Tag: youth

  • ಮತ್ತೆ ಹೆಚ್ಚಾಯ್ತು ದರೋಡೆಕೋರರ ಹಾವಳಿ – ಯುವಕನ ಮೇಲೆ ಡ್ಯಾಗರ್‌ನಿಂದ ದಾಳಿ

    ಮತ್ತೆ ಹೆಚ್ಚಾಯ್ತು ದರೋಡೆಕೋರರ ಹಾವಳಿ – ಯುವಕನ ಮೇಲೆ ಡ್ಯಾಗರ್‌ನಿಂದ ದಾಳಿ

    ಬೆಂಗಳೂರು: ಒಂಟಿಯಾಗಿ ಓಡಾಡುವವರನ್ನು ಟಾರ್ಗೆಟ್ ಮಾಡುತ್ತಿದ್ದ ದರೋಡೆಕೋರರ ಗುಂಪು ಯುವಕನ ಬಳಿ ಮೊಬೈಲ್, ಹಣ ಕಿತ್ತುಕೊಳ್ಳಲು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ನಗರದ ಹೃದಯ ಭಾಗ ಎಂದು ಕರೆಯುವ ಬಳೇಪೇಟೆ ಬಳಿ ನಡೆದಿದೆ.

    ಪ್ರಮೋದ್ (17) ದರೋಡೆ ಗ್ಯಾಂಗಿನಿಂದ ಹಲ್ಲೆಗೊಳಗಾದ ಯುವಕ. ಜನವರಿ 13 ರಂದು ತಡರಾತ್ರಿ ಸುಮಾರು 9.30ಕ್ಕೆ ಎಂಎಸ್‍ಆರ್ ಲೇನ್ ನಲ್ಲಿ ನಡೆದುಕೊಂಡು ಬರುವಾಗ ದರೋಡೆಕೋರರು ಹಲ್ಲೆ ನಡೆಸಿದ್ದಾರೆ. ಮೊದಲೇ ಡ್ರಾಗರ್ ಹಿಡಿದು ಹೊಂಚು ಹಾಕಿ ಕುಳಿತ್ತಿದ್ದ 3 ದುಷ್ಕರ್ಮಿಗಳು ಪ್ರಮೋದ್‍ನನ್ನು ಅಟ್ಟಾಡಿಸಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಸ್ಥಳೀಯರು ಯುವಕನ ಸಹಾಯಕ್ಕೆ ಧಾವಿಸಿ ರಕ್ಷಣೆ ಮಾಡಿದ್ದಾರೆ.

    ಸ್ಥಳೀಯರು ಯುವಕನ ನೆರವಿಗೆ ಧಾವಿಸಿದ್ದನ್ನು ಕಂಡ ದರೋಡೆಕೋರರ ಗುಂಪು ಅವರನ್ನು ಕ್ಷಣ ಕಾಲ ಗುರಾಯಿಸಿದ್ದು, ಬಳಿಕ ಕೃತ್ಯವನ್ನು ಮೊಬೈಲ್‍ನಲ್ಲಿ ಫೋಟೋ ತೆಗೆದುಕೊಳ್ಳಲು ಮುಂದಾಗುತ್ತಿದ್ದಂತೆ ಅವರ ಮೇಲೂ ಕಲ್ಲು ತೂರಿ ಎಸ್ಕೇಪ್ ಆಗಿದ್ದಾರೆ. ಈ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ನಗರದಲ್ಲಿ ಒಂಟಿಯಾಗಿ ಓಡಾಡುವವರನ್ನು ಟಾರ್ಗೆಟ್ ಮಾಡುವ ಈ ಗ್ಯಾಂಗ್ ಮಾರಕಾಸ್ತ್ರ ಹಿಡಿದು ಹೊಂಚು ಹಾಕಿ ಕುಳಿತ್ತಿರುತ್ತದೆ. ರಸ್ತೆಯಲ್ಲಿ ನಡೆದು ಬರುವ ಯುವಕ, ಯುವತಿಯರಿಂದ ಮೊಬೈಲ್, ಹಣ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಾರೆ. ಈ ವೇಳೆ ಪ್ರತಿರೋಧ ತೋರಿದವರ ಮೇಲೆ ಹಲ್ಲೆ ನಡೆಸುತ್ತಾರೆ. ಅಂದು ರಾತ್ರಿ ಕೂಡ ಯುವಕ ಮೊಬೈಲ್ ನೀಡದಿದ್ದರಿಂದ ಹಲ್ಲೆ ನಡೆಸಿದ್ದಾರೆ. ಆದರೆ ಅದೃಷ್ಟವಶಾತ್ ಸ್ಥಳೀಯರು ಯುವಕನ ನೆರವಿಗೆ ಬಂದ ಪರಿಣಾಮ ಅಪಾಯದಿಂದ ಪಾರಾಗಿದ್ದಾನೆ.

    ಈ ಘಟನೆ ಕುರಿತು ಕೆ.ಆರ್ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಸಿಟಿವಿ ದೃಶ್ಯವಾಳಿಯನ್ನು ಆಧಾರಿಸಿ ಪೊಲೀಸರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಕೈಗೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂಕ್ರಾಂತಿಗೆ ಪ್ರವಾಸಕ್ಕೆ ಬಂದವ ನೀರುಪಾಲಾದ!

    ಸಂಕ್ರಾಂತಿಗೆ ಪ್ರವಾಸಕ್ಕೆ ಬಂದವ ನೀರುಪಾಲಾದ!

    ಕೊಪ್ಪಳ: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ಬಂದಿದ್ದ ಯುವಕನೋರ್ವ ನೀರಲ್ಲಿ ಈಜಲು ಹೋಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಬಳಿಯ ತುಂಗಭದ್ರಾ ನದಿಯಲ್ಲಿ ನಡೆದಿದೆ.

    ಭರತ್ ಗೌಡ(24) ಮೃತ ದುರ್ದೈವಿ. ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕಿನ ರಾಗಲಪರ್ವಿ ನಿವಾಸಿಯಾದ ಭರತ್ ಸಂಕ್ರಾಂತಿ ಹಿನ್ನೆಲೆ ಸ್ನೇಹಿತರೊಡನೆ ಆನೆಗುಂದಿ ಬಳಿಯ ತುಂಗಭದ್ರಾ ನದಿ ಬಳಿ ಪ್ರವಾಸಕ್ಕೆ ಬಂದಿದ್ದನು. ಇಂದು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಸ್ನೇಹಿತರೊಡನೆ ಭರತ್ ಹೋಗಿದ್ದಾನೆ. ಆದ್ರೆ ಭರತ್‍ಗೆ ಹರಿಯುತ್ತಿದ್ದ ನೀರಿನಲ್ಲಿ ಈಜುಬಾರದೇ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

    ಮುಳುಗುತ್ತಿದ್ದ ಭರತ್‍ಗೆ ಜೊತೆಗಿದ್ದವರು ಸಹಾಯ ಮಾಡುವಷ್ಟರಲ್ಲಿ ಆತ ಇಹಲೋಕ ತ್ಯಜಿಸಿದ್ದನು. ಯುವಕನ ಮೃತದೇಹವನ್ನು ಸ್ಥಳೀಯ ಮೀನುಗಾರರು ತೆಪ್ಪ ಬಳಸಿ ಹೊರತೆಗೆದಿದ್ದಾರೆ. ನಗುನಗುತ್ತ ಪ್ರವಾಸಕ್ಕೆ ಬಂದಿದ್ದ ಸ್ನೇಹಿತನ ಮೃತದೇಹವನ್ನು ಊರಿಗೆ ತೆಗೆದುಕೊಂಡು ಹೋಗುವ ಸ್ಥತಿ ಬಂತಲ್ಲ ಅಂತ ಯುವಕನ ಜೊತೆಗಿದ್ದವರು ಕಣ್ಣೀರಿಟ್ಟಿದ್ದಾರೆ.

    ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಬ್ ರಿಜಿಸ್ಟರ್ ಆಫೀಸ್‍ನಲ್ಲಿ ಯುವತಿ ಇಲ್ಲದೆ ಯುವಕನೊಬ್ಬನ ಮದುವೆ

    ಸಬ್ ರಿಜಿಸ್ಟರ್ ಆಫೀಸ್‍ನಲ್ಲಿ ಯುವತಿ ಇಲ್ಲದೆ ಯುವಕನೊಬ್ಬನ ಮದುವೆ

    ಕೊಪ್ಪಳ: ಜಿಲ್ಲೆಯ ಸಬ್ ರಿಜಿಸ್ಟರ್ ಆಫೀಸ್ ಅಲ್ಲಿ ಯುವತಿ ಇಲ್ಲದೇನೆ ಯುವಕನೊಬ್ಬನ ಜೊತೆ ಮದುವೆ ಮಾಡಿಸಿರುವ ವಿಚಿತ್ರ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

    ಗಂಗಾವತಿ ತಾಲೂಕಿನ ಸಬ್ ರಿಜಿಸ್ಟರ್ ಆಫೀಸ್‍ನಲ್ಲಿ 2018 ನವಂಬರ್ 23ರಂದು ಇಂಥಹದೊಂದು ಮಹಾ ಎಡವಟ್ಟು ನಡೆದಿದೆ. ಗಂಗಾವತಿಯ ಲಯನ್ಸ್ ಕ್ಲಬ್ ಸ್ಕೂಲ್ ಅಲ್ಲಿ ಇಂಗ್ಲಿಷ್ ಶಿಕ್ಷಕನಾಗಿರುವ ಗುರುಪಾದಯ್ಯ ಹಿರೇಮಠ್ ಈ ಪ್ರಕರಣದ ಮೊದಲ ಆರೋಪಿ. ಈ ಮೊದಲು ಇವರಿಗೆ ಒಂದು ವಿವಾಹವಾಗಿದ್ದರೂ, ಎರಡನೇ ಮದುವೆಗೆ ಹುಡುಗಿಯನ್ನು ನೋಡಲು ಹೋಗಿ ಎಡವಟ್ಟು ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

    ಗುರುಪಾದಯ್ಯ ಒಬ್ಬ ಸರ್ಕಾರಿ ಶಿಕ್ಷಕ ಈತನಿಗೆ ಈಗಾಗಲೇ ಒಂದು ಮದುವೆಯಾಗಿದ್ದು, 2ನೇ ಮದುವೆಗಾಗಿ ಹುಡುಗಿ ನೋಡಲು ಹೋಗಿದ್ದಾನೆ. ಹುಡುಗಿ ಇಷ್ಟ ಆಗಿದ್ದರಿಂದ ಹುಡುಗಿಯ ಫೋಟೋ ಒಂದನ್ನು ಕೇಳಿ ಪಡೆದುಕೊಂಡು ಬಂದಿದ್ದಾನೆ. ಹುಡುಗಿಯ ಮನೆಯವರಿಗೆ ಗುರುಪಾದಯ್ಯನ ಮೊದಲನೇ ಮದುವೆ ವಿಷಯ ತಿಳಿಯುತ್ತಿದ್ದಂತೆ ಹುಡುಗಿಯನ್ನು ಕೊಡಲು ನಿರಾಕರಿಸಿದ್ದಾರೆ. ಆದರೆ ಗುರುಪಾದಯ್ಯ ತನ್ನ ಅಸಲಿ ಬುದ್ಧಿಯನ್ನು ತೋರಿಸಿ ಇದೀಗ ಪೇಚಿಗೆ ಸಿಲುಕಿ ಹಾಕಿಕೊಂಡಿದ್ದಾನೆ.

    ಗುರುಪಾದಯ್ಯ ತನ್ನ ಜಾಣ್ಮೆ ಮತ್ತು ಕಾಂಚಾಣ ತೋರಿಸಿ ಸಬ್ ರಿಜಿಸ್ಟರ್ ಆಫೀಸ್ ಗೆ ಯುವತಿ ಇಲ್ಲದ್ದೇನೆ ರಿಜಿಸ್ಟರ್ ಮ್ಯಾರೇಜ್ ಡಾಕ್ಯುಮೆಂಟ್ಸ್ ರೆಡಿ ಮಾಡಿಸಿದ್ದಾನೆ. ಹುಡುಗಿ ಫೋಟೋ ಎಡಿಟ್ ಮಾಡಿಸಿ, ಅಷ್ಟೇ ಅಲ್ಲದೇ ಫೋರ್ಜರಿ ಸೈನ್ ಮಾಡಿಸಿ ನಾನು ಯುವತಿಯನ್ನು ಸಬ್ ರಿಜಿಸ್ಟರ್ ಆಫೀಸಿನಲ್ಲಿ ಮದುವೆ ಆಗಿದ್ದೇನೆ ಎನ್ನುವ ರೀತಿ ಎಲ್ಲಾ ರೀತಿಯ ದಾಖಲೆಗಳನ್ನು ತಯಾರು ಮಾಡಿಸಿದ್ದಾನೆ ಎಂದು ಖುದ್ದು ಯುವತಿಯೇ ಆರೋಪ ಮಾಡಿದ್ದಾಳೆ. ಆದರೆ ಗುರುಪಾದಯ್ಯನ ಪರವಾಗಿ ನಿಂತ ಸಬ್ ರಿಜಿಸ್ಟರ್ ಆಫೀಸರ್ ಫರೀದಾ ಬೇಗಂ ಹುಡುಗಿ ಮತ್ತು ಹುಡುಗ ಇಬ್ಬರೂ ನಮ್ಮ ಆಫೀಸ್ ಗೆ ಬಂದು ಮದುವೆಯಾಗಿದ್ದಾರೆ ಎಂದು ವಾದ ಮಾಡುತ್ತಾರೆ.

    ಇದರಿಂದ ಬೇಸತ್ತ ಯುವತಿ ಮನೆಯವರು ಗಂಗಾವತಿ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಯುವತಿ ಕಡೆಯವರು ಅಸಹಾಯಕರು ಎಂದು ತಿಳಿದಿದ್ದ ಗುರುಪಾದಯ್ಯ ಪೊಲೀಸ್ ಠಾಣೆಯಲ್ಲೂ ತನ್ನ ಪವರ್ ತೋರಿಸಿದ್ದಾನೆ ಎನ್ನುವ ಆರೋಪ ಸಹ ಕೇಳಿ ಬರುತ್ತಿದೆ. ಖುದ್ದು ಯುವತಿಯೇ ನಾನು ಸಬ್ ರಿಜಿಸ್ಟರ್ ಆಫೀಸ್ ಗೆ ಹೋಗಿಲ್ಲಾ ಅಂತಾ ಹೇಳುತ್ತಿದ್ದರೆ, ಪೊಲೀಸರು ಮಾತ್ರ ತುಟಿ-ಪೀಠಕ್ ಎನ್ನದೇ ಗಪ್ ಚುಪ್ ಆಗಿದ್ದಾರೆ. ಪೊಲೀಸರ ಈ ವರ್ತನೆ ಸಾಕಷ್ಟು ಅನುಮಾನಕ್ಕೆ ಇಡು ಮಾಡಿಕೊಟ್ಟಿದೆ. ಯುವತಿ ನನಗೆ ಅನ್ಯಾಯವಾಗಿದೆ ನ್ಯಾಯ ಕೊಡಿಸಿ ಎಂದು ಬೇಡಿಕೊಳ್ಳುತ್ತಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯುವಕನನ್ನು ತಬ್ಬಿಕೊಂಡಿದ್ದಕ್ಕೆ ವಿದ್ಯಾರ್ಥಿನಿ ವಿವಿಯಿಂದ ಡಿಬಾರ್: ವಿಡಿಯೋ ವೈರಲ್

    ಯುವಕನನ್ನು ತಬ್ಬಿಕೊಂಡಿದ್ದಕ್ಕೆ ವಿದ್ಯಾರ್ಥಿನಿ ವಿವಿಯಿಂದ ಡಿಬಾರ್: ವಿಡಿಯೋ ವೈರಲ್

    ಕೈರೋ: ವಿದ್ಯಾರ್ಥಿನಿಯೊಬ್ಬಳು ಯುವಕನನ್ನು ತಬ್ಬಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆಕೆಯನ್ನು ವಿಶ್ವವಿದ್ಯಾಲಯದಿಂದಲೇ ಡಿಬಾರ್ ಮಾಡಿದ ಘಟನೆಯೊಂದು ಈಜಿಪ್ಟ್ ನಲ್ಲಿ ನಡೆದಿದೆ.

    ವೈರಲ್ ಆಗಿರುವ ವಿಡಿಯೋದಲ್ಲಿ ಯುವಕ ಮಂಡಿಯೂರಿ ಯುವತಿಗೆ ಹೂಗೂಚ್ಚ ನೀಡುವ ಮೂಲಕ ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದಾನೆ. ಬಳಿಕ ಯುವಕ ತನ್ನ ಉತ್ಸಾಹವನ್ನು ತಾಳಲಾರದೇ ಯುವತಿಯನ್ನು ತಬ್ಬಿಕೊಂಡಿದ್ದಾನೆ. ಯುವಕನನ್ನು ತಬ್ಬಿಕೊಂಡಿದ್ದಕ್ಕೆ ಯುವತಿ ತನ್ನ ಸಂಸ್ಥೆಯ ಗೌರವವನ್ನು ಹಾಳು ಮಾಡಿದ್ದಾಳೆಂದು ಅಲ್- ಅಜರ್ ವಿಶ್ವವಿದ್ಯಾಲಯ ಆಕೆಯನ್ನು ಡಿಬಾರ್ ಮಾಡಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ನೀವು ಸೀಲ್ ಒಡೆದಿರುವ ತಂಪು ಪಾನೀಯ ಖರೀದಿ ಮಾಡುತ್ತೀರಾ : ಕನ್ಯತ್ವದ ಬಗ್ಗೆ ಪ್ರೊಫೆಸರ್ ಪೋಸ್ಟ್

    ವರದಿಗಳ ಪ್ರಕಾರ ಯುವತಿ ಯುವಕನನ್ನು ತಬ್ಬಿಕೊಂಡ ವಿಡಿಯೋ ಅಲ್-ಅಜರ್ ವಿಶ್ವವಿದ್ಯಾಲಯದಲ್ಲಿ ಸೆರೆಯಾಗಿಲ್ಲ. ಬದಲಿಗೆ ಈ ವಿಡಿಯೋ ಮನ್ಸೌರಾ ವಿಶ್ವವಿದ್ಯಾಲಯದಲ್ಲಿ ಸೆರೆ ಹಿಡಿಯಲಾಗಿದೆ. ಅಲ್ – ಅಜರ್ ಈಜಿಪ್ಟಿನ ಅತ್ಯುನ್ನತ ಸುನ್ನಿ ಮುಸ್ಲಿಂ ಜನಾಂಗದ ಪ್ರಮುಖ ಶಾಖೆಯಾಗಿದ್ದು, ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ನಿಯಮವಿದೆ. ಇದನ್ನೂ ಓದಿ: ಶಾಲೆಯಲ್ಲಿ ವಿದ್ಯಾರ್ಥಿನಿಯನ್ನು ಕೆಲ ಸೆಕೆಂಡ್ ತಬ್ಬಿಕೊಂಡಿದ್ದಕ್ಕೆ ವಿದ್ಯಾರ್ಥಿ ಸಸ್ಪೆಂಡ್!

    ಈ ವಿಚಾರದ ಬಗ್ಗೆ ಅಲ್-ಅಜರ್ ವಿವಿಯ ವಕ್ತಾರ ಅಹ್ಮದ್ ಜರೈ ಮಾತನಾಡಿ, “ನಾವು ಆ ವಿದ್ಯಾರ್ಥಿನಿಯನ್ನು ಡಿಬಾರ್ ಮಾಡಲು ನಿರ್ಧರಿಸಿದ್ದೇವೆ. ವಿಡಿಯೋದಿಂದಾಗಿ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಯುವತಿ ದೇಶದಲ್ಲೇ ಪ್ರತಿಷ್ಠಿತವಾಗಿರುವ ನಮ್ಮ ವಿಶ್ವವಿದ್ಯಾಲಯಕ್ಕೆ ಕೆಟ್ಟ ಹೆಸರು ತಂದಿದ್ದಾಳೆ. ಮದುವೆ ಆಗದ ಯುವಕನನ್ನು ಯುವತಿ ತಬ್ಬಿಕೊಂಡು ಸಮಾಜದ ಮೌಲ್ಯಗಳು ಹಾಗೂ ತತ್ವಗಳನ್ನು ಉಲ್ಲಂಘಿಸಿದ್ದಾಳೆ” ಎಂದು ಹೇಳಿ ವಿವಿಯ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜೀವದ ಹಂಗು ತೊರೆದು 1500 ಜನ್ರ ಜೀವ ಉಳಿಸಿದ ಸಾಹಸಿ ಯುವಕರು

    ಜೀವದ ಹಂಗು ತೊರೆದು 1500 ಜನ್ರ ಜೀವ ಉಳಿಸಿದ ಸಾಹಸಿ ಯುವಕರು

    ಬೆಳಗಾವಿ: ಜೀವದ ಹಂಗು ತೊರೆದು ಚಲಿಸುತ್ತಿರುವ ರೈಲಿನ ವಿರುದ್ಧ ಓಡಿ ಹೋಗಿ ರೈಲು ನಿಲ್ಲಿಸುವ ಮೂಲಕ ದೊಡ್ಡ ದುರಂತವನ್ನೇ ಯುವಕರಿಬ್ಬರು ತಪ್ಪಿಸಿದ್ದು, ಸಾವಿರಾರು ಪ್ರಯಾಣಿಕರ ಜೀವವನ್ನು ಉಳಿಸಿದ್ದಾರೆ.

    ರಿಯಾಜ್ ಹಾಗೂ ತೋಫಿಕ್ ಸಾಹಸಿ ಯುವಕರು. ಶುಕ್ರವಾರ ಸಂಜೆ ಬೆಳಗಾವಿಯ ಖಾನಾಪೂರದ ಗಾಂಧಿ ನಗರದ ರೈಲ್ವೆ ಟ್ರ್ಯಾಕ್ ನಲ್ಲಿ ಈ ಘಟನೆ ನಡೆದಿದೆ. ಕೊಲ್ಹಾಪುರ – ಹೈದರಾಬಾದ್ ರೈಲು ಹುಬ್ಬಳ್ಳಿ ಕಡೆ ಚಲಿಸುತ್ತಿತ್ತು. ಆದರೆ ರೈಲಿನ ಟ್ರ್ಯಾಕ್ ಮೇಲೆ ಏಕಾಎಕಿ ಮರ ಬಿದ್ದಿದೆ. ಇದೇ ಮಾರ್ಗವಾಗಿ ಬೈಕ್ ಮೇಲೆ ರಿಯಾಜ್ ಹಾಗೂ ತೋಫಿಕ್ ತೋಟದ ಕಡೆಗೆ ಹೋಗುತ್ತಿದ್ದರು. ಆಗ ಟ್ರ್ಯಾಕ್ ಮೇಲೆ ಮರ ಬಿದ್ದಿದ್ದನ್ನು ಗಮನಿಸಿದ್ದಾರೆ. ಇದನ್ನು  ಓದಿ: ಬಸ್‍ನಲ್ಲಿ ಕಾಣಿಸ್ತು ಬೆಂಕಿ ಕಿಡಿ – 1 ಕಿಮೀ ಹಿಂಬಾಲಿಸಿ ಬಂದು 70 ಪ್ರಯಾಣಿಕರ ಜೀವ ಉಳಿಸಿದ ಬೈಕ್ ಸವಾರ

    ಅತ್ತ ದೂರದಲ್ಲಿ ರೈಲು ಬರುವುದನ್ನು ಗಮನಿಸಿದ್ದಾರೆ. ತಕ್ಷಣ ಇಬ್ಬರು ತಮ್ಮ ಶರ್ಟ್ ಬಿಚ್ಚಿ ರೈಲಿನ ಮುಂದೆ ಓಡಿ ಅಪಾಯವಿದೆ ಎಂದು ಸೂಚಿಸಿದ್ದಾರೆ. ಇದನ್ನು ನೋಡಿದ ರೈಲು ಸಿಬ್ಬಂದಿ ತಕ್ಷಣ ಬ್ರೇಕ್ ಹಾಕಿದ್ದಾರೆ. ರೈಲು ಸರಿಯಾಗಿ ಮರದ ಹತ್ತಿರವೇ ಬಂದು ನಿಂತಿದೆ. ಒಂದು ವೇಳೆ ಯುವರಿಬ್ಬರು ಈ ಸಾಹಸ ಮಾಡಿಲ್ಲ ಎಂದಿದ್ದರೆ, ರೈಲಿನಲ್ಲಿದ್ದ ಅಷ್ಟು ಪ್ರಯಾಣಿಕರಿಗೂ ಅಪಾಯವಾಗುವ ಸಾಧ್ಯತೆ ಇತ್ತು.

    ಈ ರೈಲಿನಲ್ಲಿ 1,200 ಜನರು ಪ್ರಯಾಣ ಮಾಡುತ್ತಿದ್ದರು. ಆದರೆ ಯುವಕರಿಬ್ಬರು ಸಮಯ ಪ್ರಜ್ಞೆಯಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ರಿಯಾಜ್ ಹಾಗೂ ತೋಫಿಕ್ ಸಾಹಸದ ಬಗ್ಗೆ ನೈಋತ್ಯ ರೈಲ್ವೆ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇವರಿಬ್ಬರಿಗೆ ಶೌರ್ಯ ಪ್ರಶಸ್ತಿ ಕೊಡಬೇಕೆಂದು ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತನ್ನ ಆಸೆ ಪೂರೈಸಿಕೊಳ್ಳಲು ಟೆರೇಸ್ ಮೇಲಿಂದ ಹಣದ ಮಳೆ ಸುರಿಸಿದ..!

    ತನ್ನ ಆಸೆ ಪೂರೈಸಿಕೊಳ್ಳಲು ಟೆರೇಸ್ ಮೇಲಿಂದ ಹಣದ ಮಳೆ ಸುರಿಸಿದ..!

    ಬೀಜಿಂಗ್: ಯುವಕನೊಬ್ಬ ತನ್ನ ಆಸೆ ಪೂರೈಸಿಕೊಳ್ಳಲು ಲಕ್ಷಾಂತರ ರೂ. ಹಣವನ್ನು ಟೆರೇಸ್ ಮೇಲಿಂದ ಎಸೆದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವಕ ಜೈಲು ಪಾಲಾಗಿದ್ದಾನೆ.

    ಜಗತ್ತಿನಲ್ಲಿ ದುಡ್ಡು ಸಂಪಾದಿಸಲು ಜನರು ಎಷ್ಟೆಲ್ಲ ಕಷ್ಟ ಪಡುತ್ತಾರೆ. ಆದ್ರೆ ಚೀನಾದ ಹಾಂಗ್‍ಕಾಂಗ್ ಮೂಲದ ವಾಂಗ್ ಚಿಂಗ್(24) ತನ್ನ ಆಸೆಯನ್ನು ತೀರಿಸಿಕೊಳ್ಳಲು ಸಿನಿಮೀಯ ರೀತಿ, ಅಂದಾಜು 18 ಲಕ್ಷ ರೂ. ಹಣವನ್ನು ಟೆರೇಸ್ ಮೇಲಿನಿಂದ ಎಸೆದಿದ್ದಾನೆ. ಈ ದುಡ್ಡಿನ ಸುರಿಮಳೆ ನೋಡಲು ಸ್ಥಳದಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ಅಲ್ಲದೆ ಈ ದೃಶ್ಯವನ್ನು ತನ್ನ ಫೇಸ್‍ಬುಕ್ ಖಾತೆಯಿಂದ ವಾಂಗ್ ಲೈವ್ ವಿಡಿಯೋ ಕೂಡ ಮಾಡಿ ಜನರ ಕಣ್ಣಲ್ಲಿ ಹೀರೋ ಆಗಿದ್ದಾನೆ.

    ವಿಡಿಯೋದಲ್ಲಿ ಮೊದಲು ವಾಂಗ್ ಹಣ ತುಂಬಿದ್ದ ದುಬಾರಿ ಕಾರೊಂದರಲ್ಲಿ ಬಂದು, ಬಳಿಕ ಹಣವನ್ನು ಮನೆಯ ಟೆರೇಸ್ ಮೇಲಿಂದ ಎಸೆದು ಹೀರೋ ರೆಂಜಲ್ಲಿ ಪೋಸ್ ನೀಡಿದ್ದಾನೆ. ಈ ದೃಶ್ಯವನ್ನು ನೋಡಲು ಸ್ಥಳದಲ್ಲಿ ಬಹುತೇಕ ಜನರು ಸೇರಿದ್ದರಿಂದ ಕೆಲವು ಸಮಯದ ಕಾಲ ಟ್ರಾಫಿಕ್ ಜಾಮ್ ಆಗಿತ್ತು. ಆದರಿಂದ ತನ್ನ ವಿಚಿತ್ರ ಆಸೆ ತೀರಿಸಿಕೊಳ್ಳಲು ಹಾಗೂ ಜನರ ಮುಂದೆ ತನ್ನ ಹಣವನ್ನು ಪ್ರದರ್ಶಿಸಲು ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದಾನೆ ಅಂತ ವಾಂಗ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ನಂತರ ಪೊಲೀಸರು ವಾಂಗ್‍ನನ್ನು ವಿಚಾರಣೆ ಮಾಡಿದ್ದಾರೆ. ಆಗ ಕೆಲದಿನಗಳ ಹಿಂದೆ ವಾಂಗ್ ಟೆರೇಸ್ ಮೇಲಿಂದ ಹಣ ಎಸೆದು ಬಡ ಜನರಿಗೆ ಸಹಾಯ ಮಾಡಿ ಹೀರೋ ಆದ ಹಾಗೆ ಕನಸು ಕಂಡಿದ್ದನಂತೆ. ಆದರಿಂದ ಬಡ ಜನರಿಗೆ ಸಹಾಯ ಮಾಡಲು ಈ ರೀತಿ ಹಣ ಎಸೆದೆ ಎಂದು ಪೊಲೀಸರಿಗೆ ಹೇಳಿದ್ದಾನೆ. ವಿಚಾರಣೆ ವೇಳೆ ಆತ ಎಷ್ಟು ಹಣ ಎಸೆದಿದ್ದಾನೆ ಅಂತ ಪೊಲೀಸರ ಬಳಿ ಬಾಯ್ಬಿಟ್ಟಿಲ್ಲ. ಆದ್ರೆ ಸ್ಥಳಿಯ ಮಾಧ್ಯಮಗಳು ಮಾತ್ರ ವಾಂಗ್ ಸುಮಾರು 18 ಲಕ್ಷ ರೂಪಾಯಿಕ್ಕಿಂತ ಹೆಚ್ಚು ಹಣವನ್ನೇ ತನ್ನ ಕಾರಲ್ಲಿ ತಂದಿದ್ದ ಎಂದು ವರದಿ ಮಾಡಿದೆ.

    ಒಂದೆಡೆ ಜನರಿಗೆ ಸಹಾಯ ಮಾಡಲು ವಾಂಗ್ ಹಣ ಎಸೆದಿದ್ದಾನೆ ಅಂತ ಹೇಳಿದರೆ, ಇನ್ನೊಂದೆಡೆ ಸ್ಥಳೀಯರು ಆತ ಸುಮ್ಮನೆ ಪಬ್ಲಿಸಿಟಿಗೆ ಈ ರೀತಿ ಕೆಲಸವನ್ನು ಮಾಡುತ್ತಿರುತ್ತಾನೆ ಅಂತ ಹೇಳುತ್ತಾರೆ. ಅದೇನೆ ಆಗ್ಲಿ ಕೊನೆಗೆ ಆಸೆ ಪೂರೈಸಿಕೊಳ್ಳಲು ಹೋಗಿ ಯುವಕ ಜೈಲು ಸೇರಿದ್ದಂತೂ ವಿಪರ್ಯಾಸ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಎಂ ಆಸ್ಪತ್ರೆ ಭೇಟಿಯಿಂದ ಅಂಬುಲೆನ್ಸ್‌ನಲ್ಲೇ ಕಾದ ರೋಗಿ!

    ಸಿಎಂ ಆಸ್ಪತ್ರೆ ಭೇಟಿಯಿಂದ ಅಂಬುಲೆನ್ಸ್‌ನಲ್ಲೇ ಕಾದ ರೋಗಿ!

    ಬೆಂಗಳೂರು: ನಮ್ಮ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಯತ್ನಿಸಿದ ಯುವಕನ ಆರೋಗ್ಯ ವಿಚಾರಣೆಗೆ ಸಿಎಂ ಕುಮಾರಸ್ವಾಮಿ ಆಗಮಿಸಿದ್ದರಿಂದ ತುರ್ತು ಚಿಕಿತ್ಸೆಗೆ ಆಗಮಿಸಿದ್ದ ರೋಗಿಯೊಬ್ಬರು ಸ್ಟ್ರೆಚ್ಚರ್‍ನಲ್ಲಿಯೇ ಕಾದು ಚಿಕಿತ್ಸೆಗಾಗಿ ಪರದಾಟ ನಡೆಸಿದ್ದಾರೆ.

    ಶುಕ್ರವಾರ ಬೆಳಗ್ಗೆ ಜಯನಗರದ ನ್ಯಾಷನಲ್ ಕಾಲೇಜ್ ಮೆಟ್ರೋ ನಿಲ್ದಾಣದಲ್ಲಿ ವೇಣುಗೋಪಾಲ್ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಘಟನೆಯಲ್ಲಿ ಗಾಯಗೊಂಡಿದ್ದ ಆತನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯುವಕನ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಆತನ ತಾಯಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ಕರೆಸಿಕೊಂಡಿದ್ದರು.

    ಮೆಟ್ರೋ ನಿಲ್ದಾಣದಲ್ಲಿ ಯುವಕ ರೈಲಿಗೆ ಸಿಲುಕಿದ ಘಟನೆ ಬಗ್ಗೆ ಮಾಹಿತಿ ಪಡೆದ ಸಿಎಂ ಕುಮಾರಸ್ವಾಮಿ ಅವರು ಆಸ್ಪತ್ರೆಗೆ ಆಗಮಿಸಿದ್ದರು. ಸಿಎಂ ಆಸ್ಪತ್ರೆಗೆ ಬಂದ ಕಾರಣ ಪೊಲೀಸರು ಬೀಗಿ ಭದ್ರತೆಯನ್ನು ಏರ್ಪಡಿಸಿದ್ದರು. ಸಿಎಂ ಭೇಟಿಯಿಂದ ತುರ್ತು ಚಿಕಿತ್ಸೆಗೆ ಆಗಮಿಸಿದ ಕೆಲ ರೋಗಿಗಳು ಪರದಾಟ ನಡೆಸಿದರು.

    ಆಸ್ಪತ್ರೆಯ ಭೇಟಿ ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು, ಮೆಟ್ರೋ ನಿಲ್ದಾಣದಲ್ಲಿ ಮತ್ತಷ್ಟು ಭದ್ರತೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆದರೆ ಇಂದಿನ ಘಟನೆ ಘಟನೆ ಮೆಟ್ರೋ ಅಧಿಕಾರಿಗಳು, ರಕ್ಷಣಾ ಸಿಬ್ಬಂದಿಯಿಂದ ಆಗಿಲ್ಲ. ಕುಟುಂಬದ ಗಲಾಟೆಯಿಂದಾಗಿ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನ ಜೀವ ರಕ್ಷಣೆ ಮಾಡಿದ ಮೆಟ್ರೋ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುತ್ತೆನೆ ಎಂದರು.  ಇದನ್ನು ಓದಿ: ಫೋನ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಮೆಟ್ರೋ ಹಳಿಗೆ ಹಾರಿದ ಯುವಕ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಫೋನ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಮೆಟ್ರೋ ಹಳಿಗೆ ಹಾರಿದ ಯುವಕ!

    ಫೋನ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಮೆಟ್ರೋ ಹಳಿಗೆ ಹಾರಿದ ಯುವಕ!

    ಬೆಂಗಳೂರು: ನಮ್ಮ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಬಿಎಂಆರ್ ಸಿಎಲ್ ಎಂಡಿ ಅಜಯ್ ಸೇಠ್ ಮಾಹಿತಿ ನೀಡಿದ್ದಾರೆ.

    ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದ ಅವರು, ಮೆಟ್ರೋ ರೈಲು ಆಗಮಿಸುವ ವೇಳೆ ಸುಮಾರು 20 ಮೀಟರ್ ದೂರವಿದ್ದ ಯುವಕ ಏಕಾಏಕಿ ಹಳಿಗೆ ಹಾರಿದ್ದು, ಈ ವೇಳೆ ರೈಲು ಹಳಿಯ ಮಧ್ಯಭಾಗದಲ್ಲಿ ಬಿದ್ದ ಕಾರಣ ಆತ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಆತನಿಗೆ ಪ್ರಥಮ ಚಿಕಿತ್ಸೆ ನೀಡಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿಸಿದರು.

    ಯುವಕ ಆತ್ಮಹತ್ಯೆ ಯತ್ನಿಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೆಟ್ರೋ ರಕ್ಷಣಾ ಸಿಬ್ಬಂದಿ ಎಚ್ಚರಿಕೆಯಿಂದ ಇದ್ದರೂ ಕೂಡ ಘಟನೆ ನಡೆದಿದೆ. ಘಟನೆಯಿಂದ ಸುಮಾರು 45 ನಿಮಿಷಗಳ ಕಾಲ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು. ಆದರೆ ಸದ್ಯ ಸಂಚಾರ ಪುನರ್ ಆರಂಭಗೊಂಡಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಬಿಎಂಆರ್ ಸಿಎಲ್ ಹಿರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚವಾಣ್ ಆಸ್ಪತ್ರೆ ಬಳಿ ಮಾತನಾಡಿ ಯುವಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ಆದರೆ ತಲೆಗೆ ಗಂಭೀರ ಗಾಯವಾಗಿದೆ ಎಂದು ತಿಳಿಸಿದರು.

    ಮೆಟ್ರೋ ರೈಲಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಯುವಕ ನಗರದ ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್ ನಿವಾಸಿ ವೇಣುಗೋಪಾಲ್(18) ಎಂದು ತಿಳಿದು ಬಂದಿದೆ. ಆತ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದು, ಬಳಿಕ ಟೈಲರಿಂಗ್ ಕೆಲಸ ಮಾಡಿಕೊಂಡಿದ್ದ. ಆದರೆ ಇತ್ತೀಚೆಗೆ ತಡರಾತ್ರಿವರೆಗೂ ಫೋನ್ ನಲ್ಲಿ ಹೆಚ್ಚು ಮಾತನಾಡುತ್ತಿದ್ದ. ಇದನ್ನು ಗಮನಿಸಿದ್ದ ಪೋಷಕರು ಫೋನ್ ಹೆಚ್ಚು ಬಳಸದಂತೆ ತಿಳಿ ಹೇಳಿದ್ದರು. ಆದರೆ ಇದೇ ವಿಚಾರಕ್ಕೆ ನಿನ್ನೆ ರಾತ್ರಿ ಪೋಷಕರೊಂದಿಗೆ ಗಲಾಟೆ ಮಾಡಿಕೊಂಡಿದ್ದ ವೇಣು ಇಂದು ಬೆಳಗ್ಗೆ 9 ಗಂಟೆ ವೇಳೆಗೆ ಮನೆಯಿಂದ ಹೊರಬಂದಿದ್ದ. ಆ ಬಳಿಕ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣಕ್ಕೆ ಆಗಮಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ಸಿಎಂ ಕುಮಾರಸ್ವಾಮಿ ನಿಮ್ಹಾನ್ಸ್ ಆಸ್ಪತ್ರೆಗೆ ಭೇಟಿ ನೀಡಿ ಯುವಕನ ಆರೋಗ್ಯವನ್ನು ವಿಚಾರಿಸಿದ್ದಾರೆ. ವಿವಿಪುರಂ ಪೊಲೀಸ್ ಠಾಣೆಯಲ್ಲಿ ಘಟನೆ ಬಗ್ಗೆ ಪ್ರಕರಣ ದಾಖಲು ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಮ್ಮ ಮೆಟ್ರೋ ರೈಲು ಹಳಿಗೆ ಹಾರಿ ಯುವಕನಿಂದ ಆತ್ಮಹತ್ಯೆಗೆ ಯತ್ನ – ಸಂಚಾರ ಸ್ಥಗಿತ

    ನಮ್ಮ ಮೆಟ್ರೋ ರೈಲು ಹಳಿಗೆ ಹಾರಿ ಯುವಕನಿಂದ ಆತ್ಮಹತ್ಯೆಗೆ ಯತ್ನ – ಸಂಚಾರ ಸ್ಥಗಿತ

    ಬೆಂಗಳೂರು: ನ್ಯಾಷನಲ್ ಕಾಲೇಜ್ ಬಳಿ ಇರುವ ಮೆಟ್ರೋ ರೈಲ್ವೇ ನಿಲ್ದಾಣದಲ್ಲಿ ಯುವಕನೊಬ್ಬ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

    ಬೆಳಗ್ಗೆಯಿಂದ ರೈಲ್ವೇ ನಿಲ್ದಾಣದಲ್ಲಿ ಇದ್ದ ಯುವಕ ರೈಲು ಹಳಿಗೆ ಆಗಮಿಸುತ್ತಿದಂತೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನುವ ಪ್ರಾಥಮಿಕ ಮಾಹಿತಿ ಈಗ ಲಭ್ಯವಾಗಿದೆ. ಹಳಿಗೆ ಹಾರಿದ ರಭಸಕ್ಕೆ ಯುವಕನ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾರಿದ ಯುವಕ ಯಾರು ಎನ್ನುವ ಮಾಹಿತಿ ಲಭ್ಯವಾಗಿಲ್ಲ.

    ಇದೇ ಮೊದಲ ಬಾರಿಗೆ ನಮ್ಮ ಮೆಟ್ರೋ ರೈಲ್ವೇ ನಿಲ್ದಾಣದಲ್ಲಿ ಇಂತಹ ಘಟನೆ ನಡೆದಿದ್ದು, ಇದರಿಂದ ಮೆಟ್ರೋ ಸಂಚಾರದಲ್ಲಿ ವ್ಯತ್ಯಾಸ ಉಂಟಾಗಿದೆ. ಸಾಮಾನ್ಯವಾಗಿ ಮೆಟ್ರೋ ನಿಲ್ದಾಣದಲ್ಲಿ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿರುತ್ತದೆ. ಈ ದೃಶ್ಯಗಳನ್ನು ಕಂಡ ಸಹ ಪ್ರಯಾಣಿಕರು ಭಯದಿಂದ ದಿಕ್ಕಾಪಾಲಾಗಿ ಓಡಿದ್ದಾರೆ.

    ಮೆಟ್ರೋ ಸಂಚಾರ ಸ್ಥಗಿತ: ಯುವಕ ಆತ್ಮಹತ್ಯೆಗೆ ಯತ್ನಿಸಿದ ಬೆನ್ನಲ್ಲೇ ಯಲಚೇನಹಳ್ಳಿ ಕಡೆ ಹೋಗುವ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಕೆ.ಆರ್. ಮಾರುಕಟ್ಟೆಯಲ್ಲಿ ಪ್ರಯಾಣಿಕರನ್ನು ರೈಲಿನಿಂದ ಇಳಿಸಲಾಗಿದೆ. ಅರ್ಧಗಂಟೆಗೂ ಹೆಚ್ಚು ಕಾಲ ಕಾದ ಪ್ರಯಾಣಿಕರು ನಿರಾಸೆಯಿಂದ ತೆರಳಿದ್ದಾರೆ. ಎಲ್ಲ ಪ್ರಯಾಣಿಕರಿಗೆ ಮೆಟ್ರೋ ಹಣವನ್ನು ಪಾವತಿ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಸ್ತೆಯಲ್ಲೇ ಬಾಲಕಿ ಮುಂದೆ ಪ್ಯಾಂಟ್ ಬಿಚ್ಚಿದ – ಸ್ಟಂಟ್‍ಮ್ಯಾನ್ ಸಮಯಪ್ರಜ್ಞೆಯಿಂದ ಕಾಮುಕ ಅರೆಸ್ಟ್

    ರಸ್ತೆಯಲ್ಲೇ ಬಾಲಕಿ ಮುಂದೆ ಪ್ಯಾಂಟ್ ಬಿಚ್ಚಿದ – ಸ್ಟಂಟ್‍ಮ್ಯಾನ್ ಸಮಯಪ್ರಜ್ಞೆಯಿಂದ ಕಾಮುಕ ಅರೆಸ್ಟ್

    – ಕಾಮುಕನನ್ನು ಪೊಲೀಸರಿಗೆ ಒಪ್ಪಿಸಿದ ಬಾಲಿವುಡ್ ಸ್ಟಂಟ್ ಮ್ಯಾನ್

    ಮುಂಬೈ: ಅಪ್ರಾಪ್ತೆಗೆ ಪೋರ್ನ್ ವಿಡಿಯೋ ತೋರಿಸಿ ಆಕೆಯ ದೇಹ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಬಾಲಿವುಡ್ ಸಾಹಸ ನಿರ್ದೇಶಕ, ಸಹ ನಿರ್ದೇಶಕ ಅಸೀಫ್ ರಶೀದ್ ಮೆಹ್ತಾ ಅವರು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಭಾನುವಾರ ಅಸೀಫ್ ಮನೆಯ ಹೊರಗೆ 20 ವರ್ಷದ ಯುವಕನೊಬ್ಬ 9 ವರ್ಷದ ಬಾಲಕಿಗೆ ತನ್ನ ಮೊಬೈಲಿನಲ್ಲಿ ಪೋರ್ನ್ ವಿಡಿಯೋ ತೋರಿಸುತ್ತಿದ್ದನು. ಈ ವೇಳೆ ಅಸೀಫ್ ತನ್ನ ಮನೆಗೆ ಹೋಗುತ್ತಿದ್ದಾಗ ಯುವಕ ಬೈಕಿನ ಮೇಲೆ ಕುಳಿತುಕೊಂಡಿರುವುದನ್ನು ಗಮನಿಸಿದ್ದಾರೆ. ಅಲ್ಲದೇ ಬಾಲಕಿ ಯುವಕನ ಪಕ್ಕದಲ್ಲೇ ನಿಂತು ಆತನ ಮೊಬೈಲ್‍ನಲ್ಲಿ ಇಣುಕಿ ನೋಡುತ್ತಿದ್ದಾಗ ಅವರಿಗೆ ಅನುಮಾನ ಬಂದಿದೆ.

    ನಾನು ಮನೆಗೆ ಹೋಗುವ ಸಂದರ್ಭದಲ್ಲಿ ಅಲ್ಲಿ ನಿಂತಿದ್ದ ಯುವಕ ಹಾಗೂ ಬಾಲಕಿಯನ್ನು ನೋಡಿ ಅನುಮಾನ ಬಂತು. ಬಳಿಕ ನಾನು ಮನೆಗೆ ಹೋಗಿ ಕಿಟಕಿಯಿಂದ ಹೊರಗೆ ನೋಡಿದ್ದಾಗ ಯುವಕ ಬಾಲಕಿಯ ದೇಹವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದನು. ನಾನು ಆತನ ಬಳಿ ಹೋಗಿ ನಿನಗೆ ಈ ಬಾಲಕಿ ಗೊತ್ತಾ ಎಂದು ಪ್ರಶ್ನಿಸಿದೆ. ಆಗ ಯುವಕ ಈಕೆ ನನ್ನ ತಂಗಿ ಎಂದು ಹೇಳಿದ್ದಾನೆ ಅಂತಾ ಅಸೀಫ್ ಹೇಳಿದ್ದಾರೆ.

    ನಾನು ಯುವಕನನ್ನು ವಿಚಾರಿಸುತ್ತಿದ್ದಾಗ ಆತನ ಪ್ಯಾಂಟ್ ಜಿಪ್ ಓಪನ್ ಇರುವುದನ್ನು ಗಮನಿಸಿದೆ ಹಾಗೂ ಬಾಲಕಿ ಕೂಡ ಆಘಾತಕ್ಕೊಳಗಾಗಿದ್ದಳು. ಬಳಿಕ ಬಾಲಕಿಗೆ ಆಕೆಯ ತಾಯಿ ಬಗ್ಗೆ ಕೇಳಿದ್ದಾಗ ನನ್ನ ತಾಯಿ ಇಲ್ಲಿಯೇ ಎಲ್ಲೋ ಇದ್ದಾರೆ ಎಂದು ಹೇಳಿದ್ದಳು. ನಂತರ ಈತ ನಿನ್ನ ಸಹೋದರನಾ ಎಂದು ಕೇಳಿದ್ದಾಗ ಆಕೆ ಇಲ್ಲ ಎಂದು ಹೇಳಿದ್ದಾಳೆ. ಆಗ ನನಗೆ ಅನುಮಾನ ಬಂದು ಆತನ ಮೊಬೈಲ್ ಪರಿಶೀಲಿಸಿದ್ದಾಗ ಕೇವಲ ಪೋರ್ನ್ ವಿಡಿಯೋಗಳಿತ್ತು.

    ನಾನು ಯುವಕನನ್ನು ವಿಚಾರಿಸುತ್ತಿದ್ದಾಗ ಅಲ್ಲಿ ಜನರೆಲ್ಲರು ಸೇರಿದ್ದರು. ಅದರಲ್ಲಿ ನನ್ನ ಪರಿಚಯಸ್ಥರು ಇದ್ದರು. ಜನರು ಸೇರುತ್ತಿದ್ದಂತೆ ಬಾಲಕಿ ತನ್ನ ತಾಯಿಯನ್ನು ಹುಡುಕಲು ಅಲ್ಲಿಂದ ಹೋಗುತ್ತಿದ್ದಳು. ನಾನು ಕೂಡ ಯುವಕನನ್ನು ಬಾಲಕಿ ಜೊತೆ ಕರೆದುಕೊಂಡು ಹೋಗಿ ಆಕೆಯ ತಾಯಿಗೆ ಈ ವಿಷಯವನ್ನು ತಿಳಿಸಿದೆ. ಈ ವಿಷಯ ಜನರಿಗೆ ತಿಳಿಯುತ್ತಿದ್ದಂತೆ ಅವರು ಯುವಕನನ್ನು ಮಹೀಮ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು ಎಂದು ಅಸೀಫ್ ತಿಳಿಸಿದ್ದಾರೆ.

    ಬಳಿಕ ಪೊಲೀಸ್ ಠಾಣೆಗೆ ಬಾಲಕಿ ಹಾಗೂ ಆಕೆಯ ತಾಯಿ ಭೇಟಿ ಭೇಟಿ ನೀಡಿದ್ದಾರೆ. ಸಾಕ್ಷಿಗಾಗಿ ನಾನು ಯುವಕನ ಜೊತೆ ನಡೆದ ಸಂಭಾಷಣೆಯನ್ನು ರೆಕಾರ್ಡ್ ಮಾಡಿ ಅದನ್ನು ಪೊಲೀಸರಿಗೆ ನೀಡಿದೆ. ಪೊಲೀಸರು ಬಾಲಕಿಯನ್ನು ವಿಚಾರಿಸಿದರು. ಆಗ ಬಾಲಕಿ ಯುವಕ ತನ್ನ ಖಾಸಗಿ ಅಂಗವನ್ನು ಮುಟ್ಟು ಎಂದು ಹೇಳುತ್ತಿದ್ದ ಎಂದು ಹೇಳಿದ್ದಾಳೆ. ಬಾಲಕಿಯ ಹೇಳಿಕೆ ಪಡೆದ ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಿಸಿಕೊಂಡಿದ್ದಾರೆ. ಸೋಮವಾರ ಆತನನ್ನು ನ್ಯಾಯಲಕ್ಕೆ ಹಾಜರುಪಡಿಸಿದ್ದಾರೆ.

    ಅಸೀಫ್ ‘ಜೋಧಾ ಅಖ್ಬರ್’, ‘ರೇಸ್-3’ ಚಿತ್ರ ಹಾಗೂ ಬಿಡುಗಡೆಗೆ ಸಿದ್ಧವಾಗಿರುವ ‘ಚೀಟ್ ಇಂಡಿಯಾ’ ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv