Tag: youth

  • ಬಿಎಸ್‍ಪಿ ಬದ್ಲು ಬಿಜೆಪಿಗೆ ಮತ – ತನ್ನ ಬೆರಳನ್ನು ತಾನೇ ಕಟ್ ಮಾಡ್ಕೊಂಡ ಯುವಕ!

    ಬಿಎಸ್‍ಪಿ ಬದ್ಲು ಬಿಜೆಪಿಗೆ ಮತ – ತನ್ನ ಬೆರಳನ್ನು ತಾನೇ ಕಟ್ ಮಾಡ್ಕೊಂಡ ಯುವಕ!

    ಲಕ್ನೋ: ದಲಿತ ಮತದಾರರೊಬ್ಬರು ಬಿಜೆಪಿಗೆ ಮತ ಹಾಕಿದ್ದರಿಂದ ವಿಚಲಿತಗೊಂಡು ತನ್ನ ಕೈ ಬೆರಳನ್ನೇ ತಾನೇ ತುಂಡು ಮಾಡಿಕೊಂಡ ವಿಲಕ್ಷಣ ಘಟನೆಯೊಂದು ಉತ್ತರ ಪ್ರದೇಶದ ಬುಲಂದರ್‍ಶಾಹರ್ ಕ್ಷೇತ್ರದಲ್ಲಿ ನಡೆದಿದೆ.

    25 ವರ್ಷದ ಪವನ್ ಕುಮಾರ್ ಕೈ ಬೆರಳು ಕಳೆದುಕೊಂಡ ಯುವಕನಾಗಿದ್ದು, ಈತ ಶಿಕಾರ್‍ಪುರ್ ಪ್ರದೇಶದ ಅಬ್ದುಲ್ಲಪುರ್ ಹುಲ್ಸಾನ್ ಗ್ರಾಮದವನಾಗಿದ್ದಾನೆ. ಶುಕ್ರವಾರ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ನಡೆಯುತಿತ್ತು. ಹೀಗಾಗಿ ಮತ ಹಾಕಲು ತೆರಳಿದ್ದ ಪವನ್, ಇವಿಎಂ ಯಂತ್ರದಲ್ಲಿ ಬಿಎಸ್‍ಪಿ ಬದಲು ಬಿಜೆಪಿ ಬಟನ್ ಒತ್ತಿದ್ದಾನೆ. ಬಳಿಕ ತನ್ನ ತಪ್ಪು ಅರಿವಾದ ಬಳಿಕ ಬೇಸರಗೊಂಡ ಪವನ್, ಕುಡುಗೋಲಿನಿಂದ ತನ್ನ ಬೆರಳು ಕಟ್ ಮಾಡಿಕೊಂಡಿದ್ದಾನೆ.

    ತಾನು ಮಾಡಿದ ತಪ್ಪಿಗೆ ಯುವಕ ವಿಡಿಯೋ ಮಾಡುವ ಮೂಲಕ ವಿಷಾದ ವ್ಯಕ್ತಪಡಿಸಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವರದಿಗಳ ಪ್ರಕಾರ ಪವನ್, ಎಸ್‍ಪಿ-ಬಿಎಸ್‍ಪಿ-ಆರ್‍ಎಲ್‍ಡಿ ಮೈತ್ರಿ ಅಭ್ಯರ್ಥಿ ಯೋಗೇಶ್ ವರ್ಮಾ ಅವರಿಗೆ ಮತದಾನ ಮಾಡಬೇಕಿತ್ತು. ಆದ್ರೆ ಇವಿಎಂ ಯಂತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬೋಲಾ ಸಿಂಗ್ ಅವರಿಗೆ ವೋಟ್ ಮಾಡಿದ್ದಾನೆ. ಇದರಿಂದ ವಿಚಲಿತನಾದ ಪವನ್ ತನ್ನ ತಪ್ಪಿಗೆ ವೋಟ್ ಹಾಕಿದ ಕೈ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ.

  • ಅಂಬುಲೆನ್ಸ್‌ನಲ್ಲಿ ಬಂದು ಹಕ್ಕು ಚಲಾವಣೆ – ಮತಗಟ್ಟೆ ಅಧಿಕಾರಿಗಳಿಂದ ಶ್ಲಾಘನೆ

    ಅಂಬುಲೆನ್ಸ್‌ನಲ್ಲಿ ಬಂದು ಹಕ್ಕು ಚಲಾವಣೆ – ಮತಗಟ್ಟೆ ಅಧಿಕಾರಿಗಳಿಂದ ಶ್ಲಾಘನೆ

    ಉಡುಪಿ: ಅಪಘಾತಕ್ಕೀಡಾಗಿ ಗಂಭೀರ ಗಾಯಕ್ಕೊಳಗಾಗಿದ್ದ ಯುವಕ ಅಂಬುಲೆನ್ಸ್‌ನಲ್ಲಿ ಬಂದು ಹಕ್ಕು ಚಲಾವಣೆ ಮಾಡಿದ್ದಾರೆ. ಕುಂದಾಪುರದ ಉಳ್ತೂರಿನ ಯುವಕ ಜಯಶೀಲ್ ಈ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

    ಜಯಶೀಲ್ ಗೆ ಎರಡು ವಾರದ ಹಿಂದೆ ಅಪಘಾತವಾಗಿತ್ತು. ಬಲ ಕಾಲಿಗೆ ತೀವ್ರತರನಾದ ಗಾಯವಾಗಿತ್ತು. 3 ತಿಂಗಳುಗಳ ಕಾಲ ರೆಸ್ಟ್ ಮಾಡಲು ವೈದ್ಯರು ಖಡಕ್ ಸೂಚನೆ ನೀಡಿದ್ದರು. ಆದ್ರೆ ಮತ ಹಾಕಲೇಬೇಕು ಎಂದು ಕುಟುಂಬಸ್ಥರಲ್ಲಿ ಯುವಕ ಒತ್ತಾಯಿಸಿದ್ದರು. ಕೊನೆಗೆ ಗೆಳೆಯರೆಲ್ಲ ಸೇರಿ ಅಂಬುಲೆನ್ಸ್ ವ್ಯವಸ್ಥೆ ಮಾಡಿದರು. ಈ ಮೂಲಕ ಮತದಾನಕ್ಕೆ ಹಿಂದೇಟು ಹಾಕುವವರಿಗೆ ಜಯಶೀಲ್ ಮಾದರಿಯಾದರು.

    ಸ್ಟ್ರೆಚ್ಚರ್ ನಲ್ಲಿ ಮಲಗಿಕೊಂಡೇ ಮತದಾನ ಮಾಡಿ ಜಯಶೀಲ್ ಪೂಜಾರಿ ಎಲ್ಲರಿಗೂ ಒಂದು ಸಂದೇಶ ರವಾನೆ ಮಾಡಿದ್ದಾರೆ. ಮತದಾನದ ಬೆಲೆ ಏನು ಎಂಬುದನ್ನು ಇವರು ಸಾರಿ ಹೇಳಿದ್ದಾರೆ. ಮತಗಟ್ಟೆ ಅಧಿಕಾರಿಗಳು ಕೂಡಾ ಜಯಶೀಲ್ ಅವರ ಕರ್ತವ್ಯ ಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ.

    ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಐದು ವರ್ಷಕ್ಕೊಮ್ಮೆ ಚುನಾವಣೆ ಬರುತ್ತದೆ. ನಮ್ಮನ್ನಾಳುವವರನ್ನು ಆಯ್ಕೆ ಮಾಡುವುದು ನಮ್ಮ ಹಕ್ಕು. ಅಯೋಗ್ಯರು, ಯೋಗ್ಯರನ್ನು ಒಂದೊಂದು ಮತದಿಂದ ಬೇರ್ಪಡಿಸಬಹುದು. ಸ್ವಲ್ಪ ಕಷ್ಟವಾದರೂ ಪರವಾಗಿಲ್ಲ, ವೋಟ್ ಮಾಡಿದ್ದೇನೆ. ಮನಸ್ಸಿಗೆ ಖುಷಿಯಾಗಿಗೆ, ನೆಮ್ಮದಿಯಾಗಿದೆ ಎಂದು ಹೇಳಿದರು.

  • ಬೀದರ್ ಜನರಿಗೆ ತಂಪೆರೆದ ವರುಣ – ಸಿಡಿಲಿಗೆ ಯುವಕ ಬಲಿ

    ಬೀದರ್ ಜನರಿಗೆ ತಂಪೆರೆದ ವರುಣ – ಸಿಡಿಲಿಗೆ ಯುವಕ ಬಲಿ

    ಬೀದರ್: ಸುಡು ಬಿಸಿಲಿನಿಂದ ಬಸವಳಿದಿದ್ದ ಗಡಿ ಜಿಲ್ಲೆ ಬೀದರ್‍ನ ಜನರಿಗೆ ಮಳೆರಾಯ ತಂಪೆರೆದಿದ್ದಾನೆ.

    ಬಿಸಿಲ ಬೇಗೆಯಿಂದ ಬೀದರ್ ಜನತೆ ತತ್ತರಿಸಿ ಹೋಗಿದ್ದರು. ಈಗ ಆಕಾಲಿಕ ಮಳೆಯಿಂದ ಜನ ಫುಲ್ ಖುಷ್ ಆಗಿದ್ದಾರೆ. ಹಲವು ನಿಮಿಷಗಳ ಕಾಲ ಗುಡುಗು, ಸಿಡಿಲು ಸಹಿತ ಅಕಾಲಿಕ ಮಳೆ ಆಗಿದೆ.

    ಬೀದರ್ ತಾಲೂಕಿನ ಚಿರ್ಲಗಿ ಗ್ರಾಮದಲ್ಲಿ ಸಿಡಿಲಿಗೆ ಯುವಕನೊಬ್ಬ ಮೃತಪಟ್ಟಿದ್ದಾನೆ. 26 ವರ್ಷದ ರಾಮು ಸಿಡಿಲಿಗೆ ಬಲಿಯಾದ ಯುವಕ. ರಾಮು ಜಮೀನಿಗೆ ಹೋದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ಈ ಬಗ್ಗೆ ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಗುಡುಗು, ಸಿಡಿಲು ಸಹಿತ ಅಕಾಲಿಕ ಮಳೆಯಾಗಿದೆ.

  • ಬೆಳ್ಳಂಬೆಳಗ್ಗೆ ಯುವಕನೊಬ್ಬನ ಹುಚ್ಚಾಟಕ್ಕೆ ಬೆಚ್ಚಿಬಿದ್ದ ಜನರು – ವಿಡಿಯೋ ನೋಡಿ

    ಬೆಳ್ಳಂಬೆಳಗ್ಗೆ ಯುವಕನೊಬ್ಬನ ಹುಚ್ಚಾಟಕ್ಕೆ ಬೆಚ್ಚಿಬಿದ್ದ ಜನರು – ವಿಡಿಯೋ ನೋಡಿ

    ಬೆಂಗಳೂರು: ಬೆಳ್ಳಂಬೆಳಗ್ಗೆ ಕಟ್ಟಡವೊಂದನ್ನು ಏರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತ ಕೂಗಾಡುತ್ತಾ ಯುವಕನೊಬ್ಬ ಹುಚ್ಚಾಟ ಮೆರೆದ ಘಟನೆ ಇಂದು ಸಿಲಿಕಾನ್ ಸಿಟಿಯ ಅಕ್ಕಿಪೇಟೆಯಲ್ಲಿ ನಡೆದಿದೆ.

    ಸುಮಾರು ಆರು ಅಂತಸ್ತಿನ ಕಟ್ಟಡ ಏರಿದ್ದ ಯುವಕನೊಬ್ಬ ಬೆಳ್ಳಂಬೆಳಗ್ಗೆ ಹೈಡ್ರಾಮ ಮಾಡಿ ಅಕ್ಕಿಪೇಟೆ ಜನರನ್ನು ಗಾಬರಿ ಬೀಳಿಸಿದ್ದಾನೆ. ಕಟ್ಟಡ ಹತ್ತಿಕೊಂಡು ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳತ್ತೇನೆ ಅಂತ ಬೆಳಗ್ಗೆ 8.30ರ ಸಮಯಕ್ಕೆ ಶುರುಮಾಡಿದ್ದ ಹುಚ್ಚಾಟ, ಸುಮಾರು 10.40ರ ತನಕ ಮುಂದುವರಿಸಿದ್ದನು. ಮೇಲಿನಿಂದ ಹಾರಿ ಸಾಯುತ್ತೇನೆ ಅಂತ ಕಟ್ಟಡದ ತುದಿಯಲ್ಲಿ ನಿಂತು ಸರ್ಕಸ್ ಮಾಡುತ್ತಾ ಸ್ಥಳಿಯರಿಗೆ ಯುವಕ ತಲೆನೋವು ನೀಡಿದ್ದಾನೆ.

    ಯುವಕನ ಮನವೊಲಿಸಿ ಕಟ್ಟಡದಿಂದ ಕೆಳಗೆ ಇಳಿಸಲು ಸ್ಥಳೀಯರು ಎಷ್ಟೇ ಕಸರತ್ತು ಮಾಡಿದರೂ ಪ್ರಯೋಜನವಾಗಿಲ್ಲ. ಬಳಿಕ ಕೆಳಗೆ ಇಳಿ ಎಂದು ಹೇಳಿದಾಗ ಕಟ್ಟಡದಿಂದ ಹಾರುವುದಾಗಿ ಯುವಕ ಬೆದರಿಕೆ ಹಾಕಿದ್ದಾನೆ. ಬಳಿಕ ಇವನ ಕಾಟ ತಡೆಯಲಾಗದೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಜೊತೆಗೂಡಿ ಕಾರ್ಯಚರಣೆ ನಡೆಸಿ ಕೊನೆಗೂ ಯುವಕನನ್ನು ಕೆಳಗಿಳಿಸಿದ್ದಾರೆ.

    ಈ ಹುಚ್ಚಾಟದ ವಿಡಿಯೋವನ್ನು ಸ್ಥಳದಲ್ಲಿದ್ದವರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=zh5SDwqvdJ4

  • ಕುತ್ತಿಗೆ ಮೇಲೆ ಕಾಲಿಟ್ಟು ಯುವಕನ ಮೇಲೆ ಐವರಿಂದ ಹಲ್ಲೆ

    ಕುತ್ತಿಗೆ ಮೇಲೆ ಕಾಲಿಟ್ಟು ಯುವಕನ ಮೇಲೆ ಐವರಿಂದ ಹಲ್ಲೆ

    ಬೆಂಗಳೂರು: ರೌಡಿಗಳು  ಯುವಕನನ್ನು ನೆಲಕ್ಕೆ ಹಾಕಿ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ.

    ಹರೀಶ್ (25) ಹಲ್ಲೆಗೊಳಗಾದ ಯುವಕ. ಹರೀಶ್ ಪರಪ್ಪನ ಅಗ್ರಹಾರದ ಹೊಸರೋಡು ನಿವಾಸಿಯಾಗಿದ್ದು, ಕಚ್ಚಲು ಬಂದ ಸಾಕು ನಾಯಿಗೆ ಬೈದಿದ್ದಕ್ಕೆ ಶ್ವಾನದ ಮಾಲೀಕರು ಹಾಗೂ ಬಾಡಿಗೆ ರೌಡಿಗಳು ಯುವಕನ ಮೇಲೆ ಹಲ್ಲೆ ನಡೆಸಿದರು.

    ಐವರು ದುಷ್ಕರ್ಮಿಗಳ ತಂಡ ಹರೀಶ್‍ನನ್ನು ಥಳಿಸಿ ಕಲ್ಲು ಎತ್ತು ಹಾಕಲು ಮುಂದಾಗಿದ್ದರು. ಹಲ್ಲೆಗೊಳಗಾದ ಹರೀಶ್ ಪ್ರಜ್ಞೆ ಕಳೆದುಕೊಂಡರೂ ದುಷ್ಕರ್ಮಿಗಳು ಬಿಡದೇ ಕಲ್ಲು ಹಾಗೂ ದೊಣ್ಣೆಗಳಿಂದ ಥಳಿಸಿದ್ದಾರೆ. ಹರೀಶ್ ಮೇಲಿನ ಅಮಾನುಷ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.

    ಹಲ್ಲೆಯಿಂದ ಹರೀಶ್ ಒಂದು ಕಣ್ಣು ಕಳೆದುಕೊಂಡಿದ್ದು, ಅಲ್ಲದೆ ಸೊಂಟದ ಮೂಳೆಗೆ ಬಲವಾದ ಪೆಟ್ಟು ಬಿದ್ದಿದೆ. ತಲೆಗೆ ಗಾಯವಾಗಿದೆ. ಇಷ್ಟೆಲ್ಲಾ ಆದರೂ ಪರಪ್ಪನ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

  • ಸೆಕ್ಯೂರಿಟಿಯಲ್ಲೇ ಬೆಳೆದ ರಾಗಾ ಭದ್ರತೆ ಬಗ್ಗೆ ಮೋದಿ ಗಮನಹರಿಸ್ತಿಲ್ಲ- ಹ್ಯಾರೀಸ್ ಆರೋಪ

    ಸೆಕ್ಯೂರಿಟಿಯಲ್ಲೇ ಬೆಳೆದ ರಾಗಾ ಭದ್ರತೆ ಬಗ್ಗೆ ಮೋದಿ ಗಮನಹರಿಸ್ತಿಲ್ಲ- ಹ್ಯಾರೀಸ್ ಆರೋಪ

    ಮಡಿಕೇರಿ: ಉತ್ತರಪ್ರದೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ಹಣೆಯ ಭಾಗಕ್ಕೆ ಹಸಿರು ಬಣ್ಣದ ಲೇಸರ್ ಲೈಟ್ ಬಿದ್ದಿದ್ದಕ್ಕೆ ಕೇಂದ್ರ ಎಸ್‍ಜಿಪಿಯಲ್ಲಿ ಹಸ್ತಕ್ಷೇಪ ಮಾಡ್ತಿರೋದು ಕಾರಣ ಎಂದು ಶಾಂತಿನಗರ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಹ್ಯಾರೀಸ್ ಗಂಭೀರ ಆರೋಪ ಮಾಡಿದ್ದಾರೆ.

    ಮಡಿಕೇರಿಯಲ್ಲಿ ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಪರ ಪ್ರಚಾರದಲ್ಲಿ ಭಾಗವಹಿಸಿದ್ದ ಸಂದರ್ಭ ಮಾತನಾಡಿದ ಅವರು, ಚಿಕ್ಕಂದಿನಿಂದ ಸೆಕ್ಯೂರಿಟಿಯಲ್ಲೇ ಬೆಳೆದ ರಾಹುಲ್ ಗಾಂಧಿಯವರ ಸೆಕ್ಯೂರಿಟಿಯ ಬಗ್ಗೆ ಮೋದಿ ಸರ್ಕಾರ ಗಮನ ಹರಿಸುತ್ತಿಲ್ಲ. ಆಗಾಗ ಅವರ ಸೆಕ್ಯೂರಿಟಿ ಕಡಿಮೆ ಮಾಡುತ್ತಿದೆ. ಇದೆಲ್ಲದ್ದರಿಂದಲೇ ಇಂತಹ ಘಟನೆ ನಡೆದಿದೆ ಎಂದರು.

    ಐಟಿ, ಈಡಿ ಎಲ್ಲದರಲ್ಲೂ ಹಸ್ತಕ್ಷೇಪ ಮಾಡುವ ಮೋದಿ ಸರ್ಕಾರ ಈ ವಿಚಾರದಲ್ಲೂ ಹಾಗೆ ಮಾಡಿದೆ. ಮೋದಿ ಸರ್ಕಾರಕ್ಕೆ ಸೋಲುವ ಭಯ ಕಾಡುತ್ತಿದ್ದು ಅವರು ಈಗ ಏನು ಮಾಡೋದಕ್ಕೂ ರೆಡಿಯಾಗಿದ್ದಾರೆ ಎಂದು ಹ್ಯಾರೀಸ್ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 7 ಬಾರಿ ತಲೆ ಮೇಲೆ ಲೇಸರ್ ಲೈಟ್ – ಅಮೇಥಿ ರ‍್ಯಾಲಿ ವೇಳೆ ರಾಹುಲ್ ಹತ್ಯೆಗೆ ಸಂಚು?

    ಪ್ರಕಾಶ್ ರೈ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿರುವ ಹ್ಯಾರೀಸ್, ಪ್ರಕಾಶ್ ರೈ ನಮ್ಮ ಆತ್ಮೀಯ ಸ್ನೇಹಿತರು, ಅವರಿಗೆ ಸ್ಪರ್ಧೆ ಮಾಡದಂತೆ ಮನವಿ ಮಾಡಿದ್ದೆವು. ಆದರೆ ಅವರು ತಮ್ಮ ನಿಲುವನ್ನು ಬದಲಿಸಲು ತಯಾರಿಲ್ಲ ಎಂದು ಹೇಳಿದರು.

    ಶಾಂತಿನಗರದಲ್ಲಿ ಚುನಾವಣಾ ಪ್ರಚಾರದ ವೇಳೆ ಖುಷ್ಬೂ ಯುವಕನೊಬ್ಬನಿಗೆ ಕಪಾಳ ಮೋಕ್ಷ ಮಾಡಿದ್ದರ ಬಗ್ಗೆ ಮಾತನಾಡಿದ ಹ್ಯಾರೀಸ್, ನನಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ, ವೈಯಕ್ತಿಕವಾಗಿ ಏನಾದ್ರೂ ಹರ್ಟ್ ಆದಾಗ ಕೆಲವರು ಹೀಗೆ ರಿಯಾಕ್ಟ್ ಮಾಡ್ತಾರೆ ಎಂದರು.

  • ರಸ್ತೆಯಲ್ಲಿ ಬಿದ್ದು ಒದ್ದಾಡಿದ ಯುವಕನಿಗೆ ನೀರು ಕುಡಿಸಿ ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು

    ರಸ್ತೆಯಲ್ಲಿ ಬಿದ್ದು ಒದ್ದಾಡಿದ ಯುವಕನಿಗೆ ನೀರು ಕುಡಿಸಿ ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು

    ಹಾವೇರಿ: ಬೈಕಿಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆಯಲ್ಲಿ ಬಿದ್ದು ಒದ್ದಾಡಿದ ಯುವಕನಿಗೆ ನೀರು ಕುಡಿಸಿ ಸ್ಥಳೀಯರು ಆಸ್ಪತ್ರೆ ದಾಖಲಿಸಿ ಮಾನವೀಯತೆ ಮೆರೆದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

    ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ಹೊರವಲಯದಲ್ಲಿ ಇರುವ ಬೆಳಗಾಲಪೇಟೆ ಕ್ರಾಸ್ ನಲ್ಲಿ ಬಸ್ ಡಿಕ್ಕಿ ಹೊಡೆದಿದ್ದರಿಂದ ಬೈಕ್‍ನಲ್ಲಿದ್ದ 23 ವರ್ಷದ ಅರುಣ ಭಾವಿಮನಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಘಟನೆಯಲ್ಲಿ 25 ವರ್ಷದ ದೊಡ್ಡಕುರುಬರ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲೇ ಬಿದ್ದು ಹೊರಳಾಡುತ್ತಿದ್ದರು. ಯುವಕನ ಸ್ಥಿತಿಯನ್ನು ನೋಡಿದ ಸ್ಥಳೀಯರು ನೀರು ಕುಡಿಸಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.

                             ಅರುಣ ಭಾವಿಮನಿ

     

    ತಮ್ಮ ಗ್ರಾಮದಿಂದ ಬೆಳಗಾಲಪೇಟಿ ಗ್ರಾಮದಿಂದ ಹಾನಗಲ್ ಗ್ರಾಮಕ್ಕೆ ಹೋಗುತ್ತಿರುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ವಿಷಯ ತಿಳಿಯುತ್ತಿದ್ದಂತೆ ಹಾನಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಬಗ್ಗೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಭೀಮಾನದಿಯಲ್ಲಿ ಮೂವರು ಯುವಕರು ನೀರುಪಾಲು

    ಭೀಮಾನದಿಯಲ್ಲಿ ಮೂವರು ಯುವಕರು ನೀರುಪಾಲು

    ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ಮರಗೂರ ಬಳಿ ಭೀಮಾ ನದಿಗೆ ಸ್ನಾನಕ್ಕೆಂದು ತೆರಳಿದ್ದ ಮೂವರು ಯುವಕರು ನೀರುಪಾಲಾದ ಘಟನೆ ನಡೆದಿದೆ.

    ಮೃತರನ್ನು ಅಂಜುಟಗಿ ಗ್ರಾಮದ ಓರ್ವ ಹಾಗೂ ಮಹಾರಾಷ್ಟ್ರದ ಔದ್ ಗ್ರಾಮದ ಇಬ್ಬರು ಯುವಕರು ಎಂದು ಗುರುತಿಸಲಾಗಿದೆ. ಯುಗಾದಿ ಪ್ರಯುಕ್ತ ದೇವರ ಕಾರ್ಯ ಮಾಡಲು ಮರಗೂರ ಗ್ರಾಮದಲ್ಲಿನ ಖಾಜಾಸಾಬ ದರ್ಗಾಕ್ಕೆ ಯುವಕರು ತೆರಳಿದ್ದರು.

    ನಾಲ್ಕು ದಿನದ ಹಿಂದಷ್ಟೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಬಿಡಲಾಗಿತ್ತು. ನದಿಯಲ್ಲಿ ಮರಳು ತೆಗೆದಿದ್ದ ಭಾಗದಲ್ಲಿ ಸ್ನಾನಕ್ಕೆ ಹೋದಾಗ ಗೊತ್ತಾಗದೆ ಇದ್ದಕ್ಕಿದ್ದಂತೆ ಆಳಕ್ಕೆ ಬಿದ್ದು ಈ ದುರ್ಘಟನೆ ಸಂಭವಿಸಿದೆ.

    ಮೂವರು ಯುವಕರು ಮುಳುಗುತ್ತಿರುವುದನ್ನು ಸ್ಥಳೀಯರು ನೋಡಿದ್ದು, ಇದೀಗ ಶವಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಹೊಳೆನರಸೀಪುರದಲ್ಲಿ ಲಕ್ಷ ಲಕ್ಷ ಹಣದ ಬ್ಯಾಗ್ ಸಮೇತ ಸಿಕ್ಕಿಬಿದ್ದ ಯುವಕ

    ಹೊಳೆನರಸೀಪುರದಲ್ಲಿ ಲಕ್ಷ ಲಕ್ಷ ಹಣದ ಬ್ಯಾಗ್ ಸಮೇತ ಸಿಕ್ಕಿಬಿದ್ದ ಯುವಕ

    ಹಾಸನ: ದ್ವಿಚಕ್ರ ವಾಹನದಲ್ಲಿ ಸುಮಾರು 25 ಲಕ್ಷ ರೂ. ಹಣದೊಂದಿಗೆ ತೆರಳುತ್ತಿದ್ದ ಯುವಕನನ್ನು ಐಟಿ ಅಧಿಕಾರಿಗಳು ಹೊಳೆನರಸೀಪುರ ಪಟ್ಟಣದಲ್ಲಿ ವಶಕ್ಕೆ ಪಡೆದಿದ್ದಾರೆ.

    ಹಳೇ ಮೈಸೂರು ಕಡೆಯಿಂದ 30 ವರ್ಷದ ಯುವಕೊಬ್ಬ ಹೊಳೆನರಸೀಪುರ ಕಡೆಗೆ ಭಾರೀ ಹಣದೊಂದಿಗೆ ತೆರಳುತ್ತಿರುವ ಖಚಿತ ಮಾಹಿತಿ ಐಟಿ ಅಧಿಕಾರಿಗಳಿಗೆ ಲಭಿಸಿತ್ತು. ಮಾಹಿತಿ ಲಭಿಸುತ್ತಿದಂತೆ ಕಾರ್ಯಾಚರಣೆಗೆ ಇಳಿದ ಐಟಿ ಅಧಿಕಾರಿಗಳ ತಂಡ ಯುವಕನನ್ನು ಅಡ್ಡಗಟ್ಟಿ ವಶಕ್ಕೆ ಪಡೆದಿದೆ. ಆ ವೇಳೆ ಯುವಕನ ಬಳಿ 25 ಲಕ್ಷ ರೂ. ಹಣ ಪತ್ತೆಯಾಗಿದೆ.

    ಬೆಂಗಳೂರು ಮೂಲದ ರಿಜಿಸ್ಟರ್ ನಂಬರ್ ಇರುವ ಬೈಕಿನಲ್ಲಿ ಯುವಕ ತೆರಳುತ್ತಿದ್ದ. ಸದ್ಯ ಯುವಕನನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಹಣದ ಮೂಲದ ಬಗ್ಗೆ ಪ್ರಶ್ನಿಸಿ ತನಿಖೆ ನಡೆಸುತ್ತಿದ್ದಾರೆ. ಆದರೆ ಯುವಕ ಇದು ಅಡಿಕೆ ಮಾರಾಟ ಮಾಡಿದ ಹಣ ಎಂದು ಮಾಹಿತಿ ನೀಡಿದ್ದಾನೆ. ಆದರೆ ಅದಕ್ಕೆ ಸೂಕ್ತ ದಾಖಲೆ ನೀಡಿಲ್ಲ. ಇಂದು ಬೆಳಗ್ಗೆ 11 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಹಾಸನ ಜಿಲ್ಲಾಧಿಕಾರಿ, ಎಸ್‍ಪಿ ವರ್ಗಾವಣೆ ಮಾಡಿದ ಬಳಿಕ ಜೆಡಿಎಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಅವರ ವಿರುದ್ಧ ಮಾತನಾಡುವ ನಾಯಕರನ್ನೇ ಟಾರ್ಗೆಟ್ ಮಾಡಿ ಕೇಂದ್ರ ಸರ್ಕಾರದ ದಾಳಿ ನಡೆಸಿದೆ. ಬಿಜೆಪಿ ಹೇಳಿದಂತೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.

    ಇತ್ತ ಜೆಡಿಎಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕರು , ಹಾಸನದಲ್ಲಿ ರಾಜ್ಯ ಸರ್ಕಾರದ ಯೋಜನೆಗಳು ಪೂರ್ಣಗೊಳ್ಳದೆಯೇ ಹಣ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ಪಡೆದು ಐಟಿ ದಾಳಿ ನಡೆಸಿದೆ ವಿನಃ ಬಿಜೆಪಿ ಯಾವುದೇ ರೀತಿಯಲ್ಲಿ ಇದರಲ್ಲಿ ತೊಡಗಿಲ್ಲ. ಸಂಸ್ಥೆಗಳು ಸ್ವತಂತ್ರ ತನಿಖೆ ನಡೆಸಲು ಅರ್ಹವಾಗಿದೆ. ಅದರಂತೆ ದಾಳಿ ನಡೆದಿದೆ ಎಂದು ಅಷ್ಟೇ ಎಂದು ಹೇಳಿದ್ದರು.

  • ಮೊದಲ ವೋಟ್ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಬೇಕು – ಎದೆ ಮೇಲೆ ನಿಖಿಲ್ ಟ್ಯಾಟೂ ಹಾಕಿಸಿಕೊಂಡ ಯುವಕ

    ಮೊದಲ ವೋಟ್ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಬೇಕು – ಎದೆ ಮೇಲೆ ನಿಖಿಲ್ ಟ್ಯಾಟೂ ಹಾಕಿಸಿಕೊಂಡ ಯುವಕ

    ಮಂಡ್ಯ: ನನ್ನ ಮೊದಲ ವೋಟ್ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಬೇಕು ಎಂದು ಯುವಕರೊಬ್ಬರು ತನ್ನ ಎದೆ ಮೇಲೆ ಮಂಡ್ಯದ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

    ಕೆಆರ್ ಪೇಟೆಯ ಹೊಸ ಹೊಳಲು ಗ್ರಾಮದ ಯುವಕ ಸಚಿನ್ ಎದೆ ಮೇಲೆ ನಿಖಿಲ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ನಾನೊಬ್ಬ ಹೊಸ ಮತದಾರ, ನನ್ನ ಮೊದಲ ವೋಟ್ ನಿಖಿಲ್‍ಗೆ ಹಾಕಬೇಕು. ಅಲ್ಲದೇ ನನ್ನ ಮೊದಲ ವೋಟ್ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಬೇಕು ಎಂದು ಸಚಿನ್, ನಿಖಿಲ್ ಮೇಲಿನ ಅಭಿಮಾನದಿಂದ ಹಚ್ಚೆ ಹಾಕಿಸಿಕೊಂಡಿದ್ದಾರೆ.

    ಸಚಿನ್ ಬುಧವಾರ ನಿಖಿಲ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಲ್ಲದೆ ಕೆಆರ್ ಪೇಟೆಯಲ್ಲಿ ದೇವೇಗೌಡರ ಬೃಹತ್ ಸಮಾವೇಶ ಇರುವ ಹಿನ್ನೆಲೆಯಲ್ಲಿ ಸಚಿನ್ ಸಮಾರಂಭಕ್ಕೆ ಹಾಜರಾಗಿದ್ದಾರೆ. ಸಮಾರಂಭದ ವೇಳೆ ನಿಖಿಲ್ ಪ್ರಚಾರಕ್ಕೆ ಬಂದಾಗ ಸಚಿನ್ ಆ ಟ್ಯಾಟೂ ತೋರಿಸಲು ಯತ್ನಿಸಿದ್ದಾರೆ.

    ಜೆಡಿಎಸ್ ಕಾರ್ಯಕರ್ತ ಕೆಆರ್ ಪೇಟೆಯ ಬ್ಯಾಲದಕೆರೆಯ ಪದ್ಮನಾಭ್ ಎಡ ಹಾಗೂ ಬಲ ಎದೆಯ ಮೇಲೆ ಎಚ್.ಡಿ ದೇವೇಗೌಡ ಹಾಗೂ ಎಚ್.ಡಿ ಕುಮಾರಸ್ವಾಮಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ದೇವೇಗೌಡರು ಹಾಗು ಕುಮಾರಸ್ವಾಮಿ ಮೇಲಿನ ಅಭಿಮಾನದಿಂದ ಕಾರ್ಯಕರ್ತ ಪದ್ಮಾನಾಭ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಕೆಆರ್ ಪೇಟೆಯ ಜೆಡಿಎಸ್ ಸಮಾವೇಶದಲ್ಲಿ ಹಚ್ಚೆಯ ಹಾಕಿಸಿಕೊಂಡಿರುವ ಅಭಿಮಾನಿಗಳು ಆಗಮಿಸಿದ್ದಾರೆ.