವಕರ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಕೂಗಾಟ ನಡೆಸುತ್ತ ತಳ್ಳಾಟ ನೂಕಾಟ ನಡೆಸಿದ್ದಾರೆ. ಇದನ್ನು ಸ್ಥಳೀಯರೊಬ್ಬರು ಯುವಕರಿಗೆ ಗೊತ್ತಾಗದಂತೆ ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿದ್ದು, ಆದಷ್ಟು ಬೇಗ ಪೊಲೀಸ್ ಇಲಾಖೆ ಈ ಬಗ್ಗೆ ಗಮನಹರಿಸಿ ಪುಂಡ ಯುವಕರಿಗೆ ಬುದ್ಧಿ ಕಲಿಸಲಿ ಎಂದು ಮನವಿ ಮಾಡಿದ್ದಾರೆ.

  • ಗಾಂಜಾ ಮತ್ತಿನಲ್ಲಿ ಶಿವಾಜಿನಗರ ಸರ್ಕಲ್ ಬಳಿ ಪುಂಡರ ಮಾರಾಮಾರಿ

    ಗಾಂಜಾ ಮತ್ತಿನಲ್ಲಿ ಶಿವಾಜಿನಗರ ಸರ್ಕಲ್ ಬಳಿ ಪುಂಡರ ಮಾರಾಮಾರಿ

    – ಡಿಜೆ ಹಳ್ಳಿ ಪ್ರಕರಣ ಮಾಸುವ ಮುನ್ನವೇ ಮತ್ತೆ ಪುಂಡರ ಉಪಟಳ

    ಬೆಂಗಳೂರು: ಡಿಜೆ ಹಳ್ಳಿ ಪ್ರಕರಣ ಮಾಸುವ ಮುನ್ನವೇ ಶಿವಾಜಿನಗರದಲ್ಲಿ ಪುಂಡರ ಉಪಟಳ ಹೆಚ್ಚಾಗಿದ್ದು, ಗಾಂಜಾ ಮತ್ತಿನಲ್ಲಿ ಪುಂಡರಿಬ್ಬರು ಬಡಿದಾಡಿಕೊಂಡಿದ್ದಾರೆ.

    ಶಿವಾಜಿನಗರ ಸರ್ಕಲ್‍ನಲ್ಲಿ ಗಲಾಟೆ ನಡೆದಿದ್ದು, ನಡು ಬೀದಿಯಲ್ಲೇ ಪುಂಡರಿಬ್ಬರು ಕಿತ್ತಾಡಿಕೊಂಡಿದ್ದನ್ನು ಕಂಡು ಸ್ಥಳೀಯರು ಭಯಗೊಂಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ನಡುಬೀದಿಯಲ್ಲಿ ಪುಂಡರು ಬಡಿದಾಡಿಕೊಂಡಿದ್ದು, ಆಟೋ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ.

    ಗಾಂಜಾ ಮತ್ತಿನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಮಾರ್ಕೆಟ್‍ನಲ್ಲಿ ಅಷ್ಟು ಜನರಿದ್ದರೂ ಯಾವುದನ್ನೂ ಲೆಕ್ಕಿಸದೆ ಪುಂಡರು ಮಾರಾಮಾರಿ ನಡೆಸಿದ್ದಾರೆ. ಘಟನೆಯಿಂದಾಗಿ ಮಾರುಕಟ್ಟೆಯಲ್ಲಿನ ಜನ ಆತಂಕಗೊಂಡು ಚದುರಿದ್ದಾರೆ.

  • ಸತತ ಎರಡನೇ ಕೊಲೆಯಿಂದ ಬೆಚ್ಚಿಬಿದ್ದ ಹಬ್ಬದ ಖುಷಿಯಲ್ಲಿದ್ದ ಜನ

    ಸತತ ಎರಡನೇ ಕೊಲೆಯಿಂದ ಬೆಚ್ಚಿಬಿದ್ದ ಹಬ್ಬದ ಖುಷಿಯಲ್ಲಿದ್ದ ಜನ

    -ಯುವಕನ ಎದೆಗೆ ಇರಿದು ಬರ್ಬರ ಕೊಲೆ

    ಹಾಸನ: ಯುವಕನ ಎದೆಗೆ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಘಟನೆ ಹಾಸನದ ಚನ್ನರಾಯಪಟ್ಟಣದ ಗದ್ದೆಹಳ್ಳದ ಬಳಿ ನಡೆದಿದೆ.

    30 ವರ್ಷದ ಸಂಪತ್ ಕೊಲೆಯಾದ ದುರ್ದೈವಿ. ಬೆಂಗಳೂರು ಹಾಸನ ಹೆದ್ದಾರಿ ಪಕ್ಕದಲ್ಲೇ ಕೊಲೆ ನಡೆದಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಹರೀಶ್ ಮತ್ತು ಸಂಪತ್ ನಡುವೆ ಕ್ಷುಲ್ಲಕ ಕಾರಣಕ್ಕ ಜಗಳ ನಡೆದಿದೆ. ಸಂಪತ್‍ನ ಎದೆಗೆ ಹರಿತವಾದ ವಸ್ತುವಿನಿಂದ ಚುಚ್ಚಿ ಕೊಲೆ ಮಾಡಿ ಹರೀಶ್ ಪರಾರಿಯಾಗಿದ್ದಾನೆ. ಚನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿ ನಿನ್ನೆಯಷ್ಟೆ ಹಣದ ವಿಷಯವಾಗಿ ಗಲಾಟೆಯಾಗಿ 25 ವರ್ಷದ ಯುವಕನ ಕೊಲೆ ನಡೆದಿತ್ತು.

    ಇಂದು ಮತ್ತೊಂದು ಕೊಲೆ ನಡೆದಿದ್ದು ವರಮಹಾಲಕ್ಷ್ಮಿ ಹಬ್ಬದ ಖುಷಿಯಲ್ಲಿದ್ದ ಚನ್ನರಾಯಪಟ್ಟಣ ಜನತೆಯನ್ನು ಬೆಚ್ಚಿ ಬೀಳಿಸಿದೆ. ಕೊಲೆ ಮಾಡುತ್ತಿರುವವರು, ಕೊಲೆಯಾಗುತ್ತಿರುವವರು 30 ವರ್ಷದ ಒಳಗಿನ ಯುವಕರಾಗಿರುವುದು ಕೂಡ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕೊಲೆಯ ಪ್ರಕರಣಗಳು ಮುಂದೆ ಮತ್ತಷ್ಟು ಅವಾಂತರಕ್ಕೆ ಕಾರಣವಾಗುವ ಸಂಶಯ ಮೂಡುತ್ತಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಿ ಮುಂದೆ ಇಂತಹ ಪ್ರಕರಣ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಜಗಳ ಬಿಡಿಸಲು ಬಂದ ಸ್ನೇಹಿತನೇ ಕೊಲೆಯಾದ

     

  • ಆಟಿಕೆ ಗನ್ ಬಳಸಿ ಬ್ಯಾಂಕ್ ದರೋಡೆಗೆ ಯತ್ನ

    ಆಟಿಕೆ ಗನ್ ಬಳಸಿ ಬ್ಯಾಂಕ್ ದರೋಡೆಗೆ ಯತ್ನ

    – ಇಬ್ಬರ ಬಂಧನ

    ಶ್ರೀನಗರ: ಆಟಿಕೆ ಗನ್ ಬಳಸಿ ಬ್ಯಾಂಕ್ ದರೋಡೆಗೆ ಯತ್ನಿಸಿದ ಇಬ್ಬರನ್ನು ಬಂಧಿಸಿರುವ ಘಟನೆ ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದರೋಡೆಗೆ ಯತ್ನಿಸಿದ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.

    ಇಬ್ಬರು ಯುವಕರು ಆಟಿಕೆ ಬಂದೂಕು ಹಿಡಿದು ನಾಥನುಸಾ ಗ್ರಾಮದ ಗ್ರಾಮೀಣ ಬ್ಯಾಂಕ್ ಪ್ರವೇಶ ಮಾಡಿದ್ದಾರೆ. ಬ್ಯಾಂಕ್ ಸಿಬ್ಬಂದಿಗೆ ಗನ್ ತೋರಿಸಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಈ ವೇಳೆ ಬ್ಯಾಂಕಿನಲ್ಲಿದ್ದ ಗ್ರಾಹಕರಿಗೆ ಕೈಯಲ್ಲಿರುವ ಗನ್ ಆಟಿಕೆ ಎಂದು ಅನುಮಾನ ಬಂದಿದೆ. ಕೂಡಲೇ ಬ್ಯಾಂಕ್ ಪ್ರವೇಶ ದ್ವಾರದ ಶೆಟರ್ ಎಳೆದು ಇಬ್ಬರನ್ನು ಹಿಡಿದಿದ್ದಾರೆ. ನಂತರ ಬ್ಯಾಂಕ್ ಸಿಬ್ಬಂದಿ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇಬ್ಬರ ಬಳಿಯಲ್ಲಿದ್ದ ಆಟಿಕೆ ಗನ್, ಜೇಬಿನಲ್ಲಿದ್ದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದ ಮಾದಕ ವಸ್ತುವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

  • ಕಾಡಿನಿಂದ ನಾಡಿಗೆ ಬಂದ ಜಿಂಕೆಯ ರಕ್ಷಣೆ- ರೈತ, ಯುವಕರ ಕಾರ್ಯಕ್ಕೆ ಶ್ಲಾಘನೆ

    ಕಾಡಿನಿಂದ ನಾಡಿಗೆ ಬಂದ ಜಿಂಕೆಯ ರಕ್ಷಣೆ- ರೈತ, ಯುವಕರ ಕಾರ್ಯಕ್ಕೆ ಶ್ಲಾಘನೆ

    ವಿಜಯಪುರ: ಕಾಡಿನಿಂದ ನಾಡಿಗೆ ಬಂದು ನಾಯಿಗಳ ಪಾಲಾಗುತ್ತಿದ್ದ ಜಿಂಕೆಯನ್ನು ರೈತ ಹಾಗೂ ಯುವಕರು ಸೇರಿ ರಕ್ಷಣೆ ಮಾಡಿದ್ದಾರೆ.

    ವಿಜಯಪುರ ನಗರದ ಹೊರವಲಯದ ಟೋಲ್ ನಾಕಾ ಬಳಿಯ ಹೌಸಿಂಗ್ ಬೋರ್ಡ್ ಬಳಿ ಜಿಂಕೆಯನ್ನು ರಕ್ಷಿಸಲಾಗಿದೆ. ಅಲಿಯಾಬಾದ ಬಳಿಯ ಬಂಡು ತಾಂಡೆ ನಿವಾಸಿ ರೈತ ಅಬುಶಾ ಬಾಳು ಮಾನೆಯವರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

    ರೈತ ತನ್ನ ಹೊಲಕ್ಕೆ ಹೊರಟಾಗ ಹತ್ತಾರು ನಾಯಿಗಳನ್ನು ಕಂಡು ಗಾಬರಿಗೊಳಗಾದರು. ಹೀಗಾಗಿ ಅವುಗಳ ಬಳಿ ಹೋಗಿ ನೋಡಿದಾಗ ನಾಯಿಗಳು ಜಿಂಕೆಯನ್ನು ಎಳೆದಾಡುತ್ತಿದ್ದವು. ಕೂಡಲೇ ಅಲ್ಲಿದ್ದ ನಾಯಿಗಳನ್ನು ಓಡಿಸಲು ರೈತ ಹೆಣಗಾಡಿದ್ದಾರೆ. ಕೊನೆಗೂ ಶ್ವಾನಗಳನ್ನು ಓಡಿಸಿ ರೈತ ಜಿಂಕೆಯನ್ನು ನಾಯಿಗಳಿಂದ ಬಚಾವ್ ಮಾಡಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಬಂದ ಯುವಕರ ನೆರವಿನೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ರೈತ ಜಿಂಕೆಯನ್ನು ಹಸ್ತಾಂತರ ಮಾಡಿದ್ದಾರೆ. ರೈತ, ಯುವಕರ ಕಾರ್ಯಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

  • ಅಮಾವಾಸ್ಯೆ ದಿನ ಭೀಕರ ಅಪಘಾತದಲ್ಲಿ ಮೂವರು ಸಾವು- ವ್ಹೀಲಿಂಗ್ ವೇಳೆ ಡಿಕ್ಕಿ ಶಂಕೆ

    ಅಮಾವಾಸ್ಯೆ ದಿನ ಭೀಕರ ಅಪಘಾತದಲ್ಲಿ ಮೂವರು ಸಾವು- ವ್ಹೀಲಿಂಗ್ ವೇಳೆ ಡಿಕ್ಕಿ ಶಂಕೆ

    – ಹೆಲ್ಮೆಟ್ ಹಾಕದ ಸವಾರರ ತಲೆ ಅಪ್ಪಚ್ಚಿ

    ಬೆಂಗಳೂರು: ಅಮಾವಾಸ್ಯೆ ದಿನ ಭೀಕರ ಸಂಭವಿಸಿ ಮೂವರು ಯುವಕರು ಧಾರುಣ ಸಾವು ಕಂಡ ಘಟನೆ ಯಲಹಂಕದ ಜೆಕೆವಿಕೆ ಬಳಿ ಇಂದು ಬೆಳಗ್ಗೆ ನಡೆದಿದೆ.

    ಬೆಂಗಳೂರಿನ ನಿವಾಸಿಗಳಾದ ಮಹಮ್ಮದ್ ಆದಿ ಆಯಾನ್ (16), ಮಾಜ್ ಅಹಮ್ಮದ್ ಖಾನ್(17) ಹಾಗೂ ಸಯ್ಯದ್ ರಿಯಾಜ್ (22) ಮೃತ ದುರ್ದೈವಿಗಳು. ವ್ಹೀಲಿಂಗ್ ಮಾಡುವ ವೇಳೆ ಬೈಕ್ ಮುಖಾ ಮುಖಿ ಡಿಕ್ಕಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ.

    ಯುವಕರು ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿ ಮಾಡುತ್ತಿದ್ದರು. ಈ ವೇಳೆ ವೇಗವಾಗಿದ್ದ ಬೈಕ್ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಬೈಕ್ ಪೀಸ್ ಪೀಸ್ ಆಗಿದ್ದು, ತಲೆಗೆ ಅಪ್ಪಚ್ಚಿಯಾಗಿ ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಘಟನಾ ಸ್ಥಳಕ್ಕೆ ಯಲಹಂಕ ಸಂಚಾರಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಯುವಕರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ.

  • ಮಾದಕ ವಸ್ತು ಬಳಸುತ್ತಿದ್ದ ಯುವಕರಿಗೆ ಜಮಾತ್ ಕಮೀಟಿಯಿಂದ ನೋಟಿಸ್

    ಮಾದಕ ವಸ್ತು ಬಳಸುತ್ತಿದ್ದ ಯುವಕರಿಗೆ ಜಮಾತ್ ಕಮೀಟಿಯಿಂದ ನೋಟಿಸ್

    ಮಡಿಕೇರಿ: ಮಾದಕ ವಸ್ತುಗಳ ದಂಧೆಯಲ್ಲಿ ತೊಡಗಿದ್ದ ಮುಸ್ಲಿಂ ಸಮುದಾಯದ ಇಬ್ಬರು ಯುವಕರಿಗೆ ಶಾಫಿ ಮುಸ್ಲಿಂ ಜಮಾತ್ ಕಮೀಟಿ ನೋಟಿಸ್ ನೀಡಿದೆ. ಈ ಮೂಲಕ ನಡವಳಿಕೆ ತಿದ್ದಿಕೊಳ್ಳುವಂತೆ ಎಚ್ವರಿಕೆ ನೀಡಿದೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ನಿವಾಸಿ ಪಿ.ಆರ್.ನಿಸಾರ್ ಹಾಗೂ ಪಟೇಲ್ ನಗರದ ನಿವಾಸಿ ಜಮಾಲ್ ಜಮಾತ್‍ಗೆ ಸಂಘಟನೆ ನೋಟಿಸ್ ನೀಡಿದೆ. ಇಬ್ಬರೂ ಗಾಂಜಾ ವ್ಯಸನಿಗಳಾಗಿದ್ದು, ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ಬಳಸುತ್ತಿದ್ದರು. ಅಲ್ಲದೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

    ಈ ಬಗ್ಗೆ ಕಮಿಟಿ ವತಿಯಿಂದ ಸಾಕಷ್ಟು ಬಾರಿ ತಿಳುವಳಿಕೆ ಹೇಳಿದ್ದರೂ ಕೇಳಿಲ್ಲ. ಮಾದಕ ವಸ್ತುಗಳನ್ನು ಉಪಯೋಗಿಸುವುದು, ಮಾರಾಟ ಮಾಡುವುದು ಮುಸ್ಲಿಂ ಧರ್ಮಕ್ಕೆ ವಿರೋಧ ಎನ್ನುವುದು ಗೊತ್ತಿದ್ದರೂ ಅವುಗಳ ಮಾರಾಟದಲ್ಲಿ ತೊಡಗಿರುವುದು ಕಮಿಟಿಯ ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಮಾದಕ ವಸ್ತು ಮುಕ್ತ ಗೋಣಿಕೊಪ್ಪ ಮಾಡುವ ದೃಷ್ಟಿಯಿಂದ, ಯುವ ಪೀಳಿಗೆಯ ಭವಿಷ್ಯದ ಹಿತದೃಷ್ಟಿಯಿಂದ ಜಮಾತ್ ಕಮಿಟಿ ಎಚ್ಚರಿಕೆ ನೀಡಿದೆ. ಇಬ್ಬರ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಿದೆ. ಅಲ್ಲದೆ 40 ದಿನಗಳ ಕಾಲಾವಕಾಶ ನೀಡಿ ತಮ್ಮ ನಡವಳಿಕೆ ಬದಲಿಸುವಂತೆ ಸೂಚಿಸಲಾಗಿದೆ ಎಂದು ಸಂಘಟನೆಯ ಕಾರ್ಯದರ್ಶಿ ಹಕ್ಕಿಂ ತಿಳಿಸಿದ್ದಾರೆ.

  • ಮಾಸ್ಕ್ ಧರಿಸಿ ಅಂದಿದ್ದಕ್ಕೆ ಹೆಲ್ಮೆಟ್‍ನಿಂದ ಹಲ್ಲೆಗೈದ ಯುವಕರು

    ಮಾಸ್ಕ್ ಧರಿಸಿ ಅಂದಿದ್ದಕ್ಕೆ ಹೆಲ್ಮೆಟ್‍ನಿಂದ ಹಲ್ಲೆಗೈದ ಯುವಕರು

    ಮಂಗಳೂರು: ಕೊರೊನಾ ವೈರಸ್ ಮಹಾಮಾರಿ ವಕ್ಕರಿಸಿದಾಗಿನಿಂದ ದೇಶಾದ್ಯಂತ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಆದರೆ ಇದೀಗ ಮಾಸ್ಕ್ ಧರಿಸಿ ಅಂದಿದ್ದಕ್ಕೆ ಯುವಕರ ತಂಡವೊಂದು ಹಲ್ಲೆ ಮಾಡಿದೆ.

    ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ ರಿಲಯನ್ಸ್ ಮಾರ್ಟ್ ನಲ್ಲಿ ನಡೆದಿದೆ. ಮಾಸ್ಕ್ ಧರಿಸಿ ಅಂಗಡಿಯೊಳಗೆ ಬರಲು ಸೂಚಿಸಿದ್ದರಿಂದ ಕೋಪಗೊಂಡ ಯುವಕರ ಗುಂಪು ಹಲ್ಲೆ ಮಾಡಿದೆ.

    ಯುವಕರ ಗುಂಪೊಂದು ಮಾಸ್ಕ್ ಧರಿಸದೇ ಅಂಗಡಿ ಪ್ರವೇಶಿಸಲು ಯತ್ನಿಸಿದೆ. ಇದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್ ಮಾಸ್ಕ್ ಧರಿಸಿ ಬರುವಂತೆ ತಡೆದಿದ್ದಾರೆ. ಈ ವೇಳೆ ಗುಂಪು ಸೆಕ್ಯೂರಿಟಿ ಜೊತೆ ಘರ್ಷಣೆಗಿಳಿದಿದೆ. ಅಲ್ಲದೆ ರಿಲಯನ್ಸ್ ಮಾರ್ಟ್ ಸಿಬ್ಬಂದಿ ಮೇಲೆ ಹೆಲ್ಮೆಟ್ ನಿಂದ ಹಲ್ಲೆ ಮಾಡಿದೆ.

    ಮಾಸ್ಕ್ ವಿಚಾರದಲ್ಲಿ ಸಿಬ್ಬಂದಿ ಮತ್ತು ಯುವಕರ ತಂಡದ ನಡುವೆ ಮಾರಾಮಾರಿ ನಡೆದ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಂಗ್ಳೂರಿನ ಮೂವರು ಯುವಕರು ದೊಡ್ಡಬಳ್ಳಾಪುರದಲ್ಲಿ ನೀರು ಪಾಲು

    ಬೆಂಗ್ಳೂರಿನ ಮೂವರು ಯುವಕರು ದೊಡ್ಡಬಳ್ಳಾಪುರದಲ್ಲಿ ನೀರು ಪಾಲು

    – ಹುಟ್ಟುಹಬ್ಬ ಆಚರಿಸಲು ಲಾಂಗ್ ಡ್ರೈವ್
    – ನಾಲ್ಕು ಬೈಕ್‍ನಲ್ಲಿ ಬಂದಿದ್ದ ಯುವಕರು, ಯುವತಿಯರು

    ಚಿಕ್ಕಬಳ್ಳಾಪುರ: ಕೊರೊನಾ ಲಾಕ್‍ಡೌನ್ ಸಡಿಲಿಕೆಯ ಬಳಿಕ ಬೆಂಗಳೂರಿನಿಂದ ಲಾಂಗ್ ಡ್ರೈವ್ ಬಂದ ಮೂವರು ಯುವಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ತಿಪ್ಪಗಾನಹಳ್ಳಿ ಕೆರೆಯಲ್ಲಿ ನಡೆದಿದೆ.

    ಬೆಂಗಳೂರಿನ ರಾಮಮೂರ್ತಿನಗರದ ಚಂದ್ರು(20), ರಾಜು(19) ಹಾಗೂ ನವೀನ್ (24) ಮೃತ ದುರ್ದೈವಿಗಳು. ರಾಮಮೂರ್ತಿ ನಗರದಿಂದ ನಾಲ್ಕು ಬೈಕ್‍ಗಳ ಮೂಲಕ ನಾಲ್ವರು ಯುವಕರು ಹಾಗೂ ನಾಲ್ವರು ಯುವತಿಯರು ಲಾಂಗ್ ಡ್ರೈವ್ ಬಂದಿದ್ದರು.

    ನವೀನ್ ಕುಮಾರ್ ಹುಟ್ಟು ಹಬ್ಬದ ಹಿನ್ನೆಲೆ ಯುವಕ, ಯುವತಿಯರು ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿದ್ದರು. ಆದರೆ ಲಾಕ್‍ಡೌನ್‍ನಿಂದಾಗಿ ದೇವಾಲಯದ ಬಾಗಿಲು ಮುಚ್ಚಿದ್ದರಿಂದ ಹೊರಗೆ ನಿಂತು ಕೈ ಮುಗಿದು ತದನಂತರ ಕೆರೆ ಬಳಿ ಬಂದಿದ್ದರು. ಈ ವೇಳೆ ಈಜಲು ಹೋದ ಮೂವರು ಕೆರೆಯ ಪಾಲಾಗಿದ್ದಾರೆ.

    ಈ ಸಂಬಂಧ ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಮೃತದೇಹಗಳಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ.

  • ಮಾಸ್ಕ್ ಧರಿಸದ ಯುವಕರಿಗೆ ರೈಲ್ವೆ ಟ್ರ್ಯಾಕ್ ಪಕ್ಕದಲ್ಲೇ ಉರುಳು ಶಿಕ್ಷೆ

    ಮಾಸ್ಕ್ ಧರಿಸದ ಯುವಕರಿಗೆ ರೈಲ್ವೆ ಟ್ರ್ಯಾಕ್ ಪಕ್ಕದಲ್ಲೇ ಉರುಳು ಶಿಕ್ಷೆ

    – ಅಜಾಗರೂಕತೆ ಮೆರೆದ ಇಬ್ಬರು ಪೊಲೀಸರ ಅಮಾನತು

    ಲಕ್ನೋ: ಮಾಸ್ಕ್ ಧರಿಸದಿದ್ದಕ್ಕಾಗಿ ಇಬ್ಬರು ಯುವಕರಿಗೆ ಪೊಲೀಸರು ರೈಲ್ವೇ ಟ್ರ್ಯಾಕ್ ಪಕ್ಕದಲ್ಲೇ ಉರುಳು ಸೇವೆ ಶಿಕ್ಷೆ ವಿಧಿಸಿ ಅಜಾಗರೂಕತೆ ಮೆರೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆಯು ಹಾಪುರ್ ಜಿಲ್ಲೆಯಲ್ಲಿ ನಡೆದಿದ್ದು, ಅಜಾಗರೂಕತೆ ತೋರಿದ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಆಘಾತಕಾರಿ ಸಂಗತಿಯೆಂದರೆ ಪೊಲೀಸರು ರೈಲು ಬರುವುದಕ್ಕೂ ಮುನ್ನ ಹಾಕಲಾಗಿದ್ದ ಗೇಟ್ ಮಧ್ಯೆ ಯುವಕರಿಗೆ ಉರುಳುವಂತೆ ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ ಯುವಕರು ರಸ್ತೆಯಲ್ಲಿ ಉರುಳುವುದನ್ನು ನಿಲ್ಲಿಸಿದಾಗ ಹೊಡೆದಿದ್ದಾರೆ.

    ಪೊಲೀಸರು ಯುವಕರಿಗೆ ಶಿಕ್ಷೆ ನೀಡುತ್ತಿದ್ದ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ಆಕ್ರೋಶ, ಟೀಕೆ ವ್ಯಕ್ತವಾಗಿದೆ. ಇದರಿಂದಾಗಿ ಎಚ್ಚೆತ್ತ ಹಾಪುರ್ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಅಜಾಗರೂಕತೆ ಮೆರೆದ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಹಾಪುರ್ ಪೊಲೀಸರು, ವೈರಲ್ ವಿಡಿಯೋವನ್ನು ತನಿಖೆ ಮಾಡಲಾಗಿದ್ದು, ಅಜಾಗರೂಕತೆ ಮೆರೆದ ಪೊಲೀಸರನ್ನು ಪೊಲೀಸ್ ಅಧೀಕ್ಷಕರು ತಕ್ಷಣದಿಂದ ಅಮಾನತುಗೊಳಿಸಿದ್ದಾರೆ. ಅವರ ವಿರುದ್ಧ ಅಗತ್ಯ ಕ್ರಮಕ್ಕಾಗಿ ವರದಿಯನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.