Tag: youth

  • 9 ಮಂದಿ ಏಕಾಏಕಿ ಕ್ಯಾಂಟೀನ್ ಗೆ ನುಗ್ಗಿ ಯುವಕನನ್ನ ಕೊಚ್ಚಿ ಕೊಂದ್ರು

    9 ಮಂದಿ ಏಕಾಏಕಿ ಕ್ಯಾಂಟೀನ್ ಗೆ ನುಗ್ಗಿ ಯುವಕನನ್ನ ಕೊಚ್ಚಿ ಕೊಂದ್ರು

    ಶಿವಮೊಗ್ಗ: ಕ್ಯಾಂಟೀನ್ ನಡೆಸುತ್ತಿದ್ದ ಯುವಕನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ಆಟೋ ಕಾಂಪ್ಲೆಕ್ಸ್ ನಲ್ಲಿ ನಡೆದಿದೆ.

    ಇಂದಿರಾನಗರದ ಮಧು ಕೊಲೆಯಾದ ಯುವಕನಾಗಿದ್ದು, ಈತ ಈ ಮುಂಚೆ ಆಟೋ ಚಾಲಕನಾಗಿದ್ದನು. ರಾತ್ರಿ ಮೂರು ಬೈಕ್ ಗಳಲ್ಲಿ ಬಂದ ಒಂಭತ್ತು ಯುವಕರು ಏಕಾಏಕಿ ಮಧು ಮೇಲೆ ದಾಳಿ ನಡೆಸಿದ್ದಾರೆ. ಮಚ್ಚು, ಲಾಂಗು, ಚೂರಿ ಸಮೇತ ಬಂದಿದ್ದ ತಂಡ ನೇರವಾಗಿ ಕ್ಯಾಂಟೀನ್ ಗೆ ನುಗ್ಗಿದ್ದು, ಇದರಿಂದ ಮಧು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪರಿಣಾಮ ತಂಡದ ದಾಳಿಗೆ ಸಿಲುಕಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಈ ಕ್ಯಾಂಟೀನ್ ನಲ್ಲಿ ಮಧು ಓಸಿ ದಂಧೆ ನಡೆಸುತ್ತಿದ್ದನು. ಓಸಿ ದಂಧೆಯ ಮೇಲೆ ನಿಯಂತ್ರಣ ಸಾಧಿಸಲು ಪ್ರವೀಣ್ ಮತ್ತು ಮಧು ಗ್ಯಾಂಗ್ ನಡುವೆ ಪೈಪೋಟಿ ಇತ್ತು. ಈ ವಿಚಾರವಾಗಿ ಆಗಾಗ ಗಲಾಟೆ ಕೂಡ ನಡೆದಿತ್ತು. ಇದೇ ವಿಷಯಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ.

    ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆಯಾದ ಮಧು ಹಾಗೂ ಕೊಲೆ ಮಾಡಿದ ಆರೋಪಿ ಪ್ರವೀಣ್ ವಾಸವಿದ್ದಾರೆ. ಹಳೆಯ ಗಲಾಟೆಗೆ ಸಂಬಂಧಿಸಿದಂತೆ ಕಳೆದ ವಾರವಷ್ಟೇ ಇಲ್ಲಿನ ಯುವಕರು ಹೊಡೆದಾಡಿಕೊಂಡಿದ್ದರು. ಆಗ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದರೆ ಇಂದಿನ ಕೊಲೆ ತಪ್ಪಿಸಬಹುದಿತ್ತು ಅಂತ ಸ್ಥಳೀಯರು ಹೇಳುತ್ತಿದ್ದಾರೆ.

    ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಹಾಗೂ ವಿನೋಬ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕುತ್ತಿಗೆ ಕೊಯ್ದುಕೊಂಡು, ರೈಲಿನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

    ಕುತ್ತಿಗೆ ಕೊಯ್ದುಕೊಂಡು, ರೈಲಿನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

    ಗದಗ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೋರ್ವ ಕುತ್ತಿಗೆ ಕೊಯ್ದುಕೊಂಡು ರೈಲಿನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗದಗ ತಾಲೂಕಿನ ತಿರ್ಲಾಪೂರ ರೈಲು ನಿಲ್ದಾಣದ ಬಳಿ ನೆಡೆದಿದೆ.

    ಜಾರ್ಖಂಡ್ ಮೂಲದ ಶಿವು(24) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಶಿವು ಗಿನಗೇರಾ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಇವನು ಹುಬ್ಬಳ್ಳಿಯಿಂದ ಅಮರಾವತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕೃತ್ಯಕ್ಕೆ ಮುಂದಾಗಿದ್ದಾನೆ ಎನ್ನಲಾಗುತ್ತಿದೆ.

    ಅರೆ ಜೀವದಲ್ಲಿ ಒದ್ದಾಡುತ್ತಿದ್ದ ಯುವಕನನ್ನು ಗದಗ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸರ್ಕಾರಿ ಕೆಲಸ ಸಿಗದೇ ಮನನೊಂದು ಯುವಕ ಆತ್ಮಹತ್ಯೆ

    ಸರ್ಕಾರಿ ಕೆಲಸ ಸಿಗದೇ ಮನನೊಂದು ಯುವಕ ಆತ್ಮಹತ್ಯೆ

    ಚಾಮರಾಜನಗರ: ಸರ್ಕಾರಿ ಕೆಲಸ ಸಿಗದ ಹಿನ್ನೆಲೆಯಲ್ಲಿ ಖಿನ್ನತೆಗೊಳಗಾಗಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಚಾಮಲಪುರದಲ್ಲಿ ಜರುಗಿದೆ.

    ಚಾಮಲಪುರದ ಮಧು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ. ಸರ್ಕಾರಿ ಕೆಲಸ ಕೊಡಿಸುವುದಾಗಿ ಮಧುನಿಂದ ಚಾಮಣ್ ಮತ್ತು ಶಶಿಧರ್ ಎಂಬವರು ಲಕ್ಷಾಂತರ ರೂಪಾಯಿ ಹಣ ಪಡೆದಿದ್ದರು. ಹಣ ನೀಡಿ ವರ್ಷಗಳು ಕಳೆದ್ರೂ ಯುವಕನಿಗೆ ಸರ್ಕಾರಿ ಕೆಲಸ ಕೊಡಿಸುವ ಸೂಚನೆಗಳು ದೊರಕಲಿಲ್ಲ.

    ಹೀಗಾಗಿ ಮಧು ಚಾಮಣ್ ಮತ್ತು ಶಶಿಧರ್ ಅವರನ್ನು ವಿಚಾರಿಸಿದ್ದಾನೆ. ಆದ್ರೆ ಮಧುಗೆ ಅವರಿಂದ ಸರಿಯಾದ ಉತ್ತರಗಳು ಬಂದಿಲ್ಲ. ಹೀಗಾಗಿ ಮಧು ಖಿನ್ನತೆಗೆ ಒಳಗಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

    ಈ ಸಂಬಂಧ ಯಳಂದೂರು ಪೊಲೀಸ್ ಠಾಣೆಯಲ್ಲಿ ಚಾಮಣ್ ಮತ್ತು ಶಶಿಧರ್ ವಿರುದ್ಧ ದೂರು ದಾಖಲಾಗಿದೆ.

  • ಪೆಟ್ರೋಲ್ ಕಳ್ಳತನ ಮಾಡ್ತಿದ್ದ ಯುವಕನಿಗೆ ಸಾರ್ವಜನಿಕರಿಂದ ಗೂಸಾ

    ಪೆಟ್ರೋಲ್ ಕಳ್ಳತನ ಮಾಡ್ತಿದ್ದ ಯುವಕನಿಗೆ ಸಾರ್ವಜನಿಕರಿಂದ ಗೂಸಾ

    ಗದಗ: ಪೆಟ್ರೋಲ್ ಕಳ್ಳತನ ಮಾಡುತ್ತಿದ್ದ ಯುವಕನೊಬ್ಬನನ್ನು ಸಾರ್ವಜನಿಕರು ಹಿಡಿದು ಥಳಿಸಿದ ಘಟನೆ ಗದಗ್ ನಲ್ಲಿ ನಡೆದಿದೆ.

    ಗದಗ ನಗರ ತೋಂಟದಾರ್ಯ ಮಠದ ಬಳಿ ಸ್ಟೇಷನ್ ರೋಡ್ ನಲ್ಲಿ ಈ ಘಟನೆ ನಡೆದಿದ್ದು, ಥಳಿತಕ್ಕೊಳಗಾದ ಯುವಕನನ್ನು ಕರಿಯಪ್ಪ ಎಂದು ಗುರುತಿಸಲಾಗಿದೆ.

    ಕರಿಯಪ್ಪ ರಾತ್ರಿ ಮನೆಯ ಹೊರಗೆ ಹಾಗೂ ರಸ್ತೆ ಪಕ್ಕ ನಿಲ್ಲಿಸಿದ ಬೈಕ್ ಗಳನ್ನೇ ಗುರಿಯಾಗಿಸಿಕೊಂಡು ಪೆಟ್ರೋಲ್ ಕದಿಯುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಕರಿಯಪ್ಪನನ್ನು ಹಿಡಿದು ಚೆನ್ನಾಗಿ ಥಳಿಸಿ ಬಳಿಕ ಪೊಲೀಸರಿಗೊಪ್ಪಿಸಿದ್ದಾರೆ.

    ಸದ್ಯ ಪೆಟ್ರೋಲ್ ಕಳ್ಳನನ್ನು ಗದಗ ಶಹರ ಪೊಲೀಸರು ಬಂಧಿಸಿದ್ದಾರೆ. ಗದಗ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಪತಿಯ 2ನೇ ಮದ್ವೆ ವಿಷ್ಯ ತಿಳಿದು ದೇವಸ್ಥಾನದಲ್ಲಿ ಮೊದಲ ಪತ್ನಿಯಿಂದ ರಂಪಾಟ

    ಪತಿಯ 2ನೇ ಮದ್ವೆ ವಿಷ್ಯ ತಿಳಿದು ದೇವಸ್ಥಾನದಲ್ಲಿ ಮೊದಲ ಪತ್ನಿಯಿಂದ ರಂಪಾಟ

    ಬೆಂಗಳೂರು: ಬೆಳ್ಳಂಬೆಳಗ್ಗೆ ಪತಿ ಕದ್ದು ಮುಚ್ಚಿ ಎರಡನೇ ಮದುವೆಯಾಗುತ್ತಿದ್ದ ವಿಷಯ ತಿಳಿದ ಮೊದಲ ಪತ್ನಿ ಮದುವೆಯಾಗುತ್ತಿದ್ದ ದೇವಾಲಯಕ್ಕೆ ತೆರಳಿ ನ್ಯಾಯಕ್ಕಾಗಿ ರಂಪಾಟ ನಡೆಸಿರುವ ಘಟನೆ ನಡೆದಿದೆ.

    ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಗದ್ದುಗೆ ಮಠದಲ್ಲಿ ನಡೆದಿದೆ. ಗುಡೇಮಾರನಹಳ್ಳಿಯ ನಿವಾಸಿ ರೇಣುಕಾಪ್ರಸಾದ್ ಎರಡನೇ ಮದುವೆಗೆ ಮುಂದಾಗಿದ್ದನು. ಈತ 9 ವರ್ಷದ ಹಿಂದೆ ಕುಸುಮಾ(ಹೆಸರು ಬದಲಾಯಿಸಲಾಗಿದೆ) ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದನು.

    ಯುವತಿ ಕೂಡ ಗುಡೇಮಾರನಹಳ್ಳಿಯ ನಿವಾಸಿಯಾಗಿದ್ದು, ಮನೆಯವರ ವಿರೋಧದ ನಡುವೆಯೇ ಇಬ್ಬರು ಮದುವೆಯಾಗಿದ್ದರು. ನಂತರದಲ್ಲಿ ರೇಣುಕಾ ಪ್ರಸಾದ್‍ನ ಮನೆಯವರು ಇವರಿಬ್ಬರ ಮದುವೆಗೆ ಅಡ್ಡಿಪಡಿಸಿ ಗಲಾಟೆ ಕೂಡ ನಡೆದಿತ್ತು.

    ಇಂದು ಕದ್ದು ಮುಚ್ಚಿ ಮಗನಿಗೆ ಪೋಷಕರು ಎರಡನೇ ಮದುವೆ ಮಾಡಲು ಮುಂದಾಗಿದ್ದರು. ಈ ವೇಳೆ ನೊಂದ ಮಹಿಳೆ ಅಖಿಲ ಭಾರತ ಕಾರ್ಮಿಕ ಹಿತರಕ್ಷಣಾ ವೇದಿಕೆ ಕಾರ್ಯಕರ್ತರೊಂದಿಗೆ ಸಹಾಯ ಪಡೆದಿದ್ದಾರೆ. ಅಲ್ಲದೇ ಮದುವೆ ನಡೆಯುತ್ತಿದ್ದ ದೇವಾಲಯಕ್ಕೆ ತೆರಳಿ ನ್ಯಾಯಕ್ಕಾಗಿ ರಂಪಾಟ ನಡೆಸಿ ಮದುವೆಯನ್ನು ನಿಲ್ಲಿಸಿದ್ದಾರೆ.

    ಈ ಕುರಿತು ಮಾಧ್ಯಮಗಳು ವರದಿಗೆ ತೆರಳುತ್ತಿದ್ದಂತೆಯೇ ವರ ರೇಣುಕಾ ಪ್ರಸಾದ್ ಹಾಗೂ ಎರಡನೇ ಮದುವೆಗೆ ತಯಾರಿದ್ದ ಮದುಮಗಳು ಕ್ಷಣಾರ್ಧದಲ್ಲಿ ನಾಪತ್ತೆಯಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಘಟನಾ ಸ್ಥಳಕ್ಕೆ ಕುದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನ ನಡೆಸುತ್ತಿದ್ದಾರೆ.

  • ಪೂಜೆಗೆಂದು ಸ್ನಾನ ಮಾಡಲು ಹೋಗಿ ಕಲ್ಯಾಣಿಯಲ್ಲಿ ಮುಳುಗಿ ಯುವಕ ಸಾವು

    ಪೂಜೆಗೆಂದು ಸ್ನಾನ ಮಾಡಲು ಹೋಗಿ ಕಲ್ಯಾಣಿಯಲ್ಲಿ ಮುಳುಗಿ ಯುವಕ ಸಾವು

    ದಾವಣಗೆರೆ: ದೇವಸ್ಥಾನದ ಕಲ್ಯಾಣಿಯಲ್ಲಿ ಮುಳುಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಕೊಡದ ಗುಡ್ಡ ಗ್ರಾಮದಲ್ಲಿ ನಡೆದಿದೆ.

    ರಕ್ಷಿತ್(18) ಮೃತ ದುರ್ದೈವಿ. ಯುವಕನನ್ನು ಚಿತ್ರದುರ್ಗ ತಾಲೂಕಿನ ಅರಳಿಕಟ್ಟೆ ಗ್ರಾಮದವನು ಎಂದು ಗುರುತಿಸಲಾಗಿದೆ.

    ಶುಕ್ರವಾರ ವೀರಭದ್ರ ದೇವರ ಜಾತ್ರೆ ನಡೆಯುತ್ತಿತ್ತು. ರಕ್ಷಿತ್ ಜಾತ್ರೆಗೆಂದು ತನ್ನೋರಿನಿಂದ ಬಂದಿದ್ದನು. ಶುಕ್ರವಾರ ಜಾತ್ರೆ ಮುಗಿಸಿ ಶನಿವಾರ ಮಧ್ಯಾಹ್ನ ಪೂಜೆಗೆಂದು ಸ್ನಾನ ಮಾಡಲು ದೇವಸ್ಥಾನದ ಕಲ್ಯಾಣಿಗೆ ಹೋಗಿದ್ದಾನೆ. ಈ ಸಂದರ್ಭದಲ್ಲಿ ಕಲ್ಯಾಣಿ ಆಳ ಇದ್ದುದರಿಂದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

    ಇತ್ತ ಸ್ನಾನಕ್ಕೆ ಹೋದ ಯುವಕ ಹಿಂದಿರುಗಿ ಬಾರದಿದ್ದರಿಂದ ಆತಂಕಗೊಂಡ ಆತನ ಪೋಷಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಯುವಕನ ಮೃತ ದೇಹಕ್ಕಾಗಿ ಕಾರ್ಯಚರಣೆ ನಡೆಸುತ್ತಿದ್ದಾರೆ.

    ಈ ಘಟನೆ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಕೂಡ ಕಾರ್ಯಾಚರಣೆ ನಡೆಯುತ್ತಿದ್ದು, ಮೃತ ದೇಹ ಇನ್ನೂ ಪತ್ತೆಯಾಗಿಲ್ಲ.

  • ಆತ್ಮಹತ್ಯೆಗೆ ಕಾರಣ ಬರೆದ ಡೈರಿ ಹೊಟ್ಟೆಗೆ ಸಿಕ್ಕಿಸಿಕೊಂಡು ಯುವಕ ನೇಣಿಗೆ ಶರಣು

    ಆತ್ಮಹತ್ಯೆಗೆ ಕಾರಣ ಬರೆದ ಡೈರಿ ಹೊಟ್ಟೆಗೆ ಸಿಕ್ಕಿಸಿಕೊಂಡು ಯುವಕ ನೇಣಿಗೆ ಶರಣು

    ಮಂಡ್ಯ: ಪ್ರಿಯತಮೆಯನ್ನು ಆಕೆಯ ಪೋಷಕರು ತನ್ನಿಂದ ದೂರ ಮಾಡಿದ್ದಾರೆಂದು ಮನನೊಂದು ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯದ ಕೆಆರ್ ಪೇಟೆ ತಾಲೂಕಿನ ನಾಯಿಸಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ನಿಂಗೇಗೌಡರ ಮಗ ಮಹೇಶ್(37) ಆತ್ಮಹತ್ಯೆಗೆ ಶರಣಾದ ಯುವಕ. ಮಹೇಶ್ ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಈ ವಿಚಾರ ಯುವತಿಯ ಪೋಷಕರಿಗೆ ತಿಳಿದ ಬಳಿಕ ಅವರು ತಮ್ಮ ಮಗಳ ಜೊತೆ ಮಾತುಕತೆ ನಡೆಸದಂತೆ ಎಚ್ಚರಿಕೆ ನೀಡಿದ್ದರು. ಅಲ್ಲದೇ ಯುವತಿಯನ್ನು ಆಕೆಯ ಪೋಷಕರು ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು. ಇಬ್ಬರು ಪರಸ್ಪರ ಸಿಗದಂತೆ ದೂರ ಮಾಡಿದ್ದರು. ಇದರಿಂದ ಮನನೊಂದ ಮಹೇಶ್ ತಮ್ಮ ಜಮೀನಿನ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ವಿಚಾರವನ್ನು ಯುವಕ ತನ್ನ ಡೈರಿಯಲ್ಲಿ ಬರೆದುಕೊಂಡಿದ್ದು, ಆ ಡೈರಿಯನ್ನು ತನ್ನ ಹೊಟ್ಟೆಗೆ ಸಿಕ್ಕಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರೇಯಸಿಯ ಪೋಷಕರ ಜೀವ ಬೆದರಿಕೆಯ ಭಯದಿಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಆತನ ಪೋಷಕರು ಆರೋಪಿಸುತ್ತಿದ್ದಾರೆ.

    ಕೆಆರ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • 10ಕ್ಕೂ ಹೆಚ್ಚು ಬೈಕ್‍ಗಳಲ್ಲಿ ಬಂದು ಯುವಕನಿಗೆ 50 ಬಾರಿ ಇರಿದು, ರಾಡ್‍ನಿಂದ ಹೊಡೆದ್ರು

    10ಕ್ಕೂ ಹೆಚ್ಚು ಬೈಕ್‍ಗಳಲ್ಲಿ ಬಂದು ಯುವಕನಿಗೆ 50 ಬಾರಿ ಇರಿದು, ರಾಡ್‍ನಿಂದ ಹೊಡೆದ್ರು

    ನವದೆಹಲಿ: ಸುಮಾರು 20 ವರ್ಷ ಅಸಾಪಾಸಿನ ಯುವಕನಿಗೆ ಹಾಡಹಗಲೇ 50 ಬಾರಿ ಇರಿದು, ರಾಡ್‍ನಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ದೆಹಲಿಯ ಖಾನ್‍ಪುರ್ ಪ್ರದೇಶದಲ್ಲಿ ನಡೆದಿದೆ.

    ಆಶಿಶ್ ಹಲ್ಲೆಗೊಳಗಾದ ಯುವಕ. ಗುರುವಾರ ಸಂಜೆ ಸುಮಾರು 4 ಗಂಟೆ ವೇಳೆಗೆ ಆಶಿಶ್ ಜಿಮ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಬೈಕ್‍ಗಳಲ್ಲಿ ಬಂದ ಸುಮಾರು 20 ಯುವಕರು ದುಗ್ಗಲ್ ಕಾಲೋನಿಯ ಬೀದಿಯಲ್ಲಿ ಆಶಿಶ್ ಮೇಲೆ ದಾಳಿ ನಡೆಸಿದ್ದಾರೆ. ಈ ಎಲ್ಲಾ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಪರಿಚತ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಕಪ್ಪು ಬಣ್ಣದ ಶರ್ಟ್ ಧರಿಸಿದ್ದ ಆಶಿಶ್‍ನನ್ನು ಇಬ್ಬರು ವ್ಯಕ್ತಿಗಳು ತಡೆದಿದ್ದಾರೆ. ಕೆಲವೇ ಕ್ಷಣಗಳಲ್ಲಿ 10ಕ್ಕೂ ಹೆಚ್ಚು ಬೈಕ್‍ಗಳು ಒಂದರ ಹಿಂದೆ ಒಂದು ಬಂದಿದ್ದು, ಆಶಿಶ್‍ನನ್ನು ಸುತ್ತುವರೆದಿದ್ದಾರೆ. ನಂತರ ಆಶಿಶ್‍ಗೆ ಸುಮಾರು 50 ಬಾರಿ ಇರಿದಿದ್ದು, ರಾಡ್‍ಗಳಿಂದ ಹೊಡೆದಿದ್ದಾರೆ. ಈ ವೇಳೆ ನೆರೆಹೊರೆಯವರು ಇದನ್ನ ತಡೆಯಲು ಮುಂದಾಗಲಿಲ್ಲ. ಆಶಿಶ್ ರಸ್ತೆ ಮೇಲೆ ಬಿದ್ದಿದ್ದು, ದುಷ್ಕರ್ಮಿಗಳು ಬೈಕ್‍ಗಳಲ್ಲಿ ಚಾಕು ಹಾಗೂ ರಾಡ್‍ಗಳನ್ನ ಹಿಡಿದು ಪರಾರಿಯಾಗೋದನ್ನ ವಿಡಿಯೋದಲ್ಲಿ ಕಾಣಬಹುದು.

    ದಾಳಿ ಮಾಡಿದ ತಂಡ ಸ್ಥಳದಿಂದ ಕಾಲ್ಕಿತ್ತ ನಂತರ ಸ್ಥಳೀಯರು ಆಶಿಶ್‍ನನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಸದ್ಯ ಆಶಿಶ್ ಪರಿಸ್ಥಿತಿ ಚಿಂತಾಜನಕವಾಗಿದ್ದು, ಕನಿಷ್ಟ 50 ಇರಿತದ ಗಾಯಗಳಾಗಿವೆ ಎಂದು ವೈದ್ಯರು ಹೇಳಿದ್ದಾರೆ. ಘಟನೆ ಬಗ್ಗೆ ವಿಷಯ ತಿಳಿಸಿದ 1 ಗಂಟೆ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ್ರು ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

    ಆಶಿಶ್ ಮೇಲೆ ದಾಳಿ ನಡೆದಿದ್ದು ಯಾಕೆ ಎಂಬುದು ಸ್ಪಷ್ಟವಾಗಿಲ್ಲ. ಆದ್ರೆ ಸ್ಥಳಿಯ ನಿವಾಸಿಗಳು ಹೇಳುವ ಪ್ರಕಾರ ಗುರುವಾರ ಬೆಳಗ್ಗೆ ನಡೆದ ಜಗಳದ ನಂತರ ಯುವಕರ ಗುಂಪು ಆಶಿಶ್ ಮೇಲೆ ದಾಳಿ ಮಾಡಿದೆ. ಬಾಲಕನೊಬ್ಬ ಹೋಳಿ ಪ್ರಯುಕ್ತ ನೀರಿನ ಬಲೂನ್‍ಗಳನ್ನ ಎಸೆದಿದ್ದಕ್ಕೆ ಯುವಕರು ಆತನಿಗೆ ಹೊಡೆಯುತ್ತಿದ್ದರು. ಈ ವೇಳೆ ಆಶಿಶ್ ಮಧ್ಯಪ್ರವೇಶಿಸಿ ಬಾಲಕನಿಗೆ ಹೊಡೆಯೋದನ್ನ ತಡೆದಿದ್ದ ಎಂದು ಹೇಳಲಾಗಿದೆ.

  • ದಲಿತ ಯುವಕನನ್ನು ಪ್ರೀತಿಸಿದ ತಪ್ಪಿಗೆ ಮಗಳನ್ನು ಕೊಂದ್ರಾ ಪೋಷಕರು?

    ದಲಿತ ಯುವಕನನ್ನು ಪ್ರೀತಿಸಿದ ತಪ್ಪಿಗೆ ಮಗಳನ್ನು ಕೊಂದ್ರಾ ಪೋಷಕರು?

    ಮೈಸೂರು: ದಲಿತ ಯುವಕನನ್ನು ಪ್ರೀತಿಸಿದ ತಪ್ಪಿಗೆ ಪೋಷಕರೇ ತಮ್ಮ ಮಗಳನ್ನ ಹತ್ಯೆ ಮಾಡಿರೋ ಆರೋಪ ಕೇಳಿಬಂದಿದೆ.

    ಮೈಸೂರು ಜಿಲ್ಲೆಯ ಎಚ್.ಡಿ ಕೋಟೆಯ ಗೊಲ್ಲನ ಬೀಡು ಗ್ರಾಮದ ನಿವಾಸಿ ಕುಮಾರ್ ಎಂಬವರ ಮಗಳಾದ ಸುಷ್ಮಾ(20) ಮೃತ ಯುವತಿ. ಪೋಷಕರು ಸುಷ್ಮಾಳಿಗೆ ಜಮೀನಿನಲ್ಲಿ ವಿಷ ಕುಡಿಸಿ ಸುಟ್ಟು ಹಾಕಿದ್ದಾರೆ ಎಂದು ಆರೋಪ ಮಾಡಲಾಗಿದೆ. ಸುಷ್ಮಾ ಎಚ್.ಡಿ.ಕೋಟೆ ಆಲನಹಳ್ಳಿ ಗ್ರಾಮದ ಯುವಕನನ್ನು ಒಂದು ವರ್ಷದಿಂದ ಪ್ರೀತಿಸಿದ್ದಳು. ಇದಕ್ಕೆ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿ, ಆಕೆಯನ್ನು ಕಾಲೇಜಿನಿಂದ ಬಿಡಿಸಿದ್ದರು ಎಂದು ತಿಳಿದುಬಂದಿದೆ.

    ಕಾಲೇಜಿನಿಂದ ಬಿಡಿಸಿದ್ದರೂ ಕೂಡ ಸುಷ್ಮಾ ಯುವಕನೊಂದಿಗೆ ಪ್ರೀತಿಯನ್ನು ಮುಂದುವರೆಸಿದ್ದಳು. ಈ ಹಿನ್ನೆಲೆಯಲ್ಲಿ ಫೆಬ್ರವರಿ 21ರಂದು ತಮ್ಮ ಜಮೀನಿನಲ್ಲಿ ಸುಷ್ಮಾಗೆ ವಿಷ ಕುಡಿಸಿ ಹತ್ಯೆ ಮಾಡಿ ಸುಟ್ಟು ಹಾಕಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಅನಾಮಧೇಯ ಪತ್ರವೊಂದು ಬಂದಿದೆ.

    ಪತ್ರದ ಆಧಾರದ ಮೇಲೆ ಪೊಲೀಸರು ಸುಷ್ಮಾ ತಂದೆ ಕುಮಾರ್‍ನನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.

  • ಚುಡಾಯಿಸಿದವನಿಗೆ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಯುವತಿ: ವಿಡಿಯೋ ನೋಡಿ

    ಚುಡಾಯಿಸಿದವನಿಗೆ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಯುವತಿ: ವಿಡಿಯೋ ನೋಡಿ

    ನವದೆಹಲಿ: ಮಾರ್ಕೆಟ್ ನಲ್ಲಿ ಯುವಕರ ಗುಂಪೊಂದು ಯುವತಿಗೆ ಚುಡಾಯಿಸಿದ್ದಕ್ಕೆ ಗುಂಪಿನಲ್ಲಿದ್ದ ವ್ಯಕ್ತಿಗೆ ಯುವತಿ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಭಾನುವಾರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

    ಯುವತಿ ತನ್ನ ಸ್ನೇಹಿತೆ ಜೊತೆ ಕರೋಲ್ ಬಾಗ್‍ನಲ್ಲಿರುವ ಗಫತರ್ ಮಾರ್ಕೆಟ್‍ಗೆ ಹೋಗುತ್ತಿದ್ದಳು. ಆಗ 4-5 ಯುವಕರ ಗುಂಪೊಂದು ಕೆಟ್ಟ ಸನ್ನೆ ಮಾಡುವ ಮೂಲಕ ಯುವತಿಗೆ ಚುಡಾಯಿಸಿದ್ದಾರೆ. ಯುವಕರ ಈ ವರ್ತನೆ ಕಂಡು ಯುವತಿ ಹಾಗೂ ಆಕೆಯ ಸ್ನೇಹಿತೆ ಆಟೋ ಹತ್ತಿ ಅಲ್ಲಿಂದ ಹೊರಟಿದ್ದಾರೆ.

    ಯುವತಿಯರು ಆಟೋ ಹತ್ತಿ ಹೋಗಿದ ಕೂಡಲೇ ಈ ಯುವಕರ ಗುಂಪು ಕೂಡ ಆಟೋವನ್ನು ಫಾಲೋ ಮಾಡಿದ್ದಾರೆ. ಫಾಲೋ ಮಾಡುತ್ತಿರುವಾಗ ಕೆಟ್ಟ ಕಮೆಂಟ್ಸ್ ಗಳನ್ನು ಕೊಟ್ಟಿದ್ದಾರೆ. ಆಗ ಯುವತಿ ತಕ್ಷಣ ಆಟೋದಿಂದ ಇಳಿದು ಯುವಕರಿಗೆ ತರಾಟೆಗೆ ತೆಗೆದುಕೊಂಡಿದ್ದಾಳೆ. ಯುವಕನ ಶರ್ಟ್ ಕಾಲರ್ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾಳೆ.

    ಯುವತಿ ಆ ಯುವಕನನ್ನು ಥಳಿಸುತ್ತಿರುವಾಗ ಜನರು ಜಮಾಯಿಸಿದ್ದಾರೆ. ಜನರ ಗುಂಪು ಸೇರುತ್ತಿದ್ದಂತೆ ಯುವಕ ಯುವತಿಯ ಹತ್ತಿರ ಕ್ಷೇಮ ಕೇಳಿದ್ದಾನೆ. ನಂತರ ಯುವತಿಯ ರೌದ್ರ ರೂಪ ನೋಡಿ ತಕ್ಷಣ ಆತ ‘ಅಕ್ಕ ಕ್ಷಮಿಸಿ ಬಿಡಿ’ ಎಂದು ಹೇಳಿದ್ದಾನೆ.

    ಯುವಕ ಆಕೆಗೆ ಅಕ್ಕ ಎಂದು ಹೇಳುತ್ತಿದ್ದಂತೆ ಆಕೆ ಇಷ್ಟು ಹೊತ್ತು ನೀನು ನಿನ್ನ ಸ್ನೇಹಿತರ ಜೊತೆ ಸೇರಿ ನನ್ನನ್ನು ಚುಡಾಯಿಸುತ್ತಿದ್ದೆ. ಅಷ್ಟು ಬೇಗ ನಾನು ನಿನಗೆ ಅಕ್ಕ ಆಗಿದ್ದೀನಾ ಎಂದು ಪ್ರಶ್ನಿಸಿ ಯುವತಿ ತರಾಟೆಗೆ ತೆಗೆದುಕೊಂಡಿದ್ದಾಳೆ. ಸದ್ಯ ಈ ಘಟನೆಯನ್ನು ಸ್ಥಳೀಯರು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

    ವರದಿಗಳ ಪ್ರಕಾರ ಯುವತಿ ಆತನ ಶರ್ಟ್ ಕಾಲರ್ ಹಿಡಿದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ದೂರು ದಾಖಲಿಸಿದ್ದಾರೆ. ಮನೀಶ್ ಹಾಗೂ ಅಭಿಷೇಕ್ ಹೆಸರಿನ ಇಬ್ಬರೂ ಯುವಕರನ್ನು ಪೊಲೀಸರು ಬಂಧಿಸಿದ್ದು, ಈ ಇಬ್ಬರೂ ಆರೋಪಿಗಳು ದೆಹಲಿಯಿಂದ 100ಕಿ.ಮೀ ದೂರದಲ್ಲಿರುವ ಹರಿಯಾಣದ ಚರಕಿ ದಾದರಿಯುವರು ಎಂಬುದು ತಿಳಿದುಬಂದಿದೆ.