Tag: youth

  • ಕ್ಯಾಚ್ ಹಿಡಿಯಲು ಹೋಗಿ ಕಾಂಪೌಂಡ್ ಹಾರಿ ಚರಂಡಿಗೆ ಬಿದ್ದ ಫೀಲ್ಡರ್

    ಕ್ಯಾಚ್ ಹಿಡಿಯಲು ಹೋಗಿ ಕಾಂಪೌಂಡ್ ಹಾರಿ ಚರಂಡಿಗೆ ಬಿದ್ದ ಫೀಲ್ಡರ್

    ಮಂಗಳೂರು: ಕ್ರಿಕೆಟ್ ಹುಚ್ಚಿನಲ್ಲಿ ಕೆಲವರು ಪ್ರಾಣದ ಹಂಗನ್ನೂ ತೊರೆದು ಆಟವಾಡೋರಿದ್ದಾರೆ. ಡೈ ಮಾಡಿ, ಕೈಕಾಲಿಗೆ ಗಾಯ ಮಾಡಿಕೊಳ್ಳೋರೂ ಇದ್ದಾರೆ. ಮಂಗಳೂರಿನಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಯುವಕನೊಬ್ಬ ಕ್ಯಾಚ್ ಹಿಡಿಯಲೆಂದು ಓಡುತ್ತಾ ಹೋಗಿ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದಾನೆ.

    ಮಂಗಳೂರಿನ ಕದ್ರಿ ಮೈದಾನದಲ್ಲಿ ಕ್ರಿಕೆಟ್ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ. ಚೆಂಡು ಬಾನೆತ್ತರಕ್ಕೆ ಸಾಗುತ್ತಿದ್ದಂತೆ ಕ್ಯಾಚ್ ಹಿಡಿಯಲು ಓಡಿದ ಫೀಲ್ಡರ್ ರಘುವೀರ್, ಹಿಂದಕ್ಕೆ ಓಡುತ್ತಾ ರಸ್ತೆ ಬದಿಯ ಗೋಡೆಗೆ ಬಡಿದು ಪಲ್ಟಿ ಹೊಡೆದು ಬಿದ್ದಿದ್ದಾನೆ.

    ಈ ಕ್ರಿಕೆಟ್ ಪಂದ್ಯಾಟ ಸ್ಥಳೀಯ ವಾಹಿನಿಯಲ್ಲಿ ಲೈವ್ ಆಗುತ್ತಿದ್ದುದರಿಂದ ಯುವಕ ಪಲ್ಟಿ ಹೊಡೆಯುವುದು ಲೈವ್ ಆಗಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಯುವಕ ಮಾತ್ರ ಏನೂ ಆಗದಂತೆ ಪಲ್ಟಿ ಹೊಡೆದು ಬಿದ್ದರೂ, ಮತ್ತೆ ಫೀಲ್ಡಿಂಗಿನತ್ತ ಹಿಂದಿರುಗಿದ್ದು, ಆತನ ಗೇಮ್ ಸ್ಪಿರಿಟ್ ನ್ನು ಸ್ಥಳೀಯರು ಮೆಚ್ಚಿಕೊಂಡಿದ್ದಾರೆ.

  • ಯುವಕನ ಮನವಿಗೆ ಪ್ರಧಾನಿ ಸ್ಪಂದನೆ- ವಿದ್ಯುತ್ ಸಂಪರ್ಕ ಕಾರ್ಯ ಆರಂಭ

    ಯುವಕನ ಮನವಿಗೆ ಪ್ರಧಾನಿ ಸ್ಪಂದನೆ- ವಿದ್ಯುತ್ ಸಂಪರ್ಕ ಕಾರ್ಯ ಆರಂಭ

    ರಾಯಚೂರು: ಯುವಕನ ಮನವಿಗೆ ಸ್ಪಂದಿಸಿ ಪ್ರಧಾನಿ ನರೇಂದ್ರ ಮೋದಿ ಬೆಳಕನ್ನೆ ಕಾಣದ ಜಿಲ್ಲೆಯ ದೊಡ್ಡಿಗಳಿಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ.

    ಲಿಂಗಸುಗೂರಿನ ಗಲಗಿನ ದೊಡ್ಡಿ, ಕಾಳಪ್ಪನ ದೊಡ್ಡಿ ಹಾಗೂ ಗುಳೆದರ ದೊಡ್ಡಿಗಳಿಗೆ ವಿದ್ಯುತ್ ಸಂಪರ್ಕ ನೀಡುವಂತೆ ದೇವರಬುಪೂರು ಗ್ರಾಮದ ಯುವಕ ಅಮರೇಶ್ ಪ್ರಧಾನಿಗೆ ಟ್ವೀಟ್ ಮಾಡಿದ್ದರು. ಯುವಕನ ಟ್ವೀಟ್‍ಗೆ ಸ್ಪಂದಿಸಿ ಮೂರು ದೊಡ್ಡಿಗಳಿಗೆ ವಿದ್ಯುತ್ ಸಂಪರ್ಕ ನೀಡುವಂತೆ ಆದೇಶ ನೀಡಿದ್ದಾರೆ.

    2018 ಸೆಪ್ಟೆಂಬರ್ 15 ರಂದು ಪ್ರಧಾನ ಮಂತ್ರಿ ಕಚೇರಿ ಟ್ವೀಟರ್ ಅಕೌಂಟ್ ಗೆ ಮಾಡಿದ ಅಮರೇಶ್ ಟ್ವೀಟ್ ಗೆ ಅಕ್ಟೋಬರ್ 1 ರಂದು ಕೇಂದ್ರ ಗ್ರಾಮೀಣ ವಿದ್ಯುದ್ದೀಕರಣ ನಿಗಮದಿಂದ ಸ್ಪಂದನೆ ಬಂದಿತ್ತು. ಯುವಕ ತಾನು ಮೋದಿ ಅವರಿಗೆ ಟ್ವೀಟ್ ಮಾಡಿದ ವಿಷಯವನ್ನು ವಿದ್ಯುತ್ ಸಂಪರ್ಕ ಕಾರ್ಯ ಆರಂಭಗೊಂಡಾಗ ಎಲ್ಲರ ಬಳಿ ಹೇಳಿಕೊಂಡಿದ್ದಾರೆ.

    ಸದ್ಯ ಜೆಸ್ಕಾಂ ಇಲಾಖೆಯಿಂದ ವಿದ್ಯುತ್ ಸಂಪರ್ಕ ಕಾರ್ಯ ಆರಂಭಿಸಿದ್ದು, ಕೇಂದ್ರ ಸರಕಾರದ ಸೌಭಾಗ್ಯ ಯೋಜನೆ ಅಡಿಯಲ್ಲಿ ಮೀಟರ್ ಅಳವಡಿಕೆ ಕಾರ್ಯ ಆರಂಭವಾಗಿದೆ. ವಿದ್ಯುತ್ ಕಂಬಗಳನ್ನು ಅಳವಡಿಸಿದ್ದು ವಿದ್ಯುತ್ ತಂತಿ ಎಳೆಯಲಾಗಿದೆ. ಈಗ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸುವ ಕಾರ್ಯ ನಡೆದಿದೆ.

  • ಪ್ರೇಯಸಿ ಕುರಿತ ಸುಳ್ಳು ಸುದ್ದಿಗೆ ಪ್ರೇಮಿ ಬಲಿ

    ಪ್ರೇಯಸಿ ಕುರಿತ ಸುಳ್ಳು ಸುದ್ದಿಗೆ ಪ್ರೇಮಿ ಬಲಿ

    ನವದೆಹಲಿ: ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ನಿಜವೆಂದು ನಂಬಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ದೆಹಲಿಯಲ್ಲಿ ನಡೆದಿದೆ.

    ಮೃತ ಪ್ರೇಮಿಯನ್ನು ಓಲಾ ಕ್ಯಾಬ್ ಚಾಲಕ ದೀಪಕ್ ಎಂದು ಗುರುತಿಸಲಾಗಿದೆ. ದೀಪಕ್ ತನ್ನ ತಂದೆ-ತಾಯಿ ಹಾಗೂ ಮೂವರು ಸಹೋದರಿಯರ ಜೊತೆ ದೆಹಲಿಯಲ್ಲಿ ವಾಸವಾಗಿದ್ದನು. ಅಲ್ಲದೆ ಮಥುರಾದ ಯುವತಿಯೊಬ್ಬಳನ್ನು ದೀಪಕ್ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದನು. ಆದರೆ ಇಬ್ಬರ ಪ್ರೀತಿ ವಿಷಯ ತಿಳಿದ ಹುಡುಗಿ ಮನೆಯವರು ದೀಪಕ್‍ಗೆ ಎಚ್ಚರಿಕೆ ನೀಡಿದ್ದರು. ಅಲ್ಲದೆ ಯುವತಿಗೆ ದೀಪಕ್ ಜೊತೆ ಮಾತನಾಡದಂತೆ ಸೂಚನೆ ನೀಡಿದ್ದರು. ಹೀಗಾಗಿ ಮನೆಯವರ ಕಿರಿಕಿರಿಗೆ ಬೇಸತ್ತ ಯುವತಿ ದೀಪಕ್‍ಗೆ ಕರೆ, ಮೆಸೇಜ್ ಮಾಡುವುದನ್ನು ಬಿಟ್ಟಿದ್ದಳು.

    ಹೀಗೆ ಇಬ್ಬರು ತಮ್ಮ ಪಾಡಿಗಿದ್ದರು. ಆದರೆ ಸೋಮವಾರದಂದು ಯುವಕನ ಫೋನ್ ಗೆ ಕರೆಯೊಂದು ಬಂದಿದೆ. ಯಾರೋ ತಮಾಷೆಗಾಗಿ ನಿನ್ನ ಪ್ರೇಯಸಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ. ಆದರೆ ಇದನ್ನೇ ನಿಜವೆಂದು ನಂಬಿದ ಯುವಕ ಮನನೊಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.

    ಈ ಸಂಬಂಧ ಯುವಕನ ಮನೆಯವರು ಯುವತಿ ಮನೆಯವರ ವಿರುದ್ಧ ದೂರು ನೀಡಿದ್ದಾರೆ. ಈಗ ಪೊಲೀಸರು ಯುವಕನ ಫೋನ್ ವಶಕ್ಕೆ ಪಡೆದು ತನಿಖೆ ಶುರು ಮಾಡಿದ್ದಾರೆ.

  • ಫೋನ್ ಗಿಫ್ಟ್ ನೀಡದ್ದಕ್ಕೆ ಸಾರ್ವಜನಿಕರ ಮುಂದೆ ಪ್ರಿಯಕರನಿಗೆ 52 ಬಾರಿ ಕಪಾಳಮೋಕ್ಷ

    ಫೋನ್ ಗಿಫ್ಟ್ ನೀಡದ್ದಕ್ಕೆ ಸಾರ್ವಜನಿಕರ ಮುಂದೆ ಪ್ರಿಯಕರನಿಗೆ 52 ಬಾರಿ ಕಪಾಳಮೋಕ್ಷ

    ಬೀಜಿಂಗ್: ತನಗೆ ಸ್ಮಾರ್ಟ್‍ಫೋನ್ ಗಿಫ್ಟ್ ನೀಡಿಲ್ಲ ಎಂದು ಪ್ರೇಯಸಿ ಸಾರ್ವಜನಿಕರ ಮುಂದುಗಡೆಯೇ ತನ್ನ ಪ್ರಿಯಕರನಿಗೆ 52 ಬಾರಿ ಕಪಾಳಮೋಕ್ಷ ಮಾಡಿದ ಘಟನೆ ಚೀನಾದ ದಜಾವ್‍ನಲ್ಲಿ ನಡೆದಿದ್ದು, ವಿಡಿಯೋ ಈಗ ವೈರಲ್ ಆಗುತ್ತಿದೆ.

    ಯುವತಿ ಕಪಾಳಮೋಕ್ಷ ಮಾಡುತ್ತಿರುವುದನ್ನು ನೋಡಿದ ಸಾರ್ವಜನಿಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ಮಾಡಿದ್ದಾರೆ. ಯುವತಿ ಕಪಾಳಕ್ಕೆ ಹೊಡೆಯುವಾಗ ಯುವಕ ಆಕೆಯನ್ನು ತಡೆಯಲಿಲ್ಲ ಹಾಗೂ ಹೊಡೆತದಿಂದ ತಪ್ಪಿಸಿಕೊಳ್ಳಲು ಕೂಡ ಪ್ರಯತ್ನಿಸಲಿಲ್ಲ.

    ಸ್ಥಳದಲ್ಲಿದ್ದ ಸಾರ್ವಜನಿಕರು ಯುವತಿಯನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಯುವತಿ ಯಾರ ಮಾತನ್ನು ಕೇಳದೆ ತನ್ನ ಪ್ರಿಯಕರನಿಗೆ ನಿರಂತರವಾಗಿ ಕೆನ್ನೆಗೆ ಹೊಡೆದಿದ್ದಾಳೆ.

  • ಕೆಜಿಎಫ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ನರಳಾಡಿ ಮಗು ಕಳೆದುಕೊಂಡ ತಾಯಿ!

    ಕೆಜಿಎಫ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ನರಳಾಡಿ ಮಗು ಕಳೆದುಕೊಂಡ ತಾಯಿ!

    ಕೋಲಾರ: ಇಲ್ಲಿನ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ನರಳಾಡಿ ಮಗುವನ್ನ ಕಳೆದುಕೊಂಡ ಅಮಾನವೀಯ ಘಟನೆ ನಡೆದಿದೆ.

    ಹೌದು. ಸೋಮವಾರ ಮಧ್ಯಾಹ್ನ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 8ನೇ ಬ್ಲಾಕ್‍ನ ರಿಯಾಜ್ ಎಂಬವರ ಪತ್ನಿ ಸಮೀನಾ ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು. ಆದರೆ ಅಲ್ಲಿ ಆಕೆ ನರಳಾಡಿದರೂ ವೈದ್ಯರಾಗಲಿ, ಸಿಬ್ಬಂದಿಯಾಗಲಿ ಯಾರೂ ಕೇಳಿರಲಿಲ್ಲ. ಮಹಿಳೆಗೆ ಚಿಕಿತ್ಸೆ ನೀಡದೆ ವೈದ್ಯರು ಕೂಡ ದುರಹಂಕಾರದ ವರ್ತನೆ ತೋರಿಸಿದ್ದರು. ನಂತರ ಸಂಜೆ 5 ಗಂಟೆ ಸುಮಾರಿಗೆ ಆಸ್ಪತ್ರೆ ಸರ್ಜನ್ ಶಿವಕುಮಾರ್, ಸ್ಥಳಕ್ಕೆ ಧಾವಿಸಿ ಅಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ.

    ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡದ ಕೆಜಿಎಫ್ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ವರ್ತನೆಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಚಿಕಿತ್ಸೆ ತಡವಾದ ಹಿನ್ನೆಲೆಯಲ್ಲಿ ಹೊಟ್ಟೆಯಲ್ಲೇ ಗಂಡು ಮಗು ಸಾವನ್ನಪ್ಪಿದೆ. ನಮಗಾದ ನೋವು ಸಂಕಟ ಬೇರಯವರಿಗೆ ಆಗುವುದು ಬೇಡ. ಇನ್ನಾದರೂ ಆಸ್ಪತ್ರೆಯಲ್ಲಿ ಸರಿಯಾದ ವೈದ್ಯರು, ಸಿಬ್ಬಂದಿಯನ್ನ ನೇಮಕ ಮಾಡಲಿ ಎಂದು ಸಮೀನಾ ಪೋಷಕರು ಒತ್ತಾಯಿಸಿದ್ದಾರೆ.

    7 ತಿಂಗಳ ಹೆರಿಗೆ ನೋವಿನಿಂದ ಆಸ್ಪತ್ರೆಯಲ್ಲೇ ಬಿದ್ದು ಗರ್ಭಿಣಿ ಮಹಿಳೆ ನರಳಾಡುತ್ತಿರುವ ವಿಡಿಯೋ ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೆಜಿಎಫ್ ಆಸ್ಪತ್ರೆಯಿಂದ, ಜಿಲ್ಲಾಸ್ಪತ್ರೆಗೆ ಅದಾದ ಬಳಿಕ ಗರ್ಭಿಣಿ ಮಹಿಳೆಯನ್ನು ರಾತ್ರಿಯೇ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಹೊಟ್ಟೆಯಲ್ಲಿಯೇ ಗಂಡು ಮಗು ಸಾವನ್ನಪ್ಪಿದೆ.

    ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ವಿರುದ್ಧ ಕ್ರಮಕೈಗೊಳ್ಳುವಂತೆ ಸಂಬಂಧಿಕರು ಒತ್ತಾಯಿಸಿದ್ದಾರೆ. ಅಲ್ಲದೆ ತಾಯಿ ಸಮೀನಾ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಇಷ್ಟಾದ್ರೂ ಯಾವೊಬ್ಬ ಆರೋಗ್ಯ ಇಲಾಖೆ ಅಧಿಕಾರಿಗಳಾಗಲಿ, ಜಿಲ್ಲಾ ಆರೋಗ್ಯಾಧಿಕಾರಿಗಳಾಗಲಿ ಸ್ಥಳಕ್ಕೆ ಬಂದಿಲ್ಲ. ತಾಯಿಯ ಆರೋಗ್ಯ ವಿಚಾರಿಸಿಲ್ಲ ಎಂದು ಸಮೀನಾ ಸಂಬಂಧಿಕರು ಆರೋಪಿಸಿದ್ದಾರೆ.

    ಇಷ್ಟು ಮಾತ್ರವಲ್ಲದೇ ಸೊಮವಾರ ಬೆಳಗ್ಗೆ ಇದೇ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ಕೆಜಿಎಫ್ ನಗರದ ನಿವಾಸಿ ದಿಲೀಪ್ (31) ಎಂಬಾತ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾನೆ. ಘಟನೆ ಖಂಡಿಸಿ ಪೋಷಕರು ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಎರಡು ವಿಷಯಗಳು ತಿಳಿಯುತ್ತಿದ್ದಂತೆ ಕೆಜಿಎಫ್ ಶಾಸಕಿ ರೂಪ ಶಶಿಧರ್ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಮಾತುಕತೆ ನಡೆಸಿ ಆಸ್ಪತ್ರೆ ಪರಿಶೀಲನೆ ನಡೆಸಿದ್ದಾರೆ.

  • ಮಾತುಬಾರದ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸ್ದ- ಗರ್ಭಿಣಿಯೆಂದು ತಿಳಿದ ತಕ್ಷಣ ಪರಾರಿ

    ಮಾತುಬಾರದ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸ್ದ- ಗರ್ಭಿಣಿಯೆಂದು ತಿಳಿದ ತಕ್ಷಣ ಪರಾರಿ

    – ಯುವತಿಯ ಕುಟುಂಬಕ್ಕೆ ಬಹಿಷ್ಕಾರ

    ದಾವಣಗೆರೆ: ಮಾತುಬಾರದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿ ಮಾಡಿದ ಯುವಕನಿಗೆ ಶಿಕ್ಷೆ ನೀಡಿ ಮದುವೆ ಮಾಡಿಸುವ ಬದಲು ಯುವತಿಯ ಕುಟುಂಬವನ್ನೇ ಗ್ರಾಮದಿಂದ ಬಹಿಷ್ಕಾರ ಹಾಕಿದ ಅಮಾನವೀಯ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಣಬೂರು ಗೊಲ್ಲರಹಟ್ಟಿಯಲ್ಲಿ ನಡೆದಿದೆ.

    ಅದೇ ಗ್ರಾಮದ ಯುವಕ ಜಮ್ಮಣ್ಣ ಎಂಬವನು ಮೂಗ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿ ಗರ್ಭಿಣಿ ಮಾಡಿದ್ದಾನೆ. ಯಾವಾಗ ಯುವತಿ ಗರ್ಭಿಣಿ ಎಂದು ತಿಳಿಯಿತೋ ಜಮ್ಮಣ್ಣ ತಲೆಮರೆಸಿಕೊಂಡಿದ್ದಾನೆ.

    ನ್ಯಾಯಕ್ಕಾಗಿ ಯುವತಿಯ ಕುಟುಂಬ ಗ್ರಾಮದ ಮುಖಂಡರ ಮೊರೆ ಹೋದರೆ, ನ್ಯಾಯ ಕೊಡಿಸದೇ ಅವರ ಇಡೀ ಕುಟುಂಬವನ್ನೇ ಗ್ರಾಮದಿಂದ ಬಹಿಷ್ಕಾರ ಹಾಕಲಾಗಿದೆ. ದನದ ಕೊಟ್ಟಿಗೆಯಲ್ಲಿ ಯುವತಿ ಜೀವನ ಮಾಡುತ್ತಿದ್ದು, ತನಗೆ ಮೋಸ ಮಾಡಿದ ಜಮ್ಮಣ್ಣನಿಗಾಗಿ ಕಾಯುತ್ತಾ ಕುಳಿತಿದ್ದಾಳೆ.

    ನಾಲ್ಕು ತಿಂಗಳ ಗರ್ಭಿಣಿಯಾದ ಯುವತಿ ಮಳೆ ಗಾಳಿಯಲ್ಲೇ ಮಲಗಬೇಕಾದ ಹೀನಾಯ ಪರಿಸ್ಥಿತಿ ಇದೆ. ವಿಷಯ ತಿಳಿದ ಸ್ವಾಮಿ ವಿವೇಕಾನಂದ ಅಂಗವಿಕಲರ ಸಂಘದವರು ಗ್ರಾಮಕ್ಕೆ ಆಗಮಿಸಿದ ಯುವತಿಯ ಪರಿಸ್ಥಿತಿ ನೋಡಿ ಪೊಲೀಸ್ ಠಾಣೆಗೆ ದೂರು ನೀಡಿದರು.

    ದೂರು ನೀಡಿದ್ರೂ ಯಾವುದೇ ತನಿಖೆ ನಡೆಸದೆ ರಾಜಕೀಯ ಒತ್ತಡಕ್ಕೆ ಮಣಿದು ಯುವತಿಗೆ ನ್ಯಾಯ ಒದಗಿಸಲು ಹಿಂದೇಟು ಹಾಕುತ್ತಿದ್ದಾರೆ. ಜಗಳೂರು ಠಾಣಾ ಪೊಲೀಸರು ದೂರು ನೀಡಿದಾಗ ಬಂದು ಮಹಜರು ಮಾಡಿಕೊಂಡು ಹೋಗಿದ್ದೇ ವಿನಃ ಯುವಕನನ್ನು ಕರೆಸಿ ವಿಚಾರಣೆ ನಡೆಸಿಲ್ಲ. ಕೂಡಲೇ ಅನ್ಯಾಯವಾದ ಯುವತಿಗೆ ನ್ಯಾಯ ಒದಗಿಸಬೇಕು ಇಲ್ಲವಾದರೆ ಪೊಲೀಸ್ ಠಾಣೆ ಹಾಗೂ ಯುವಕನ ಮನೆ ಮುಂದೆ ಉಗ್ರವಾದ ಹೋರಾಟ ಮಾಡುವುದಾಗಿ ಸಂಘದವರು ತಿಳಿಸಿದ್ದಾರೆ.

    ಗರ್ಭಿಣಿಯ ಪಾಡು ಹೀನಾಯವಾಗಿದ್ದು, ತಮಗೆ ನ್ಯಾಯ ಸಿಗುತ್ತದೆಯೋ ಇಲ್ಲವೋ ಎನ್ನುವ ಆತಂಕದಲ್ಲಿ ಇಡೀ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

  • ಬೆಳಗಾವಿ ಯುವಕನದ್ದು ಆತ್ಮಹತ್ಯೆಯಲ್ಲ ಕೊಲೆ: ಸುರೇಶ್ ಅಂಗಡಿ

    ಬೆಳಗಾವಿ ಯುವಕನದ್ದು ಆತ್ಮಹತ್ಯೆಯಲ್ಲ ಕೊಲೆ: ಸುರೇಶ್ ಅಂಗಡಿ

    ಬೆಳಗಾವಿ: ಜಿಲ್ಲೆಯಲ್ಲಿ ಹೀರೇಬಾಗೇವಾಡಿಯ ಯುವಕ ಆತ್ಮಹತ್ಯೆ ಮಾಡಿಕೊಂಡಿಲ್ಲ. ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ಸಂಸದ ಸುರೇಶ್ ಅಂಗಡಿ ಆರೋಪಿಸಿದ್ದಾರೆ.

    ಪ್ರಕರಣದ ಕುರಿತು ಟ್ವೀಟ್ ಮಾಡಿರುವ ಸಂಸದರು, ಶಿವಕುಮಾರ್ ಉಪ್ಪಾರ ಗೋವುಗಳನ್ನು ತುಂಬಾ ಪ್ರೀತಿಸುತ್ತಿದ್ದ ಹಾಗೂ ಗೋವು ಕಳ್ಳ ಸಾಗಾಣಿಕೆಯನ್ನು ನಿಲ್ಲಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಕೊಲೆ ಮಾಡಿ, ನೇಣು ಹಾಕಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಶೀಘ್ರವೇ ತನಿಖೆ ನಡೆಸಲು ಸಿಎಂ ಕುಮಾರಸ್ವಾಮಿ ಅವರು ಪೊಲಿಸರಿಗೆ ಆದೇಶ ನೀಡಬೇಕು. ಪೊಲೀಸರು 24 ಗಂಟೆಗಳ ಒಳಗಾಗಿ ಆರೋಪಿಗಳನ್ನು ಬಂಧಿಸಬೇಕು ಎಂದು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.

    ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದ ಶಿವಕುಮಾರ್ ಉಪ್ಪಾರ(19) ಅನುಮಾನಸ್ಪದವಾಗಿ ಸಾವನ್ನಪ್ಪಿದ ಯುವಕ. ಹಿರೇಬಾಗೇವಾಡಿ ಗ್ರಾಮದ ಎಪಿಎಂಸಿ ಶೌಚಾಲಯದಲ್ಲಿ ಯುವಕ ಮೃತ ದೇಹವು ಪತ್ತೆಯಾಗಿತ್ತು. ಮಗನ ಶವವನ್ನು ನೋಡಿದ ಕುಟುಂಬಸ್ಥರು, ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

  • ಕ್ರಿಶ್ಚಿಯನ್ ಮತ ಪ್ರಚಾರದಲ್ಲಿ ತೊಡಗಿದ್ದ 15 ಯುವಕರು ಪೊಲೀಸರ ವಶಕ್ಕೆ

    ಕ್ರಿಶ್ಚಿಯನ್ ಮತ ಪ್ರಚಾರದಲ್ಲಿ ತೊಡಗಿದ್ದ 15 ಯುವಕರು ಪೊಲೀಸರ ವಶಕ್ಕೆ

    ಕಾರವಾರ: ಹಿಂದೂಗಳನ್ನೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಪ್ರಚಾರ ಮಾಡುತ್ತಿದ್ದ ಸುಮಾರು 15 ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬೇರೆ ರಾಜ್ಯಗಳಿಂದ ಬಂದ ಯುವಕರು ಮತ ಪ್ರಚಾರದ ಪುಸ್ತಕಗಳನ್ನು ವಿತರಿಸುತ್ತಾ ಮತಾಂತರವಾಗುವಂತೆ ಜನರಿಗೆ ಪ್ರೇರಣೆ ನೀಡುತ್ತಿದ್ದರು. ಇದನ್ನು ತಿಳಿದ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

    ಗೋವಾ, ಅಸ್ಸಾಂ, ಉತ್ತರ ಕರ್ನಾಟಕ ಮೂಲದ ಯುವಕರು ಜಿಲ್ಲೆಯ ಸುಭಾಶ್ ವೃತ್ತದಲ್ಲಿ ನಿಂತುಕೊಂಡು ಹಿಂದು ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದರು. ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಜನರಿಗೆ ವಿತರಿಸುತ್ತಿದ್ದರು ಎಂದು ಆರೋಪಿಸಿ ಸ್ಥಳೀಯರು ಯುವಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಈ ಸಂಬಂಧ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಯುವಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

  • ನಿಖಿಲ್ ಪರ ವಾಟ್ಸಪ್ ಸ್ಟೇಟಸ್ – ಯುವಕನಿಗೆ ಜೀವ ಬೆದರಿಕೆ

    ನಿಖಿಲ್ ಪರ ವಾಟ್ಸಪ್ ಸ್ಟೇಟಸ್ – ಯುವಕನಿಗೆ ಜೀವ ಬೆದರಿಕೆ

    ಮಂಡ್ಯ: ವಾಟ್ಸಪ್ ಸ್ಟೇಟಸ್‍ನಲ್ಲಿ ನಿಖಿಲ್ ಪರ ಬರೆದುಕೊಂಡಿದ್ದಕ್ಕೆ ಯುವಕನಿಗೆ ಜೀವ ಬೆದರಿಕೆ ಹಾಕಲಾಗಿದ್ದು, ರಕ್ಷಣೆ ನೀಡುವಂತೆ ಯುವಕ ಪೊಲೀಸರ ಮೊರೆ ಹೋಗಿದ್ದಾನೆ.

    ವಾಟ್ಸಪ್ ಸ್ಟೇಟಸ್‍ಗೆ ನಿಖಿಲ್ ಫೋಟೋ ಹಾಕಿ `ನಿಮ್ಮ ಜೊತೆ ನಾವು’ ಎಂದು ಚೇತನ್ ಎಂಬ ಯುವಕ ಬರೆದುಕೊಂಡಿದ್ದನು. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಚೇತನ್, ಶಾಸಕ ಸುರೇಶ್‍ಗೌಡ ಪರ ಗುರುತಿಸಿಕೊಂಡಿದ್ದನು. ನಿಖಿಲ್ ಪರ ಹಾಕಿಕೊಂಡಿದ್ದ ಸ್ಟೇಟಸ್ ನೋಡಿ ಚೇತನ್ ವಾಟ್ಸಪ್‍ಗೆ 13 ವಾಯ್ಸ್ ರೆಕಾರ್ಡ್ ಮೆಸೇಜ್ ನ್ನು ಮೂವರು ಯುವಕರು ಕಳುಹಿಸಿದ್ದರು.

    ಮಾಜಿ ಶಾಸಕ ಚಲುವರಾಯಸ್ವಾಮಿ ಪರ ಮಾತನಾಡುತ್ತಾ ಮುಖ್ಯಮಂತ್ರಿ ಕುಮಾರಸ್ವಾಮಿ, ಶಾಸಕ ಸುರೇಶ್‍ಗೌಡ, ನಿಖಿಲ್ ವಿರುದ್ಧ ಅವಾಚ್ಯ ಶಬ್ಧ ಬಳಸಿ ವಾಯ್ಸ್ ರೆಕಾರ್ಡ್ ಮೆಸೇಜ್ ಮಾಡಿದ್ದಾರೆ. ನಾಗಮಂಗಲ ತಾಲೂಕಿನವರೇ ಆದ ಚಂದನ್, ಮಾರುತಿ ಮತ್ತು ಪವನ್ ಎಂಬವರು ನಿಖಿಲ್ ಅಭಿಮಾನಿ ಚೇತನ್‍ಗೆ ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.

    ಕಿಡಿಗೇಡಿಗಳಿಗೆ ಬೆದರಿದ ಯುವಕ ಚೇತನ್ ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಮೂವರು ಯುವಕರಲ್ಲಿ ಓರ್ವನ ಬಂಧಿಸಿದ್ದಾರೆ. ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗೋಮಾಂಸ ಸಾಗಿಸ್ತಿದ್ದಾರೆಂದು ಮರಕ್ಕೆ ಕಟ್ಟಿ ಥಳಿಸಿದ ಯುವಕರು!

    ಗೋಮಾಂಸ ಸಾಗಿಸ್ತಿದ್ದಾರೆಂದು ಮರಕ್ಕೆ ಕಟ್ಟಿ ಥಳಿಸಿದ ಯುವಕರು!

    ಭೋಪಾಲ್: ಗೋಮಾಂಸ ಸಾಗಿಸುತ್ತಿದ್ದಾರೆ ಎಂದು ಶಂಕಿಸಿ ನಾಲ್ವರನ್ನು ಮರಕ್ಕೆ ಕಟ್ಟಿಹಾಕಿ ಯುವಕರು ಥಳಿಸಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

    ಮಧ್ಯ ಪ್ರದೇಶದ ಒಂದು ಹಳ್ಳಿಯಲ್ಲಿ ಆಟೋರಿಕ್ಷಾದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂದು ಶಂಕಿಸಿ ರಸ್ತೆ ಮಧ್ಯದಲ್ಲಿ ಆಟೋವನ್ನು ಅಡ್ಡಗಟ್ಟಿದ ಯುವಕರ ಗುಂಪು ಯುವತಿ ಹಾಗೂ 4 ಮಂದಿ ಯುವಕರಿಗೆ ಮನಬಂದಂತೆ ಥಳಿಸಿದ್ದಾರೆ.

    ಈ ಘಟನೆ ಮೇ 22 ರಂದು ನಡೆದಿದ್ದು ಸ್ಥಳದಲ್ಲಿ ಸಾರ್ವಜನಿಕರು ಇದ್ದು ವಿಡಿಯೋ ಮಾಡುತ್ತಿದ್ದರೇ ವಿನಃ ಯಾರು ಕೂಡ ಪೊಲೀಸರಿಗೆ ಮಾಹಿತಿ ನೀಡಿಲ್ಲ. ವಿಡಿಯೋದಲ್ಲಿ ಕೆಲ ಯುವಕರ ಗುಂಪು “ಜೈ ಶ್ರೀರಾಮ್” ಎಂದು ಘೋಷಣೆ ಕೂಗುತ್ತಾ ಯುವತಿಯ ತಲೆಗೆ ಚಪ್ಪಲಿಯಿಂದ ಹೊಡೆಯುತ್ತಿದ್ದಾರೆ. ಮತ್ತು ಕೆಲ ಯುವಕರನ್ನು ಮರಕ್ಕೆ ಕಟ್ಟಿ ಅವರಿಗೆ ದೊಣ್ಣೆಗಳಿಂದ ಹೊಡೆಯುತ್ತಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಮೇ 23 ರಂದು ಈ ವಿಡಿಯೋವನ್ನು ಶುಭಮ್ ಸಿಂಗ್ ಎಂಬ ಶ್ರೀ ರಾಮ ಸೇನಾ ಕಾರ್ಯಕರ್ತ ತನ್ನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡು ನಂತರ ತೆಗೆದು ಹಾಕಿದ್ದನು. ಈ ಆಧಾರದ ಮೇಲೆ ವಿಚಾರಣೆ ಮಾಡಿರುವ ಪೊಲೀಸರು ವಿಡಿಯೋದಲ್ಲಿ ಕಾಣುವ ಸಿಯೋನಿ ನಗರದ ಐದು ಜನ ಯುವಕರನ್ನು ಬಂಧಿಸಿದ್ದಾರೆ.

    ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಪೊಲೀಸ್ ಅಧಿಕಾರಿ ಲಲಿತ್ ಶಕ್ಯಾವರ್, ಈ ವಿಡಿಯೋ 4 ದಿನಗಳ ಹಳೆಯದ್ದಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ನಾಲ್ಕು ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಇಂದು ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದ್ದು ಅವನನ್ನು ನ್ಯಾಯಾಲಯಕ್ಕೆ ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ.

    ಈ ಘಟನೆಯನ್ನು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ್ ಮುಫ್ತಿ ಖಂಡಿಸಿದ್ದಾರೆ. ಮಧ್ಯ ಪ್ರದೇಶದಲ್ಲಿ ಗೋಹತ್ಯೆ ವಿಷಯದಲ್ಲಿ ಅಮಾಯಕ ಮುಸ್ಲಿಂರನ್ನು ಹೊಡೆಯುತ್ತಿದ್ದಾರೆ. ಈ ವಿಚಾರದ ಬಗ್ಗೆ ಕಮಲ್ ನಾಥ್ ಅವರು ಶೀಘ್ರ ಕ್ರಮ ಕೈಗೊಳ್ಳುತ್ತಾರೆ ಎಂದು ನಂಬಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.