Tag: youth

  • ಮೊಬೈಲ್ ಸ್ಫೋಟಗೊಂಡು ಯುವಕ ಗಂಭೀರ!

    ಮೊಬೈಲ್ ಸ್ಫೋಟಗೊಂಡು ಯುವಕ ಗಂಭೀರ!

    ಬೆಂಗಳೂರು: ಮೊಬೈಲ್ ಸ್ಫೋಟಗೊಂಡ ಪರಿಣಾಮ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಯುವಕನನ್ನು ಬಿಹಾರ ಮೂಲದವನು ಎಂದು ಗುರುತಿಸಲಾಗಿದ್ದು, ಈತ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ತನ್ನ ಮೊಬೈಲ್ ಚಾರ್ಜ್ ಹಾಕಿ ಮಾತನಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

    ಘಟನೆ ವಿವರ:
    ಯುವಕ ಮೊಬೈಲ್ ಚಾರ್ಜ್ ಹಾಕಿ ವಿಡಿಯೋ ಕಾಲ್ ಮಾಡುತ್ತಿದ್ದನು. ಈ ವೇಳೆ ಸ್ಫೋಟಗೊಂಡು ಮುಖ ಮತ್ತು ಕೈಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು. ಘಟನೆಯಲ್ಲಿ ಯುವಕ ತನ್ನ ಎಡಗೈನ ಮೂರು ಬೆರಳುಗಳನ್ನೂ ಕಳೆದುಕೊಂಡಿದ್ದಾನೆ.

    ಮೊಬೈಲ್ ಬ್ಲಾಸ್ಟ್ ಆಗಿ ಯುವಕ ಗಾಯಗೊಳ್ಳುತ್ತಿದ್ದಂತೆಯೇ ಕೂಡಲೇ ಆತನನ್ನು ಸ್ನೇಹಿತರು ನಗರದ ವೈದೇಹಿ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ಕೊಡಿಸಿದ್ದಾರೆ. ಯುವಕನ ಹೆಸರು ಹಾಗೂ ಯಾವ ಕಂಪನಿ ಮೊಬೈಲ್ ಎಂದು ತಿಳಿದುಬಂದಿಲ್ಲ.

    ಈ ಸಂಬಂಧ ಹೆಚ್ ಎ ಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಟ್ರಾಫಿಕ್ ನಿಯಮ ಉಲ್ಲಂಘಿಸಿದ ಯುವಕ – ಮದ್ವೆ ಮಾಡಿಸಿದ ಪೋಷಕರು

    ಟ್ರಾಫಿಕ್ ನಿಯಮ ಉಲ್ಲಂಘಿಸಿದ ಯುವಕ – ಮದ್ವೆ ಮಾಡಿಸಿದ ಪೋಷಕರು

    ಅಹಮಾದಾಬಾದ್: ಯುವಕನೊಬ್ಬ ಟ್ರಾಫಿಕ್ ನಿಯಮ ಉಲ್ಲಂಘಿಸಿರುವುದು, ಆತ ಪ್ರೀತಿಸುವ ಯುವತಿ ಜೊತೆಗೆ ಮದುವೆ ಆಗಲು ದಾರಿ ಮಾಡಿ ಕೊಟ್ಟಂತಾಗಿದೆ.

    ವತ್ಸಲ್ ಪಾರೇಕ್ ನಿಯಮ ಉಲ್ಲಂಘಿಸಿ ಮದುವೆಯಾದ ಯುವಕ. ವತ್ಸಲ್ ತನ್ನ ಪ್ರೇಯಸಿ ಜೊತೆ ಬೈಕಿನಲ್ಲಿ ಹೋಗುತ್ತಿದ್ದರು. ಈ ವೇಳೆ ಆತ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದ್ದಾನೆ. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸರು ಶನಿವಾರ ವತ್ಸಲ್ ಮನೆಗೆ ಚಲನ್ ಜೊತೆ ಬಂದಿದ್ದಾರೆ. ಅಲ್ಲದೆ ಟ್ರಾಫಿಕ್ ಉಲ್ಲಂಘಿಸಿದ ಫೋಟೋ ಕೂಡ ಕಳುಹಿಸಿದ್ದಾರೆ.

    https://twitter.com/VatsalParekh14/status/1122154769764814848?ref_src=twsrc%5Etfw%7Ctwcamp%5Etweetembed%7Ctwterm%5E1122154769764814848&ref_url=https%3A%2F%2Fzeenews.india.com%2Fhindi%2Foff-beat%2Ftraffic-police-e-challan-haled-couple-to-get-married-to-his-girl-friend%2F521784

    ಈ ಫೋಟೋ ನೋಡಿದ ವತ್ಸಲ್ ಪೋಷಕರು ಈ ಯುವತಿ ಯಾರು ಎಂದು ಪ್ರಶ್ನಿಸಿದ್ದಾರೆ. ಆಗ ವತ್ಸಲ್ ತನ್ನ ಪ್ರೀತಿಯ ಬಗ್ಗೆ ಪೋಷಕರ ಬಳಿ ಹೇಳಿಕೊಂಡಿದ್ದಾನೆ. ಇವಳು ನನ್ನ ಪ್ರೇಯಸಿ. ನಾನು ಈಕೆಯನ್ನು ತುಂಬಾ ಇಷ್ಟಪಡುತ್ತೇನೆ ಹಾಗೂ ನಾನು ಇವಳನ್ನೇ ಮದುವೆ ಆಗುತ್ತೇನೆ ಎಂದು ಹೇಳಿದ್ದಾನೆ. ಮಗನ ಮಾತು ಕೇಳಿದ ಪೋಷಕರು ಯುವತಿ ಮನೆಯವರನ್ನು ಕರೆಸಿ ಮದುವೆ ಮಾತುಕತೆ ನಡೆಸಿದ್ದಾರೆ.

    ಇಬ್ಬರ ಕುಟುಂಬದವರು ಇವರ ಪ್ರೀತಿಯನ್ನು ಒಪ್ಪಿ ಮದುವೆ ಮಾಡಿಸಲು ನಿರ್ಧರಿಸಿದ್ದರು. ಈಗ ಇಬ್ಬರ ಮದುವೆಯಾಗಿದೆ. ಮದುವೆಯಾದ ನಂತರ ವತ್ಸಲ್ ಅಹಮಾದಾಬಾದ್ ಟ್ರಾಫಿಕ್ ಪೊಲೀಸರಿಗೆ ಟ್ವಿಟ್ಟರಿನಲ್ಲಿ ಅವರಿಗೆ ಟ್ಯಾಗ್ ಮಾಡಿ ಧನ್ಯವಾದ ತಿಳಿಸಿದ್ದಾನೆ.

    ವತ್ಸಲ್ ತನ್ನ ಟ್ವಿಟ್ಟರಿನಲ್ಲಿ, “ನನಗೆ ಮೇಲ್ ಮೂಲಕ ಮೆಮೋ ಸಿಕ್ತು. ಇದರಿಂದ ಒಂದು ಹಾಸ್ಯಾಸ್ಪದ ವಿಷಯ ನಡೆದಿದೆ. ಏನೆಂದರೆ ಮೆಮೋ ಜೊತೆಯಲ್ಲಿ ನನ್ನ ಹಾಗೂ ನನ್ನ ಪ್ರೇಯಸಿಯ ಫೋಟೋ ಇತ್ತು. ನನ್ನ ಪೋಷಕರಿಗೆ ಆಕೆಯ ಬಗ್ಗೆ ತಿಳಿದಿರಲಿಲ್ಲ. ಈ ಮೆಮೋ ಮೂಲಕ ಅವರಿಗೆ ಗೊತ್ತಾಗಿದೆ” ಎಂದು ಟ್ವೀಟ್ ಮಾಡಿದ್ದಾನೆ.

  • ಸಿಗರೇಟ್ ತಂದು ಕೊಟ್ಟಿಲ್ಲವೆಂದು ಯುವಕನ ಮೇಲೆ ಹಲ್ಲೆ

    ಸಿಗರೇಟ್ ತಂದು ಕೊಟ್ಟಿಲ್ಲವೆಂದು ಯುವಕನ ಮೇಲೆ ಹಲ್ಲೆ

    ಬೆಂಗಳೂರು: ಸಿಗರೇಟ್ ತಂದು ಕೊಡಲಿಲ್ಲ ಎಂದು ಕುಡಿದ ಮತ್ತಿನಲ್ಲಿ ಪುಡಿ ರೌಡಿಗಳು ಯುವಕನ ಮೇಲೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಈ ಘಟನೆ ಯಲಹಂಕದ ವಿಐಟಿ ಕ್ರಾಸ್ ಬಳಿಯ ಡಾಬಾದಲ್ಲಿ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ. ಪುಡಿ ರೌಡಿಗಳ ಹಲ್ಲೆಯ ದೃಶ್ಯ ಡಾಬಾದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.


    ಊಟ ಪಾರ್ಸಲ್ ತೆಗೆದುಕೊಳ್ಳಲು ಬಂದಿದ್ದ ಯುವಕನ ಮೇಲೆ 10 ಜನ ಪುಡಿ ರೌಡಿಗಳು ಹಲ್ಲೆ ಮಾಡಿದ್ದಾರೆ. ಈ ವೇಳೆ ಯುವಕ ಬಿಟ್ಟುಬಿಡಿ ಎಂದು ಕಾಲಿಗೆ ಬಿದ್ದು ಕೇಳಿಕೊಂಡರೂ ಮೃಗಗಳಂತೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ರಾಡ್ ಮತ್ತು ಕುರ್ಚಿಯಿಂದ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದಾಗಿ ತಲೆಗೆ ತೀವ್ರ ಗಾಯಗೊಂಡು ಯುವಕ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಜಗಳ ಬಿಡಿಸಲು ಹೋದ ಪೇದೆಗೆ ಹೊಡೆದ ಕುಡುಕರು

    ಜಗಳ ಬಿಡಿಸಲು ಹೋದ ಪೇದೆಗೆ ಹೊಡೆದ ಕುಡುಕರು

    – ಕುಡುಕರಿಗೆ ಬಿತ್ತು ಸಾರ್ವಜನಿಕರಿಂದ ಗೂಸಾ

    ಬೆಳಗಾವಿ: ಜಗಳ ಬಿಡಿಸಲು ಹೋಗಿದ್ದ ಪೇದೆಗೆ ಇಬ್ಬರು ಕುಡುಕರು ಹೊಡೆದ ಘಟನೆ ಜಿಲ್ಲೆಯ ಕಿತ್ತೂರು ಪಟ್ಟಣದ ಪೊಲೀಸ್ ಠಾಣೆ ಮುಂಭಾಗದಲ್ಲಿಯೇ ನಡೆದಿದೆ.

    ಪೇದೆಯ ಮೇಲೆ ಹಲ್ಲೆ ಮಾಡಿದ ಕುಡುಕರು ಕಿತ್ತೂರು ತಾಲೂಕಿನ ಗುಡಿ ಕೊಟಬಾಗಿ ಗ್ರಾಮದವರು ಎನ್ನಲಾಗಿದೆ. ಕಿತ್ತೂರು ಠಾಣೆಯ ಎಲ್.ಎಚ್.ನಾಯ್ಕರ್ ಹಲ್ಲೆಗೊಳಗಾದ ಪೇದೆ.

    ಮದ್ಯ ಸೇವಿಸಿದ್ದ ಇಬ್ಬರು ಯುವಕರು ಪೊಲೀಸ್ ಠಾಣೆಯ ಮುಂದೆ ಪರಸ್ಪರ ಜಗಳವಾಡುತ್ತಿದ್ದರು. ಇದನ್ನು ನೋಡಿದ ಪೇದೆ ಎಲ್.ಎಚ್.ನಾಯ್ಕರ್ ಅವರು ಜಗಳ ಬಿಡಿಸಲು ಹೋಗಿದ್ದರು. ಆದರೆ ಇಬ್ಬರು ಸೇರಿ ಪೇದೆಗೆ ಹೊಡೆದಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ಸಾರ್ವಜನರಿಕರು ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿ ಬುದ್ಧಿ ಕಲಿಸಿದ್ದಾರೆ. ಬಳಿಕ ಅವರನ್ನು ಪೊಲೀಸ್ ಠಾಣೆಗೆ ತಂದು ಬಿಟ್ಟಿದ್ದಾರೆ.

    ಕಿತ್ತೂರು ಪೋಲಿಸ್ ಠಾಣೆಯ ಸಿಬ್ಬಂದಿ ಮದುವೆಗೆ ತೆರಳಿದ್ದರಿಂದ ಕೇವಲ ಇಬ್ಬರು ಮಾತ್ರ ಇದ್ದರು. ಹೀಗಾಗಿ ಕುಡುಕರು ಅವಾಂತರ ಮಾಡಿದ್ದಾರೆ.

  • ಎಣ್ಣೆ ಖರೀದಿಗೆ ಮುಂದಾದವನಿಗೆ 5.95 ಲಕ್ಷ ಪಂಗನಾಮ ಹಾಕಿದ್ಲು!

    ಎಣ್ಣೆ ಖರೀದಿಗೆ ಮುಂದಾದವನಿಗೆ 5.95 ಲಕ್ಷ ಪಂಗನಾಮ ಹಾಕಿದ್ಲು!

    ಚಂಢೀಗಡ್: ಆಲ್‍ಲೈನ್ ಮೂಲಕ ಎಣ್ಣೆ ಖರೀದಿಸಲು ಮುಂದಾದ ಯುವಕನೊಬ್ಬನಿಗೆ ಖತರ್ನಾಕ್ ಮಹಿಳೆಯೊಬ್ಬಳು ಬರೋಬ್ಬರಿ 5.95 ಲಕ್ಷ ರೂ. ಪಂಗನಾಮ ಹಾಕಿರುವ ಘಟನೆ ಹರಿಯಾಣದ ಕುರುಕ್ಷೇತ್ರ ಜಿಲ್ಲೆಯಲ್ಲಿ ನಡೆದಿದೆ.

    ಕುರುಕ್ಷೇತ್ರ ಜಿಲ್ಲೆಯ ಸಲರ್‍ಪುರ ರೋಡ್‍ನ ಏಕ್ತಾ ವಿಹಾರ್ ಕಾಲೋನಿಯ ನಿವಾಸಿ ಪಂಕಜ್ ಕುಮಾರ್ ಮೋಸ ಹೋಗಿರುವ ಯುವಕ. ಮೋಸ ಮಾಡಿರುವ ಮಹಿಳೆಯನ್ನು ಸುನಿತಾ ಎಂದು ಗುರುತಿಸಲಾಗಿದೆ. ಪಂಕಜ್ ಕುಮಾರ್ ಫೇಸ್‍ಬುಕ್ ಲಿಂಕ್‍ವೊಂದರ ಮೂಲಕ ಸುನಿತಾಳನ್ನು ಸಂಪರ್ಕಿಸಿದ್ದನು. ಆಗ ಆಕೆ ನಾನು ಆನ್‍ಲೈನ್‍ನಲ್ಲಿ ನ್ಯಾಚುರಲ್ ಆಯಿಲ್ ಮಾರಾಟ ಮಾಡುತ್ತೇನೆ ಎಂದು ಹೇಳಿದ್ದಾಳೆ. ಅಲ್ಲದೆ ಆ ಎಣ್ಣೆಯ ಪ್ರಯೋಜನಗಳು, ಬಳಸುವ ಪದಾರ್ಥಗಳ ಬಗ್ಗೆ ಪಂಕಜ್‍ಗೆ ವಿವರಿಸಿದ್ದಾಳೆ. ಮಹಿಳೆಯು ಎಣ್ಣೆ ಬಗ್ಗೆ ವಿವರಿಸಿದ ಪರಿಗೆ ಮಾರುಹೋದ ಯುವಕ ಅದರ ಖರೀದಿಗೆ ಮುಂದಾಗಿದ್ದಾನೆ.

    ಈ ವೇಳೆ ಮಹಿಳೆ ಬ್ಯಾಂಕ್ ಅಕೌಂಟ್ ವಿವರವನ್ನು ಯುವಕನಿಗೆ ನೀಡಿ ತನ್ನ ಖಾತೆಗೆ ಹಣ ಹಾಕುವಂತೆ ಹೇಳಿದ್ದಾಳೆ. ಮಹಿಳೆಯ ಮೋಡಿಗೆ ಮರುಳಾಗಿದ್ದ ಯುವಕ ತನ್ನ ಕೈಗೆ ಎಣ್ಣೆ ಸಿಗುತ್ತದೆ ಎಂಬ ಆಸೆಯಲ್ಲಿ 5 ಲಕ್ಷದ 95 ಸಾವಿರ ರೂಪಾಯಿಯನ್ನು ಆಕೆಯ ಖಾತೆಗೆ ಹಾಕಿದ್ದಾನೆ. ತನ್ನ ಖಾತೆಗೆ ಹಣ ಜಮೆಯಾದ ಕೂಡಲೇ ಆಯಿಲ್ ಪಾರ್ಸಲ್ ಮಾಡ್ತೇನೆಂದು ಮಹಿಳೆ ಹೇಳಿದ್ದಳು, ಆದ್ರೆ ಹಣ ಖಾತೆಗೆ ಬೀಳುತ್ತಿದ್ದಂತೆ ಮಹಿಳೆ ಕಾಲ್ಕಿತ್ತಿದ್ದು, ಯುವಕನಿಗೆ ಪಂಗನಾಮ ಹಾಕಿದ್ದಾಳೆ.

    ಎಣ್ಣೆ ಪಾರ್ಸಲ್ ಇವತ್ತು ಬರುತ್ತೆ, ನಾಳೆ ಬರುತ್ತೆ ಎಂದು ಯುವಕ ಕಾದಿದ್ದಾನೆ. ಬಳಿಕ ಈ ಬಗ್ಗೆ ವಿಚಾರಿಸಲು ಮಹಿಳೆಗೆ ಫೋನ್ ಕೂಡ ಮಾಡಿದ್ದಾನೆ. ಆದ್ರೆ ಅತ್ತ ಮಹಿಳೆ ಫೋನ್‍ಗೆ ಸಿಗದೇ, ಇತ್ತ ಎಣ್ಣೆನೂ ಸಿಗದೇ, ಹಣವನ್ನೂ ಕಳೆದುಕೊಂಡು ಕಂಗಾಲಾಗಿದ್ದನು.

    ಬಳಿಕ ಶನಿವಾರದಂದು ಈ ಬಗ್ಗೆ ಪೊಲೀಸರಿಗೆ ಯುವಕ ದೂರು ನೀಡಿದ್ದು, ವಂಚಕಿಯನ್ನು ಸೆರೆಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.

  • ಪೊಲೀಸ್ ಕಸ್ಟಡಿಯಲ್ಲಿದ್ದ ಯುವಕ ಅನುಮಾನಾಸ್ಪದ ಸಾವು

    ಪೊಲೀಸ್ ಕಸ್ಟಡಿಯಲ್ಲಿದ್ದ ಯುವಕ ಅನುಮಾನಾಸ್ಪದ ಸಾವು

    ಹಾಸನ: ಕಸ್ಟಡಿಯಲ್ಲಿದ್ದ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಚನ್ನರಾಯಪಟ್ಟಣ ತಾಲೂಕಿನ ಅಗ್ರಹಾರ ಬೆಳಗುಲಿ ಮೂಲದ ಅವಿನಾಶ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಮದ್ಯದಂಗಡಿಯಲ್ಲಿ ಮದ್ಯವನ್ನು ಕಳ್ಳತನ ಮಾಡಿದ್ದಾನೆ ಎನ್ನುವ ಆರೋಪದ ಅಡಿ ಪೊಲೀಸರು ಕಳೆದ 20 ದಿನಗಳ ಹಿಂದೆ ಆತನನ್ನು ಬಂಧಿಸಿ ಕಸ್ಟಡಿಯಲ್ಲಿ ವಿಚಾರಣೆ ನಡೆಸುತ್ತಿದ್ದರು.

    ಕಸ್ಟಡಿಯಲ್ಲಿದ್ದ ಆರೋಪಿ ಅವಿನಾಶ್ ಇಂದು ಅನುಮಾನಸ್ಪದವಾಗಿ ಮೃತಪಟ್ಟಿದ್ದಾನೆ. ಅವಿನಾಶ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದರೆ, ಅವಿನಾಶ್ ಪೋಷಕರು ಪೊಲೀಸರೇ ಆತನಿಗೆ ಹೊಡೆದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಅವಿನಾಶ್ ಅನುಮಾನಾಸ್ಪದವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಆತನ ಪೋಷಕರು ಹಾಗೂ ಗ್ರಾಮಸ್ಥರು ಪ್ರತಿಭಟನೆ ಮಾಡುವ ಸಂಭವವಿದೆ. ಹಾಗಾಗಿ ಪೊಲೀಸರು ಈಗಾಗಲೇ ಬೆಳಗುಲಿ ಗ್ರಾಮ ಹಾಗೂ ಪೊಲೀಸ್ ಠಾಣೆ ಮುಂದೆ ಬಿಗಿ ಬಂದೋಬಸ್ತ್ ಮಾಡಿದ್ದಾರೆ.

    ಈ ಬಗ್ಗೆ ಪೊಲೀಸರು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡುತ್ತಿಲ್ಲ. ಸದ್ಯ ಆರೋಪಿ ಅವಿನಾಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ.

  • ಗ್ರಾಮಸ್ಥರ ಮನವಿಗೆ ಮೂಕನಾದ ಶಾಸಕ -ಯುವಕರೇ ನಿರ್ಮಿಸಿಕೊಂಡ್ರು ಬಸ್‍ನಿಲ್ದಾಣ

    ಗ್ರಾಮಸ್ಥರ ಮನವಿಗೆ ಮೂಕನಾದ ಶಾಸಕ -ಯುವಕರೇ ನಿರ್ಮಿಸಿಕೊಂಡ್ರು ಬಸ್‍ನಿಲ್ದಾಣ

    ರಾಯಚೂರು: ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ಬೇಸತ್ತು ರಾಯಚೂರಿನ ಸಿಂಧನೂರು ತಾಲೂಕಿನ ಮಲ್ಲದಗುಡ್ಡ ಗ್ರಾಮಸ್ಥರು ತಾವೇ ಸ್ವತಃ ಬಸ್ ನಿಲ್ದಾಣ ನಿರ್ಮಿಸಿಕೊಂಡಿದ್ದಾರೆ.

    ಬಿಸಿಲನಾಡು ರಾಯಚೂರಿನಲ್ಲಿ ಈಗ ಬೆಳಗ್ಗೆ ಹೊತ್ತಲ್ಲೇ ಹೊರಗಡೆ ಓಡಾಡುವುದು ಕಷ್ಟ, ಅಂಥದ್ದರಲ್ಲಿ ಮಲ್ಲದಗುಡ್ಡ ಗ್ರಾಮಸ್ಥರು ಬಿಸಿಲಿನಲ್ಲೇ ಪ್ರತಿದಿನ ಬಸ್‍ಗಾಗಿ ಕಾಯಬೇಕಿದೆ. ನಾಲ್ಕು ವರ್ಷಗಳ ಹಿಂದೆ ಸಿಂಧನೂರು-ಕುಷ್ಟಗಿ ರಸ್ತೆ ಕಾಮಗಾರಿಗಾಗಿ ಬಸ್ ನಿಲ್ದಾಣ ತೆರವುಗೊಳಿಸಲಾಗಿತ್ತು. ಆದರೆ ಇದುವರೆಗೂ ಪುನಃ ಬಸ್ ನಿಲ್ದಾಣ ನಿರ್ಮಿಸಿಲ್ಲ.

    ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಮಲ್ಲದಗುಡ್ಡ ಗ್ರಾಮದಲ್ಲಿ ಪ್ರತಿಯೊಂದಕ್ಕೂ ಸಮಸ್ಯೆಗಳಿದ್ದು, ಸಾಕಷ್ಟು ಬಾರಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಸೇರಿದಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಗ್ರಾಮಸ್ಥರು ಸುಸ್ತಾಗಿದ್ದಾರೆ. ಆದರೆ ಇದುವರೆಗೂ ಯಾರೂ ಸ್ಪಂದಿಸದ ಹಿನ್ನೆಲೆಯಲ್ಲಿ ಗ್ರಾಮದ ಸರ್ದಾರ್ ವಲ್ಲಭಬಾಯಿ ಪಟೇಲ್ ಯುವಕರ ಸಂಘ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಿಕೊಂಡಿದೆ.

    ಯುವಕರು ನಿರ್ಮಿಸಿರುವ ಈ ನಿಲ್ದಾಣ ತಾತ್ಕಾಲಿಕವಾಗಿದ್ದು, ಶಾಶ್ವತ ಪರಿಹಾರ ಬೇಕಿದೆ. ಹೀಗಾಗಿ ಗ್ರಾಮಸ್ಥರು ಬಸ್ ನಿಲ್ದಾಣ ನಿರ್ಮಿಸಿಕೊಡುವಂತೆ ಆಗ್ರಹಿಸಿದ್ದಾರೆ.

  • ಒಂದೇ ಕೋಮಿನ 2 ತಂಡಗಳ ಮಾರಾಮಾರಿ- ಕಬ್ಬಿಣ ರಾಡ್‍ನಿಂದ ಹೊಡೆದು ಯುವಕನ ಬರ್ಬರ ಹತ್ಯೆ!

    ಒಂದೇ ಕೋಮಿನ 2 ತಂಡಗಳ ಮಾರಾಮಾರಿ- ಕಬ್ಬಿಣ ರಾಡ್‍ನಿಂದ ಹೊಡೆದು ಯುವಕನ ಬರ್ಬರ ಹತ್ಯೆ!

    ಕಾರವಾರ: ಮಂಗಳವಾರ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆದಿತ್ತು. ಚುನಾವಣೆ ಹಿನ್ನೆಲೆಯಲ್ಲಿ ರಾತ್ರಿ ಒಂದೇ ಕೋಮಿನ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿದ್ದು, ಕಬ್ಬಿಣದ ರಾಡ್‍ನಿಂದ ಹೊಡೆದು ಯುವಕನೊಬ್ಬನನ್ನು ಬರ್ಬರವಾಗಿ ಕೊಲೆಗೈದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಸ್ತೂರಬಾ ನಗರದ ಬಯಲು ಪ್ರದೇಶದಲ್ಲಿ ನಡೆದಿದೆ.

    ಮಂಗಳವಾರ ರಾತ್ರಿ ವೇಳೆ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಕಸ್ತೂರಬಾ ನಗರದಲ್ಲಿ ಗಲಾಟೆ ನಡೆದಿದೆ. ಈ ವೇಳೆ ಭಾರತೀಯ ಜನತಾ ಪಾರ್ಟಿಯ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಅನೀಪ್ ತಹಶೀಲ್ದಾರ್ ಗೆ ಚಾಕು ಇರಿಯಲಾಗಿದೆ. ಆದ್ರೆ ತಕ್ಷಣ ಸ್ಥಳಕ್ಕೆ ಪೊಲೀಸರು ಆಗಮಿಸಿ ಗಲಾಟೆಯನ್ನು ತಹಬದಿಗೆ ತಂದಿದ್ದು, ಚಾಕು ಇರಿತಗೊಂಡ ಅನೀಪ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿತ್ತು.

    ಘಟನೆ ನಡೆದ ಕೆಲವು ಗಂಟೆಯಲ್ಲಿ ಈ ಗಲಾಟೆಯಲ್ಲಿ ಭಾಗಿಯಾಗಿದ್ದ ಅಸ್ಲಂ ಬಾಬಾಜಾನ್(22) ಎಂಬಾತ ಕೊಲೆಯಾಗಿದ್ದಾನೆ. ಅಸ್ಲಂ ತಲೆಗೆ ಕಬ್ಬಿಣದ ರಾಡ್‍ನಿಂದ ಹೊಡೆದು, ಚಾಕು ಇರಿದು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಚುನಾವಣಾ ವಿಷಯವಾಗಿ ಕೊಲೆ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಈ ಸಂಬಂಧ ಶಿರಸಿಯ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಸ್ನೇಹಿತನ ಹುಟ್ಟುಹಬ್ಬದ ಆಚರಣೆ ವೇಳೆ ದುಬಾರೆಯಲ್ಲಿ ಮುಳುಗಿ ಯುವಕ ಸಾವು

    ಸ್ನೇಹಿತನ ಹುಟ್ಟುಹಬ್ಬದ ಆಚರಣೆ ವೇಳೆ ದುಬಾರೆಯಲ್ಲಿ ಮುಳುಗಿ ಯುವಕ ಸಾವು

    ಮಡಿಕೇರಿ: ಸ್ನೇಹಿತರೊಂದಿಗೆ ನದಿ ದಂಡೆಯಲ್ಲಿ ಕಾಲ ಕಳೆಯುತ್ತಿದ್ದ ಯುವಕನೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಜಲಸಮಾಧಿ ಆಗಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಪ್ರವಾಸಿ ತಾಣ ದುಬಾರೆಯಲ್ಲಿ ನಡೆದಿದೆ.

    ಸುಮನ್ (23) ಮೃತ ದುರ್ದೈವಿ. ಸುಮನ್ ಮೂಲತಃ ರಂಗ ಸಮುದ್ರ ನಿವಾಸಿಯಾಗಿದ್ದು, ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದನು. ಸುಮನ್ ತನ್ನ ಸ್ನೇಹಿತನ ಹುಟ್ಟುಹಬ್ಬ ಆಚರಿಸಲು ಕೊಡಗಿನಲ್ಲಿರುವ ದುಬಾರೆಗೆ ಬಂದಿದ್ದನು.

    ಶುಕ್ರವಾರ ಸುಮನ್ ಹಾಗೂ ಆತನ ಗೆಳೆಯರು ನಂಜರಾಯಪಟ್ಟಣ ಸಮೀಪದ ದಾಸವಾಳ ಎಂಬಲ್ಲಿ ಹರಿಯುತ್ತಿರುವ ಕಾವೇರಿ ನದಿಯ ತಟದಲ್ಲಿ ಕಾಲ ಕಳೆಯುತ್ತಿದ್ದರು. ಸಂಜೆ ಸುಮಾರು 5 ಗಂಟೆಯ ಸಮಯದಲ್ಲಿ ಸುಮನ್ ನದಿಗೆ ಇಳಿದಿದ್ದಾನೆ. ಆದರೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾನೆ. ಸುಮನ್ ಮೇಲಕ್ಕೆ ಬರಲಾಗದೇ ಅಲ್ಲಿಯೇ ಜಲ ಸಮಾಧಿಯಾಗಿದ್ದಾನೆ.

    ನಂತರ ಮೃತದೇಹನ್ನು ನದಿಯಿಂದ ಮೇಲಕ್ಕೆ ತರಲಾಯಿತು. ಈ ಬಗ್ಗೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಐಪಿಎಲ್ ಬೆಟ್ಟಿಂಗ್‍ಗೆ ಯುವಕ ಬಲಿ

    ಐಪಿಎಲ್ ಬೆಟ್ಟಿಂಗ್‍ಗೆ ಯುವಕ ಬಲಿ

    ಹಾಸನ: ಐಪಿಎಲ್ ಪಂದ್ಯಕ್ಕೆ ಬೆಟ್ಟಿಂಗ್ ಕಟ್ಟಿ ಹಣ ತೀರಿಸಲಾಗದೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಇಂದು ಮೃತಪಟ್ಟ ಘಟನೆ ಆಲೂರು ತಾಲೂಕಿನ ಬದುಕರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಲತೇಶ್ ಕುಮಾರ್ (25) ಮೃತ ಯುವಕ. ಲತೇಶ್ ಕುಮಾರ್ ಹಾಸನದ ರಾಜೀವ್ ಕಾಲೇಜಿನಲ್ಲಿ ಡಿಪ್ಲೋಮಾ ವಿದ್ಯಾಭ್ಯಾಸ ಮಾಡುತ್ತಿದ್ದನು. ಲತೇಶ್ ಐಪಿಎಲ್ ಬೆಟ್ಟಿಂಗ್ ಕಟ್ಟಿ ಹಣ ಕಳೆದುಕೊಂಡಿದ್ದನು. ಬಳಿಕ ಸ್ನೇಹಿತರ ಕಿರುಕುಳ ತಾಳಲಾರದೇ ಮೂರು ದಿನಗಳ ಹಿಂದೆ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದನು.

    ವಿಷ ಕುಡಿದು ಏಕೆ ಆತ್ಮಹತ್ಯೆಗೆ ಯತ್ನಿಸಿದೆ ಎಂದು ಲತೇಶ್‍ನನ್ನು ಪೋಷಕರು ಪ್ರಶ್ನಿಸಿದ್ದಾರೆ. ಆಗ ಲತೇಶ್ ಐಪಿಎಲ್ ಬೆಟ್ಟಿಂಗ್ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ಅಲ್ಲದೆ ಐಪಿಎಲ್ ಬೆಟ್ಟಿಂಗ್ ಕಟ್ಟಿ ಹಣ ಕಳೆದುಕೊಂಡಿದ್ದೇನೆ. ಹಣ ನೀಡು ಎಂದು ಕಿರುಕುಳ ನೀಡುತ್ತಿದ್ದರು. ಹಾಗಾಗಿ ವಿಷ ಸೇವಿಸಿದ್ದೇನೆ ಎಂದು ಪೋಷಕರ ಬಳಿ ಹೇಳಿಕೊಂಡಿದ್ದನು.

    ಲತೇಶ್ ಕಳೆದ ಒಂದು ತಿಂಗಳಿನಿಂದ ಪ್ರತಿ ಪಂದ್ಯದ ಮೇಲೂ ಬೆಟ್ಟಿಂಗ್ ಕಟ್ಟುತ್ತಿದ್ದ. ಆದರೆ ಪ್ರತಿ ಪಂದ್ಯದಲ್ಲೂ ಲತೇಶ್ ಸೋತು ಹಣ ಕಳೆದುಕೊಳ್ಳುತ್ತಿದ್ದನು.

    ಬೆಟ್ಟಿಂಗ್ ನಲ್ಲಿ ಸೋತ ಲತೇಶ್ ಕುಮಾರ್‍ಗೆ ಹಣ ನೀಡು ಎಂದು ಅನಿಲ್ ಹಾಗೂ ಗಣೇಶ್ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ಲತೇಶ್ ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದ. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಲತೇಶ್ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ಬಗ್ಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.